ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನದ ಮನೆಯಲ್ಲಿ ಇರಲಿ 'ದುರ್ಗೆ'

Last Updated 23 ಸೆಪ್ಟೆಂಬರ್ 2022, 20:30 IST
ಅಕ್ಷರ ಗಾತ್ರ

ಭಾರತದಲ್ಲಿ ಹೆಣ್ಣು ಶಕ್ತಿಸ್ವರೂಪಿಣಿಯಾದರೆ, ಜಪಾನಿಯರಲ್ಲಿ ಅವಳು ಅಮಾತೆರೇಸು, ಅಂದರೆ ಸೂರ್ಯನ ಅಧಿದೇವತೆ. ಗ್ರೀಸ್‌ನಲ್ಲಿ ಕಾರ್ನ್ ಗಾಡೆಸ್, ಈಜಿಪ್ಟ್‌ನಲ್ಲಿ ನದಿ ದೇವತೆ. ಹೀಗೆ ಬೇರೆಬೇರೆ ದೇಶಗಳಲ್ಲಿ ಬೇರೆ ಬೇರೆ ಸಮುದಾಯಗಳಲ್ಲಿ ವಿಭಿನ್ನವಾಗಿ ನೋಡಲಾಗುತ್ತಿದೆ. ಸಮಸ್ತ ಸ್ತ್ರೀಸಂಕುಲವನ್ನು ಪ್ರತಿನಿಧಿಸುವ ದೇವಿಯ ಆರಾಧನೆ, ಕೇವಲ ಮೂರ್ತರೂಪದಲ್ಲಿ ಉಳಿಯದೇ ಪ್ರತಿ ಹೆಣ್ಣಿಗೂ ಗೌರವಾದಾರ ಸಿಗಬೇಕಿದೆ.

ಮಾಣಿಕ್ಯ ವೀಣಾ ಮುಫಲಾಲಯಂತೀಂ,

ಮದಾಲಸಾಂ ಮಂಜುಲ ವಾಗ್ವಿಲಾಸ.

ಮಾಹೇಂದ್ರ ನೀಲದ್ಯುತಿ ಕೋಮಲಾಂಗಿ,

ಮಾತಂಗ ಕನ್ಯಾ ಮನಸಾ ಸ್ಮರಾಮೀ…

ದೇವಿಯೆಂದರೆ ಹಾಗೆ...ಅಕ್ಷರವೇ ಬಾರದ ಕಾಳಿದಾಸನ ನಾಲಿಗೆಯಲ್ಲಿ ಕಾಳಿಕಾಮಾತೆಯಾಗಿ ಸ್ತುತಿಸಲ್ಪಡುತ್ತಾಳೆ. ದುಷ್ಟ ಮಹಿಷನ ಕೊಂದ ಶಕ್ತಿಸ್ವರೂಪಿಣಿಯಾಗಿ ಮಹಿಷಾಸುರ ಮರ್ದಿನಿಯಾಗಿ ನಿಲ್ಲುತ್ತಾಳೆ. ಹಾಗೆಯೇ ಶರನ್ನವರಾತ್ರಿಯಲ್ಲಿ ಒಂಬತ್ತೂ ದಿವಸ ಶಕ್ತಿ ದೇವತೆಯ ಆವಾಹನೆಯಾಗುತ್ತದೆ. ಬಂಗಾಳದ ಬೀದಿಬೀದಿಗಳಲ್ಲಿ ದುರ್ಗೆಯನ್ನು ಪೂಜಿಸಲಾಗುತ್ತದೆ. ನೇಪಾಳದಲ್ಲಿ ವಿಶೇಷವಾದ ಕೌಮಾರಿಯರ ಪೂಜೆ ಪ್ರಸಿದ್ಧಿ ಪಡೆದಿದೆ.

ಕರ್ನಾಟಕದಲ್ಲಿ ಒಂದೊಂದು ಭಾಗದಲ್ಲಿ ಒಂದೊಂದು ರೀತಿಯಲ್ಲಿ ದೇವಿಯನ್ನು ಪೂಜಿಸುತ್ತಾರೆ. ಹಳೆ ಮೈಸೂರು ಪ್ರಾಂತ್ಯದಲ್ಲಿ ದಸರಾ ನಾಡಹಬ್ಬವಾಗಿ ದೇವತೆಯನ್ನು ಪೂಜಿಸಿದರೆ, ಉತ್ತರ, ದಕ್ಷಿಣ ಕನ್ನಡಗಳಲ್ಲಿ ಈ ನವರಾತ್ರಿ ಮನೆತನದ ಹಬ್ಬವಾಗಿ ಮನೆಮನೆಯಲ್ಲಿ ಹೆಣ್ಣುಮಕ್ಕಳನ್ನು ಪೂಜಿಸುವ ಪದ್ಧತಿ ಇದೆ.

ನಿಜ, ಅವಳು ದೇವಿ, ದುರ್ಗಿ, ಶಕ್ತಿ, ಅಮ್ಮ, ಕಾಳಿ, ದುಷ್ಟ ಸಂಹಾರಿಣಿ, ಮಾತೃಸ್ವರೂಪಿಣಿಯೆಂದು ಸ್ತುತಿಸಲಾಗುತ್ತಿದೆ. ಹಾಗೆ ನೋಡಿದರೆ ಆದಿಶಕ್ತಿ, ಜಗಜ್ಜನನಿ, ಮಹಾಮಾತೆ ಎಂಬ ತತ್ವ ಗಟ್ಟಿಯಾಗಿ ಬೇರೂರಿದಂತಹ ನೆಲವಿದು.

ದೇವರು ಪುರುಷನೋ, ಸ್ತ್ರೀಯೋ ಎಂಬ ಜಿಜ್ಞಾಸೆ ಮೊದಲಿನಿಂದಲೂ ಇದೆ. ಅವನು ನಿರಾಕಾರ ಎಂದರೂ ಗಂಡು ಹಾಗೂ ಹೆಣ್ಣು ದೇವತೆಗಳೂ ನಮ್ಮಲ್ಲಿ ಕಡಿಮೆ ಇಲ್ಲ. ನಮ್ಮಲ್ಲಿ ಗ್ರಾಮದೇವತೆಗಳಿಂದ ಹಿಡಿದು ಕಾಯಿಲೆಗೂ ‘ಅಮ್ಮ’ ಎಂಬ ಹೆಸರು ತಳುಕು ಹಾಕಿಕೊಂಡಿದೆ. ಕರುಮಾರಿಯಮ್ಮ, ಅಣ್ಣಮ್ಮ, ಮಾರಮ್ಮ, ಕೊರತಿ, ಪ್ಲೇಗ್ ಮಾರಿಯಮ್ಮ, ಏಡ್ಸಮ್ಮ, ಪಟಾಲಮ್ಮ... ಹೀಗೆ ಗ್ರಾಮದಲ್ಲಿ ಏನೇ ಅವಘಡಗಳು ಸಂಭವಿಸಿದರೂ ಅದನ್ನು ಹೋಗಲಾಡಿಸಿ ಗ್ರಾಮವನ್ನು ರಕ್ಷಿಸಲು ಅಮ್ಮನೇ ಬೇಕು. ಅಲ್ಲಿ ಗ್ರಾಮ ದೇವ ಎಂಬ ಕಲ್ಪನೆ ಇಲ್ಲ. ಇಂಥ ಶಕ್ತಿಯನ್ನು ನವರೂಪದಲ್ಲಿ ಕಂಡು ಪೂಜಿಸುವ ಹಬ್ಬವೇ ನವರಾತ್ರಿ.

ಒಂಬತ್ತು ದಿವಸ ದೇವಿಯ ಒಂಬತ್ತು ವಿಧದಲ್ಲಿ ಈ ದೇವಿಯ ರೂಪಗಳನ್ನು ಆರಾಧಿಸಲಾಗುತ್ತದೆ. ಏಳನೇ ದಿನ ತ್ರಿದಿನ ದುರ್ಗಾಪೂಜಾ ಅಂದ್ರೆ ಮಹಾಕಾಳಿ, ಮಹಾಲಕ್ಷ್ಮಿ ಮಹಾಸರಸ್ವತಿ ಪೂಜೆ ಯಾಗುತ್ತದೆ. ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಟಾ, ಕೂಷ್ಮಾಂಡಾ, ಸ್ಕಂದಮಾ, ಕಾತ್ಯಾಯಿನಿ, ಕಾಳರಾತ್ರಿ, ಮಹಾಗೌರಿ, ಸಿದ್ಧಿಧಾತ್ರಿಯಾಗಿ ಪೂಜಿಸಲ್ಪಡುತ್ತಾಳೆ.

ಮೂರ್ತಸ್ವರೂಪದಲ್ಲಿ ಉಳಿದ ಗೌರವ

ಮಹಿಷಾಸುರ ಮರ್ದಿನಿ, ಕಾಳಿ, ದುರ್ಗಿ ಆಗಿರುವ ಆದಿಶಕ್ತಿಯ ಆರಾಧನೆ ಕೇವಲ ಮೂರ್ತ ಸ್ವರೂಪದಲ್ಲಿ ಉಳಿದುಕೊಂಡಿದೆ. ಧೈರ್ಯ, ಸ್ಥೈರ್ಯ, ಸ್ವಾತಂತ್ರ‍್ಯ, ಸಮಾನತೆ, ಅಸ್ಮಿತೆ ಇವುಗಳ ಮೂಲಧಾತುವೇ ಆಗಿರುವ ಆದಿಶಕ್ತಿಯ ಸ್ವರೂಪ ಪೂಜೆಗೆ ಸೀಮಿತಗೊಂಡಿದೆ. ಇವು ರಚನಾತ್ಮಕವಾಗಿ ಬೆಳೆದು, ನಮ್ಮೊಳಗೆ ಸ್ತ್ರೀಶಕ್ತಿಯ ಅರಿವು ಮೂಡಿಸಿದ್ದರೆ ಎಷ್ಟು ಚೆನ್ನಿತ್ತು!.

ಈ ಆಚರಣೆಗಳು ಸಮಾಜಮುಖಿಯಾಗಿ ಬೆಳೆದು, ಸ್ತ್ರೀ ಸಮಾನತೆಯ ಆಯಾಮವಾಗಿ ರೂಪ ಪಡೆಯಲು ಸಾಧ್ಯವಾಗಿಲ್ಲ. ಹಾಗಾಗಿಯೇ ನವರಾತ್ರಿಯ ಈ ದುರ್ಗಾಪೂಜೆ, ಶಕ್ತಿ ಸ್ವರೂಪಿಣಿಯ ಪೂಜೆ ಸಾರ್ವತ್ರಿಕವಾಗಿ ಬೆಳೆಯುವಲ್ಲಿ ಸೋತಿತು. ಅದರ ಫಲವೇ ಮಹಿಳೆಯರ ವಿರುದ್ಧದ ದೌರ್ಜನ್ಯದ ಹಲವು ರೂಪಗಳು.

ಮಹಿಳೆಯನ್ನು ಹಿಂದೆಂದಿಗಿಂತಲೂ ಹೆಚ್ಚಿನ ರೀತಿಯಲ್ಲಿ ಭೌತಿಕವಾಗಿ ನೋಡಲಾಗುತ್ತದೆ. ಇನ್ನಿಲ್ಲದ ಸೌಂದರ್ಯಪ್ರಜ್ಞೆ ಅವಳೊಳಗೆ ಹುಟ್ಟುಹಾಕಲಾಗುತ್ತಿದೆ. ಹೆಣ್ಣಿನೆಡೆಗಿನ ದೃಷ್ಟಿಕೋನವೇ ಸೀಮಿತಗೊಂಡಿದೆ.ಕೌಟುಂಬಿಕ ವಿಘಟನೆಯ ಈ ಸಂದರ್ಭದಲ್ಲಿಯಂತೂ ದೇವಿ ಎಂಬ ಈ ಕಲ್ಪನೆಯನ್ನು ಸ್ಪಷ್ಟವಾಗಿ ಅಷ್ಟೇ ಪ್ರಖರವಾಗಿ ಕಟ್ಟಿಕೊಡಬೇಕಿದೆ. ಒಂದೋ ಎರಡೋ ಮಕ್ಕಳಿರುವ ಕುಟುಂಬದಲ್ಲಿ ಹೆಣ್ಣುಮಕ್ಕಳು ಇದ್ದೇ ಬಿಡುತ್ತಾರೆಂದು ಹೇಳಲು ಸಾಧ್ಯವಿಲ್ಲ. ಬೆಳೆಯುವ ಮಕ್ಕಳು ಹೆಣ್ಣುಮಕ್ಕಳನ್ನೇ ನೋಡದಿದ್ದಾಗ ನಾವೆಷ್ಟೇ ಹೆಣ್ಣುಮಕ್ಕಳಿಗೆ ಗೌರವ ಕೊಡಿ, ಪ್ರೀತಿಯಿಂದ ನೋಡಿ, ಅವರನ್ನು ಅರ್ಥ ಮಾಡಿಕೊಳ್ಳಿ ಎಂದು ಗಂಡುಮಕ್ಕಳಿಗೆ ತಿಳಿ ಹೇಳಿದರೂ ಅವೆಲ್ಲ ಥಿಯರಿಗಳಾದಾವೇ ಹೊರತು ಪ್ರಾಯೋಗಿಕವಾಗಿ ನಡೆಯುವಂಥದ್ದಲ್ಲ.

ಗಂಟೆಗೆ ಇಷ್ಟು ಅತ್ಯಾಚಾರ ನಡೆಯುತ್ತಿದೆ, ಇಷ್ಟು ವರದಕ್ಷಿಣೆ ಸಾವು ಸಂಭವಿಸುತ್ತಿದೆ, ಇಷ್ಟು ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಿದೆ ಎಂಬ ಲೆಕ್ಕಗಳನ್ನು ಕೊಟ್ಟೂ ಕೊಟ್ಟೂ ಸಾಕಾಗಿದೆ, ಇವೆಲ್ಲ ಈಗ ಸವಕಳಿಯ ಪದಗಳಾಗಿವೆ. ಅದರ ಬದಲಾಗಿ ಹೆಣ್ಣನ್ನು ಗಟ್ಟಿಗೊಳಿಸುವ ಮತ್ತು ಹೆಣ್ಣಿಗೆ ಗೌರವ ಕೊಡುವಂತಹ ವಾತಾವರಣವನ್ನು ನಿರ್ಮಿಸುವ ತುರ್ತು ಈಗಿದೆ. ಅದಕ್ಕೆ ಈ ಶರನ್ನವರಾತ್ರಿ ಒಂದು ಶರಾ ಬರೆಯುವಂತಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT