ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ | ಹಿಮ್ಮೆಟ್ಟಿತೇ ಕೋವಿಡ್‌ ಮೂರನೇ ಅಲೆ?

ಸಾಂಕ್ರಾಮಿಕ ತೀವ್ರಗೊಳ್ಳುವ ಸಾಧ್ಯತೆ ಕಡಿಮೆ: ಪರಿಣತರ ಅಭಿಮತ
Last Updated 23 ನವೆಂಬರ್ 2021, 21:24 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿನಿಂದ ಮತ್ತು ಲಸಿಕೆಯ ಕಾರಣದಿಂದ ಹೈಬ್ರಿಡ್ ರೋಗನಿರೋಧಕ ಶಕ್ತಿ ಸೃಷ್ಟಿಯಾಗಿದೆ. ಇದರಿಂದಾಗಿ ದೇಶದಲ್ಲಿ ಕೋವಿಡ್‌ನ ಮೂರನೇ ಅಲೆ ಬರುವ ಸಾಧ್ಯತೆ ಕಡಿಮೆ. ಬಂದರೂ ಅದು ಎರಡನೇ ಅಲೆಯಷ್ಟು ತೀವ್ರವಾಗಿರುವುದಿಲ್ಲ ಎಂದು ದೇಶದ ಅತ್ಯುನ್ನತ ವೈದ್ಯಕೀಯ ಸಂಶೋಧನಾ ಸಂಸ್ಥೆಗಳ ತಜ್ಞರು ಹೇಳಿದ್ದಾರೆ.

ದೇಶದಲ್ಲಿ ಈಗ ಪ್ರತಿದಿನ ಪತ್ತೆಯಾಗುತ್ತಿರುವ ಕೋವಿಡ್ ಹೊಸ ಪ್ರಕರಣಗಳ ಸಂಖ್ಯೆ ದಿನೇದಿನೇ ಇಳಿಯುತ್ತಲೇ ಇದೆ. ದೇಶದಲ್ಲಿ ಮಂಗಳವಾರ ಒಂದು ದಿನ 7,579 ಹೊಸ ಪ್ರಕರಣಗಳಷ್ಟೇ ಪತ್ತೆಯಾಗಿವೆ. ಇದು 543 ದಿನಗಳಲ್ಲಿ ದಿನವೊಂದರಲ್ಲಿ ಪತ್ತೆಯಾದ ಅತ್ಯಂತ ಕಡಿಮೆ ಸಂಖ್ಯೆಯ ಪ್ರಕರಣಗಳು. ದೇಶದಲ್ಲಿ ಸತತ 46 ದಿನಗಳಿಂದ, ಪ್ರತಿದಿನ 20,000ಕ್ಕಿಂತ ಕಡಿಮೆ ಪ್ರಕರಣಗಳು ಪತ್ತೆಯಾಗಿವೆ. ಸತತ 149 ದಿನಗಳಿಂದ, ಪ್ರತಿದಿನ 50,000ಕ್ಕಿಂತಲೂ ಕಡಿಮೆ ಪ್ರಕರಣಗಳು ಪತ್ತೆಯಾಗಿವೆ. ಇದು ಕೋವಿಡ್‌ ಹರಡು ವಿಕೆ ತೀವ್ರತೆ ಕಳೆದುಕೊಳ್ಳುತ್ತಿರುವುದನ್ನು ಸೂಚಿಸುತ್ತದೆ ಎಂದು ತಜ್ಞರು ವಿವರಿಸಿದ್ದಾರೆ.

ದೇಶದಲ್ಲಿ ಕೋವಿಡ್‌ನ ಮೊದಲನೇ ಅಲೆ ಮತ್ತು ಎರಡನೇ ಅಲೆ ವೇಳೆ ಗಣನೀಯ ಸಂಖ್ಯೆಯ ಮಂದಿ ಸೋಂಕಿಗೆ ಒಳಗಾಗಿದ್ದರು. ಅವರಲ್ಲಿ ರೋಗನಿರೋಧಕ ಶಕ್ತಿ ಸೃಷ್ಟಿಯಾಗಿರುತ್ತದೆ. ಜತೆಗೆ ದೇಶದಲ್ಲಿ ಈವರೆಗೆ 100 ಕೋಟಿಗೂ ಹೆಚ್ಚು ಡೋಸ್‌ ಲಸಿಕೆ ನೀಡಲಾಗಿದೆ. ಇದು ಸಹ ಜನರಲ್ಲಿ ಕೋವಿಡ್‌ ನಿರೋಧಕ ಶಕ್ತಿ ಸೃಷ್ಟಿಸಿದೆ. ಇವೆರಡೂ ಇರುವ ಕಾರಣ, ಮೂರನೇ ಅಲೆ ಬರುವ ಸಾಧ್ಯತೆ ಅತ್ಯಂತ ಕಡಿಮೆ. ಆದರೆ, ಕೋವಿಡ್‌ ನಿಯಂತ್ರಣ ಕ್ರಮಗ ಳನ್ನು ಕಡೆಗಣಿಸುವಂತಿಲ್ಲ ಎಂದು ತಜ್ಞರು ಎಚ್ಚರಿಕೆಯನ್ನೂ ನೀಡಿದ್ದಾರೆ.

ಎರಡನೇ ಅಲೆಯ ಪರಿಣಾಮ...

‘ದೇಶದಲ್ಲಿ ಕೋವಿಡ್‌ನ ಎರಡನೇ ಅಲೆ ಅತ್ಯಂತ ತೀವ್ರವಾಗಿತ್ತು. ಎರಡನೇ ಅಲೆ ತೀವ್ರವಾಗಿದ್ದ ಕಾರಣದಿಂದ ದೇಶದ ಒಟ್ಟು ಜನಸಂಖ್ಯೆಯ ದೊಡ್ಡ ಭಾಗವು ಕೋವಿಡ್‌ಗೆ ಒಳಗಾಗಿತ್ತು. ಕೋವಿಡ್‌ಗೆ ಒಳಗಾಗಿ, ಗುಣಮುಖರಾದ ನಂತರ ಅವರಲ್ಲಿ ಕೋವಿಡ್‌ ನಿರೋಧಕ ಶಕ್ತಿ ಸೃಷ್ಟಿಯಾಗಿದೆ. ಇದು ಕೋವಿಡ್‌ ಮತ್ತೆ ತಗುಲುವುದನ್ನು ಬಹುಪಾಲು ತಡೆಯುತ್ತದೆ’ ಎಂದು ಅಶೋಕ ವಿಶ್ವವಿದ್ಯಾಲಯದ ಜೀವವಿಜ್ಞಾನ ಮತ್ತು ಭೌತವಿಜ್ಞಾನ ವಿಭಾಗದ ಪ್ರೊಫೆಸರ್ ಗೌತಮ್ ಮೆನನ್ ಹೇಳಿದ್ದಾರೆ.

ಎರಡನೇ ಅಲೆಯ ವೇಳೆ ದೇಶದಲ್ಲಿ ಸೋಂಕು ಹರಡುವಿಕೆಯ ವೇಗ ತೀವ್ರವಾಗಿತ್ತು. ಅದು ಉಂಟುಮಾಡುತ್ತಿದ್ದ ಆರೋಗ್ಯದ ಪರಿಣಾಮಗಳೂ ಗಂಭೀರವಾಗಿದ್ದವು. ಎರಡನೇ ಅಲೆಯಲ್ಲಿ ದೇಶದ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಡೆಲ್ಟಾ ತಳಿಯ ಕೊರೊನಾವೈರಾಣು ಪತ್ತೆಯಾಗಿತ್ತು. ಅದಕ್ಕಿಂತಲೂ ಕ್ಷಿಪ್ರವಾಗಿ ಹರಡುವ ಸಾಮರ್ಥ್ಯವಿದ್ದ ಡೆಲ್ಟಾ+ ತಳಿ ಸಹ ಹಲವು ರಾಜ್ಯಗಳಲ್ಲಿ ಪತ್ತೆಯಾಗಿತ್ತು. ಮೊದಲ ಮತ್ತು ಎರಡನೇ ಅಲೆ ವೇಳೆ ದೇಶದ 3.43 ಕೋಟಿ ಜನರಿಗೆ ಕೋವಿಡ್‌ ತಗುಲಿದ್ದು ಪರೀಕ್ಷೆಗಳಿಂದ ದೃಢಪಟ್ಟಿತ್ತು. ಇದರಲ್ಲಿ 3.39 ಕೋಟಿ ಜನರು ಈಗ ಗುಣಮುಖರಾಗಿದ್ದಾರೆ. ಇವರೆಲ್ಲರಲ್ಲೂ ಕೋವಿಡ್ ನಿರೋಧಕ ಶಕ್ತಿ ಸೃಷ್ಟಿಯಾಗಿರುತ್ತದೆ. ಹೀಗಾಗಿ ಇವರಿಗೆ ಮತ್ತೆ ಕೋವಿಡ್‌ ತಗಲುವ ಸಾಧ್ಯತೆ ಕಡಿಮೆ. ತಗುಲಿದರೂ, ಅದರ ತೀವ್ರತೆ ಕಡಿಮೆ ಇರಲಿದೆ ಎಂದು ಅವರು ವಿವರಿಸಿದ್ದಾರೆ.

ದೇಶದಲ್ಲಿ ಮೊದಲನೇ ಮತ್ತು ಎರಡನೇ ಅಲೆಯ ವೇಳೆ ಪ್ರಮುಖ ನಗರಗಳಲ್ಲಿ, ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಆರ್‌) ಸೆರೊ ಸಮೀಕ್ಷೆಯನ್ನು ನಡೆಸಿತ್ತು. ಆ ನಗರಗಳಲ್ಲಿನ ಒಟ್ಟು ಜನಸಂಖ್ಯೆಯ ಶೇ 50–80ರಷ್ಟು ಜನರಲ್ಲಿ ಕೋವಿಡ್‌ ನಿರೋಧಕ ಶಕ್ತಿ ಇರುವುದು ಸೆರೊ ಸಮೀಕ್ಷೆಯಲ್ಲಿ ಪತ್ತೆಯಾಗಿತ್ತು. ಜನರಲ್ಲಿ ಕೋವಿಡ್‌ ನಿರೋಧಕ ಶಕ್ತಿ ಸೃಷ್ಟಿಯಾಗಬೇಕೆಂದರೆ, ಅದಕ್ಕೂ ಮುನ್ನ ಅವರಿಗೆ ಕೋವಿಡ್ ತಗುಲಿರಲೇಬೇಕು. ಸೆರೊ ಸಮೀಕ್ಷೆಯಲ್ಲಿ ಕೋವಿಡ್‌ ನಿರೋಧಕ ಶಕ್ತಿ ಪತ್ತೆಯಾದ ಜನರ ಪ್ರಮಾಣದಲ್ಲಿ ಪ್ರದೇಶದಿಂದ ಪ್ರದೇಶಕ್ಕೆ, ನಗರದಿಂದ ನಗರಕ್ಕೆ ವ್ಯತ್ಯಾಸವಿದೆ. ಆದರೆ ಸಮೀಕ್ಷೆಗೆ ಒಳಪಟ್ಟ ಪ್ರದೇಶ ಮತ್ತು ನಗರಗಳಲ್ಲಿ ಈ ಪ್ರಮಾಣವು ಶೇ 50ಕ್ಕಿಂತ ಕಡಿಮೆಯಾಗಿಲ್ಲ. ಇದನ್ನು ದೇಶದ ಎಲ್ಲೆಡೆಗೆ ಅನ್ವಯಿಸಿದರೆ, ಒಟ್ಟು ಜನಸಂಖ್ಯೆಯ ಅರ್ಧದಷ್ಟು ಮಂದಿಯಲ್ಲಿ ಕೋವಿಡ್‌ ನಿರೋಧಕ ಶಕ್ತಿ ಇದೆ ಎಂದು ಪರಿಗಣಿಸಬಹುದು ಎಂದು ದೆಹಲಿಯ ಸಿಎಸ್‌ಐಆರ್–ಐಜಿಐಬಿ ಸಂಸ್ಥೆಯ ನಿರ್ದೇಶಕ ಅನುರಾಗ್ ಅಗರ್ವಾಲ್ ವಿವರಿಸಿದ್ದಾರೆ.

ಹೈಬ್ರಿಡ್ ರೋಗನಿರೋಧಕ ಶಕ್ತಿ

ದೇಶದ ವಯಸ್ಕ ಜನಸಂಖ್ಯೆಯ ಶೇ 80ರಷ್ಟು ಮಂದಿ ಕೋವಿಡ್‌ ಲಸಿಕೆಯ ಒಂದು ಡೋಸನ್ನಾದರೂ ಹಾಕಿಸಿಕೊಂಡಿದ್ದಾರೆ. ಕೋವಿಡ್‌ನಿಂದ ಗುಣಮುಖರಾಗಿರುವವರಲ್ಲಿ ಸಹಜವಾಗಿಯೇ ರೋಗ ನಿರೋಧಕ ಶಕ್ತಿ ಇರುತ್ತದೆ, ಲಸಿಕೆ ಪಡೆದುಕೊಂಡ ನಂತರ ನಿರೋಧಕ ಶಕ್ತಿ ಮತ್ತಷ್ಟು ಹೆಚ್ಚುತ್ತದೆ. ಇದನ್ನೇ ಹೈಬ್ರಿಡ್ ರೋಗನಿರೋಧಕ ಶಕ್ತಿ ಎಂದು ಕರೆಯಲಾಗಿದೆ. ದೇಶದ ಬಹುತೇಕ ಜನರಲ್ಲಿ ಈ ಹೈಬ್ರಿಡ್‌ ರೋಗನಿರೋಧಕ ಶಕ್ತಿ ಸೃಷ್ಟಿಯಾಗಿದೆ. ಈ ಕಾರಣದಿಂದಲೇ ಕೋವಿಡ್‌ ಹರಡುವಿಕೆಯ ತೀವ್ರತೆ ಕಡಿಮೆಯಾಗುತ್ತಿದೆ ಎಂದು ರೋಗನಿರೋಧಕ ಶಕ್ತಿ ತಜ್ಞೆ ವಿನೀತಾ ಬಾಲ್ ಅವರು ವಿವರಿಸಿದ್ದಾರೆ.

ಕೋವಿಡ್‌ ತಗುಲಿ, ಅದರಿಂದ ಗುಣಮುಖರಾದವರಲ್ಲಿ ಕೋವಿಡ್‌ ನಿರೋಧಕ ಶಕ್ತಿ ಈಗಾಗಲೇ ಸೃಷ್ಟಿಯಾಗಿರುತ್ತದೆ. ಲಸಿಕೆ ಪಡೆದುಕೊಂಡು ಸೃಷ್ಟಿಯಾದ ಕೋವಿಡ್‌ ನಿರೋಧಕ ಶಕ್ತಿಗಿಂತಲೂ, ಕೋವಿಡ್‌ನಿಂದ ಗುಣಮುಖ ಆದವರಲ್ಲಿರುವ ನಿರೋಧಕ ಶಕ್ತಿಯು ಹೆಚ್ಚು ಪ್ರಬಲವಾಗಿರುತ್ತದೆ. ಅಂತಹವರು ಕೋವಿಡ್‌ನಿಂದ ಸಂಪೂರ್ಣವಾಗಿ ಗುಣಮುಖರಾದ ನಂತರ ಲಸಿಕೆ ಪಡೆದುಕೊಂಡಿರುತ್ತಾರೆ. ಆಗ ಅವರಲ್ಲಿ ಈ ಮೊದಲೇ ಇದ್ದ ಪ್ರಬಲವಾದ ಕೋವಿಡ್‌ ನಿರೋಧಕ ಶಕ್ತಿಯು, ಮತ್ತಷ್ಟು ಪ್ರಬಲವಾಗುತ್ತದೆ. ಅಂತಹವರಿಗೆ ಕೋವಿಡ್‌ ತಗುಲುವ ಸಾಧ್ಯತೆ ಅತ್ಯಂತ ಕಡಿಮೆ. ತಗುಲಿದರೂ, ಅದರ ತೀವ್ರತೆ ಗಣನೀಯ ಪ್ರಮಾಣದಲ್ಲಿ ಇರುವುದಿಲ್ಲ ಎಂದು ಅವರು ವಿವರಿಸಿದ್ದಾರೆ.

ಐಸಿಎಂಆರ್‌ನ ಸೆರೊ ಸಮೀಕ್ಷೆಗಳ ವರದಿಗಳ ಪ್ರಕಾರ, ದೇಶದ ಪ್ರಮುಖ ನಗರ–ಪಟ್ಟಣಗಳ ಒಟ್ಟು ಜನಸಂಖ್ಯೆಯ ಶೇ 50–80ರಷ್ಟು ಜನರಲ್ಲಿ ಈಗಾಗಲೇ ಕೋವಿಡ್‌ ನಿರೋಧಕ ಶಕ್ತಿ ಇದೆ. ಕೋವಿಡ್‌ ಲಸಿಕೆ ಪಡೆದುಕೊಳ್ಳಲು 96 ಕೋಟಿ ಅರ್ಹ ಜನರನ್ನು ಗುರುತುಮಾಡಿದ್ದು, ಇದರಲ್ಲಿ 77.22 ಕೋಟಿ ಜನರಿಗೆ ಕೋವಿಡ್‌ ಲಸಿಕೆಯ ಒಂದು ಡೋಸ್‌ ಲಸಿಕೆ ನೀಡಲಾಗಿದೆ. ಇವರಲ್ಲಿ ಈಗಾಗಲೇ ಪ್ರಬಲವಾದ ಹೈಬ್ರಿಡ್‌ ರೋಗ ನಿರೋಧಕ ಶಕ್ತಿ ಸೃಷ್ಟಿಯಾಗಿರುತ್ತದೆ. 41 ಕೋಟಿಯಷ್ಟು ಜನರಿಗೆ ಲಸಿಕೆಯ ಎರಡೂ ಡೋಸ್‌ ನೀಡಲಾಗಿದೆ. ಅವರಲ್ಲಿ ಕೋವಿಡ್‌ ನಿರೋಧಕ ಶಕ್ತಿ ಮತ್ತಷ್ಟು ತೀವ್ರ ವಾಗಿರುತ್ತದೆ ಎಂದು ತಜ್ಞರು ವಿವರಿಸಿದ್ದಾರೆ.

ಈ ಹೈಬ್ರಿಡ್ ರೋಗನಿರೋಧಕ ಶಕ್ತಿಯು ಬಹುತೇಕ ಮಂದಿಯಲ್ಲಿ ಸೃಷ್ಟಿಯಾಗಿದ್ದರೆ, ಅವರಿಗೆ ಮತ್ತೆ ಕೋವಿಡ್ ತಗಲುವ ಸಾಧ್ಯತೆ ಇರುವುದಿಲ್ಲ. ಹೀಗಾಗಿ ಕೋವಿಡ್‌ನ ಹೊಸ ಪ್ರಕರಣಗಳು ಪತ್ತೆಯಾಗುವ ಪ್ರಮಾಣ ಕಡಿಮೆಯಾಗುತ್ತದೆ. ಜತೆಗೆ ಅವರ ಮೂಲಕ ವೈರಾಣು ಬೇರೆಯವರಿಗೆ ರವಾನೆಯಾಗುವ ಸಾಧ್ಯತೆಯೂ ಕ್ಷೀಣಿಸುತ್ತದೆ. ಹೀಗಾಗಿ, ಮತ್ತಷ್ಟು ಜನರಿಗೆ ಕೋವಿಡ್‌ ಹರಡುವ ಸಾಧ್ಯತೆ ಕಡಿಮೆಯಾಗುತ್ತದೆ. ಹೀಗೆ ಎರಡು ರೀತಿಯಲ್ಲಿ ಕೋವಿಡ್‌ ಹರಡುವುದನ್ನು ಈ ರೋಗನಿರೋಧಕ ಶಕ್ತಿ ತಡೆಯುತ್ತದೆ. ಭಾರತದಲ್ಲಿ ಇಂತಹ ಸ್ಥಿತಿ ನಿರ್ಮಾಣವಾಗಿರುವ ಸಾಧ್ಯತೆ ಅತ್ಯಧಿಕವಾಗಿದೆ. ಹೀಗಾಗಿ ಕೋವಿಡ್‌ನ ಮೂರನೇ ಅಲೆ ಬರುವ ಸಾಧ್ಯತೆ ಕಡಿಮೆ ಎಂದು ತಜ್ಞರು ವಿವರಿಸಿದ್ದಾರೆ.

ಸೋಂಕಿಗೆ ಲಸಿಕೆಯ ಲಗಾಮು

ಎರಡನೇ ಅಲೆಯ ತೀವ್ರ ಹೊಡೆತದ ಬಳಿಕ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ ಬಿರುಸು ಪಡೆದಿದ್ದರಿಂದ, ಆ ನಂತರ ಸೋಂಕಿತರ ಪ್ರಮಾಣ ಗಣನೀಯವಾಗಿ ಇಳಿಕೆಯಾಗುತ್ತಿದೆ. ಸೋಂಕಿಗೆ ಒಳಗಾಗುವ, ಆಸ್ಪತ್ರೆ ಸೇರುವ ಅಥವಾ ಸಾವಿಗೀಡಾಗುವವರ ಪ್ರಮಾಣವನ್ನು ತಡೆಯುವಲ್ಲಿ ಲಸಿಕೆಗಳು ನಿರ್ಣಾಯಕ ಪಾತ್ರ ವಹಿಸಿವೆ ಎಂದು ಅಶೋಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಗೌತಮ್ ಮೆನನ್ ಅಭಿಪ್ರಾಯಪಟ್ಟಿದ್ದಾರೆ.

ಲಸಿಕೆಗಳ ಪರಿಣಾಮಕಾರಿತ್ವವೂ ಸೋಂಕು ಹರಡುವಿಕೆಯನ್ನು ತಡೆಗಟ್ಟುವಲ್ಲಿ ಮುಖ್ಯವಾಗಿದೆ. ಎರಡೂ ಡೋಸ್‌ ಕೋವಿಶೀಲ್ಡ್ ಲಸಿಕೆ ಹಾಕಿಸಿಕೊಂಡವರಿಗೆ ಸೋಂಕು ಹರಡುವ ಸಾಧ್ಯತೆ ಶೇ 80ರಷ್ಟು ಕಡಿಮೆಯಿರುತ್ತದೆ. ಕೋವ್ಯಾಕ್ಸಿನ್‌ನಲ್ಲಿ ಈ ಪ್ರಮಾಣ ಶೇ 69. ಡೆಲ್ಟಾ ರೂಪಾಂತರ ವೈರಸ್‌ ವಿರುದ್ಧ ಈ ಎರಡೂ ಲಸಿಕೆಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿವೆ ಎಂದು ಐಸಿಎಂಆರ್ ನೇತೃತ್ವದ ಅಧ್ಯಯನ ತಿಳಿಸಿದೆ.

ಎಚ್ಚರಿಕೆ ಅಗತ್ಯ

ಅಮೆರಿಕ ಮತ್ತು ಐರೋಪ್ಯ ದೇಶಗಳಲ್ಲಿ ಒಂದು ತಿಂಗಳಿನಿಂದ ಸೋಂಕಿತರ ಪ್ರಮಾಣ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಅಮೆರಿಕದಲ್ಲಿ ನಿತ್ಯ ವರದಿಯಾಗುವ ಸೋಂಕಿತರ ಪ್ರಮಾಣ ಒಂದು ಲಕ್ಷದ ಆಸುಪಾಸಿನಲ್ಲಿದೆ. ಜರ್ಮನಿಯಲ್ಲಿ ಪರಿಸ್ಥಿತಿ ಹದಗೆಡುತ್ತಿದೆ ಎಂದು ಛಾನ್ಸಲರ್ ಅಂಗೆಲಾ ಮರ್ಕೆಲ್ ಹೇಳಿದ್ದಾರೆ. ಕೋವಿಡ್ ವ್ಯಾಪಿಸುತ್ತಿರುವ ಆಸ್ಟ್ರಿಯಾ, ಚೀನಾದ ಕೆಲವು ಭಾಗಗಳಲ್ಲಿ ಲಾಕ್‌ಡೌನ್ ಹೇರಲಾಗಿದೆ.

ಅಮೆರಿಕ ಮತ್ತು ಐರೋಪ್ಯ ದೇಶಗಳಲ್ಲಿ ಮೊದಲ ಹಾಗೂ ಎರಡನೇ ಅಲೆ ಕಾಣಿಸಿಕೊಂಡ ಬಳಿಕ, ಅದು ಭಾರತದಲ್ಲೂ ಪುನರಾವರ್ತನೆಯಾಗುತ್ತಿತ್ತು. ಆದರೆ ಮೂರನೇ ಅಲೆಯ ವಿಚಾರದಲ್ಲಿ ಹಾಗಾಗುವುದಿಲ್ಲ ಎನ್ನುತ್ತಾರೆ ತಜ್ಞರು. ಮೂರನೇ ಅಲೆಯು ಕಾಣಿಸಿಕೊಂಡರೂ, ಅದರ ತೀವ್ರತೆ ಹೆಚ್ಚಿರುವುದಿಲ್ಲ ಎಂದು ಅಂದಾಜಿಸಿದ್ದಾರೆ.

‘ಭಾರತದಲ್ಲಿ ಕಾಣಿಸಿಕೊಂಡಿದ್ದ ಎರಡನೇ ಅಲೆಯು ಯುರೋಪಿನ ಮೂರನೇ ಅಲೆಗೆ ಹೋಲಿಕೆಯಾಗುತ್ತಿದೆ. ಭವಿಷ್ಯದಲ್ಲಿ ಇಲ್ಲಿಯೂ ದೊಡ್ಡ ಅಲೆ ಏಳುವುದಿದ್ದರೆ, ಅದರ ಆರಂಭಿಕ ಲಕ್ಷಣಗಳು ಈಗಾಗಲೇ ಗೋಚರಿಸಬೇಕಿತ್ತು. ಮೂರನೇ ಅಲೆಯು ಸೆಪ್ಟೆಂಬರ್ ಮಧ್ಯಭಾಗದಲ್ಲಿ ಬಂದು ಹೋಗಿದೆ. ದೇಶವು ಅದೃಷ್ಟವಶಾತ್ ದೊಡ್ಡ ಅಲೆಯಿಂದ ಪಾರಾಗಿರಬಹುದು’ ಎಂದು ಐಎಂಎಸ್‌ಸಿ ಪ್ರಾಧ್ಯಾಪಕ ಸೀತಾಭ್ರ ಸಿನ್ಹಾ ಅಭಿಪ್ರಾಯಪಟ್ಟಿದ್ದಾರೆ.

ಸೋಂಕಿತ ವ್ಯಕ್ತಿಯು ಎಷ್ಟು ಜನರಿಗೆ ಸೋಂಕು ಹರಡಿಸಬಲ್ಲ ಎಂದು ತಿಳಿಸುವ ‘ಆರ್‌–ವ್ಯಾಲ್ಯೂ’ ಪ್ರಮಾಣವು ಮಿಜೋರಾಂ, ಜಮ್ಮು ಕಾಶ್ಮೀರ, ಪಶ್ಚಿಮ ಬಂಗಾಳದಲ್ಲಿ ಅಧಿಕವಾಗಿದೆ. ಮುಂಬೈ, ಪುಣೆ, ಚೆನ್ನೈ, ಕೋಲ್ಕತ್ತ ನಗರಗಳಲ್ಲಿಯೂ ಇದು ಸಾಮಾನ್ಯಕ್ಕಿಂತ ಅಧಿಕವಾಗಿದೆ. ಚಳಿಗಾಲದ ಸಮಯದಲ್ಲಿ ಎಚ್ಚರ ವಹಿಸದಿದ್ದರೆ, ಇದು ಇನ್ನಷ್ಟು ಏರಿಕೆಯಾಗಬಹುದು ಎಂದು ಸಿನ್ಹಾ ಎಚ್ಚರಿಸಿದ್ದಾರೆ.

ಕೋವಿಡ್ ಲಸಿಕೆ ವಿವರ

*ದೇಶದಲ್ಲಿ ಈವರೆಗೆ ನೀಡಲಾಗಿರುವ ಕೋವಿಡ್‌ ಲಸಿಕೆಯ ಡೋಸ್‌ಗಳ ಸಂಖ್ಯೆ:118 ಕೋಟಿ
*ಮೊದಲ ಡೋಸ್ ಪಡೆದವರ ಸಂಖ್ಯೆ:77 ಕೋಟಿ
*ಎರಡೂ ಡೋಸ್ ಪಡೆದವರ ಸಂಖ್ಯೆ:41 ಕೋಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT