ಬೆಂಗಳೂರು: ಕೆಆರ್‌ಎಸ್ ಅಣೆಕಟ್ಟೆಯಿಂದ ತಮಿಳುನಾಡಿಗೆ ಹನಿ ನೀರನ್ನೂ ಬಿಡುವುದಿಲ್ಲ. ರಾಜ್ಯದ ರೈತರ ಹಿತಾಸಕ್ತಿ ವಿಚಾರದಲ್ಲಿ ರಾಜಿಯಾಗುವುದಿಲ್ಲ ಎಂದು ಜಲ ಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಸುದ್ದಿಗಾರರ ಜತೆ ಬುಧವಾರ ಮಾತನಾಡಿದ ಅವರು,'ತಮಿಳುನಾಡಿಗೆ ನಿತ್ಯ 3,000 ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಸೂಚಿಸಿದೆ. ಕೆಆರ್‌ಎಸ್ ಅಣೆಕಟ್ಟೆಯಿಂದ ಸಾಮಾನ್ಯವಾಗಿ ನಿತ್ಯ 2,000 ಕ್ಯೂಸೆಕ್ ನೀರು ಹೊರ ಹೋಗುತ್ತದೆ. ಉಳಿದ ಸಾವಿರ ಕ್ಯೂಸೆಕ್ ನೀರನ್ನು ಪರ್ಯಾಯ ಮೂಲದಿಂದ ಬಿಡಲಾಗುವುದು. ಕೆಆರ್‌ಎಸ್' ಅಣೆಕಟ್ಟೆಯಿಂದ ಹೆಚ್ಚುವರಿಯಾಗಿ ಹನಿ ನೀರನ್ನೂ ಬಿಡುವುದಿಲ್ಲ' ಎಂದರು.
ವಿರೋಧ ಪಕ್ಷಗಳ ನಾಯಕರು ರಾಜ್ಯದಲ್ಲಿ ಹೋರಾಟ ನಡೆಸುವ ಬದಲಿಗೆ ಮೇಕೆದಾಟು ಯೋಜನೆಗೆ ಅನುಮತಿ ನೀಡುವಂತೆ ಆಗ್ರಹಿಸಿ ದೆಹಲಿಯಲ್ಲಿ ಹೋರಾಟ ಮಾಡಲಿ ಎಂದರು.