ಶುಕ್ರವಾರ, ಡಿಸೆಂಬರ್ 4, 2020
21 °C

ದಿನದ ಸೂಕ್ತಿ: ಪುರುಷ ಪ್ರಯತ್ನವೇ ರಾಜಮಾರ್ಗ

ಎಸ್. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ಶಾಸ್ತ್ರತೋ ಗುರುತಶ್ಚೈವ ಸ್ವತಶ್ಚೇತಿ ತ್ರಿಸಿದ್ಧಯಃ ।

ಸರ್ವತ್ರ ಪುರುಷಾರ್ಥಸ್ಯ ನ ದೈವಸ್ಯ ಕದಾಚನ ।।

ಇದರ ತಾತ್ಪರ್ಯ ಹೀಗೆ:

‘ಶಾಸ್ತ್ರದಿಂದ, ಗುರುವಿನಿಂದ, ತನ್ನಿಂದ – ಹೀಗೆ ಕಾರ್ಯಸಿದ್ಧಿಗಳು ಮೂರು ವಿಧ. ಇವು ಮೂರು ಕೂಡ ಪೌರುಷಕ್ಕೆ ಸೇರಿರುವಂಥವು; ಎಂದಿಗೂ ದೈವಕ್ಕೆ ಸೇರಿರುವುದಲ್ಲ.’

ನಮಗೆಲ್ಲರಿಗೂ ಸಮಸ್ಯೆಗಳು ಇರುವಂಥವೇ; ಸಮಸ್ಯೆಗಳೇ ಇಲ್ಲದ ಮನುಷ್ಯರು ಯಾರೂ ಇರಲಾರರು. ಆದರೆ ನಾವು ನಮಗೆ ಬಂದ ಸಮಸ್ಯೆಗಳನ್ನು ಹೇಗೆ ಪರಿಹರಿಸಿಕೊಳ್ಳುತ್ತೇವೆ? ಮುಖ್ಯವಾಗಿ ಎರಡು ದಾರಿಗಳನ್ನು ಆರಿಸಿಕೊಳ್ಳುತ್ತೇವೆ. ಒಂದು: ಏನಾಗಬೇಕಿತ್ತೋ, ಅದು ಆಗಿಯೇ ತೀರುವುದು – ಎಂದು ಮುಂದುವರೆಯುವುದು. ಇನ್ನೊಂದು: ನಾನು ಪ್ರಯತ್ನಪಟ್ಟರೆ ಬದಲಾವಣೆ ಸಾಧ್ಯ – ಎಂದು ಮುಂದುವರೆಯುವುದು. ಮೊದಲನೆಯ ದಾರಿಯನ್ನು ದೈವ ಎಂದೂ, ಎರಡನೆಯ ದಾರಿಯನ್ನು ಪೌರುಷ ಎಂದೂ ಕರೆಯಬಹುದು.

ಪೌರುಷ ಎಂದರೆ ಪುರುಷನಿಗೆ ಸೇರಿದ್ದು; ಎಂದರೆ ಗಂಡಸರಿಗೆ ಮಾತ್ರ ಸೇರಿದ್ದು, ಹೆಂಗಸರಿಗೆ ಅಲ್ಲ ಎಂದು ಅರ್ಥವಲ್ಲ; ಎಲ್ಲ ಮನುಷ್ಯರಿಗೂ ಸೇರಿದ್ದು ಎಂದು ಅರ್ಥ. ನಾವು ಪರಿಶ್ರಮದಿಂದ ಯಾವುದಾದರು ಕೆಲಸವೊಂದನ್ನು ನೆರವೇರಿಸಿದರೆ ಆಗ ಅದು ಪುರುಷಪ್ರಯತ್ನ ಎಂದೆನಿಸಿಕೊಳ್ಳುತ್ತದೆ. ಈ ಪುರುಷಪ್ರಯತ್ನದ ದಾರಿಯಲ್ಲಿ ಒದಗುವ ಮೂರು ಬುತ್ತಿಗಳು ಯಾವುವು ಎಂದು ಸುಭಾಷಿತ ಇಲ್ಲಿ ಹೇಳಿದೆ.

ಶಾಸ್ತ್ರದಿಂದ, ಗುರುವಿನಿಂದ ಮತ್ತು ತನ್ನಿಂದ ಕಾರ್ಯಸಿದ್ಧಿಗಳು ಆಗುತ್ತವೆ ಎಂಬುದು ಸುಭಾಷಿತದ ನಿಲುವು.

ನಾವು ಕಲಿತ ವಿದ್ಯೆಯಿಂದ ಅಥವಾ ಓದಿರುವ ಪುಸ್ತಕಗಳ ಸಹಾಯದಿಂದ ನಾವು ನಮ್ಮ ಕೆಲಸವನ್ನು ನೆರವೇರಿಸಿಕೊಳ್ಳುತ್ತೇವೆ. ಇದನ್ನೇ ಶಾಸ್ತ್ರಗಳ ನೆರವು ಎಂದಿರುವುದು ಇಲ್ಲಿ. ನಮಗೆ ಯಾರು ಮಾರ್ಗದರ್ಶನ ಮಾಡುತ್ತಾರೋ, ನಮ್ಮ ಅವಿದ್ಯೆಯನ್ನು ಹೋಗಲಾಡಿಸುತ್ತಾರೋ, ಅವರೆಲ್ಲರೂ ಗುರುಗಳೇ ಹೌದು. ಇವರು ಯಾರೂ ಆಗಬಹುದು; ನಮಗೆ ಶಾಲಾಕಾಲೇಜುಗಳಲ್ಲಿ ವಿದ್ಯೆ ಹೇಳಿಕೊಟ್ಟ ಶಿಕ್ಷಕರು ಆಗಿರಬಹುದು; ನಮ್ಮ ತಂದೆ–ತಾಯಿಗಳು, ಹೆಂಡತಿ, ಮಕ್ಕಳು, ಸ್ನೇಹಿತರು – ಯಾರೂ ಆಗಿರಬಹುದು; ಒಟ್ಟಿನಲ್ಲಿ ಅವರು ನಮ್ಮ ಹಿತೈಷಿಗಳು ಆಗಿರಬೇಕು; ನಮ್ಮ ಮುಂದೆ ಕವಿದಿರುವ ಕತ್ತಲನ್ನು ಹೋಗಲಾಡಿಸಿ ಬೆಳಕನ್ನು ನೀಡಬಲ್ಲವರಾಗಿರಬೇಕು, ಅಷ್ಟೇ. ಅಂಥವರ ನೆರವಿನಿಂದಲೂ ನಮ್ಮ ಕಾರ್ಯಗಳು ಸಿದ್ಧಿಯನ್ನು ಪಡೆಯುತ್ತವೆ. 

ಯಾರು ಎಷ್ಟು ನೆರವಾದರೂ ಕೊನೆಗೆ ಕೆಲಸವನ್ನು ಮಾಡಬೇಕಾದವರು ನಾವೇ! ಹೀಗಾಗಿ ನಮ್ಮ ಕಾರ್ಯಸಿದ್ಧಿ ನಮ್ಮ ಕ್ರಿಯಾಶೀಲತೆಯನ್ನೇ ಹೆಚ್ಚಾಗಿ ಅವಲಂಬಿಸಿರುತ್ತದೆ ಎನ್ನುವುದನ್ನು ಮರೆಯುವಂತಿಲ್ಲ.

ನಮ್ಮ ಏಳಿಗೆಯಾಲೀ ಅವನತಿಯಾಗಲೀ ನಮ್ಮ ಸಾಧನೆಯನ್ನೇ ಅವಲಂಬಿಸಿರುತ್ತದೆ. ಇದನ್ನು ಬಿಟ್ಟು ನಮ್ಮ ಸೋಲು–ಗೆಲವುಗಳ ಭಾರವನ್ನು ಬೇರೊಬ್ಬರ ಮೇಲೆ ಹಾಕುವಂಥ ‍ಪಲಾಯನವಾದವನ್ನು ‘ಯೋಗವಾಸಿಷ್ಠ‘ದ ಈ ಶ್ಲೋಕ ನಿರಾಕರಿಸುತ್ತಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು