ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ –ಅಗಲ: ತಲ್ಲಣಿಸದಿರು ಕಂಡ್ಯಾ ತಾಳು ಮನವೇ...

Last Updated 24 ಮಾರ್ಚ್ 2022, 19:31 IST
ಅಕ್ಷರ ಗಾತ್ರ

‘ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೇ ಧರೆ ಹತ್ತಿ ಉರಿದಡೆ ನಿಲಲುಬಾರದು’ ಎಂದು 12ನೇ ಶತಮಾನದಲ್ಲಿ ಬಸವಣ್ಣನವರು ಅರುಹಿದ ನುಡಿಗಳು ದ್ವೇಷ–ಕ್ಲೇಶವೇ ಧುಮುಗುಡುತ್ತಿರುವ ದಿನಗಳಲ್ಲಿ ಮತ್ತೆ ಪ್ರಸ್ತುತವೆನಿಸುತ್ತಿವೆ. ಕನ್ನಡ ನಾಡೆಂಬ ಸಮರಸದ ನೆಲೆವೀಡಿನಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಕಂಡಾಗ ಭಕ್ತ ಕನಕದಾಸರ ‘ತಲ್ಲಣಿಸದಿರು ಕಂಡ್ಯಾ ತಾಳು ಮನವೆ/ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ’ ಎಂಬ ಮಾತು ಭರವಸೆಯ ಸೆರಗಿನಡಿ ಬದುಕುವ ಆಸೆಯನ್ನು ಚಿಮ್ಮಿಸುತ್ತದೆ.

ಮಲೆನಾಡಿನ ಕಾಫಿ ತೋಟಗಳ ಕಾರ್ಮಿಕರ ಸ್ಥಿತಿ ಅಧ್ಯಯನ ಮಾಡಲು ಹೋದ ಸಂಶೋಧಕರು ಕುತೂಹಲಕ್ಕೆ ಬಾಲಕಿಯೊಬ್ಬಳ ಜಾತಿಯನ್ನು ವಿಚಾರಿಸಿದರು. ‘ನಮ್ಮದು ಕನ್ನಡ ಜಾತಿ’ ಎಂದು ಆ ಹುಡುಗಿ ಪಟಕ್ಕನೆ ಹೇಳಿದಾಗ, ಪ್ರಶ್ನೆ ಕೇಳಿದವರೇ ತಬ್ಬಿಬ್ಬು. ಅದೇನು ಕನ್ನಡ ಜಾತಿ ಎಂದಾಗ, ಆಕೆ ‘ಇಲ್ಲಿ ತುಳು, ತಮಿಳು, ತೆಲುಗು, ಮರಾಠಿ ಮಾತನಾಡುವವರಿದ್ದಾರೆ. ನಮ್ಮದು ಕನ್ನಡ ಜಾತಿಯಷ್ಟೇ; ಅದು ಬಿಟ್ಟರೆ ನನ್ನ ಜಾತಿ ಗೊತ್ತಿಲ್ಲ’ ಎಂದು ಉತ್ತರಿಸಿದಳಂತೆ. ಜಾತಿ–ಧರ್ಮ ಮೀರಿದ ಕನ್ನಡ ನಾಡಿನ ಪರಂಪರೆಯು ‘ಮನುಷ್ಯ ಜಾತಿ ತಾನೊಂದೇ ವಲಂ’ ಎಂದು ಹೇಳಿದ ಆದಿ ಕವಿ ಪಂಪನಿಂದ ಶುರುವಾಗಿ ಕುವೆಂಪುರವರ ‘ವಿಶ್ವಮಾನವ ತತ್ವದವರೆಗೆ ವಿಸ್ತಾರವಾಗಿ ಬೇರು ಬಿಟ್ಟು, ಮರವಾಗಿ ಸಾಮರಸ್ಯದ ಹೂಗಳನ್ನು ನಾಡಿನ ಮುಗಿಲಗಲ ಉದುರಿಸುತ್ತಲೇ ಇದೆ. ಹಾಗಾಗಿಯೇ ‘ಪ್ರತಿಯೊಂದು ಮಗುವೂ ಹುಟ್ಟುತ್ತಲೇ - ವಿಶ್ವಮಾನವ. ಬೆಳೆಯುತ್ತಾ ನಾವು ಅದನ್ನು ‘ಅಲ್ಪಮಾನವ’ನನ್ನಾಗಿ ಮಾಡುತ್ತೇವೆ. ಮತ್ತೆ ಅದನ್ನು ‘ವಿಶ್ವಮಾನವ’ನನ್ನಾಗಿ ಮಾಡುವುದೇ ವಿದ್ಯೆಯ ಕರ್ತವ್ಯವಾಗಬೇಕು’ ಎಂದು ಕುವೆಂಪು ಪ್ರತಿಪಾದಿಸಿದ್ದರು.

ಬ್ರಾಹ್ಮಣರ ಅಗ್ರಹಾರ, ಮಠ, ದೇವಸ್ಥಾನಗಳಲ್ಲಿ ಹಿಂದಿನ ಕಾಲದಲ್ಲಿ ಅಡುಗೆಗೆ ಬಳಸುತ್ತಿದ್ದ ತಾಮ್ರ–ಹಿತ್ತಾಳೆ ಪಾತ್ರೆಗಳಿಗೆ ‘ಕಲಾಯಿ’ ಹಾಕುವವರು ‘ಕಲಾಯಿ ಸಾಬರೇ’ ಆಗಿದ್ದರು. ವರ್ಷಕ್ಕೊಮ್ಮೆ ಊರ ಮುಂದೆ ಮೊಕ್ಕಾಂ ಹೂಡಿ, ದೊಡ್ಡ ಒಲೆ ಹಚ್ಚಿ ಕಲಾಯಿ ಹಾಕಿದರೆ ಆ ವರ್ಷ ಪಾತ್ರೆ ಬಳಕೆಗೆ ಲಭ್ಯವಾಗುವ ಪದ್ಧತಿ ಸ್ಟೈನ್‌ಲೆಸ್‌ ಸ್ಟೀಲ್‌ ಪಾತ್ರೆಗಳು ಬರುವವರೆಗೂ ಚಾಲ್ತಿಯಲ್ಲಿತ್ತು. ಸಾಬರು ಕಲಾಯಿ ಹಾಕಿದ್ದಾರೆ ಎಂಬ ಕಾರಣಕ್ಕೆ ಬ್ರಾಂಬ್ರು ಪಾತ್ರೆ ಎಸೆಯುತ್ತಿರಲಿಲ್ಲ. ತಿಂಗಳುಗಟ್ಟಲೇ ಬ್ರಾಂಬ್ರ ಮನೆಯ ಊಟ ಉಂಡೇ ಸುತ್ತಮುತ್ತಲ ಹಳ್ಳಿಗಳ ಗೌಡರು, ಈಡಿಗರು, ಅಗಸರ ಮನೆಯ ಪಾತ್ರೆಗಳಿಗೆ ಕಲಾಯಿ ಹಾಕುತ್ತಿದ್ದರು.

ನಾಡಿನುದ್ದಗಲ ನಡೆಯುವ ಜಾತ್ರೆ, ರಥೋತ್ಸವಗಳಲ್ಲಿ ‘ಗರ್ನಲ್ ಸಾಹೇಬ್ರ’ ಸದ್ದು ಮತ್ತು ಬೆಳಕು ಇಲ್ಲದೇ ಹಬ್ಬದ ಗಮ್ಮತ್ತೇ ಇರುತ್ತಿರಲಿಲ್ಲ. ಕರಾವಳಿಯಲ್ಲಂತೂ ‘ಗರ್ನಲ್ ಸಾಹೇಬ್ರ’ ಮನೆತನಗಳು ಇವತ್ತಿಗೂ ಹಿಂದೂ ದೈವಗಳ ಉತ್ಸವ ಹೊರಡಿಸುವ ಮಾರ್ಗಕಾರರಾಗಿವೆ. ಜಾತ್ರೆ, ಉತ್ಸವ, ಭೂತದ ಕೋಲಗಳು ಸಾಮರಸ್ಯ ಬೆಸೆಯುವ ಕೊಂಡಿಯಾಗಿದ್ದವೇ ವಿನಃ ಎಂದಿಗೂ ಕೋಮುಪ್ರಚೋದನೆಯ ತಾಣಗಳಾಗಿಲ್ಲ. ಮತಸಂಘರ್ಷ ನಡೆದ ನಿದರ್ಶನ ದುರ್ಬೀನು ಹಾಕಿ ಹುಡುಕಿದರೂ ಸಿಗುವುದಿಲ್ಲ. ಮೊಹರಂ ಹಬ್ಬದ ಒಂದು ತಿಂಗಳ ಸಡಗರ ಉತ್ತರ ಕರ್ನಾಟಕದ ಸಾವಿರಾರು ಹಳ್ಳಿಗಳಲ್ಲಿ ಮತಬೇಧ ಇಲ್ಲದ ಊರ ಹಬ್ಬವಾಗಿಯೇ ಇಂದಿಗೂ ಉಳಿದಿದೆ. ಇಂತಹ ಸಮರಸದ ಕತೆಗಳು ಊರತುಂಬೆಲ್ಲ ಸಿಗುತ್ತವೆ.

ಉಡುಪಿ–ಮಂಗಳೂರಿನಲ್ಲಿ ಹೆಸರಾಗಿರುವ ‘ಶಂಕರ ಪುರ ಮಲ್ಲಿಗೆ’ಯನ್ನು ಹೆಚ್ಚಾಗಿ ಬೆಳೆಯುವವರು ಕ್ರಿಶ್ಚಿಯನ್ನರು. ವ್ಯಾಪಾರ ಮಾಡುವವರು ಮುಸ್ಲಿಮರು. ಅದನ್ನು ಮುಡಿದು ತಮ್ಮ ಬೆಡಗು ತೋರುವವರು ಹಿಂದೂಗಳು. ಹೂವ ಪರಿಮಳ ಧಾರ್ಮಿಕ ಭಿನ್ನಬೇಧವನ್ನು ಮಣಿಸಿ, ಸೌಹಾರ್ದದ ಸೆಲೆಯನ್ನು ಪುಟಿದೇಳಿಸಿ ನೇತ್ರಾವತಿ, ಶಾಂಭವಿ, ಕುಮಾರಧಾರದುದ್ದಕ್ಕೂ ಹಾಯಿಸುತ್ತಲೇ ಇದೆ.

ಮಕ್ಕಳಿಗೆ ಜ್ವರ ಬಂದಾಗ ವೈದ್ಯರ ಬಳಿಗೆ ಓಡುವ ಬದಲು ದರ್ಗಾದಲ್ಲಿ ನವಿಲು ಗರಿ ಹಿಡಿದು ಕುಳಿತ ಧರ್ಮಗುರುಗಳತ್ತ (ಇಮಾಮ್‌, ಮೌಜನಾ, ಫಕೀರರು) ತಾಯಂದಿರು ಧಾವಿಸುತ್ತಿದ್ದರು. ನವಿಲುಗರಿ ಕಟ್ಟನ್ನು ಮಗುವಿನ ತಲೆಗೆ ನೇವರಿಸಿ, ತೆಗೆದುಕೊಂಡು ಹೋದ ಸಕ್ಕರೆ ಓದಿಸಿದರೆ (ಫಾತೇಹ) ಜ್ವರ ಹೋಗುತ್ತದೆ ಎಂದು ಜನ ನಂಬಿದ್ದಾರೆ. ದರ್ಗಾದಲ್ಲಿ ಕುಳಿತ ಗುರು ಹಾಗೂ ಮಗುವಿನ ತಾಪ ನೋಡಲಾಗದೇ ಎತ್ತಿಕೊಂಡ ಹೋಗುತ್ತಿದ್ದ ಹೆಣ್ಣುಮಕ್ಕಳಲ್ಲಿ ಇದ್ದುದು ತಾಯ್ತನದ ಹೃದಯದ ಬೆಸುಗೆಯಷ್ಟೇ. ಜಾತಿ–ಧರ್ಮಗಳಾಚೆಗೆ ಕೂಡಿ ಬಾಳುತ್ತಿದ್ದ ಜನರು ಒಂದು ಕುಟುಂಬದಂತೆಯೇ ಇದ್ದಾರೆ; ಇರುತ್ತಾರೆ.

1927ರಲ್ಲಿ ಉತ್ತರ ಪ್ರದೇಶದಲ್ಲಿ ಜನಿಸಿದ ಕವಿ ಸರ್ವೇಶ್ವರ್ ದಯಾಳ್ ಸಕ್ಸೇನಾ ಅವರು,‘ದೇಶವೆಂದರೆ ಕಾಗದದ ಮೇಲೆ ಬರೆದ ನಕ್ಷೆಯಲ್ಲ!’ ಎಂಬ ಶೀರ್ಷಿಕೆಯಡಿ ಬರೆದ ಕವನ ಹೀಗಿದೆ.

‘ನಿನ್ನ ಮನೆಯ
ಒಂದು ಕೋಣೆಗೆ ಬೆಂಕಿ ಬಿದ್ದಿದ್ದರೆ
ಮತ್ತೊಂದು ಕೋಣೆಯಲ್ಲಿ ನೀನು
ನಿಶ್ಚಿಂತೆಯಿಂದ ಮಲಗಬಲ್ಲೆಯಾ?

ನಿನ್ನ ಮನೆಯ
ಒಂದು ಕೋಣೆಯಲ್ಲಿ ಹೆಣಗಳು ಕೊಳೆಯುತ್ತಿದ್ದರೆ...
ಮತ್ತೊಂದು ಕೋಣೆಯಲ್ಲಿ ನೀನು
ಪರವಶನಾಗಿ ಪ್ರಾರ್ಥನೆ ಮಾಡಬಲ್ಲೆಯಾ?

ಹೌದೆಂದರೆ ನಿನಗೆ
ಹೇಳಲೇನೂ ಉಳಿದಿಲ್ಲ ನನಗೆ..’ ಎಂಬುದು ಈ ದುರಿತ ಕಾಲದ ಮಾತುಗಳೇ ಆಗಿವೆ.

**
ಬ್ಯಾನರ್ ತೆರವು

ಕೆಲ ದಿನಗಳ ಹಿಂದೆ, ‘ಬಪ್ಪನಾಡು ಕ್ಷೇತ್ರದ ವಾರ್ಷಿಕ ಜಾತ್ರೆಯಲ್ಲಿ ಹಿಂದೂಯೇತರರಿಗೆ ವ್ಯಾಪಾರಕ್ಕೆ ಅವಕಾಶವಿಲ್ಲ’ ಎಂಬ ಬ್ಯಾನರ್‌ಗಳನ್ನು ದೇವಸ್ಥಾನ ಹಾಗೂ ಬಸ್‌ ನಿಲ್ದಾಣದ ಬಳಿ ಅಳವಡಿಸಲಾಗಿತ್ತು. ತುರ್ತು ಸಭೆ ನಡೆಸಿದ ದೇವಸ್ಥಾನದ ಆಡಳಿತ ಮಂಡಳಿ, ಈ ರೀತಿಯ ಬ್ಯಾನರ್‌ಗಳನ್ನು ತೆರವುಗೊಳಿಸಿತ್ತು. ನಂತರ ಕೆಲವರು ‘ಸಮಸ್ತ ಹಿಂದೂ ಬಾಂಧವರು’ ಎಂಬ ಹೆಸರಿನಲ್ಲಿ ಮತ್ತೆ ಇಂತಹ ಬ್ಯಾನರ್‌ಗಳನ್ನು ಅಳವಡಿಸಿದ್ದಾರೆ.

**
‘ನಿರ್ಬಂಧ ಹೇರಿಲ್ಲ’
‘ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ಇಲ್ಲ ಎಂಬ ಅರ್ಥದ ಯಾವುದೇ ರೀತಿಯ ಬ್ಯಾನರ್‌ ಅನ್ನು ದೇವಸ್ಥಾನದ ಆಡಳಿತ ಮಂಡಳಿಯು ಅಳವಡಿಸಿಲ್ಲ. ವಾರ್ಷಿಕ ಜಾತ್ರೋತ್ಸವದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ಹೇರಿಲ್ಲ. ಯಾವುದೇ ಅಹಿತಕರ ಘಟನೆ ನಡೆಯದಿರಲಿ ಎಂದು ಕೆಲ ಮುಸ್ಲಿಂ ವ್ಯಾಪಾರಿಗಳು ತಾವಾಗಿಯೇ ಅಂಗಡಿಗಳನ್ನು ತೆರವು ಮಾಡಿದ್ದಾರೆ’
-ದುಗ್ಗಣ್ಣ ಸಾವಂತ,ಬಪ್ಪನಾಡುಕ್ಷೇತ್ರದಆನುವಂಶಿಕ ಮೊಕ್ತೇಸರ

**
‘ಒಪ್ಪಿದವರಿಗೆ ಪರವಾನಗಿ’
ಯಾವುದೇ ಧರ್ಮದವರು ಜಾತ್ರೆಯಲ್ಲಿ ವ್ಯಾಪಾರ ವಹಿವಾಟು ನಡೆಸುವ ಬಗ್ಗೆ ದೇವಸ್ಥಾನದ ಕಡೆಯಿಂದ ನಿರ್ಬಂಧವಿಲ್ಲ. ಆದರೆ, ಅಹಿತಕರ ಘಟನೆಗಳು ನಡೆದರೆ ಎಲ್ಲರಿಗೂ ರಕ್ಷಣೆ ಕೊಡಲು ಸಾಧ್ಯವಾಗುವುದಿಲ್ಲ. ಈ ಕಾರಣದಿಂದ ವ್ಯಾಪಾರಕ್ಕೆ ಬರುವ ಎಲ್ಲರಿಗೂ ಪರಿಸ್ಥಿತಿಯನ್ನು ಮನವರಿಕೆ ಮಾಡಿ ಕೊಡಲಾಗುತ್ತಿದ್ದು, ಅವರು ಒಪ್ಪಿಗೆ ನೀಡಿದರೆ ವ್ಯಾಪಾರಕ್ಕೆ ಪರವಾನಗಿ ನೀಡಲಾಗುವುದು.
-ಎಂ.ಎಸ್. ಮನೋಹರ್‌ ಶೆಟ್ಟಿ,ಬಪ್ಪನಾಡು ಕ್ಷೇತ್ರ ಆಡಳಿತ ಟ್ರಸ್ಟಿ

**
ಕಾಪು ಮಾರಿಗುಡಿಯಲ್ಲಿ ಶೇಖ್‌ ಜಲೀಲ್‌ ವಾದ್ಯ ಸೇವೆ‌
ಕಾಪುವಿನ ಮಾರಿಗುಡಿಯಲ್ಲಿ ತಲೆಮಾರುಗಳಿಂದಲೂ ನಾದಸ್ವರ ನುಡಿಸುತ್ತಿರುವುದು ಮುಸ್ಲಿಂ ಕುಟುಂಬ. ಶೇಖ್‌ ಜಲೀಲ್‌ ಸಾಹೇಬ್‌ ವಂಶಸ್ಥರು ಕಾಪುವಿನಲ್ಲಿ ಮಾರಿ ನೆಲೆನಿಂತ ದಿನದಿಂದಲೂ ದೇವರಿಗೆ ವಾದ್ಯ ಸೇವೆ ನೀಡುತ್ತಾ ಬಂದಿದ್ದಾರೆ.

‘ಅಪ್ಪ ಬಾಬು ಸಾಹೇಬ್‌, ತಾತ ಇಮಾಮ್ ಸಾಹೇಬ್‌, ಮುತ್ತಾತ ಮುಗ್ದಂ ಸಾಹೇಬ್‌ ಹೀಗೆ ನಮ್ಮ ಪೂರ್ವಜರು ಕಾಪುವಿನ ಮಾರಿಗುಡಿಯಲ್ಲಿ ನಿಷ್ಠೆ ಹಾಗೂ ಪ್ರೀತಿಯಿಂದ ವಾದ್ಯ ನುಡಿಸುವ ಚಾಕರಿ ಮಾಡಿದ್ದಾರೆ. ಪರಂಪರಾಗತವಾಗಿ ಬಂದಿರುವ ದೇವರ ಸೇವೆಯನ್ನು ಅಷ್ಟೇ ಪ್ರೀತಿಯಿಂದ ನಾನು ಮುಂದುವರಿಸುತ್ತಿದ್ದೇನೆ’ ಎನ್ನುತ್ತಾರೆ ಜಲೀಲ್ ಸಾಹೇಬ್‌.

‘ತಾತ ಕಾಪು ಇಮಾಮ್ ಸಾಹೇಬ್‌ 60 ವರ್ಷ ಮಾರಿಗುಡಿಯಲ್ಲಿ ವಾದ್ಯ ನುಡಿಸಿದ್ದಾರೆ. ಅಜ್ಜ ತೀರಿಹೋದ ನಂತರ ತಂದೆ ಬಾಬು ಸಾಹೇಬ್‌ ನುಡಿಸಿದ್ದಾರೆ. ಕಳೆದ 35 ವರ್ಷಗಳಿಂದ ನಾನು ವಾದ್ಯ ನುಡಿಸುತ್ತಿದ್ದೇನೆ. ಧರ್ಮ ಬೇರೆಯಾದರೂ ದೇವರ ಚಾಕರಿ ಮಾಡುವುದರಲ್ಲಿ ಆತ್ಮತೃಪ್ತಿ ಇದೆ. ಮಾರಿ ಜಾತ್ರೆ ಮಾತ್ರವಲ್ಲ, ಪ್ರತಿ ಮಂಗಳವಾರ ಮೂರು ಮಾರಿಗುಡಿಗಳಲ್ಲಿ ದೇವರ ಮುಂದೆ ವಾದ್ಯ ನುಡಿಸುತ್ತೇನೆ. ಗುರು ಹಿರಿಯರು ಹಾಕಿಕೊಟ್ಟ ಸಂಪ್ರದಾಯ ಮುರಿಯುವ ಮನಸ್ಸಿಲ್ಲ. ನನಗೆ ಗಂಡು ಮಕ್ಕಳಿಲ್ಲ, ಮಗಳು ಇದ್ದಾಳೆ. ಆದರೂ, ಸಹೋದರರ ಮಕ್ಕಳಿಗೆ ದೇವರ ಚಾಕರಿ ಹಸ್ತಾಂತರ ಮಾಡುವ ಮನಸ್ಸಿದೆ’ ಎನ್ನುತ್ತಾರೆ ಶೇಖ್ ಜಲೀಲ್ ಸಾಹೇಬ್‌.

‘ಈಚೆಗೆ ಕರಾವಳಿಯಲ್ಲಿ ನಡೆಯುತ್ತಿರುವ ಅಹಿತಕರ ಬೆಳವಣಿಗೆಗಳ ಬಗ್ಗೆ ಬೇಸರವಿದೆ. ಹೆಚ್ಚಿನವರಿಗೆ ಅದು ಬೇಡವಾದ ವಿಚಾರ. ನನಗೂ ಅಷ್ಟೆ, ಕರಾವಳಿಯಲ್ಲಿ ಸೌಹಾರ್ದದ ಬೇರುಗಳು ಗಟ್ಟಿಯಾಗಿರಬೇಕು’ ಎಂದು ಮಾತು ಮುಗಿಸಿದರು.

–ಬಾಲಚಂದ್ರ ಎಚ್‌.

**

ಶೃಂಗೇರಿ ತಾಲ್ಲೂಕಿನ ಕಿಗ್ಗಾದ ಋಷ್ಯ ಶೃಂಗೇಶ್ವರ ದೇವಸ್ಥಾನ
ಶೃಂಗೇರಿ ತಾಲ್ಲೂಕಿನ ಕಿಗ್ಗಾದ ಋಷ್ಯ ಶೃಂಗೇಶ್ವರ ದೇವಸ್ಥಾನ


ಕಿಗ್ಗಾ ಋಷ್ಯಶೃಂಗೇಶ್ವರ ಜಾತ್ರೆ; ಸಮಷ್ಟಿ ಪ್ರಜ್ಞೆ
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲ್ಲೂಕಿನ ಕಿಗ್ಗಾದ ಋಷ್ಯ ಶೃಂಗೇಶ್ವರ ದೇಗುಲದಲ್ಲಿ ಯುಗಾದಿ ಸಂದರ್ಭದಲ್ಲಿ ಜಾತ್ರಾ ಮಹೋತ್ಸವ ಜರುಗುತ್ತದೆ. ಮಳೆ ದೇವರು ಎಂದು ಆರಾಧಿಸುವ ಈ ದೈವಕ್ಕೆ ಎಲ್ಲ ಧರ್ಮ, ಜಾತಿಯವರು ನಡೆದುಕೊಳ್ಳುತ್ತಾರೆ.

ಈ ಭಾಗದಲ್ಲಿ ವಸಂತದ (ಹೊಸ ವರ್ಷ) ಮೊದಲ ಜಾತ್ರೆ ಎಂಬ ಹೆಗ್ಗಳಿಕೆ ಇದೆ. ಒಂಬತ್ತು ದಿನ ಜರುಗುತ್ತದೆ. ಏಳನೇ ದಿನದ ರಥೋತ್ಸವ, ಎಂಟನೇ ದಿನದ ಓಕುಳಿ ಉತ್ಸವ ಅದ್ಧೂರಿಯಾಗಿ ನಡೆಯುತ್ತವೆ. ನಾಡಿನ ವಿವಿಧೆಡೆಗಳ ಜನರು ಪಾಲ್ಗೊಳ್ಳುತ್ತಾರೆ. ಹಿಂದೂ, ಮುಸ್ಲಿಂ, ಜೈನರು ಸಹಿತ ವಿವಿಧ ಧರ್ಮದವರು, ಜಾತಿಗಳವರು ಮೂರ್ತಿ ದರ್ಶನ ಮಾಡುತ್ತಾರೆ. ಮಳೆಗಾಗಿಯೂ ಪ್ರಾರ್ಥಿಸುತ್ತಾರೆ, ಮಳೆ ಅತಿಯಾದಾಗ ನಿಲ್ಲಿಸುವಂತೆಯೂ ಬೇಡುತ್ತಾರೆ. ಪ್ರಾರ್ಥನೆ ಫಲಿಸಿರುವ ನಿದರ್ಶನಗಳು ಇವೆ ಎಂದು ಭಕ್ತರು ಹೇಳುತ್ತಾರೆ.

‘ಈ ಭಾಗದ ಊರುಗಳ ಮಾಂಸಹಾರಿಗಳ ಮನೆಗಳಲ್ಲಿ ಜಾತ್ರೆಯ ಸಂದರ್ಭ ಮಾಂಸ ಭಕ್ಷ್ಯ ತಯಾರಿಸುತ್ತಾರೆ. ಕೆಲವರು ಸುರಾಪಾನ ಮಾಡಿ ರಥೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ತೇರು ಎಳೆದು ಭಕ್ತಿ ಸಮರ್ಪಿಸುತ್ತಾರೆ’ ಎಂದು ಶಾನುಭೋಗರಾದ ಅರುಣಾಚಲ ತಿಳಿಸಿದರು.

ಜಾತ್ರೆಯಲ್ಲಿ ವಿವಿಧ ಸಮುದಾಯದವರು ಅಂಗಡಿ, ಮಳಿಗೆಗಳನ್ನು ತೆರೆಯುತ್ತಾರೆ. ಯಾರಿಗೂ ಅಡ್ಡಿಪಡಿಸಿಲ್ಲ. ಜನರು ಬೇಕಾದ ಕಡೆಯಿಂದ ತಮಗೆ ಬೇಕಾದ ವಸ್ತುಗಳನ್ನು ಖರೀದಿಸುತ್ತಾರೆ.

–ಬಿ.ಜೆ. ಧನ್ಯಪ್ರಸಾದ್‌

**
ಸೌಹಾರ್ದ ಕಾಯುವ ಮಾರಿ ಜಾತ್ರೆ
ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಶಿರಸಿಯ ಮಾರಿಕಾಂಬಾ ದೇವಿ ಜಾತ್ರೆ ಈ ಮೊದಲು ಅವೈದಿಕ ರೀತಿಯಲ್ಲಿ ನಡೆಯುತ್ತಿತ್ತು. ‘ಕೋಣ ಬಲಿ’ ಕೊಡುವುದು ವಿಶೇಷವಾಗಿತ್ತು.

ನಾಲ್ಕುನೂರು ವರ್ಷಗಳಷ್ಟು ಹಳೆಯದಾದ ಮಾರಿಕಾಂಬಾ ದೇವಿಯ ವಿಗ್ರಹ ಮರದಿಂದ ರಚಿತವಾಗಿದೆ. ಅವೈದಿಕ ವಿಧಿವಿಧಾನದ ಮೂಲಕವೇ ಜಾತ್ರೆಯ ಆಚರಣೆಗಳು ನಡೆಯುತ್ತಿದ್ದವು. 1933ರಲ್ಲಿ ಪ್ರಾಣಿಬಲಿ ನಿಲ್ಲಿಸಿದ್ದರು. ಬಳಿಕ, ಅವೈದಿಕ ವಿಧಿ ಪೂಜಾವಿಧಾನ ಕ್ರಮೇಣ ಕಡಿಮೆಯಾಗುತ್ತ ಬಂತು. ಪೂಜೆ ನಡೆಸುವ ವಿಶ್ವಕರ್ಮ ಬ್ರಾಹ್ಮಣ ಸಮುದಾಯದವರು ಆಗಮಶಾಸ್ತ್ರ ಪದ್ಧತಿಯನ್ನು ಕಲಿತ ಬಳಿಕ ಅದೇ ವಿಧಾನದಲ್ಲಿ ಪೂಜೆ ನಡೆಯುತ್ತ ಬಂದಿದೆ.

ಈ ವರ್ಷ ಮಾ.15 ರಿಂದ 23ರ ವರೆಗೆ ನಡೆದ ಜಾತ್ರೆಯಲ್ಲಿ 400ಕ್ಕೂ ಹೆಚ್ಚು ಅಂಗಡಿ ಹಾಕಲಾಗಿತ್ತು. ಈ ಪೈಕಿ ಅರ್ಧಕ್ಕೂ ಹೆಚ್ಚು ಅಂಗಡಿಗಳು ಮುಸ್ಲಿಂ ಸಮುದಾಯದ ವರ್ತಕರಿಗೆ ಸೇರಿದ್ದವು. ದೇಶದ ನಾನಾಭಾಗಗಳಿಂದ ಬಂದ ವ್ಯಾಪಾರಿಗಳು ಜಾತ್ರೆಯಲ್ಲಿ ನಿರಾತಂಕವಾಗಿ ವಹಿವಾಟು ನಡೆಸಿದ್ದಾರೆ.

‘ದೇವಿಯ ಆಶೀರ್ವಾದದಿಂದ ಉತ್ತಮ ವಹಿವಾಟು ನಡೆಸಿದ್ದೇವೆ. ಕಳೆದ ಜಾತ್ರೆಗಿಂತಲೂ ಎರಡು ಪಟ್ಟು ಹೆಚ್ಚಿನ ವ್ಯಾಪಾರ ಈ ವರ್ಷ ನಡೆದಿದೆ’ ಎಂದು ಜಾತ್ರೆಯಲ್ಲಿ ಆಟಿಕೆ ಅಂಗಡಿ ಹಾಕಿದ್ದ ಮಹಾರಾಷ್ಟ್ರದ ವ್ಯಾಪಾರಿ ಇಮ್ರಾನ್ ಶೇಖ್ ಹೇಳಿದರು.

ಮಾರಿಕಾಂಬಾ ದೇವಿ ರಥ ಎಳೆಯಲು ಬೆತ್ತದ ರಾಶಿ ಕಟ್ಟಲಾಗುತ್ತದೆ. ಇದನ್ನು ಕಟ್ಟಲು ಬಳಸುವ ಹಗ್ಗವನ್ನು ಮುಸ್ಲಿಂ ಸಮುದಾಯದವರು ನೀಡುತ್ತಿದ್ದಾರೆ. ಹಗ್ಗ ತಯಾರಿಯಲ್ಲಿ ಪಳಗಿದ ತೊನ್ಸೆ ಕುಟುಂಬ ಹಲವು ವರ್ಷದಿಂದ ಹಗ್ಗ ನೀಡುತ್ತಿತ್ತು. ಈಗ ಬೇರೆ ಕಡೆಯಿಂದಲೂ ಹಗ್ಗ ಪಡೆದುಕೊಳ್ಳಲಾಗುತ್ತಿದೆ. ‘ದೇವರ ರಥಕ್ಕೆ ಹಗ್ಗ ನೀಡುವುದು ನಮ್ಮ ಪಾಲಿಗೆ ಹೆಮ್ಮೆಯ ಸಂಗತಿಯೇ ಆಗಿದೆ’ ಎನ್ನುತ್ತಾರೆ ಶಿರಸಿಯ ಅಬ್ಬಾಸ್ ತೊನ್ಸೆ.

–ಗಣಪತಿ ಹೆಗಡೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT