ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ | 5G - ಐದನೇ ತಲೆಮಾರಿನ ಮೊಬೈಲ್‌ ಸಂಪರ್ಕ ಸೇವೆ ಎಂದರೇನು?

Last Updated 16 ಜೂನ್ 2022, 20:30 IST
ಅಕ್ಷರ ಗಾತ್ರ

5ಜಿ ಎಂದರೇನು?

5ಜಿ ಎಂಬುದು ಐದನೇ ತಲೆಮಾರಿನ ಸೆಲ್ಯುಲಾರ್ ತಂತ್ರಜ್ಞಾನ. ವೇಗ ಮತ್ತು ಹೆಚ್ಚು ವಿಶ್ವಾಸಾರ್ಹ ಸಂವಹನವನ್ನು ಈ ತಂತ್ರಜ್ಞಾನ ಒದಗಿಸುತ್ತದೆ. 5ಜಿ ಗರಿಷ್ಠ ನೆಟ್‌ವರ್ಕ್ ಡೇಟಾ ವೇಗವು ಸೆಕೆಂಡಿಗೆ 1ರಿಂದ2 ಗಿಗಾಬೈಟ್ (ಜಿಬಿಪಿಎಸ್) ಇರಲಿದೆ ಎಂದು ಸರ್ಕಾರದ ಸಮಿತಿ ವರದಿ ಅಭಿಪ್ರಾಯಪಟ್ಟಿದೆ.

ಈಗ ದೇಶದಲ್ಲಿರುವ 4ಜಿ ತಂತ್ರಜ್ಞಾನದ ಸರಾಸರಿ ವೇಗ ಪ್ರತಿ ಸೆಕೆಂಡಿಗೆ 6ರಿಂದ 7 ಮೆಗಾಬೈಟ್ (ಎಮ್‌ಬಿಪಿಎಸ್). ಮುಂದುವರಿದ ದೇಶಗಳಲ್ಲಿ 25 ಎಮ್‌ಬಿಪಿಎಸ್‌ ಇದೆ. ಆದರೆ 5ಜಿ ಅಸೀಮ ವೇಗಕ್ಕೆ ಹೆಸರಾದ ತಂತ್ರಜ್ಞಾನ. ದೇಶದಲ್ಲಿ 5ಜಿ ತಂತ್ರಜ್ಞಾನದ ಸೇವೆ ದೊರಕಿದಲ್ಲಿ, ‘8ಕೆ’ ಸಿನಿಮಾ ಹಾಗೂ ಗ್ರಾಫಿಕ್ ಗೇಮ್‌ಗಳನ್ನು ಕೆಲವೇ ಸೆಕೆಂಡ್‌ಗಳಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಇದಕ್ಕೆ 5ಜಿ ತಂತ್ರಜ್ಞಾನ ಬೆಂಬಲಿಸುವ ಉಪಕರಣಗಳು ಬೇಕು.

ಉಪಯೋಗ ಎಲ್ಲೆಲ್ಲಿ:5ಜಿ ತಂತ್ರಜ್ಞಾನವು ಮೊಬೈಲ್‌ ಬಳಕೆಗೆ ಮಾತ್ರವಲ್ಲದೆ, ಬೇರೆಯೂ ಸಾಕಷ್ಟು ಕೊಡುಗೆ ನೀಡಲಿದೆ. ಟೆಲಿ ಮೆಡಿಸಿನ್, ಟೆಲಿ ಎಜುಕೇಷನ್, ಚಾಲಕರಹಿತ ಕಾರು, ಡ್ರೋನ್ ಅಧರಿತ ಕೃಷಿ ನಿಗಾ ವ್ಯವಸ್ಥೆ ಮೊದಲಾದ ಕ್ಷೇತ್ರಗಳಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗಲಿದೆ. ಇಂಟರ್ನೆಟ್ ಆಫ್ ಥಿಂಗ್ಸ್‌ನಂತಹ (ಐಒಟಿ) ಉದಯೋನ್ಮುಖ ತಂತ್ರಜ್ಞಾನಗಳ ಬೆನ್ನೆಲುಬಾಗಿ ರೂಪುಗೊಳ್ಳುವ ನಿರೀಕ್ಷೆಯಿದೆ.

ದುಬಾರಿ ಮೂಲಸೌಕರ್ಯ

5ಜಿ ವ್ಯವಸ್ಥೆ ಅನುಷ್ಠಾನಕ್ಕೆ ತರಲು ಅತ್ಯಾಧುನಿಕ ಮತ್ತು ಭಾರಿ ಪ್ರಮಾಣದ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಬೇಕಾಗುತ್ತದೆ. ಈಗ ಬಳಕೆಯಲ್ಲಿರುವ ಮೊಬೈಲ್‌ ನೆಟ್‌ವರ್ಕ್‌ ಟವರ್‌ಗಳಿಂದ ಮಾತ್ರವೇ 5ಜಿಯಷ್ಟು ವೇಗದ ಸೇವೆಯನ್ನು ನೀಡಲು ಸಾಧ್ಯವಿಲ್ಲ. ನೆಟ್‌ವರ್ಕ್‌ ಟವರ್‌ಗಳ ಜತೆಗೆ ಭಾರಿ ವೇಗದಲ್ಲಿ ಡಾಟಾ ವರ್ಗಾಯಿಸಬಲ್ಲ ಪೂರಕ ಆ್ಯಂಟೆನಾಗಳ ಅಗತ್ಯವಿದೆ.

ನಗರ ಪ್ರದೇಶದಲ್ಲಿ, ಜನದಟ್ಟಣೆಯ ಪ್ರದೇಶದಲ್ಲಿ ಭಾರಿ ವೇಗದ ಇಂಟರ್‌ನೆಟ್‌ ಸಂಪರ್ಕವನ್ನು ಒದಗಿಸಲು ಈ ರೀತಿಯ ಪೂರಕ ಆ್ಯಂಟೆನಾಗಳ ಅವಶ್ಯಕತೆ ಇದೆ. ವೈಫೈ ರೋಟರ್‌ಗಳ ಸುಧಾರಿತ ಮತ್ತು ಅತ್ಯಾಧುನಿಕ ರೂಪದಂತಿರುವ ಇಂತಹ ಆ್ಯಂಟೆನಾಗಳನ್ನು ಕೆಲವೇ ನೂರು ಮೀಟರ್‌ ಅಂತರದಲ್ಲಿ ಇರಿಸಬೇಕಾಗುತ್ತದೆ. ಈ ಆ್ಯಂಟೆನಾಗಳು ನೆಟ್‌ವರ್ಕ್‌ ಟವರ್‌ಗಳ ಜತೆಗೆ ಸಂಪರ್ಕದಲ್ಲಿ ಇರುತ್ತವೆ. ಈ ಟವರ್‌ಗಳನ್ನು ಅತಿವೇಗದ ಫೈಬರ್‌ ಬ್ರಾಡ್‌ಬ್ಯಾಂಡ್‌ ಸಂಪರ್ಕದಲ್ಲಿ ಇರಿಸಲಾಗುತ್ತದೆ.

4ಜಿ ನೆಟ್‌ವರ್ಕ್‌ನಲ್ಲಿ ಇಂಟರ್ನೆಟ್‌ ಸಂಪರ್ಕವು, ನೆಟ್‌ವರ್ಕ್‌ ಟವರ್‌ಗಳ ಮೂಲಕ ನೇರವಾಗಿ ಮೊಬೈಲ್‌ಗೆ ಲಭ್ಯವಾಗುತ್ತದೆ. ಆದರೆ, 5ಜಿ ತಂತ್ರಜ್ಞಾನದಲ್ಲಿ ಮೊಬೈಲ್‌ ಸಾಧನ ಮತ್ತು ನೆಟ್‌ವರ್ಕ್‌ ಟವರ್‌ಗಳ ಮಧ್ಯೆ ಪೂರಕ ಆ್ಯಂಟೆನಾಗಳು ಬೇಕಾಗುತ್ತದೆ. ಬಳಕೆದಾರರ ಸಂಖ್ಯೆ ಹೆಚ್ಚು ಇದ್ದಷ್ಟೂ, ಪೂರಕ ಆ್ಯಂಟೆನಾಗಳ ಸಂಖ್ಯೆ ಹೆಚ್ಚುತ್ತದೆ. ಜತೆಗೆ 4ಜಿ ನೆಟ್‌ವರ್ಕ್‌ ಟವರ್‌ಗಳನ್ನು ಯಥಾವತ್ತಾಗಿ ಈ ತಂತ್ರಜ್ಞಾನ ಅಳವಡಿಕೆಗೆ ಬಳಸಿಕೊಳ್ಳಲು ಸಾಧ್ಯವಿಲ್ಲ.ಇದಕ್ಕಾಗಿ 4ಜಿ ಎಲ್‌ಟಿಇ ಟವರ್‌ಗಳನ್ನು ಮೇಲ್ದರ್ಜೆಗೆ ಏರಿಸಬೇಕಾಗುತ್ತದೆ. ಇದು ದುಬಾರಿ. ಇದಕ್ಕಿಂತಲೂ ಹೆಚ್ಚು ವೆಚ್ಚವಾಗುವುದು ಪೂರಕ ಆ್ಯಂಟೆನಾಗಳ ಅಳವಡಿಕೆಗೆ. ಹೀಗಾಗಿ 5ಜಿ ತಂತ್ರಜ್ಞಾನವನ್ನು ಬಳಕೆಗೆ ತರಲು ಇಂಟರ್‌ನೆಟ್‌ ಸೇವಾ ಕಂಪನಿಗಳು ಲಕ್ಷ ಕೋಟಿ ರೂಪಾಯಿ ಲೆಕ್ಕದಲ್ಲಿ ಬಂಡವಾಳ ಹೂಡಬೇಕಾಗುತ್ತದೆ. ಇದರ ಜತೆಯಲ್ಲಿ ತರಂಗಾಂತರ ಖರೀದಿಗೂ ಬಂಡವಾಳ ಹೂಡಬೇಕಾಗುತ್ತದೆ.

ಮೂರು ಸ್ವರೂಪದ ಬ್ಯಾಂಡ್‌

ಕಡಿಮೆ ಬ್ಯಾಂಡ್: ಈ ತರಂಗಾಂತರವು (600–700 ಮೆಗಾಹರ್ಡ್ಸ್) ವಿಶಾಲ ವ್ಯಾಪ್ತಿಯಯಿಂದ ಕೂಡಿದ್ದು, ವೇಗದ ದೃಷ್ಟಿಯಿಂದ ಉತ್ತಮ ಎನಿಸಿದೆ. 30–250 ಎಂಬಿಪಿಎಸ್‌ ವೇಗದೊಂದಿಗೆ ಸಾವಿರಾರು ಮೈಲಿಗಳನ್ನು ತಲುಪಬಲ್ಲದು. ಅಧಿಕ ಪ್ರಮಾಣದಇಂಟರ್ನೆಟ್ ವೇಗ ಅಗತ್ಯವಿಲ್ಲದ ಕಡೆಗಳಲ್ಲಿ ಇದನ್ನು ಬಳಸಬಹುದು. ಮೊಬೈಲ್ ಬಳಕೆದಾರರಿಗೆ ಇದು ಸೂಕ್ತವಾಗಿದ್ದು, ಉದ್ಯಮದ ವಿಶೇಷ ಅಗತ್ಯಗಳನ್ನು ಇದು ಪೂರೈಸುವುದಿಲ್ಲ.

ಮಧ್ಯಮ ಬ್ಯಾಂಡ್: ಕಡಿಮೆ ಬ್ಯಾಂಡ್‌ಗೆ ಹೋಲಿಸಿದರೆ ಈ ತರಂಗಾಂತರವು (2.5–3.5 ಗಿಗಾಹರ್ಡ್ಸ್) ಅಧಿಕ ವೇಗವನ್ನು ಹೊಂದಿದೆ. ಆದರೆ ವ್ಯಾಪ್ತಿ ಕೆಲವು ಕಿಲೋಮೀಟರ್‌ಗಳು ಮಾತ್ರ. 100ರಿಂದ 900 ಎಂಬಿಪಿಎಸ್‌ ವೇಗ ಹೊಂದಿರುತ್ತದೆ.ಈ ಬ್ಯಾಂಡ್ ಅನ್ನು ಹೆಚ್ಚಾಗಿ ಕೈಗಾರಿಕೆಗಳಲ್ಲಿ ಬಳಸಬಹುದು. ನಿರ್ದಿಷ್ಟ ಸ್ವರೂಪದ ಉದ್ಯಮವೊಂದರ ಅಗತ್ಯಗಳಿಗೆ ತಕ್ಕಂತೆ ಪರಿವರ್ತಿಸಿಕೊಳ್ಳಬಹುದು.

ಅಧಿಕ ಬ್ಯಾಂಡ್: ತರಂಗಾಂತರವು (29–34 ಗಿಗಾಹರ್ಡ್ಸ್) ಹೆಚ್ಚಿನ ವೇಗಕ್ಕೆ ಹೆಸರಾಗಿದ್ದು, ಅತ್ಯಂತ ಸೀಮಿತ ವ್ಯಾಪ್ತಿಯನ್ನು ಹೊಂದಿದೆ. ಸಂಕೇತಗಳ ನುಗ್ಗುವ ಸಾಮರ್ಥ್ಯ (ಪೆನಿಟ್ರೇಷನ್) ಅಧಿಕವಾಗಿರುತ್ತದೆ. 1ರಿಂದ 3 ಜಿಬಿಪಿಎಸ್‌ ವೇಗದಇಂಟರ್ನೆಟ್‌ ಇದಾಗಿದ್ದು, ಬೃಹತ್ ಕೈಗಾರಿಕೆಗಳು, ಉದ್ಯಮಗಳು, ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಕೆಲಸಗಳಿಗೆ ಅಗತ್ಯವಾಗಿ ನೆರವಾಗುತ್ತದೆ.

ಆಧಾರ: ಪಿಟಿಐ, ಪಿಐಬಿ, ಎರಿಕ್‌ಸನ್, ನೋಕಿಯಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT