ಸೋಮವಾರ, 2 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ|ಮಾದಕ ವಸ್ತುಗಳ ನಿರ್ಮೂಲನೆಗೆ ಶಾಲಾ–ಕಾಲೇಜುಗಳಲ್ಲಿ ಜಾಗೃತಿ ಅಗತ್ಯ

ಜಿಲ್ಲಾ ಮಟ್ಟದ ವ್ಯಸನಮುಕ್ತ ದಿನಾಚರಣೆ
Published 5 ಆಗಸ್ಟ್ 2023, 15:40 IST
Last Updated 5 ಆಗಸ್ಟ್ 2023, 15:40 IST
ಅಕ್ಷರ ಗಾತ್ರ

ಬಾಗಲಕೋಟೆ: ವ್ಯಸನಿಗಳು ಕುಡುಕರಷ್ಟೇ ಅಲ್ಲ, ಅದರ ಜೊತೆ ಡ್ರಗ್ಸ್, ಗಾಂಜಾ, ಅಫೀಮು ಮುಂತಾದ ಮಾದಕ ವಸ್ತುಗಳ ಬಳಕೆ ಯುವಕರಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದು, ಇದರ ನಿರ್ಮೂಲನೆಗೆ ಜಾಗೃತಿ ಅಗತ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.

ಜಿಲ್ಲಾ ಪಂಚಾಯ್ತಿ ಸಭಾಭವನದಲ್ಲಿ ಶನಿವಾರ ಜಿಲ್ಲಾಡಳಿತ, ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಲಿಂಗೈಕ್ಯ ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ವ್ಯಸನಮುಕ್ತ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಔಷಧ ಅಂಗಡಿಗಳಲ್ಲಿ ಅಮಲು ಬರುವ ಔಷಧಗಳು ಮಾರಾಟವಾಗುತ್ತಿವೆ. ಮಕ್ಕಳು ತಿನ್ನುವಂತಹ ಚಾಕಲೇಟ್‍ನಲ್ಲೂ ಕೂಡಾ ಮಾದಕ ವಸ್ತು ಸೇರಿಸಲಾಗುತ್ತಿದೆ. ವ್ಯಸನ ಆರೋಗ್ಯ ಹಾಳು ಮಾಡುವುದಲ್ಲದೇ ಮನೆಯಲ್ಲಿರುವ ಸರ್ವ ಸದಸ್ಯರ ನೆಮ್ಮದಿ ಹಾಳು ಮಾಡುತ್ತದೆ. ಇಂತಹ ವ್ಯಸನದಿಂದ ಅನೇಕ ಕುಟುಂಬಗಳು ದುಸ್ಥಿತಿಗೆ ತಲುಪಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಕುಡಿತದಿಂದ ಯುವಕರು ಹಾಳಾಗುತ್ತಿರುವುದು ಗಮನದಲ್ಲಿದ್ದು, ಅಬಕಾರಿ ಇಲಾಖೆಯಲ್ಲಿ ಸುಧಾರಣೆ ತರಲು ಚಿಂತನೆ ನಡೆದಿದೆ.ದಾರಿ ತಪ್ಪುತ್ತಿರುವ ಕುಟುಂಬಗಳ ಗೌರವ ಉಳಿಸುವ ಕೆಲಸವನ್ನು ಸಮಾಜ ಮಾಡಬೇಕು. ಇದು ಎಲ್ಲರ ಜವಾಬ್ದಾರಿಯಾಗಿದೆ. ಶಾಲಾ-ಕಾಲೇಜುಗಳಲ್ಲಿ ಮಾದಕ ವಸ್ತುಗಳ ಬಗ್ಗೆ ಅರಿವು ಮೂಡಿಸಬೇಕು. ಗ್ರಾಮೀಣ ಮಟ್ಟದಲ್ಲಿ ಹೆಚ್ಚು ಜಾಗೃತಿ ಮೂಡಿಸಬೇಕು ಎಂದು ಸಲಹೆ ಮಾಡಿದರು.

ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಮಾತನಾಡಿ, ಮಹಾಂತ ಶ್ರೀಗಳ ಕಾರ್ಯ ಶ್ಲಾಘನೀಯವಾಗಿದ್ದು, 12ನೇ ಶತಮಾನದ ಬಸವಣ್ಣನವರ ಕಾಲದ ಕಾರ್ಯಗಳನ್ನು ಸ್ವತಃ ಮೈಗೂಡಿಸಿಕೊಂಡಿದ್ದರು. ಮಹಾಂತ ಜೋಳಿಗೆ ಮೂಲಕ ವ್ಯಸಗಳನ್ನು ತಮ್ಮ ಜೋಳಿಗೆ ಹಾಕಿಸಿಕೊಳ್ಳುವ ಮೂಲಕ ಅನೇಕ ಜನರನ್ನು ವ್ಯಸನಮುಕ್ತರನ್ನಾಗಿ ಮಾಡಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ವೈ.ಮೇಟಿ ಮಾತನಾಡಿ, ಕುಡಿತದಿಂದ ಆರೋಗ್ಯ ಹಾಳಾಗುವದರ ಜೊತೆಗೆ ಮಾನಸಿಕ ನೆಮ್ಮದಿ ಕೂಡಾ ಹಾಳಾಗುತ್ತದೆ. ಗ್ರಾಮ ಮಟ್ಟದಲ್ಲಿ ಅರಿವು ಮೂಡಿಸುವುದು ಹೆಚ್ಚಾಗಬೇಕು. ಅಂದಾಗ ಮಾತ್ರ ಕುಟುಂಬಗಳ ರಕ್ಷಣೆ ಸಾಧ್ಯ ಎಂದರು.

ಪ್ರತಿಜ್ಞಾವಿಧಿ ಬೋಧಿಸಲಾಯಿತು. ವ್ಯಸನಮುಕ್ತ ಕುರಿತು ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.

ಸಾನ್ನಿಧ್ಯ ವಹಿಸಿದ್ದ ಇಳಕಲ್ ವಿಜಯಮಹಾಂತೇಶ್ವರ ಸಂಸ್ಥಾನಮಠದ ಗುರುಮಹಾಂತ ಶ್ರೀಗಳು ಆಶೀರ್ವಚನ ನೀಡಿದರು. ಶಿರೂರ ವಿಜಯ ಮಹಾಂತೇಶ್ವರ ತೀರ್ಥ ಶಾಖಾಮಠದ ಬಸವಲಿಂಗ ಶ್ರೀಗಳು, ಜಿಲ್ಲಾಧಿಕಾರಿ ಕೆ.ಎಂ.ಜಾನಕಿ ಇದ್ದರು.

ಮದ್ಯ ಕುಡಿಯಿರಿ ಎಂದಿಲ್ಲ ಬಾಗಲಕೋಟೆ: ವ್ಯಸನಮುಕ್ತ ಸಮಾಜ ಆಗಬೇಕು. ಮದ್ಯ ಕುಡಿಯಿರಿ ಎಂದು ಎಲ್ಲಿಯೂ ಪ್ರಚಾರ ಮಾಡಿಲ್ಲ ಎಂದು ಅಬಕಾರಿ ಸಚಿವ ಆರ್‌.ಬಿ. ತಿಮ್ಮಾಪುರ ಹೇಳಿದರು. ಅಬಕಾರಿ ಸಚಿವರಾಗಿ ವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ಬಗ್ಗೆ ಕೇಳಿದ ಪ್ರಶ್ನೆಗೆ ಮಾತನಾಡಿದ ಅವರು ಕಳ್ಳಬಟ್ಟಿ ಸಾರಾಯಿಯಿಂದ ಆಗುತ್ತಿದ್ದ ಅನಾಹುತ ತಡೆಯಲು ಸರ್ಕಾರ ಗುಣಮಟ್ಟದ ಮದ್ಯ ಸರಬರಾಜು ಮಾಡುವ ಕೆಲಸ ಮಾಡುತ್ತಿದೆ ಎಂದರು. ಗುಜರಾತ್ ರಾಜಸ್ಥಾನದಲ್ಲಿ ಬಂದ್ ಮಾಡಲಾಗಿದೆ ಎನ್ನುವುದು ರಾಜಕೀಯ ಹೇಳಿಕೆಯಷ್ಟೇ. ಅಲ್ಲಿ ಈಗಲೂ ಮಾರಾಟವಾಗುತ್ತಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT