ಶನಿವಾರ, ಜನವರಿ 23, 2021
19 °C

ದಿನದ ಸೂಕ್ತಿ| ಬದುಕಿನ ದಾರಿಗಳು

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ಸುವರ್ಣಪುಷ್ಪಾಂ ಪೃಥಿವೀಂ ಚಿನ್ವಂತಿ ಪುರುಷಾಸ್ತ್ರಯಃ ।

ಶೂರಶ್ಚ ಕೃತವಿದ್ಯಶ್ಚ ಯಶ್ಚ ಜಾನಾತಿ ಸೇವಿತುಮ್‌ ।।

ಇದರ ತಾತ್ಪರ್ಯ ಹೀಗೆ:

‘ಶೂರ, ವಿದ್ಯಾವಂತ ಮತ್ತು ಕಾಯಕದಲ್ಲಿ ದಕ್ಷ – ಈ ಮೂವರು ಭೂಮಿ ಎಂಬ ಬಳ್ಳಿಯಿಂದ ಬಂಗಾರದ ಹೂಗಳನ್ನು ಬಿಡಿಸಿಕೊಳ್ಳುತ್ತಾರೆ.’

ಈ ಸುಭಾಷಿತ ಕಾವ್ಯಮಯವಾದ ರೀತಿಯಲ್ಲಿ ತುಂಬ ಸೊಗಸಾದ ಸಂದೇಶವನ್ನು ನೀಡಿದೆ; ಬದುಕು ಬಂಗಾರವಾಗುವ ದಾರಿಯನ್ನು ಅದು ಸೂಚಿಸುತ್ತಿದೆ.

ಬದುಕು ಬಂಗಾರವಾಗುವುದು ಎಂದರೆ ಏನು? ನಮ್ಮ ಬದುಕು ಸುಖಮಯವಾಗಿ ಇರುವುದು, ಸಂತೋಷಮಯವಾಗಿ ಇರುವುದು, ನೆಮ್ಮದಿಯಿಂದ ಇರುವುದು ಎಂದು ತಾನೆ? 

ಸುಖವಾಗಿರುವುದು ಎಂದರೆ ಏನು? ನಾವು ಚೆನ್ನಾಗಿರುವುದಕ್ಕೆ ನಮಗೆ ಏನೇನು ಬೇಕೋ ಅದೆಲ್ಲ ಸಿಗುವುದೇ ಸುಖ. ಸಂತೋಷವಾಗಿರುವುದು ಎಂದರೆ ಏನು? ಬೇಕಾಗಿರುವುದು ಸಿಗುವುದಷ್ಟೆ ಅಲ್ಲ, ಅವುಗಳನ್ನು ಅನುಭವಿಸಿ, ನಲಿಯುವ ಅವಕಾಶವೂ ಇದ್ದಾಗ ಅದು ಸಂತೋಷ. ಹಾಗಾದರೆ ನೆಮ್ಮದಿಯಾಗಿರುವುದು ಎಂದರೆ ಏನು? ಸುಖ–ಸಂತೋಷ ಇದ್ದರಷ್ಟೆ ಸಾಲದು; ತೃಪ್ತಿಯೂ ಇರಬೇಕು, ಭಾವ–ಬುದ್ಧಿಗಳ ಸಮತೋಲನವೂ ಇರಬೇಕು. ಆಗ ಮಾತ್ರವೇ ನೆಮ್ಮದಿಯಾಗಿರಲು ಸಾಧ್ಯ.

ಹಾಗಾದರೆ ಸುಖ, ಸಂತೋಷ ಮತ್ತು ನೆಮ್ಮದಿ ನಮಗೆ ಹೇಗೆ ಲಭಿಸುತ್ತವೆ. ಸುಭಾಷಿತ ಅವುಗಳು ಒದಗುವ ಮೂರು ದಾರಿಗಳನ್ನು ಸೂಚಿಸಿದೆ: ಶೌರ್ಯ, ವಿದ್ಯೆ ಮತ್ತು ಕ್ರಿಯಾಶೀಲತೆ – ಈ ಮೂರು ಗುಣಗಳಿಂದ ನಾವು ಜೀವನವನ್ನು ಚೆನ್ನಾದ ರೀತಿಯಲ್ಲಿ, ಎಂದರೆ ಚಿನ್ನದ ಬದುಕನ್ನಾಗಿಸಿಕೊಳ್ಳಬಹುದು.

ಮೊದಲನೆಯದು ಶೌರ್ಯ. ಶೂರನಾದವನು ತನ್ನ ಪರಾಕ್ರಮದಿಂದಲೇ ತನಗೆ ಬೇಕಾದುದನ್ನು ಪಡೆಯಬಹುದು. ಇಲ್ಲಿ ದೈಹಿಕ ಪ್ರಾಬಲ್ಯಕ್ಕೆ ಮನ್ನಣೆ.

ಎರಡನೆಯದು ವಿದ್ಯೆ. ವಿದ್ಯಾವಂತನಾದವನು ತನ್ನ ಬುದ್ಧಿಶಕ್ತಿಯಿಂದಲೇ ತನಗೆ ಬೇಕಾದುದೆಲ್ಲವೂ ಸಂಪಾದಿಸಿಕೊಳ್ಳಬಹುದು. ಇಲ್ಲಿ ತಿಳಿವಳಿಕೆಗೆ ಮನ್ನಣೆ.

ಮೂರನೆಯದು ಕ್ರಿಯಾಶೀಲತೆ. ಶೌರ್ಯವೂ ಇಲ್ಲ, ಬುದ್ಧಿಯೂ ಇಲ್ಲ ಎಂದರೆ ನಮ್ಮ ಬದುಕು ಚೆನ್ನಾಗಿ ಇರುವುದಿಲ್ಲವೆ? ಸುಭಾಷಿತ ಹೇಳುತ್ತಿದೆ, ನಿರಂತರ ಪರಿಶ್ರಮದಿಂದ ನಾವು ನಮಗೆ ಬೇಕಾದುದೆಲ್ಲವನ್ನೂ ಪಡೆಯಬಹುದು ಎಂದು.

ಈ ಮೂರು ದಾರಿಗಳಲ್ಲಿ ಯಾವ ದಾರಿಯನ್ನು ಆರಿಸಿಕೊಂಡರೂ ನಾವು ಭೂಮಿ ಎಂಬ ಲತೆಯಿಂದ ಚಿನ್ನದ ಹೂಗಳನ್ನು ಬಿಡಿಸಿಕೊಳ್ಳಬಹುದಂತೆ.

ಜೀವನವನ್ನು ಸತ್ಯ, ಸುಂದರ ಮತ್ತು ಶಿವವನ್ನಾಗಿಸಿಕೊಳ್ಳಲು ಹಲವು ದಾರಿಗಳು ಇರುತ್ತವೆ. ನಮಗೆ ಒಗ್ಗುವಂಥ ದಾರಿಯಲ್ಲಿ ನಡೆದು ನಮ್ಮ ಜೀವನವನ್ನು ರೂಪಿಸಿಕೊಳ್ಳುವ ಪ್ರಬುದ್ಧತೆಯನ್ನೂ ವಿವೇಕವನ್ನೂ ನಾವು ಮೊದಲಿಗೆ ಪಡೆಯಬೇಕಿದೆ.

 

 

 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.