ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಲಿಪಾಡ್ಯಮಿ: ಅಹಂ ವಿಸರ್ಜನೆಯ ಸಂದೇಶ

Last Updated 5 ನವೆಂಬರ್ 2021, 6:56 IST
ಅಕ್ಷರ ಗಾತ್ರ

ಬಲಿ ಎಂಬುದು ನಮ್ಮೆಲ್ಲರಲ್ಲೂ ಇರಬಹುದಾದ ಅಹಂಕಾರಕ್ಕೆ ಪ್ರತಿಮೆ. ನಮಗೆ ವಾಮನರೂಪದಲ್ಲಿ ತೋರುವುದು ದಿಟವಾಗಿಯೂ ತ್ರಿವಿಕ್ರಮಸ್ವರೂಪವೇ ಹೌದು ಎಂಬ ಅರಿವಿನ ಸಾಕ್ಷಾತ್ಕಾರದಲ್ಲಿಯೇ ನಮ್ಮ ಶಾಶ್ವತಸ್ಥಾನ ನೆಲೆಗೊಂಡಿದೆ.

ನಮ್ಮ ಆಚಾರ–ವಿಚಾರಗಳಲ್ಲಿ ಪುರಾಣಗಳ ಪ್ರಭಾವ ಸ್ಪಷ್ಟವಾಗಿದೆ. ಪುರಾಣ ಎಂದರೆ ವಿಷ್ಣು, ಶಿವ, ನಾರದ, ಗರುಡ, ದೇವಿ – ಮುಂತಾದ ಹದಿನೆಂಟು ಪುರಾಣಗಳು ಎಂಬ ಎಣಿಕೆ ಸಲ್ಲದು. ಇಲ್ಲಿ ‘ಪುರಾಣ’ ಎಂಬುದಕ್ಕೆ ವಿಶಾಲವಾದ ಅರ್ಥವಿದೆ. ದೇಶ–ಕಾಲಾತೀತ ತತ್ತ್ವದ ಸಗುಣವೂ ಸುಂದರವೂ ಶಿವವೂ ಆದ ಅಭಿವ್ಯಕ್ತಿಯೇ ‘ಪುರಾಣ’. ಈ ಅರ್ಥದಲ್ಲಿ ವೇದವೂ ಪುರಾಣವೇ, ರಾಮಾಯಣ–ಮಹಾಭಾರತ–ಭಾಗವತಗಳೂ ಪುರಾಣವೇ, ಗೋವಿನ ಹಾಡು ಕೂಡ ಪುರಾಣವೇ. ‘The mythical narrative is of timeless and placeless validity, true nowever and everywhere’ – ಎಂಬ ಆನಂದ ಕುಮಾರಸ್ವಾಮಿಯವರ ಮಾತು ಇಲ್ಲಿ ಮನನೀಯ. ದೇಶಕಾಲಗಳನ್ನು ಮೀರಿರುವ, ಎಲ್ಲ ಕಾಲದಲ್ಲೂ, ಎಲ್ಲ ದೇಶದಲ್ಲೂ ಸಲ್ಲುವ ’ಕಥನ’ವೇ ಪುರಾಣ. ಪುರಾಣಕ್ಕೆ ಇತಿಹಾಸದ ಹಂಗು ಇರದು; ಅದರ ಗಮನವೆಲ್ಲ ಮೌಲ್ಯಗಳ ಪ್ರತಿಪಾದನೆಯ ಕಡೆಗೆ. ಪುರಾಣವನ್ನು ಇತಿಹಾಸದ ‘ವಸ್ತು’ವನ್ನಾಗಿ ನೋಡುವುದು ನಮ್ಮ ಸಂಕುಚಿತ ಬುದ್ಧಿಯಾದೀತು ಎಂಬ ಎಚ್ಚರಿಕೆ ಬೇಕು. ಪುರಾಣ ಎಂಬುದು ರೂಪಕ, ಸಂಕೇತ; ಅದು ನಮ್ಮ ಅಂತರಂಗಪ್ರಜ್ಞೆಯ ಭಾವಾಭಿವ್ಯಕ್ತಿ. ಹೀಗಲ್ಲದೆ ಅದನ್ನು ಒಂದು ಸುದ್ದಿಯನ್ನಾಗಿಯೋ ವಾರ್ತೆಯನ್ನಾಗಿಯೋ ಅನುವಾದಿಸಿಕೊಂಡು ಸರಳರೇಖಾತ್ಮಕವಾಗಿ ವಿಶ್ಲೇಷಿಸುವುದು ನಾವು ನಮ್ಮ ಸಂಸ್ಕೃತಿಗೆ ಮಾಡುವ ಅಪಚಾರವೇ ಹೌದು. ಪುರಾಣಗಳು ನಿರೂಪಿಸುವುದು ವಾಸ್ತವ ಮಾಹಿತಿಯ ‘ತಥ್ಯ’ಗಳನ್ನಲ್ಲ, ಅವು ನಿರೂಪಿಸುವುದು ತಥ್ಯಗಳ ಗರ್ಭದಲ್ಲಿ ಅಡಗಿರುವ ಸಾರ್ವಕಾಲಿಕ ಸತ್ಯಗಳನ್ನು.

ನಮ್ಮ ಹಬ್ಬಗಳ ಆಚರಣೆಯ ಮೂಲವೂ ಪುರಾಣಲೋಕವೇ, ಸಂಕೇತಗಳ ಜಗತ್ತೇ ಹೌದು; ದೀಪಾವಳಿಯೂ ಇದಕ್ಕೆ ಹೊರತಾಗಿಲ್ಲ. ‘ದೀಪ’ – ಎಂದರೆ ಬೆಳಕು ಎಂಬುದೇ ದೊಡ್ದ ಸಂಕೇತ. ಕತ್ತಲು–ಬೆಳಕುಗಳ ಸಂಘರ್ಷ; ಬೆಳಕಿನ ಉತ್ಕರ್ಷ – ಈ ಸಂಕೇತಗಳಲ್ಲಿ ನಮ್ಮ ಜೀವನದ ಸತ್ಯ ಶಿವ ಸುಂದರಗಳೇ ಅಡಗಿದೆ. ನರಕಚತುರ್ದಶಿ, ಲಕ್ಷ್ಮೀಪೂಜೆಯ ಆಚರಣೆಗಳಲ್ಲಿ ಪುರಾಣಗಳ ಪ್ರತಿಮೆಗಳು ಸಮೃದ್ಧವಾಗಿವೆ. ಬಲಿಪಾಡ್ಯಮಿಯ ಆಚರಣೆಯಲ್ಲೂ ಪುರಾಣಗಳ ಸಂಕೇತಗಳೇ ಜೀವಪಡೆದುಕೊಂಡಿವೆ.

ಬಲಿಚಕ್ರವರ್ತಿಯ ಕಥೆ ನಮಗೆ ಗೊತ್ತಿದೆ. ಬಲಿ ಒಬ್ಬ ರಾಕ್ಷಸರಾಜ. ಇಂದ್ರನ ಪದವಿಯನ್ನು ಕಿತ್ತುಕೊಂಡ ಅವನು ಚಕ್ರವರ್ತಿಯಾಗಿ ಮೆರೆಯತೊಡಗಿದ. ಅಹಂಕಾರವೂ ಅವನ ಜೊತೆಗೂಡಿತು.ನಾನು ಕೇಳಿದವರೆಲ್ಲರ ಬಯಕೆಗಳೆಲ್ಲವನ್ನೂ ಪೂರೈಸಬಲ್ಲೆ ಎಂಬ ಗರ್ವ ಅವನಲ್ಲಿ ನೆಲೆಗೊಂಡಿತು. ಇಂಥವನನ್ನು ನಿಗ್ರಹಿಸುವುದು ವಿಷ್ಣುವಿಗೆ ಅನಿವಾರ್ಯವಾಯಿತು; ವಿಷ್ಣುವು ವಾಮನರೂಪವನ್ನು ತಳೆದ. ದಾತೃ ನಾನು ಎಂಬ ಅಹಂಕಾರದ ಬೃಹದಾಕಾರದ ಮುಂದೆ ‘ದೇಹಿ’ ಎಂದು ವಾಮನಾಕಾರದಲ್ಲಿ ಆಗ ನಿಂತವನು ಸರ್ವವ್ಯಾಪಕನಾದ ಮಹಾವಿಷ್ಣು! ಏನನ್ನೂ ಕೊಡಬಲ್ಲೆ – ಎಂಬ ಮದದಲ್ಲಿ ಮುಳುಗಿದವನಿಗೆ ತನ್ನಲ್ಲಿಗೆ ಬಂದವರು ಯಾರು, ಏನನ್ನು ಕೇಳಬಹುದು ಎಂಬ ಆಲೋಚನೆಯ ವಿನಯವೇ ಉಳಿದಿರಲಿಲ್ಲ. ಪುಟ್ಟ ಬಾಲಕ ಏನು ತಾನೆ ಕೇಳಿಯಾನು – ಎಂದು ಕುಬ್ಜವಾಗಿಯೇ ಯೋಚಿಸಿದ ಬಲಿಯನ್ನು ವಾಮನ ಮೂರು ಹೆಜ್ಜೆಯನ್ನು ಕೇಳಿದ; ಅಷ್ಟೇ ತಾನೆ ಎಂದುಕೊಂಡ ಬಲಿಯ ಅರಿವಿನ ಅಳತೆಯನ್ನು ಮೀರಿ ವಾಮನನು ತ್ರಿವಿಕ್ರಮನಾಗಿ ಬೆಳೆದ; ಒಂದು ಹೆಜ್ಜೆಯಿಂದ ಇಡಿಯ ಭೂಮಂಲವನ್ನೂ ಮತ್ತೊಂದು ಹೆಜ್ಜೆಯಿಂದ ಇಡಿಯ ಆಕಾಶವನ್ನೂ ಅಳೆದ; ಮೂರನೆಯ ಹೆಜ್ಜೆಗೆ ಬಲಿಯ ತಲೆಯೇ ನೆಲೆಯಾಯಿತು.

ತಲೆ ಎಂಬುದು ಅಹಂಕಾರದ ಚಿಹ್ನೆ. ಅದನ್ನು ವಿಷ್ಣು ಮೆಟ್ಟಿದ ಎಂಬುದು ಇಲ್ಲಿರುವ ಒಂದು ಸಂಕೇತ. ವಿಷ್ಣು ಎಂದರೆ ಸರ್ವವ್ಯಾಪಕ ತತ್ತ್ವ. ಎಲ್ಲವೂ ನಾನೇ, ಎಲ್ಲವೂ ನನ್ನಲ್ಲಿದೆ – ಎಂಬ ಅಹಂಕಾರದಲ್ಲಿದ್ದ ಬಲಿಗೆ ದಿಟವಾದ ಸರ್ವವ್ಯಾಪಕತೆಯ ಅರಿವನ್ನು ಮೂಡಿಸಿದ ಮಹಾವಿಷ್ಣು. ನಮ್ಮ ಪ್ರತ್ಯಾಕ್ಷಾನುಭವವನ್ನು ಮೀರಿದ, ನಮ್ಮ ಅಳತೆ–ಲೆಕ್ಕಾಚಾರಗಳಿಗೆ ದಕ್ಕದ ವಿವರವೊಂದು ಎಲ್ಲವನ್ನೂ ಆವರಿಸಿಕೊಂಡು, ಎಲ್ಲವನ್ನೂ ಮೀರಿ ಇನ್ನೂ ‘ಹತ್ತು ಅಂಗುಲದಷ್ಟು ಹೆಚ್ಚಾಗಿಯೇ ಇದೆ’ (ಅತ್ಯತಿಷ್ಠದ್ದಶಾಂಗುಲಮ್‌) ಎಂಬ ಸತ್ಯವು ಬಲಿಗೆ ತ್ರಿವಿಕ್ರಮನಿಂದ ಸಾಕ್ಷಾತ್ಕಾರವಾಯಿತು. ಆ ಕ್ಷಣ ಅವನ ಅಹಂಕಾರವೂ ಮರೆಯಾಯಿತು; ಶಾಶ್ವತತತ್ತ್ವವನ್ನು ಅವನು ಕಂಡುಕೊಂಡನಾದ್ದರಿಂದಲೇ ಅವನು ಚಿರಂಜೀವಿಯೂ ಆದ.

ಬಲಿ ಎಂಬುದು ನಮ್ಮೆಲ್ಲರಲ್ಲೂ ಇರಬಹುದಾದ ಅಹಂಕಾರಕ್ಕೆ ಪ್ರತಿಮೆ. ನಮಗೆ ವಾಮನರೂಪದಲ್ಲಿ ತೋರುವುದು ದಿಟವಾಗಿಯೂ ತ್ರಿವಿಕ್ರಮಸ್ವರೂಪವೇ ಹೌದು ಎಂಬ ಅರಿವಿನ ಸಾಕ್ಷಾತ್ಕಾರದಲ್ಲಿಯೇ ನಮ್ಮ ಶಾಶ್ವತಸ್ಥಾನ ನೆಲೆಗೊಂಡಿದೆ. ಎಂದಿಗೂ ಅಳಿಯದ ಆ ಸ್ಥಾನವೇ ಆನಂದ; ಅದು ಒದಗುವುದೇ ‘ನಾನು‘ ಎಂಬ ಅಹಂಕಾರದ ವಿಸರ್ಜನೆಯಲ್ಲಿ ಎಂಬ ಮಹಾಸಂದೇಶವನ್ನು ಬಲಿಪಾಡ್ಯಮಿ ನೀಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT