ಶನಿವಾರ, ಅಕ್ಟೋಬರ್ 24, 2020
22 °C

ದಿನದ ಸೂಕ್ತಿ | ಸುಖದ ಹುಡುಕಾಟ

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ನಿರಾನಂದಾ ದಾರಾ ವ್ಯಸನವಿಮುಖೋ ಬಾಂಧವಜನೋ

ಜಡೀಭೂತಂ ಮಿತ್ರಂ ಧನವಿರಹಶೀರ್ಣಃ ಪರಿಜನಃ ।

ಅಸಂತುಷ್ಟಂ ಚೇತಃ ಕುಲಿಶಕಠಿನಂ ಜೀವಿತಮಿದಂ

ವಿಧಿರ್ವಾಮಾರಂಭಸ್ತದಪಿ ಚ ಮನೋ ವಾಂಛತಿ ಸುಖಮ್‌ ।।

ಇದರ ತಾತ್ಪರ್ಯ ಹೀಗೆ:

‘ಹೆಂಡತಿಗೆ ಸಂತೋಷವಿಲ್ಲ; ಕಷ್ಟದಲ್ಲಿ ಬಾಂಧವರು ದೂರವಾಗಿದ್ದಾರೆ; ಸ್ನೇಹಿತರು ಉಪಕಾರ ಮಾಡುತ್ತಿಲ್ಲ; ಪರಿಜನರು ಹಣವಿಲ್ಲದೆ ಕಂಗಲಾಗಿದ್ದಾರೆ; ಮನಸ್ಸಿಗೆ ಸಂತೋಷವಿಲ್ಲ; ಜೀವನ ವಜ್ರದಂತೆ ಕಠಿಣವಾಗಿದೆ; ದೈವವೂ ಪ್ರತಿಕೂಲವಾಗಿದೆ. ಹೀಗಿದ್ದರೂ ಮನಸ್ಸು ಸುಖವನ್ನೇ ಬಯಸುತ್ತದೆಯಲ್ಲಾ!’

ಮನುಷ್ಯನ ಸ್ವಭಾವದ ಬಗ್ಗೆ ಈ ಸುಭಾಷಿತ ಸಾಕಷ್ಟು ಸಂಗತಿಗಳನ್ನು ಹೇಳುತ್ತಿದೆ.

ಮನುಷ್ಯನ ಸ್ವಭಾವವೇ ಸುಖವನ್ನು ಹುಡುಕುವುದು. ಸತತವಾಗಿ ಅವನು ಸುಖವನ್ನು ಹುಡುಕುತ್ತಲೇ ಇರುತ್ತಾನೆ. ಆದರೆ ಎಲ್ಲಿ ಹುಡುಕುತ್ತಾನೆ? ಅದನ್ನೇ ಸುಭಾಷಿತ ಹೇಳಲು ಹೊರಟಿರುವುದು.

ಕೇಳಲು: Podcast-ದಿನದ ಸೂಕ್ತಿ: ಸುಖದ ಹುಡುಕಾಟ

ಕುಟುಂಬದಲ್ಲಿ ಸುಖ ಇದೆ ಎಂದುಕೊಳ್ಳುತ್ತೇವೆ; ನಂಟರಲ್ಲಿ ಅದನ್ನು ಹುಡುಕುತ್ತೇವೆ; ಸ್ನೇಹಿತರಿದ್ದರೆ ಸುಖ ಎಂದುಕೊಳ್ಳುತ್ತೇವೆ; ಸೇವಕರಿದ್ದರೆ ಸುಖವಾಗಿ ಬದುಕಬಹುದು ಎಂದು ಆಲೋಚಿಸುತ್ತೇವೆ; ಮನಸ್ಸು ಏನೇನನ್ನು ಬಯಸುತ್ತದೆಯೋ ಅವನ್ನೆಲ್ಲ ಪೂರೈಸುತ್ತ ಸುಖವನ್ನು ಪಡೆಯಲು ಹಂಬಲಿಸುತ್ತೇವೆ; ದೈವವನ್ನೂ ಸುಖಕ್ಕಾಗಿ ಪ್ರಾರ್ಥಿಸುತ್ತಲೇ ಇರುತ್ತೇವೆ. 

ಇವೆಲ್ಲವೂ ನಮಗೆ ಒಂದೊಂದಾಗಿ ಒದಗಿಬಂತು ಎಂದು ಇಟ್ಟುಕೊಳ್ಳೋಣ. ಸುಖ ನಮ್ಮಲ್ಲಿ ಆಗ ಶಾಶ್ವತವಾಗಿ ನೆಲೆಯೂರಿತೆ? ಇವೆಲ್ಲವೂ ನಮಗೆ ಒದಗಿದರೂ ಸುಖ ನಮ್ಮಿಂದ ಜಾರಿಹೋಗುತ್ತಲೇ ಇರುತ್ತದೆ. ಇನ್ನು ಇವು ನಮ್ಮಿಂದ ದೂರವಾದರೆ ಸುಖ ನಮ್ಮ ಬಳಿಗೆ ಸುಳಿದೀತೆ? ಇದನ್ನೇ ಸುಭಾಷಿತ ಇಲ್ಲಿ ಧ್ವನಿಸುತ್ತಿರುವುದು.

ಆರಂಭದಲ್ಲಿ ಎಲ್ಲವೂ ಚೆನ್ನಾಗಿದೆ, ಸುಖವಾಗಿದೆ – ಎಂದುಕೊಳ್ಳುತ್ತೇವೆ. ಆದರೆ ಕಾಲ ಕ್ರಮೇಣ ಅವುಗಳಲ್ಲಿ ಸುಖ ಮರೆಯಾಗುತ್ತಹೋಗುತ್ತದೆ – ಬೇರೆ ಬೇರೆ ಕಾರಣಗಳಿಂದ. ಹೆಂಡತಿಗೆ ನಮ್ಮ ಸಂಪಾದನೆ ಸಾಕಾಗದೆಹೋಗಬಹುದು; ಅದರಿಂದ ಅವಳ ಸಂತೋಷ ದೂರವಾಗಿ ಅದು ನಮ್ಮ ದುಃಖಕ್ಕೂ ಕಾರಣವಾಗಬಹುದು. ನಾವು ಕಷ್ಟದಲ್ಲಿದ್ದಾಗ ನಂಟರು ನಮ್ಮ ಕೈ ಹಿಡಿಯುತ್ತಾರೆಂದು ತಿಳಿದುಕೊಂಡಿರುತ್ತೇವೆ; ಅವರು ಕೈ ಹಿಡಿಯುವ ಬದಲಿಗೆ, ಕೈ ಕೊಟ್ಟಿರುತ್ತಾರೆ. ಸ್ನೇಹಿತರೂ ನಮ್ಮಿಂದ ದೂರವಾಗಬಹುದು. ಒಂದು ತಿಂಗಳು ಸರಿಯಾಗಿ ಸಂಬಳ ಕೊಡದಿದ್ದರೆ ಸೇವಕರೂ ನಮ್ಮನ್ನು ಬಿಡಬಹುದು. ಹೀಗೆ ಎಲ್ಲೆಲ್ಲೂ ಸುಖ ಮಾಯವಾದರೆ ಮನಸ್ಸಿಗೆ ಸಂತೋಷವಾದರೂ ಹೇಗಿದ್ದೀತು? ವಿಧಿಯೂ ನಮಗೆ ಪ್ರತಿಕೂಲವಾಗಿದೆ ಎಂದೇ ಈ ವಿದ್ಯಮಾನಗಳ ತಾತ್ಪರ್ಯ. 

ಇಷ್ಟೆಲ್ಲ ಅನಾಹುತಗಳು ನಡೆಯುತ್ತಿದ್ದರೂ ನಾವು ಮಾತ್ರ ಸುಖದ ಬಯಕೆಯಲ್ಲಿಯೇ ಜೀವಿಸುತ್ತಿರುತ್ತೇವೆ. ಇದೊಂದು ಸೋಜಿಗದ ಸಂಗತಿ.

ಹಾಗಾದರೆ ನಾವು ಕೊನೆಗೆ ಮಾಡಬೇಕಾದದ್ದಾದರೂ ಏನು? ಸುಖವನ್ನು ಹುಡುಕುವುದು ತಪ್ಪೇ? 

ತಪ್ಪಲ್ಲ; ಆದರೆ ಸುಖ ಎಂದರೇನು? ಇದರ ದಿಟವಾದ ಹುಟುಕಾಟ ನಡೆಯಬೇಕು. ಇದರ ಸರಿಯಾದ ತಿಳಿವಳಿಕೆಯೇ ನಮ್ಮ ಸುಖಕ್ಕೂ ಮೂಲವಾಗುವಂಥದ್ದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.