ಗುರುವಾರ , ಮೇ 19, 2022
23 °C

ಆಳ-ಅಗಲ| ಭಾರತ–ಚೀನಾ ಗಡಿ ಸಂಘರ್ಷ ಶಮನದತ್ತ ಹೆಜ್ಜೆ

ಪಿಟಿಐ/ರಾಯಿಟರ್ಸ್/ಎಪಿ Updated:

ಅಕ್ಷರ ಗಾತ್ರ : | |

Prajavani

ಪೂರ್ವ ಲಡಾಖ್‌ನಲ್ಲಿ ಭಾರತ ಮತ್ತು ಚೀನಾ ಸೇನೆಯ ನಡುವೆ ಸಂಘರ್ಷ ಆರಂಭ ವಾಗಿ 10 ತಿಂಗಳು ಕಳೆದಿದೆ. ಸಂಘರ್ಷದ ಕಾರಣದಿಂದಾಗಿ ಗಡಿಯ ಎರಡೂ ಕಡೆ ತಲಾ ಸುಮಾರು 50,000 ಸೈನಿಕರು ನಿಯೋಜಿತರಾಗಿದ್ದಾರೆ. ಈ ಸೈನಿಕರನ್ನು ವಾಪಸ್ ಕರೆಸಿಕೊಳ್ಳಲು ಎರಡೂ ಕಡೆಯ ಸೇನೆಗಳು ಒಪ್ಪಿಕೊಂಡಿವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಗುರುವಾರ ರಾಜ್ಯಸಭೆಗೆ ತಿಳಿಸಿದ್ದಾರೆ.

ದೇಶದಲ್ಲಿ ಲಾಕ್‌ಡೌನ್‌ ಜಾರಿಯಲ್ಲಿದ್ದ ಸಂದರ್ಭದಲ್ಲಿ ಪೂರ್ವ ಲಡಾಖ್‌ನ ಗಾಲ್ವನ್ ಕಣಿವೆ ಪ್ರದೇಶವನ್ನು ಚೀನಾ ಸೈನಿಕರು ಅತಿಕ್ರಮಿಸಿದ್ದರು. ಸ್ಥಳೀಯರು ಈ ವಿಷಯ ತಿಳಿಸಿದ್ದರೂ ನಿಖರ ಮಾಹಿತಿ ಲಭ್ಯವಿರಲಿಲ್ಲ. ಆದರೆ, ಜೂನ್‌ 15ರಂದು ಈ ಅತಿಕ್ರಮಣದ ತೀವ್ರತೆ ಬಹಿರಂಗವಾಗಿತ್ತು. ಪೂರ್ವ ಲಡಾಖ್‌ನ ಗಾಲ್ವನ್ ಕಣಿವೆ, ಹಾಟ್‌ ಸ್ಪ್ರಿಂಗ್ ಮತ್ತು ಗೋಗ್ರಾ ಪೋಸ್ಟ್ ಪ್ರದೇಶವನ್ನು ಚೀನಾ ಸೈನಿಕರು ಅತಿಕ್ರಮಿಸಿದ್ದರು. ಗಾಲ್ವನ್ ಪ್ರದೇಶದಲ್ಲಿ ಪ್ರತಿರೋಧ ತೋರಿದ ಭಾರತೀಯ ಸೈನಿಕರ ಮೇಲೆ ಚೀನಾ ಸೈನಿಕರು ಮುಗಿಬಿದ್ದರು. ಈ ದಾಳಿಯಲ್ಲಿ ಭಾರತದ 20ಕ್ಕೂ ಹೆಚ್ಚು ಸೈನಿಕರು ಮೃತಪಟ್ಟಿದ್ದರು. ಚೀನಾದ ಕಡೆಯಲ್ಲಿಯೂ ಭಾರಿ ಸಾವು ನೋವು ಉಂಟಾಗಿತ್ತು.

ಇದರ ಬೆನ್ನಲ್ಲೇ, ಪ್ಯಾಂಗಾಂಗ್ ಸರೋವರದ ಬಳಿ ಭಾರತೀಯ ನೆಲವನ್ನು ಚೀನಾ ಸೈನಿಕರು ಅತಿಕ್ರಮಿಸಿದರು. ಅಲ್ಲೂ ಭಾರತ ಮತ್ತು ಚೀನಾ ಸೈನಿಕರು ಸಂಘರ್ಷ ನಡೆಸಿದ್ದರು. ಚೀನಾವು ಭಾರತದ ನೆಲವನ್ನು ಅತಿಕ್ರಮಿಸಿದ್ದನ್ನು ವಿರೋಧ ಪಕ್ಷಗಳು ಮುನ್ನೆಲೆಗೆ ತಂದವು. ಆದರೆ ಭಾರತದ ಒಂದಿಂಚೂ ನೆಲವನ್ನು ಚೀನಾ ಅತಿಕ್ರಮಿಸಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು. ಆದರೆ, ಭಾರತದ ನೆಲವನ್ನು ಚೀನಾ ಅತಿಕ್ರಮಿಸಿತ್ತು ಎಂಬುದನ್ನು ರಕ್ಷಣಾ ಸಚಿವರು, ಸೇನಾ ಮುಖ್ಯಸ್ಥರು ಒಪ್ಪಿಕೊಂಡಿದ್ದರು. ಇದು ಭಾರಿ ಚರ್ಚೆಗೆ ಕಾರಣವಾಯಿತು.

ಈ ಎಲ್ಲಾ ಬೆಳವಣಿಗೆಗಳ ನಂತರ ಚೀನಾದ ಸರಕು ಮತ್ತು ಸೇವೆಗಳನ್ನು ಬಹಿಷ್ಕರಿಸುವ ಅಭಿಯಾನ ಭಾರತದಲ್ಲಿ ಆರಂಭವಾಯಿತು. ಈ ಅಭಿಯಾನ ತೀವ್ರಗೊಂಡ ಬಳಿಕ, ಚೀನಾದ 150ಕ್ಕೂ ಹೆಚ್ಚು ಆ್ಯಪ್‌ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿತು. ಭಾರತದಲ್ಲಿ ಹೆಚ್ಚು ಜನಪ್ರಿಯತೆ ಪಡೆದಿದ್ದ ಟಿಕ್‌ಟಾಕ್‌, ಪಬ್‌ಜಿ, ಷೇರ್‌ಇಟ್‌ ಮತ್ತಿತರ ಅಪ್ಲಿಕೇಷನ್‌ಗಳು ನಿಷೇಧಕ್ಕೆ ಒಳಗಾದವು.

ಈ ಕ್ರಮಗಳ ಜತೆಯಲ್ಲೇ ಗಡಿಯಿಂದ ಸೇನೆಯನ್ನು ವಾಪಸ್ ಕರೆಸಿಕೊಳ್ಳುವ ಬಗ್ಗೆ ಹಲವು ಸುತ್ತಿನ ಮಾತುಕತೆ ನಡೆಯಿತು. ಗಡಿಯಿಂದ ಸೇನೆಯನ್ನು ವಾಪಸ್‌ ಕರೆಸಿಕೊಳ್ಳುವ ಸಂಬಂಧ ಕಾಲಮಿತಿಯನ್ನು ಹಾಕಿಕೊಳ್ಳಲು ಮತ್ತಷ್ಟು ಸುತ್ತಿನ ಮಾತುಕತೆ ನಡೆಯಿತು. ಸೈನಿಕರನ್ನು ವಾಪಸ್ ಕರೆಸಿಕೊಳ್ಳಲು ಒಪ್ಪಿರುವುದಾಗಿ ಚೀನಾದ ವಿದೇಶಾಂಗ ಸಚಿವಾಲಯವು 2020ರ ನವೆಂಬರ್‌ನಲ್ಲಿ ಘೋಷಿಸಿತ್ತು. ಈಗ ಭಾರತ ಸರ್ಕಾರ ಸಹ ಇದನ್ನು ದೃಢಪಡಿಸಿದೆ.

ಪ್ಯಾಂಗಾಂಗ್ ಸರೋವರ: ಬಿಕ್ಕಟ್ಟಿನ ತಾಣ

2020ರಲ್ಲಿ ಪ್ಯಾಂಗಾಂಗ್ ಸರೋವರದ ಬಳಿ ಭಾರತ ಮತ್ತು ಚೀನಾ ಸೈನಿಕರ ಮಧ್ಯೆ ಸಂಘರ್ಷ ನಡೆದಿದೆ. ಈಗಲೂ ಸರೋವರದ ಉತ್ತರದ ದಂಡೆಯಲ್ಲಿ ಎರಡೂ ಕಡೆಯ ಸೈನಿಕರು ತೀರಾ ಹತ್ತಿರದಲ್ಲಿ ಎದುರುಬದುರಾಗಿ ನಿಂತಿದ್ದಾರೆ. ಸರೋವರದ ಉತ್ತರದ ದಂಡೆಯ ಕೆಲವು ಭಾಗವು ತನ್ನದು ಎಂದು ಚೀನಾ ಪ್ರತಿಪಾದಿಸುತ್ತಿದೆ. ಈ ಪ್ರತಿಪಾದನೆಯನ್ನು ಭಾರತ ವಿರೋಧಿಸುತ್ತಿದೆ. ಈಗ ಭಾರತದ ಪ್ರತಿಪಾದನೆಯನ್ನು ಚೀನಾ ಒಪ್ಪಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

l ಫಿಂಗರ್‌ 1ರಿಂದ 8ರವರೆಗಿನ ಪ್ರದೇಶ ತನ್ನದು ಎಂಬುದು ಭಾರತ ಸರ್ಕಾರದ ಪ್ರತಿಪಾದನೆ. ಎಲ್‌ಎಸಿಯ ಒಪ್ಪಂದದಲ್ಲೂ ಇದನ್ನು ಸ್ಪಷ್ಟವಾಗಿ ನಮೂದಿಸಲಾಗಿದೆ. ಫಿಂಗರ್ 5ರವರೆಗೂ ಭಾರತೀಯ ಸೇನೆಯು ಕಚ್ಚಾರಸ್ತೆಯನ್ನು ನಿರ್ಮಿಸಿತ್ತು. ಪ್ರತಿದಿನವೂ ಇಲ್ಲಿ ಗಸ್ತು ನಡೆಯುತ್ತಿತ್ತು

l 2020ರ ಜೂನ್‌ನಲ್ಲಿ ಚೀನಾ ಸೈನಿಕರು ಫಿಂಗರ್‌ 8ನ್ನು ದಾಟಿ, ಫಿಂಗರ್‌ 3ರವರೆಗೂ ಅತಿಕ್ರಮಿಸಿದ್ದರು. ಗಡಿಠಾಣೆಗಳು, ಬಂಕರ್‌ಗಳು ಮತ್ತು ಸುಸಜ್ಜಿತ ರಸ್ತೆಗಳನ್ನು ನಿರ್ಮಿಸಿದ್ದರು. ಭಾರತೀಯ ಸೈನಿಕರು ಚೀನಾ ಸೈನಿಕರನ್ನು ಫಿಂಗರ್‌ 4ರವರೆಗೂ ಹಿಮ್ಮೆಟ್ಟಿಸಿದ್ದರು

l ಫಿಂಗರ್‌ 4 ಎರಡೂ ದೇಶಗಳಿಗೆ ಅತ್ಯಂತ ಮಹತ್ವದ ಆಯಕಟ್ಟಿನ ಪ್ರದೇಶ. ಎಂಟೂ ಫಿಂಗರ್‌ಗಳಲ್ಲಿ ದಕ್ಷಿಣದ ಕಡೆಗೆ ಹೆಚ್ಚು ಚಾಚಿಕೊಂಡಿರುವುದು ಫಿಂಗರ್ 4 ಮಾತ್ರ. ಫಿಂಗರ್‌ 4ರಲ್ಲಿ ಭಾರತೀಯ ಸೇನೆಯ ಗಡಿಠಾಣೆ ಇರುವುದರಿಂದ ಫಿಂಗರ್‌ 8ರ ಆಚೆಗೂ ಚೀನಾ ಸೈನಿಕರ ಕಾರ್ಯಚಟುವಟಿಕೆ ಮೇಲೆ ನಿಗಾ ಇರಿಸಲು ಸಾಧ್ಯ. ಫಿಂಗರ್ 4ನಲ್ಲಿ ಚೀನಾ ಸೇನೆಯ ಗಡಿಠಾಣೆ ಇದ್ದು ಫಿಂಗರ್ 1ರವರೆಗೂ ಭಾರತೀಯ ಸೈನಿಕರ ಮೇಲೆ ನಿಗಾ ಇರಿಸಲು ಸಾಧ್ಯವಿದೆ

l ಫಿಂಗರ್ 4 ಪ್ರದೇಶದಿಂದ ಹಿಂದೆ ಸರಿಯಲು ಚೀನಾ ಸೇನೆಯು ನಿರಾಕರಿಸಿತ್ತು. ಈಗ ಹಲವು ಸುತ್ತಿನ ಮಾತುಕತೆಯ ನಂತರ ಈ ಪ್ರದೇಶದಿಂದ ವಾಪಸ್ ಹೋಗಲು ಚೀನಾ ಸೇನೆ ಒಪ್ಪಿಕೊಂಡಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂಸತ್ತಿನಲ್ಲಿ ಹೇಳಿದ್ದಾರೆ

l ಈ ಒಪ್ಪಂದ ಜಾರಿಯಾದ ನಂತರ ಫಿಂಗರ್ 4ರವರೆಗೂ ಭಾರತೀಯ ಸೈನಿಕರು ಗಸ್ತು ನಡೆಸುತ್ತಾರೆ. ಚೀನಾ ಸೈನಿಕರು ಫಿಂಗರ್ 8ನ್ನು ದಾಟಿ ಪಶ್ಚಿಮದತ್ತ ಬರುವುದಿಲ್ಲ. ಇದಕ್ಕೆ ಎರಡೂ ಸೇನೆಗಳು ಒಪ್ಪಿಗೆ ನೀಡಿವೆ ಎಂದು ರಾಜನಾಥ್ ಸಿಂಗ್ ಅವರು ಹೇಳಿದ್ದಾರೆ

ವಿಶ್ವಾಸ ವೃದ್ಧಿಯೇ ತಕ್ಷಣದ ಅಗತ್ಯ

ವಿವಾದಾತ್ಮಕ ಪ್ರದೇಶದಿಂದ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವ ಮೂಲಕ ಭಾರತ–ಚೀನಾ ನಡುವೆ ಉಂಟಾಗಿರುವ ಗಡಿ ಬಿಕ್ಕಟ್ಟಿಗೆ ಶಾಶ್ವತ ಪರಿಹಾರ ಸಾಧ್ಯವಾಗಬಹುದು ಎಂಬ ನಿರೀಕ್ಷೆ ಇದೆ. ಸೇನೆ ಹಿಂತೆಗೆದುಕೊಳ್ಳಲು ಉಭಯ ದೇಶಗಳು ಒಪ್ಪಿಗೆ ನೀಡಿದ್ದರೂ ಇದು ‘ನಿರಂತರ ಪರಿಶೀಲನೆ’ ಅಗತ್ಯವಿರುವ ‘ಸಂಕೀರ್ಣ ಪ್ರಕ್ರಿಯೆ’ ಆಗಿದೆ. ಸೇನಾ ವಾಪಸಾತಿ ಪ್ರಕ್ರಿಯೆ ತಕ್ಷಣಕ್ಕೆ ಮುಗಿಯುವಂತಹದ್ದಲ್ಲ. 

ಗಾಲ್ವನ್ ಸಂಘರ್ಷದ ಬಳಿಕ ಈ ಒಪ್ಪಂದಕ್ಕೆ ಬರುವಲ್ಲಿ ಸವೆಸಿರುವ ಹಾದಿ ಅಷ್ಟು ಸುಲಭದ್ದಾಗಿರಲಿಲ್ಲ. ಈ ಪ್ರಕ್ರಿಯೆಯಲ್ಲಿ ‘ನಂಬಿಕೆ’ಯನ್ನು ಮರುಸ್ಥಾಪಿಸುವ ಅಗತ್ಯವಿತ್ತು. ವಾಪಸಾತಿ ಪ್ರಕ್ರಿಯೆ ಸಾಕಷ್ಟು ಮಜಲುಗಳನ್ನು ದಾಟಬೇಕಿದೆ. ಇದು ಸಾಕಷ್ಟು ಸಮಯ ಬೇಡುವ ಪ್ರಕ್ರಿಯೆಯಾಗಿರುವ ಕಾರಣ, ರಾಜತಾಂತ್ರಿಕ ಹಾಗೂ ಸೇನಾ ಮಟ್ಟದಲ್ಲಿ ಇನ್ನಷ್ಟು ಸುತ್ತಿನ ಮಾತುಕತೆಗಳು ನಡೆಯಬೇಕಿವೆ. 

ಸಂಪೂರ್ಣ ಸೇನಾ ವಾಪಸಾತಿ ಆದ 48 ಗಂಟೆಗಳ ಒಳಗೆ ಹಿರಿಯ ಕಮಾಂಡರ್‌ಗಳ ಸಭೆ ನಡೆಸಿ, ಬಾಕಿ ಉಳಿದಿರುವ ಸಮಸ್ಯೆಗಳನ್ನು ಪರಿಹರಿಸಿ ಕೊಳ್ಳಬೇಕು ಎಂದು ಒಪ್ಪಂದವಾಗಿದೆ. ಈ ನಿಟ್ಟಿನಲ್ಲಿ ಎರಡೂ ದೇಶಗಳು ಮುಂದಾಗಬಹುದು. ಮುಂದಿನ ಮಾತುಕತೆಗೂ ಮುನ್ನ ಸರಿಯಾದ ಪರಿಶೀಲನೆ ಪ್ರಕ್ರಿಯೆಯ ಅಗತ್ಯವಿದೆ. ಸರೋವರದ ಉತ್ತರ ದಂಡೆಯಲ್ಲಿ ಎರಡೂ ಕಡೆಯ ಸೇನಾ ಚಟುವಟಿಕೆಗಳಿಗೆ ತಾತ್ಕಾಲಿಕ ನಿಷೇಧ ಹೇರಲು ಒಪ್ಪಿಕೊಳ್ಳಲಾಗಿದೆ. ಸಾಮಾನ್ಯವಾಗಿ ಎರಡೂ ಕಡೆಯವರು ತಮ್ಮ ನಿಯಂತ್ರಣದಲ್ಲಿರುವ ಪ್ರದೇಶಗಳಲ್ಲಿ ಗಸ್ತು ತಿರುಗುತ್ತಾರೆ. ಅದಕ್ಕೂ ಈಗ ತಾತ್ಕಾಲಿಕ ತಡೆ ಬಿದ್ದಿದೆ. 

ಚೀನಾ ಕಡೆಯಿಂದ ಬಂದಿರುವ ಧನಾತ್ಮಕ ಸೂಚನೆಯು ವಾಸ್ತವವಾಗಿ ಕಾರ್ಯರೂಪಕ್ಕೆ ಬರುವುದು ಅತಿಮುಖ್ಯ. ಏಕೆಂದರೆ ಸೇನಾ ಹಿಂತೆಗೆತ ಘೋಷಣೆ ಮಾಡಿರುವುದು ಚೀನಾದ ರಕ್ಷಣಾ ಸಚಿವಾಲಯ. ಆದರೆ ಅಂತಿಮ ನಿರ್ಧಾರವು ಚೀನಾದ ಕಮ್ಯುನಿಸ್ಟ್ ಪಕ್ಷದ ಕೈಯಲ್ಲಿದೆ ಎಂಬುದನ್ನು ಮರೆಯಬಾರದು.

ಹಿಂದೆ ಮೂರು ಬಾರಿ ನಿರ್ಣಯ ಆಗಿತ್ತು

ಸೇನೆಯನ್ನು ಹಿಂತೆಗೆದುಕೊಳ್ಳಲು ಒಪ್ಪಿಕೊಳ್ಳಲಾಗಿದೆ ಎಂದರೆ ವಿವಾದ ಬಗೆಹರಿದು ಎಲ್ಲವೂ ಸರಿಹೋಯಿತು ಎನ್ನುವಂತಿಲ್ಲ. ಈ ಹಿಂದೆ ಸೇನೆಯನ್ನು ಹಿಂದಕ್ಕೆ ಪಡೆಯಲು ಮೂರು ಬಾರಿ ನಿರ್ಧರಿಸಲಾಗಿತ್ತು. 

ವಿವಾದಿತ ಸ್ಥಳದಿಂದ ಹೊರನಡೆಯಲು ಎರಡೂ ಕಡೆಯಿಂದ ಒಪ್ಪಿಗೆ ಸಿಕ್ಕಿತ್ತು. ಕಳೆದ ಜೂನ್ 15ರಂದು ಇದರ ಪರಿಶೀಲನೆಗಾಗಿ ತೆರಳಿದ್ದಾಗ ಗಾಲ್ವನ್ ಕಣಿವೆಯಲ್ಲಿ ಉಭಯ ದೇಶಗಳ ಸೈನಿಕರ ಹೊಡೆದಾಡಿಕೊಂಡಿದ್ದರು. ಘರ್ಷಣೆಯ ನಂತರ ಸೇನಾ ಹಿಂತೆಗೆತಕ್ಕಾಗಿ ಮತ್ತೊಂದು ಸುತ್ತಿನ ಪ್ರಕ್ರಿಯೆ ನಡೆಯಿತು. ಚೀನಿಯರು ಗಾಲ್ವನ್‌ ಕಣಿವೆಯಿಂದ ಹೊರನಡೆದರು. ಗೋಗ್ರಾ ಪ್ರದೇಶದಲ್ಲಿ ಸೇನೆ ವಾಪಸ್ ಪಡೆಯುವ ಪ್ರಕ್ರಿಯೆಯನ್ನು ಚೀನಿಯರು ಸಂಪೂರ್ಣವಾಗಿ ಜಾರಿಗೆ ತರಲಿಲ್ಲ. 

ದೋಕಲಾ ಮುಖಾಮುಖಿ

ಚೀನಾ ಜತೆಗಿನ ಭಾರತದ ಗಡಿ ವಿವಾದ ನೂರು ವರ್ಷ ಹಳೆಯದು. 1962ರ ಯುದ್ಧದ ಬಳಿಕವೂ ಅದಕ್ಕೆ ತಾರ್ಕಿಕ ಅಂತ್ಯ ಸಿಕ್ಕಿಲ್ಲ. ಪ್ಯಾಂಗಾಂಗ್‌ ಸರೋವರದ ದಕ್ಷಿಣ ದಂಡೆಯವರೆಗಿನ ಪ್ರದೇಶವು ಭಾರತದ ಸೇನೆಯ ಹಿಡಿತದಲ್ಲಿದೆ. ಸರೋವರದ ಉತ್ತರದ ದಂಡೆಯ ಆಚೆಗಿನ ಪ್ರದೇಶವು ಚೀನಾ ಸೇನೆಯ ಹಿಡಿತದಲ್ಲಿದೆ. ಈ ಪ್ರದೇಶದಲ್ಲಿ ಭಾರತ–ಚೀನಾ ಸೇನೆಗಳು ಸದಾ ಮುಖಾಮುಖಿ ಆಗುತ್ತಿರುತ್ತವೆ. ದೋಕಲಾ ಪ್ರದೇಶ ತನ್ನದು ಎಂಬುದು ಚೀನಾದ ಪ್ರತಿಪಾದನೆ. ಹೀಗಾಗಿ 2017ರ ಜೂನ್‌ನಲ್ಲಿ ಚೀನಾ ಸೈನಿಕರು ದೋಕಲಾ ಪ್ರದೇಶವನ್ನು ಅತಿಕ್ರಮಿಸಿ ರಸ್ತೆ ಮತ್ತು ಗಡಿ ಠಾಣೆಯನ್ನು ನಿರ್ಮಿಸಲು ಮುಂದಾದರು. ಭಾರತದ ಸೈನಿಕರು ಚೀನಾ ಸೈನಿಕರನ್ನು ಹಿಮ್ಮೆಟ್ಟಿಸಿದ್ದರು. ಎರಡೂ ದೇಶಗಳು ಸೇನೆಗಳು 73 ದಿನಗಳ ಕಾಲ ಮುಖಾಮುಖಿಯಾಗಿದ್ದವು. ಆನಂತರ ಮಾತುಕತೆ ಮೂಲಕ ಸಂಘರ್ಷಕ್ಕೆ ಅಂತ್ಯ ಹಾಡಲಾಯಿತು.

ಆಧಾರ: ಪಿಟಿಐ, ರಾಯಿಟರ್ಸ್, ಎಪಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು