ಶುಕ್ರವಾರ, ಮೇ 27, 2022
30 °C
ಶಿರಾಡಿ ಘಾಟ್ ಸುರಂಗ ಮಾರ್ಗ ಭೂಸ್ವಾಧೀನಕ್ಕೆ ದಿನಗಣನೆ

ಒಳನೋಟ| ಸರಕು ಮಾರ್ಗಕ್ಕೆ ಸುರಂಗ

ಚಿದಂಬರಪ್ರಸಾದ Updated:

ಅಕ್ಷರ ಗಾತ್ರ : | |

ಮಂಗಳೂರು: ಕಡಿದಾದ ತಿರುವುಗಳು, ಗ್ಯಾಸ್‌ ಟ್ಯಾಂಕರ್‌ಗಳ ಅಪಘಾತ, ಸಣ್ಣ ಅಪಘಾತವಾದರೂ ಗಂಟೆಗಟ್ಟಲೇ ಸಂಚಾರ ಸ್ಥಗಿತ, ಗುಡ್ಡ ಕುಸಿತ... ವರ್ಷದ ಕೆಲದಿನಗಳಲ್ಲಿ ಶಿರಾಡಿ ಘಾಟಿಯಲ್ಲಿ ಪ್ರಯಾಣಿಸುವುದೇ ದುಸ್ತರ ಎನ್ನುವ ಪರಿಸ್ಥಿತಿಯಿದೆ. ಇದೀಗ ಪಶ್ಚಿಮ ಘಟ್ಟವನ್ನು ಕೊರೆದು ಸರಕು ಸಾಗಣೆ ವಾಹನಗಳಿಗೇ ಪ್ರತ್ಯೇಕ ಸುರಂಗ ಮಾರ್ಗ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.

ಯೋಜನೆಯಂತೆ ಎಲ್ಲವೂ ನಡೆದರೆ, 5 ವರ್ಷಗಳಲ್ಲಿ ಸರಕು ಸಾಗಣೆ, ಪ್ರಯಾಣಿಕ ವಾಹನಗಳ ಸಂಚಾರ ಸುಗಮವಾಗಲಿದೆ.


ಶಿರಾಡಿ ಸುರಂಗ ಮಾರ್ಗದ ನೀಲನಕ್ಷೆ

ಬಹುನಿರೀಕ್ಷಿತ ಶಿರಾಡಿ ಘಾಟಿ ಸುರಂಗ ಮಾರ್ಗ ಯೋಜನೆಯ ಬಹು ತೇಕ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ಭೂಸ್ವಾಧೀನ ಶೀಘ್ರದಲ್ಲಿಯೇ ಆರಂಭ ವಾಗಲಿದೆ. ಇದು ದೇಶದ ಪಶ್ಚಿಮ ಕರಾವಳಿಯನ್ನು ಬೆಂಗಳೂರಿನ ಮೂಲಕ ಪೂರ್ವ ಕರಾವಳಿಗೆ ಸಂಪರ್ಕಿಸುವ ಮಹತ್ವಾಕಾಂಕ್ಷಿ ಯೋಜನೆಯ ಭಾಗ.

ಇದನ್ನೂ ಓದಿ: ಸುರಂಗ ಮಾರ್ಗ ಬದಲಿಗೆ ಇದ್ದ ರಸ್ತೆ ವಿಸ್ತರಿಸಿದ್ದರೆ ಸಾಕಿತ್ತು: ಪರಿಸರ ಪ್ರಿಯರು

ಸದ್ಯ ಶಿರಾಡಿ ಘಾಟಿಯ (ರಾಷ್ಟ್ರೀಯ ಹೆದ್ದಾರಿ 75) ತಿರುವುಗಳಿರುವ ರಸ್ತೆಗೆ ಪರ್ಯಾಯವಾಗಿ 23.63 ಕಿ.ಮೀ. ಸುರಂಗ ಮಾರ್ಗ ನಿರ್ಮಿಸಲಾಗುತ್ತಿದೆ.
ಪ್ರಮುಖವಾಗಿ ಬೆಂಗಳೂರಿನಿಂದ ಮಂಗಳೂರಿನ ಬಂದರಿಗೆ ಸರಕು ಸಾಗಣೆ ಪ್ರಮಾಣ ಹೆಚ್ಚಿಸುವುದೇ ಈ ಯೋಜನೆ ಯ ಉದ್ದೇಶ. ಮಳೆಗಾಲದಲ್ಲಿ ಶಿರಾಡಿ ಮಾರ್ಗ ಸಂಚಾರ ಸ್ಥಗಿತಗೊಂಡಲ್ಲಿ, ಪ್ರಯಾಣಿಕ ವಾಹನಗಳಿಗೆ ಸುರಂಗ ಮಾರ್ಗವನ್ನು ಪರ್ಯಾಯವಾಗಿ ಬಳಸಲೂ ಅವಕಾಶವಿದೆ.

ಹಾಲಿ ಇರುವ ಹೆದ್ದಾರಿಯನ್ನು ಮಂಗಳೂರಿನಿಂದ ಸುರಂಗ ಪ್ರವೇಶಿಸುವ ಅಡ್ಡಹೊಳೆವರೆಗೆ ಹಾಗೂ ಹೆಗ್ಗದ್ದೆಯಿಂದ ಬೆಂಗಳೂರಿನವರೆಗೆ ಚತುಷ್ಪಥ ರಸ್ತೆಯನ್ನು ಮಾಡಲು ₹1 ಸಾವಿರ ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿದೆ.

ಜಿಯೊ ಕನ್ಸಲ್ಟೆಂಟ್‌ನ ಭೂ ವಿಜ್ಞಾನ ಸಮಿತಿಯು, ಶಿರಾಡಿಯಲ್ಲಿ ಸುರಂಗ ಹಾಗೂ ಸೇತುವೆಗಳು ಬರುವ ಸ್ಥಳಗಳಲ್ಲಿ 21 ಕೊಳವೆಬಾವಿಗಳನ್ನು ಕೊರೆದು ಅಧ್ಯಯನ ಮಾಡಿದೆ. ಈ ಕುರಿತು ವಿಸ್ತೃತ ಅಧ್ಯಯನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಇದರ ಜೊತೆಗೆ ಭಾರತೀಯ ವಿಜ್ಞಾನ ಸಂಸ್ಥೆಯಿಂದಲೂ (ಐಐಎಸ್‌ಸಿ) ಸರ್ಕಾರ ಅಧ್ಯಯನ ವರದಿಯನ್ನು ಪಡೆ ದಿದ್ದು, ಎರಡೂ ವರದಿಗಳನ್ನು ಆಧರಿಸಿ, ಯೋಜನೆಗೆ ಹಸಿರು ನಿಶಾನೆ ನೀಡಿದೆ.

ಇದನ್ನೂ ಓದಿ: ದೇಶದ ರಸ್ತೆ ಸುರಂಗಗಳಿವು

ವೇಗ ಹೆಚ್ಚಳ

ತಿರುವುಗಳಿರುವ ಶಿರಾಡಿ ಘಾಟಿಯಲ್ಲಿ ಸದ್ಯ ವಾಹನಗಳು 10ರಿಂದ 40 ಕಿ.ಮೀ.ವೇಗದಲ್ಲಿ ಸಂಚರಿಸುತ್ತಿವೆ. ಸುರಂಗ ಮಾರ್ಗ ನಿರ್ಮಾಣಗೊಂಡರೆ, ವೇಗವು 80–100 ಕಿ.ಮೀ.ಗೆ ಹೆಚ್ಚುವ ಸಾಧ್ಯತೆ ಇದೆ. ಹೀಗಾಗಿ ಬೆಂಗಳೂರಿನಿಂದ ಮಂಗಳೂರಿಗೆ ಬರಲು ಬರೇ 5 ಗಂಟೆ ಸಾಕಾಗಬಹುದು ಎಂದು ಜಿಯೋ ಕನ್ಸಲ್ಟೆಂಟ್‌ ತನ್ನ ವರದಿಯಲ್ಲಿ ತಿಳಿಸಿದೆ.

ಮಳೆಗಾಲದಲ್ಲಿ ಶಿರಾಡಿ ಮಾರ್ಗದಲ್ಲಿಸಂಚರಿಸುವುದೇ ದುಸ್ತರ. ಸುರಂಗ ಮಾರ್ಗ ನಿರ್ಮಾಣವಾದಲ್ಲಿ, ಯಾವುದೇ ಅಡೆತಡೆಗಳು ಇರುವುದಿಲ್ಲ ಎಂದೂ ವರದಿಯಲ್ಲಿ ಹೇಳಲಾಗಿದೆ.

2022ಕ್ಕೆ ಮುಕ್ತಾಯ ಆಗಬೇಕಿತ್ತು

ಶಿರಾಡಿ ಸುರಂಗ ಮಾರ್ಗ 2022ಕ್ಕೆ ಸಂಚಾರಕ್ಕೆ ಮುಕ್ತವಾಗಬೇಕಿತ್ತು. 2015 ರಲ್ಲಿಯೇ ಸುರಂಗ ಮಾರ್ಗ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿತ್ತು.

ಅರಣ್ಯ ಇಲಾಖೆಯ ಅನುಮತಿಗಾಗಿ ಜಿಯೊ ಕನ್ಸಲ್ಟೆಂಟ್‌ನ ಭೂ ವಿಜ್ಞಾನ ಸಮಿತಿಯ ಅಧ್ಯಯನವೂ ತಡವಾಯಿತು. 2016 ರಲ್ಲಿ ಸಮಿತಿಯು ಕೇಂದ್ರಕ್ಕೆ ವರದಿ ಸಲ್ಲಿಸಿತ್ತು. ಅದಾದ ನಂತರ ಯೋಜನೆಯ ಬಗ್ಗೆ ಅಪಸ್ವರ ಕೇಳಿ ಬಂದಿದ್ದರಿಂದ ಭಾರತೀಯ ವಿಜ್ಞಾನ ಸಂಸ್ಥೆಯಿಂದಲೂ ಕೇಂದ್ರ ಸರ್ಕಾರ ವರದಿ ಕೇಳಿತ್ತು.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, 2017 ಕ್ಕೆ ಕಾಮಗಾರಿ ಆರಂಭವಾಗಿ, 2022 ಕ್ಕೆ ಪೂರ್ಣವಾಗಬೇಕಿತ್ತು. ಇದೀಗ ಎಲ್ಲ ಅಡೆತಡೆಗಳನ್ನು ನಿವಾರಿಸಿದ್ದು, ಕಾಮಗಾರಿಗೆ ಶೀಘ್ರ ಟೆಂಡರ್ ಪ್ರಕ್ರಿಯೆ ನಡೆಯಲಿದೆ ಎಂದು ಹೆದ್ದಾರಿ ಪ್ರಾಧಿಕಾರದ ಮೂಲಗಳು ತಿಳಿಸಿವೆ.

ಏಳು ಸುರಂಗ, ಆರು ಸೇತುವೆ

ಅಡ್ಡ ಹೊಳೆ, ಗುಂಡ್ಯ, ಎಡಕುಮೇರಿ, ಕಡ ಗರವಳ್ಳಿ, ಮಾರನಹಳ್ಳಿ ಮೂಲಕ ಸಾಗುವ ಹೊಸ ದ್ವಿಪಥ ಮಾರ್ಗದಲ್ಲಿ ಒಟ್ಟು 12.60 ಕಿ.ಮೀ. ಉದ್ದದ ಏಳು ಸುರಂಗಗಳು ಹಾಗೂ 1.5 ಕಿ.ಮೀ. ಉದ್ದದ ಆರು ಸೇತುವೆಗಳು ನಿರ್ಮಾಣವಾಗಲಿವೆ. 8.58 ಮೀ. ವಿಸ್ತಾರವಿರುವ ತುರ್ತು ಮಾರ್ಗವನ್ನು ನಿರ್ಮಾಣ ಮಾಡಲಾಗುತ್ತದೆ. ಪಶ್ಚಿಮ ಘಟ್ಟದಲ್ಲಿ ಈಗಾಗಲೇ ಸುರಂಗ ಕೊರೆದು ರೈಲು ಮಾರ್ಗ ನಿರ್ಮಿಸಲಾಗಿದೆ. ಇದರಿಂದ ಪ್ರಾಣಿಗಳ ಓಡಾಟಕ್ಕೂ ತೊಂದರೆ ಆಗುವುದಿಲ್ಲ ಎನ್ನುತ್ತಾರೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು.


ಗೂಗಲ್‌ ಅರ್ಥ್‌ನಲ್ಲಿ ಶಿರಾಡಿ ಸುರಂಗ ಮಾರ್ಗ ನಿರ್ಮಾಣದ ಸ್ಥಳ

 ಶೇ 30ರಷ್ಟು ಖಾಸಗಿ ಭೂಮಿ

ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟಿಯಲ್ಲಿ ಅಡ್ಡಹೊಳೆಯಿಂದ ಸಕಲೇಶಪುರದ ಹೆಗ್ಗದ್ದೆವರೆಗಿನ 23.63 ಕಿ.ಮೀ. ಸುರಂಗ ಮಾರ್ಗಕ್ಕೆ 197 ಎಕರೆ ಭೂಮಿ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.

ಸುರಂಗ ಮಾರ್ಗದ ಬಹುತೇಕ ಪ್ರದೇಶ ಸರ್ಕಾರಿ ಭೂಮಿಯಾಗಿದ್ದು, ಶೇ 30ರಷ್ಟು ಭೂಮಿ ಮಾತ್ರ ಸ್ವಾಧೀನ ಪಡಿಸಿಕೊಳ್ಳಬೇಕಾಗಿದೆ. ಭೂ ಸ್ವಾಧೀನದ ಅಧಿಸೂಚನೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಾಯುತ್ತಿದೆ.

ಸಿವಿಲ್‌ ಕಾಮಗಾರಿಗಳಿಗೆ ₹ 9,598 ಕೋಟಿ ಸೇರಿದಂತೆ ಒಟ್ಟು ₹11 ಸಾವಿರ ಕೋಟಿ ವೆಚ್ಚವನ್ನು ಅಂದಾಜು ಮಾಡಲಾಗಿದೆ. ಹೆಗ್ಗದ್ದೆಯ ಬಳಿ ಟೋಲ್‌ ಪ್ಲಾಜಾ ನಿರ್ಮಿಸುವ ಉದ್ದೇಶವನ್ನು ಯೋಜನೆ ಹೊಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು