ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಳ–ಅಗಲ: ‘ದೇಶದ್ರೋಹ’ ಕಾನೂನು ಮರುಪರಿಶೀಲನೆ ಸುತ್ತ

Published : 10 ಮೇ 2022, 23:15 IST
ಫಾಲೋ ಮಾಡಿ
Comments

ಹೋರಾಟಗಳ ವಿರುದ್ಧ ದೇಶದ್ರೋಹ

ಸರ್ಕಾರ, ಸರ್ಕಾರದ ನೀತಿ, ಸರ್ಕಾರದ ಮುಖ್ಯಸ್ಥರು ಮತ್ತು ಸರ್ಕಾರದ ಯೋಜನೆಗಳನ್ನು ವಿರೋಧಿಸಿ ನಡೆಸಿದ ಪ್ರತಿಭಟನೆ ಮತ್ತು ಹೋರಾಟಗಳ ವಿರುದ್ಧ ದೇಶದ್ರೋಹ ಪ್ರಕರಣಗಳನ್ನು ದಾಖಲಿಸಲಾಗಿದೆ. 2014ರ ನಂತರ ಇಂತಹ ಪ್ರವೃತ್ತಿ ಹೆಚ್ಚಾಗಿದೆ. ಹೋರಾಟಗಳನ್ನು ಹತ್ತಿಕ್ಕಲು ದೇಶದ್ರೋಹ ಕಾನೂನನ್ನು ಪ್ರಯೋಗಿಸುವುದು ಸಾಮಾನ್ಯವೆಂಬಂತೆ ಆಗಿದೆ ಎಂದು ವಿಶ್ಲೇಷಿಸಲಾಗಿದೆ.

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ನಡೆದ ಹೋರಾಟದಲ್ಲಿ 3,800ಕ್ಕೂ ಹೆಚ್ಚು ಜನರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ. ಸರ್ಕಾರದ ವಿರುದ್ಧ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗಿದವರ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ. ಸರ್ಕಾರದ ಈ ನೀತಿಯ ವಿರುದ್ಧ ಕವನ ಕಟ್ಟಿ ಹಾಡಿದವರು, ನಾಟಕ ಪ್ರದರ್ಶಿಸಿದವರ ವಿರುದ್ಧವೂ ದೇಶದ್ರೋಹದ ಆರೋಪ ಹೊರಿಸಲಾಗಿದೆ. 2019–2020ರ ಒಟ್ಟು ಐದು ತಿಂಗಳಲ್ಲಿ ನಡೆದ ಈ ಹೋರಾಟಕ್ಕೆ ಸಂಬಂಧಿಸಿದಂತೆ, ದೇಶದಾದ್ಯಂತ 27 ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಪ್ರಕರಣಗಳಲ್ಲಿ ಗುರುತಿಸಲಾದ ಆರೋಪಿಗಳ ಸಂಖ್ಯೆ 109. ಆದರೆ ಗುರುತೇ ಇಲ್ಲದ 3,753 ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಕೇಂದ್ರದ ಬಿಜೆಪಿ ಸರ್ಕಾರವು ಜಾರಿಗೆ ತಂದಿದ್ದ ನೂತನ ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸಿದ ಹೋರಾಟದಲ್ಲಿ ಭಾಗಿಯಾಗಿದ್ದವರ ವಿರುದ್ಧವೂ ದೇಶದ್ರೋಹ ಪ್ರಕರಣ ದಾಖಲಾಗಿದೆ. ಈ ಸಂಬಂಧ ಒಟ್ಟು 8 ಪ್ರಕರಣ ದಾಖಲಿಸಲಾಗಿದೆ. ಒಟ್ಟು 133 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಉತ್ತರ ಪ್ರದೇಶದ ಹಾಥರಸ್‌ನಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣಗಳ ವಿರುದ್ಧ ದೊಟ್ಟಮಟ್ಟದ ಹೋರಾಟ ನಡೆದಿತ್ತು. ಈ ಹೋರಾಟದಲ್ಲಿ ಭಾಗಿಯಾಗಿದ್ದ ಪ್ರತಿಭಟನಕಾರರನ್ನು ದೇಶದ್ರೋಹ ಪ್ರಕರಣಕ್ಕೆ ಗುರಿ ಮಾಡಲಾಗಿತ್ತು.

ಪತ್ರಕರ್ತರೂ ಗುರಿ: ಈ ಮೂರೂ ಹೋರಾಟಗಳಲ್ಲಿ, ಹೋರಾಟದ ವರದಿಗಾರಿಕೆಗೆ ತೆರಳಿದ್ದ ಪತ್ರಕರ್ತರು, ಸಂತ್ರಸ್ತರ ಬಗ್ಗೆ ಅನುಕಂಪ ತೋರಿದ್ದ ಪತ್ರಕರ್ತರ ವಿರುದ್ಧವೂ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ. ರಾಜಕಾರಣಿಗಳು ಮತ್ತು ಸಾಮಾಜಿಕ ಹೋರಾಟಗಾರರೂ ಇದಕ್ಕೆ ಹೊರತಲ್ಲ. ರೈತ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಸಂಸದ ಶಶಿ ತರೂರ್‌, ಹಿರಿಯ ಪತ್ರಕರ್ತ ರಾಜ್‌ದೀಪ್‌ ಸರ್ದೇಸಾಯಿ, ‘ನ್ಯಾಷನಲ್‌ ಹೆರಾಲ್ಡ್‌’ನ ಮೃಣಾಲ್‌ ಪಾಂಡೆ, ‘ಕೌಮಿ ಆವಾಜ್‌’ನ ಜಾಫರ್ ಆಘಾ, ‘ದಿ ಕ್ಯಾರವಾನ್‌’ ಸುದ್ದಿ ಸಮೂಹದ ಅನಂತ್‌ ನಾಥ್‌ ಮತ್ತು ವಿನೋದ್‌ ಜೋಶ್‌ ವಿರುದ್ಧ ದೇಶದ್ರೋಹ ಸೆಕ್ಷನ್‌ ಅಡಿ ಎಫ್‌ಐಆರ್ ದಾಖಲಾಗಿದೆ. ಹಾಥರಸ್‌ ಅತ್ಯಾಚಾರ ವಿರುದ್ಧದ ಹೋರಾಟದ ವರದಿಗಾರಿಕೆಗೆ ತೆರಳಿದ್ದ ಕೇರಳದ ಪತ್ರಕರ್ತ ಸಿದ್ದಿಕಿ ಕಪ್ಪನ್ ಸಹ ಈ ಆರೋಪಕ್ಕೆ ಗುರಿಯಾಗಿದ್ದಾರೆ.

ಪಾಟೀದಾರ್ ಹೋರಾಟವೂ ಹೊರತಲ್ಲ:ಗುಜರಾತ್‌ನಲ್ಲಿ ಪಾಟೀದಾರ್ ಸಮುದಾಯಕ್ಕೆ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಹಾರ್ದಿಕ್ ಪಟೇಲ್ ಅವರು 2015ರಲ್ಲಿ ಬೃಹತ್ ಹೋರಾಟ ನಡೆಸಿದ್ದರು. ಈ ವೇಳೆ ಅವರ ವಿರುದ್ಧ ದೇಶದ್ರೋಹ ಆರೋಪ ಹೊರಿಸಿ ಜೈಲಿಗೆ ಕಳುಹಿಸಲಾಗಿತ್ತು. ಗಲಭೆ ಮತ್ತು ಪಿತೂರಿ ನಡೆಸಿದ ಆರೋಪ ಅವರ ಮೇಲಿದ್ದವು.

ಕೂಡಂಕುಳಂ ಪ್ರತಿಭಟನೆ: ತಮಿಳುನಾಡಿನ ಕೂಡಂಕುಳಂನಲ್ಲಿ ಅಣುಸ್ಥಾವರ ಸ್ಥಾಪನೆಯನ್ನು ವಿರೋಧಿಸಿ2010–11ರಲ್ಲಿ ಪ್ರತಿಭಟನೆ ನಡೆಸಿದ ಆರೋಪ ಮೇಲೆ ಒಟ್ಟು 8,856 ಜನರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ.

ಸೆಕ್ಷನ್ 124 ಎ

ಭಾರತೀಯ ದಂಡ ಸಂಹಿತೆಯ ‘ಸೆಕ್ಷನ್ 124 ಎ’ ದೇಶದ್ರೋಹ ಏನು ಎಂಬುದನ್ನು ವ್ಯಾಖ್ಯಾನಿಸುತ್ತದೆ. ಸರ್ಕಾರದ ವಿರುದ್ಧ ಅಸಮಾಧಾನವನ್ನು ಪ್ರಚೋದಿಸುವ ಪ್ರಯತ್ನಗಳು ದೇಶದ್ರೋಹ ಪ್ರಕರಣ ಎನಿಸಿಕೊಳ್ಳುತ್ತವೆ. ಅಂದರೆ ಯಾವುದೇ ವ್ಯಕ್ತಿಯು ಮಾತಿನಿಂದ, ಬರವಣಿಗೆಯ ಮೂಲಕ ಅಥವಾ ಸಂಕೇತಗಳ ಮೂಲಕ ಸರ್ಕಾರದ ವಿರುದ್ಧ ದ್ವೇಷವನ್ನು ಅಥವಾ ತಿರಸ್ಕಾರವನ್ನು ಹುಟ್ಟಿಸಲು ಯತ್ನಿಸಿದರೆ ಅಥವಾ ಅದಕ್ಕೆ ಪ್ರಚೋದಿಸಿದರೆ ಅದು ದೇಶದ್ರೋಹ ಎನಿಸಿಕೊಳ್ಳುತ್ತದೆ. ಆದರೆ ದ್ವೇಷ, ತಿರಸ್ಕಾರ ಅಥವಾ ಅಸಮಾಧಾನವನ್ನು ಪ್ರಚೋದಿಸದ ಮತ್ತು ಉತ್ತೇಜಿಸದ ಹೇಳಿಕೆಗಳು ಈ ವಿಭಾಗದ ಅಡಿಯಲ್ಲಿ ಅಪರಾಧ ಎನಿಸುವುದಿಲ್ಲ.

ಶಿಕ್ಷೆ:ದೇಶದ್ರೋಹದಡಿ ದಾಖಲಾಗುವ ಪ್ರಕರಣವು ಜಾಮೀನುರಹಿತ ಅಪರಾಧ ವಾಗಿದೆ. ಸೆಕ್ಷನ್ 124 ಎ ಅಡಿ 3 ವರ್ಷದವರೆಗೆ ಶಿಕ್ಷೆ ವಿಧಿಸಬಹುದು. ಜೀವಾವಧಿವರೆಗಿನ ಶಿಕ್ಷೆಯನ್ನೂ ನೀಡಬಹುದು. ದಂಡವನ್ನೂ ಹಾಕಬಹುದು. ಈ ಕಾನೂನಿನಡಿಯಲ್ಲಿ ಆರೋಪ ಹೊರಿಸಲಾದ ವ್ಯಕ್ತಿಗೆ ಸರ್ಕಾರಿ ಉದ್ಯೋಗವನ್ನು ನಿರ್ಬಂಧಿಸಲಾಗಿದೆ. ಅಗತ್ಯವಿದ್ದಾಗ ನ್ಯಾಯಾಲಯಕ್ಕೆ ಹಾಜರಾಗಬೇಕು.

ಆಧಾರ: ಆರ್ಟಿಕಲ್ 14 ಇಂಡಿಯಾ, ಕಾನೂನು ಆಯೋಗದ 2018ರ ವರದಿ, ಭಾರತದಲ್ಲಿ ಅಪರಾಧ ವರದಿ-2014, 2015, 2016, 2017, 2018, 2019 ಮತ್ತು 2020, ಐಪಿಸಿ ಸೆಕ್ಷನ್‌ 124ಎ

ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಒಂದೇ ಅಭಿಪ್ರಾಯವನ್ನು ಹೊಂದಿರಬೇಕು ಎಂಬುದು ದೇಶಪ್ರೇಮದ ಮಾನದಂಡವಲ್ಲ. ದೇಶದ ಮೇಲಿನ ಪ್ರೀತಿಯನ್ನು ತೋರಿಸಲು ಜನರು ತಮ್ಮದೇ ರೀತಿಯನ್ನು ಅನುಸರಿಸುವ ಸ್ವಾತಂತ್ರ್ಯ ಇರಬೇಕು. ಸರ್ಕಾರವನ್ನು ರಚನಾತ್ಮಕವಾಗಿ ಟೀಕಿಸುವ ಮೂಲಕ ಅಥವಾ ಸರ್ಕಾರದ ನೀತಿಯಲ್ಲಿರುವ ಲೋಪಗಳನ್ನು ಎತ್ತಿ ತೋರಿಸುವ ಮೂಲಕವೂ ದೇಶಪ್ರೇಮವನ್ನು ತೋರಬಹುದು. ಈ ರೀತಿಯ ಚಿಂತನೆಯ ಅಭಿವ್ಯಕ್ತಿಯು ಕೆಲವರಿಗೆ ಒರಟು ಮತ್ತು ಅಹಿತಕರ ಅನ್ನಿಸಬಹುದು. ಆದರೆ, ಇಂತಹ ಅಭಿವ್ಯಕ್ತಿಗೆ ದೇಶದ್ರೋಹ ಎಂಬ ಹಣೆಪಟ್ಟಿ ಕಟ್ಟಲಾಗದು. ಸಾರ್ವಜನಿಕ ಸುವ್ಯವಸ್ಥೆಯನ್ನು ಹಾಳುಗೆಡಹುವ ಅಥವಾ ಹಿಂಸೆ ಮತ್ತು ಕಾನೂನುಬಾಹಿರ ಮಾರ್ಗದ ಮೂಲಕ ಸರ್ಕಾರ ಉರುಳಿಸುವ ಉದ್ದೇಶದ ಕೃತ್ಯಗಳಲ್ಲಿ ಮಾತ್ರ 124ಎ ಸೆಕ್ಷನ್‌ ಅನ್ವಯ ಮಾಡಬೇಕು ಎಂದು ಕಾನೂನು ಆಯೋಗದ 2018ರ ವರದಿಯಲ್ಲಿ ಹೇಳಲಾಗಿದೆ.

ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬೇಜವಾಬ್ದಾರಿಯಿಂದ ಬಳಸಿದ ಪ್ರತಿಯೊಂದೂ ಪ್ರಕರಣವನ್ನು ದೇಶದ್ರೋಹ ಎನ್ನಲಾಗದು. ಸರ್ಕಾರದ ನೀತಿಯೊಂದಿಗೆ ಸಮರಸವಿಲ್ಲದ ಅಭಿವ್ಯಕ್ತಿಯನ್ನು ದೇಶದ್ರೋಹ ಎಂದು ಹೇಳಲು ಸಾಧ್ಯವಿಲ್ಲ. ದೇಶದ ಪರಿಸ್ಥಿತಿಯ ಕುರಿತ ಹತಾಶೆಯ ಅಭಿವ್ಯಕ್ತಿ ಕೂಡ ದೇಶದ್ರೋಹ ಅಲ್ಲ. ಉದಾಹರಣೆಗೆ, ‘ಇದು ಮಹಿಳೆಯರು ಜೀವಿಸಲು ಯೋಗ್ಯವಾದ ದೇಶವಲ್ಲ’ ಎಂದು ಹೇಳುವುದು ದೇಶ ಎಂಬ ಪರಿಕಲ್ಪನೆಗೆ ಯಾವ ಬೆದರಿಕೆಯನ್ನೂ ಒಡ್ಡುವುದಿಲ್ಲ. ಹಾಗಾಗಿ ಇಂಥವುಗಳನ್ನು ದೇಶದ್ರೋಹ ಎಂದು ಪರಿಗಣಿಸಲಾಗದು. ದೇಶದಲ್ಲಿ ಸಕಾರಾತ್ಮಕ ವಿಮರ್ಶೆಗೆ ಅವಕಾಶವಿಲ್ಲದಿದ್ದರೆ ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯನಂತರಕ್ಕೆ ಹೆಚ್ಚಿನ ವ್ಯತ್ಯಾಸ ಇರುವುದಿಲ್ಲ. ತನ್ನದೇ ಇತಿಹಾಸವನ್ನು ಟೀಕಿಸುವ ಹಕ್ಕು ಮತ್ತು ಕೋಪಗೊಳ್ಳುವ ಹಕ್ಕುಗಳಿಗೆ ವಾಕ್‌ ಸ್ವಾತಂತ್ರ್ಯದ ಅಡಿಯಲ್ಲಿ ರಕ್ಷಣೆ ಇದೆ ಎಂದು ವರದಿ ವಿಶ್ಲೇಷಿಸಿದೆ.

ದೇಶದ ಒಗ್ಗಟ್ಟಿನ ರಕ್ಷಣೆ ಅತ್ಯಗತ್ಯ. ಆದರೆ, ಅದು ವಾಕ್‌ ಸ್ವಾತಂತ್ರ್ಯವನ್ನು ಹತ್ತಿಕ್ಕುವ ರೀತಿಯಲ್ಲಿ ದುರ್ಬಳಕೆ ಆಗಬಾರದು. ವಾಕ್‌ ಮತ್ತು ಅಭಿವ್ಯಕ್ತಿಸ್ವಾತಂತ್ರ್ಯದ ಮೇಲೆ ಹೇರುವ ಪ್ರತಿಯೊಂದು ನಿರ್ಬಂಧವನ್ನು ಅತ್ಯಂತ ಎಚ್ಚರಿಕೆಯಿಂದ ಪರಿಶೀಲಿಸಬೇಕು ಎಂದು ವರದಿಯು ಅಭಿಪ್ರಾಯಪಟ್ಟಿದೆ.

ಮರುಪರಿಶೀಲನೆಯ ಸಂದರ್ಭದಲ್ಲಿ ಏನನ್ನು ಗಮನದಲ್ಲಿ ಇರಿಸಿಕೊಳ್ಳಬೇಕು ಎಂಬುದನ್ನೂ ವರದಿಯಲ್ಲಿ ಚರ್ಚಿಸಲಾಗಿದೆ. ಮುಖ್ಯ ಅಂಶಗಳು ಹೀಗಿವೆ:

ಬ್ರಿಟನ್‌, ದೇಶದ್ರೋಹ ಕಾನೂನನ್ನು ಕೆಲವರ್ಷಗಳ ಹಿಂದೆ ರದ್ದುಪಡಿಸಿದೆ. ಭಾರತೀಯರನ್ನು ದಮನಿಸುವ ಅಸ್ತ್ರವಾಗಿ ಬ್ರಿಟಿಷರು ಈ ಕಾನೂನನ್ನು ರೂಪಿಸಿದ್ದರು. ಹೀಗಿರುವಾಗ ಈಗಲೂ ಐಪಿಸಿಯ 124ಎ ಸೆಕ್ಷನ್‌ ಅನ್ನು ಉಳಿಸಿಕೊಳ್ಳುವುದಕ್ಕೆ ಇರುವ ಸಮರ್ಥನೆ ಏನು?

ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವು ಪ್ರಜಾಪ್ರಭುತ್ವದ ಅಗತ್ಯ ಭಾಗವಾಗಿದ್ದು, ಸಂವಿಧಾನವು ಮೂಲಭೂತ ಹಕ್ಕು ಎಂದು ಪರಿಗಣಿಸಿದೆ. ಭಾರತದಂತಹ ದೇಶದಲ್ಲಿ ದೇಶದ್ರೋಹವನ್ನು ಮರುವ್ಯಾಖ್ಯಾನಿಸಲು ಸಾಧ್ಯವಿಲ್ಲವೇ?

ದೇಶದ್ರೋಹ ಎಂಬ ಪದಕ್ಕೆ ಪರ್ಯಾಯ ಪದವನ್ನು ಬಳಸುವುದು ಸೂಕ್ತವಲ್ಲವೇ ಮತ್ತು ಅದಕ್ಕೆ ಅನುಗುಣವಾಗಿ ಶಿಕ್ಷೆಯನ್ನು ನಿಗದಿ ಮಾಡಬಹುದಲ್ಲವೇ?

ವ್ಯವಸ್ಥೆಯ ವಿರುದ್ಧ ಎಷ್ಟರವರೆಗೆ ಕೋಪಿಸಿಕೊಳ್ಳುವ ಹಕ್ಕನ್ನು ಜನರಿಗೆ ನೀಡಬಹುದು?

ಕೋಪಿಸಿಕೊಳ್ಳುವ ಹಕ್ಕಿನ ಚಲಾವಣೆಯು ಯಾವ ಹಂತದಲ್ಲಿ ದ್ವೇಷ ಭಾಷಣವಾಗಿ ಪರಿವರ್ತನೆ ಆಗಬಹುದು?

ಸೆಕ್ಷನ್‌ 124ಎ ಹಾಗೂ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ನಡುವೆ ಹೇಗೆ ಸಮತೋಲನ ಕಾಯ್ದುಕೊಳ್ಳಬಹುದು?

ಈ ಹಿಂದೆ, ದೇಶದ್ರೋಹ ಎಂದು ಪರಿಗಣಿಸಲಾಗಿದ್ದ ಹಲವು ಕೃತ್ಯಗಳಿಗೆ ಸಂಬಂಧಿಸಿ ಹಲವು ಕಾನೂನುಗಳು ರೂಪುಗೊಂಡಿವೆ. ಹಾಗಾಗಿ, ಐಪಿಸಿಯಲ್ಲಿ 124ಎ ಸೆಕ್ಷನ್‌ ಉಳಿಸಿಕೊಳ್ಳುವುದರಿಂದ ಪ್ರಯೋಜನ ಇದೆಯೇ?

ವ್ಯಕ್ತಿ ಮತ್ತು/ ಅಥವಾ ಸಮಾಜದ ವಿರುದ್ಧದ ವಿವಿಧ ಅಪರಾಧಗಳಿಗೆ ಸಂಬಂಧಿಸಿ ಈಗಾಗಲೇ ಹಲವು ಕಾನೂನುಗಳು ರೂಪುಗೊಂಡಿವೆ. ಹಾಗಾಗಿ, 124ಎ ಸೆಕ್ಷನ್‌ ಅನ್ನು ದುರ್ಬಲಗೊಳಿಸುವುದು ಅಥವಾ ರದ್ದುಪಡಿಸುವುದು ದೇಶಕ್ಕೆ ಹಾನಿಕಾರಕವೇ ಅಥವಾ ಅನುಕೂಲಕರವೇ?

ನ್ಯಾಯಾಂಗ ನಿಂದನೆಗೆ ಶಿಕ್ಷೆ ಇರುವ ದೇಶದಲ್ಲಿ ಕಾನೂನು ಪ್ರಕಾರ ಸ್ಥಾಪನೆಯಾದ ಸರ್ಕಾರವನ್ನು ನಿಂದಿಸಿದರೆ ಶಿಕ್ಷೆ ನೀಡುವುದು ಬೇಡವೇ?

124ಎ ಸೆಕ್ಷನ್‌ ದುರ್ಬಳಕೆ ತಡೆಗೆ ಇರುವ ಮಾರ್ಗಗಳು ಯಾವುವು?

1962ರ ತೀರ್ಪಿನ ಬಲ

ಕೇದಾರನಾಥ ಮತ್ತು ಬಿಹಾರ ಸರ್ಕಾರದ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ 1962ರಲ್ಲಿ ಮಹತ್ವದ ತೀರ್ಪು ನೀಡಿ, ಸೆಕ್ಷನ್‌ 124ಎಯನ್ನು ಎತ್ತಿ ಹಿಡಿದಿದೆ. ಆದರೆ, ದುರ್ಬಳಕೆ ತಡೆಯುವುದಕ್ಕಾಗಿಕಾನೂನಿನ ಬಳಕೆಗೆ ಹಲವು ನಿರ್ಬಂಧಗಳನ್ನು ಹೇರಿತು. ಯಾವುದು ದೇಶದ್ರೋಹ ಮತ್ತು ಯಾವುದು ದೇಶದ್ರೋಹ ಅಲ್ಲ ಎಂಬುದನ್ನು ವ್ಯಾಖ್ಯಾನಿಸುವ ಪ್ರಯತ್ನವನ್ನೂ ಮಾಡಿತು.

ಹಿಂಸಾಚಾರದ ಮೂಲಕ ಸರ್ಕಾರ ಉರುಳಿಸಲು ಯತ್ನಿಸುವುದು ಅಥವಾ ಸಾರ್ವಜನಿಕ ಅಶಾಂತಿ ಸೃಷ್ಟಿಸಲು ಯತ್ನಿಸುವುದು ದೇಶದ್ರೋಹದ ವ್ಯಾಖ್ಯಾನದೊಳಗೆ ಬರುತ್ತದೆ ಎಂದು ಐವರು ನ್ಯಾಯಮೂರ್ತಿಗಳ ಪೀಠವು ಹೇಳಿತು. ಹಿಂಸೆಯ ಮೂಲಕ ಸರ್ಕಾರವನ್ನು ಬುಡಮೇಲು ಮಾಡುವ, ಕ್ರಾಂತಿ ಎಂಬ ಪರಿಕಲ್ಪನೆಯೊಳಗೆ ಬರುವ ಮೌಖಿಕ ಅಥವಾ ಲಿಖಿತವಾದ ಯಾವುದೇ ಮಾತು ಸೆಕ್ಷನ್‌ 124ಎಯ ವ್ಯಾಪ್ತಿಗೆ ಬರುತ್ತದೆ ಎಂದು ಪೀಠವು ಸ್ಪಷ್ಟಪಡಿಸಿತು.

ಆದರೆ, ಸರ್ಕಾರದ ಕ್ರಮಗಳು ಸುಧಾರಣೆಯಾಗಲಿ ಅಥವಾ ಬದಲಾಗಲಿ ಎಂಬ ಉದ್ದೇಶದಿಂದ ಕಾನೂನುಬದ್ಧ ಮಾರ್ಗಗಳ ಮೂಲಕ ಅಸಮ್ಮತಿ ತೋರುವುದು ದೇಶದ್ರೋಹ ಅಲ್ಲ. ಸರ್ಕಾರದ ನಡವಳಿಕೆಯ ಕುರಿತು ಎಷ್ಟೇ ಕಟುವಾದ ಪದಗಳಲ್ಲಿ ಅಭಿವ್ಯಕ್ತಿಸುವ ಅಭಿಪ್ರಾಯವು, ಸಾರ್ವಜನಿಕ ಸುವ್ಯವಸ್ಥೆಯನ್ನು ಹಿಂಸೆಯ ಮೂಲಕ ಕೆಡಿಸುವ ಉದ್ದೇಶ ಹೊಂದಿಲ್ಲದಿದ್ದರೆ ದೇಶದ್ರೋಹದ ವ್ಯಾಖ್ಯೆಯೊಳಗೆ ಬಾರದು ಎಂದು ಕೋರ್ಟ್‌ ಹೇಳಿತು.

ಎನ್‌ಡಿಎ ಅವಧಿಯಲ್ಲಿ ಅಧಿಕ ಪ್ರಕರಣ

2010ರಿಂದ 2021ರವರೆಗೆ ದಾಖಲಾದ ಪ್ರಕರಣಗಳ ಪೈಕಿ ಯುಪಿಎ-2 ಅವಧಿಯಲ್ಲಿ ಶೇ 36ರಷ್ಟು, ಎನ್‌ಡಿಎ ಅಧಿಕಾರಕ್ಕೆ ಬಂದ ನಂತರ ಶೇ 63ರಷ್ಟು ಪ್ರಕರಣಗಳು ದಾಖಲಾಗಿವೆ. ಈ ದತ್ತಾಂಶವು ಆರ್ಟಿಕಲ್ 14 ಜಾಲತಾಣದಲ್ಲಿ ಪ್ರಕಟ ವಾಗಿದ್ದು, ರಾಷ್ಟ್ರೀಯ ಅಪರಾಧಗಳ ದಾಖಲೆ ಬ್ಯೂರೊ (ಎನ್‌ಸಿಆರ್‌ಬಿ) ವಾರ್ಷಿಕ ವರದಿಯಲ್ಲಿ ಉಲ್ಲೇಖವಾಗದ ಕೆಲವು ಪ್ರಕರಣಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ.

ಆರೋಪಿಗಳ ಸಂಖ್ಯೆ ಭಾರಿ ಏರಿಕೆ

2010ರಿಂದ 2021ರ ಅವಧಿಯಲ್ಲಿ13,306 ಆರೋಪಿಗಳ ಮೇಲೆ ದೇಶದ್ರೋಹ ಕಾನೂನಿನ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಪೈಕಿ ಎನ್‌ಡಿಎ ಅವಧಿಯಲ್ಲಿ ಶೇ 70ರಷ್ಟು ಆರೋಪಿಗಳು ಕಾರಾಗೃಹ ಸೇರಿದ್ದಾರೆ. ಯುಪಿಎ ಅವಧಿಯಲ್ಲಿ ಶೇ 30ರಷ್ಟು ಆರೋಪಿಗಳ ವಿರುದ್ಧ ಈ ಕಾನೂನು ದಾಖಲಿಸಲಾಗಿದೆ. ಕಳೆದ ಅಕ್ಟೋಬರ್‌ನಲ್ಲಿ ನಡೆದ ವಿಶ್ವಕಪ್ ಟಿ–20 ಕ್ರಿಕೆಟ್‌ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ತಂಡ ಜಯ ಗಳಿಸಿದ್ದನ್ನು ಸಂಭ್ರಮಿಸಿದ್ದ ಆರೋಪದ ಮೇಲೆ ಕಾಶ್ಮೀರದ ಮೂವರುವಿದ್ಯಾರ್ಥಿಗಳ ವಿರುದ್ಧ ಈ ಕಾನೂನಿನಡಿ ಪ್ರಕರಣ ದಾಖಲಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT