ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಿಪ್ಲೊಮಾ ಪದವೀಧರನ ಕೃಷಿ ಸಾಧನೆ: ಅಧಿಕ ಲಾಭ ತಂದ ಕ್ಯಾಪ್ಸಿಕಮ್‌

Published 6 ಸೆಪ್ಟೆಂಬರ್ 2024, 5:42 IST
Last Updated 6 ಸೆಪ್ಟೆಂಬರ್ 2024, 5:42 IST
ಅಕ್ಷರ ಗಾತ್ರ

ರಬಕವಿ ಬನಹಟ್ಟಿ: ಸಮೀಪದ ಯಲ್ಲಟ್ಟಿ ಗ್ರಾಮದ ಪ್ರಕಾಶ ಕೊಳಕಿ ಅವರು ವಾಣಿಜ್ಯ ಬೆಳೆಗಳಾದ ಕಬ್ಬು, ಅರಿಸಿನ ಬೆಳೆಗಳ ಜೊತೆಗೆ ತರಕಾರಿಗಳನ್ನೂ ಬೆಳೆದು, ಲಾಭ ಕಂಡುಕೊಂಡಿದ್ದಾರೆ.

ಸಮೀರವಾಡಿ ಸಕ್ಕರೆ ಕಾರ್ಖಾನೆಯಲ್ಲಿ ಶುಗರ್ ಕೇನ್ ಅಧಿಕಾರಿಯಾಗಿರುವದ ಅವರು, 2014ರಿಂದ ಒಕ್ಕಲುತನ ಮಾಡುತ್ತ ಬಂದಿದ್ದಾರೆ. ಕೃಷಿಯಲ್ಲಿ ಡಿಪ್ಲೊಮಾ ಪದವಿ ಪಡೆದಿರುವ ಅವರು, 18 ಎಕರೆ ಜಮೀನಿನಲ್ಲಿ ಎರಡು ಎಕರೆ ಕ್ಯಾಪ್ಸಿಕಾಮ್ (ದಪ್ಪ ಮೆಣಸಿನಕಾಯಿ) ಬೆಳೆದಿದ್ದಾರೆ. 

ಜುಲೈ ಮೊದಲ ವಾರದಲ್ಲಿ ಕ್ಯಾಪ್ಸಿಕಾಮ್ ಸಸಿಗಳನ್ನು ನಾಟಿ ಮಾಡಿದ್ದರು. ನಾಟಿ ಮಾಡಿದ 45 ದಿನಗಳಲ್ಲಿ ಕಾಯಿಗಳು ಬರಲಾರಂಭಿಸಿದವು. ಬೆಳೆಯನ್ನು ಉತ್ತಮವಾಗಿ ನಿರ್ವಹಣೆ ಮಾಡಿದ್ದು, ಸದ್ಯ ನಿತ್ಯ ಉತ್ತಮ ಫಸಲನ್ನು ಪಡೆದುಕೊಳ್ಳುತ್ತಿದ್ದಾರೆ.

ಸದ್ಯ ರಬಕವಿ, ಬನಹಟ್ಟಿ ಜಮಖಂಡಿ ಸ್ಥಳೀಯ ಮಾರುಕಟ್ಟೆ ಸೇರಿದಂತೆ ಮುಂಬೈ ಮತ್ತು ಬೆಳಗಾವಿಗೂ ಕ್ಯಾಪ್ಸಿಕಾಮ್‌ಗಳನ್ನು ಕಳುಹಿಸುತ್ತಿದ್ದಾರೆ. ಸ್ಥಳೀಯ ಮಾರುಕಟ್ಟೆಯಲ್ಲಿ ಕ್ಯಾಪ್ಸಿಕಾಮ್ ಕೆ.ಜಿಗೆ ₹15 ರಿಂದ ₹18 ರ ವರೆಗೆ ಮಾರಾಟವಾಗುತ್ತಿದೆ.

‘ಸಸಿ, ಭೂಮಿಯನ್ನು ಹದ ಮಾಡುವುದು, ಮಲ್ಚಿಂಗ್ ಪೇಪರ್, ಗೊಬ್ಬರ, ಕೀಟ ನಾಶಕ ಔಷಧ, ಕಾರ್ಮಿಕರ ಕೂಲಿ ಸೇರಿದಂತೆ ಅಂದಾಜು ₹1.25 ಲಕ್ಷಕ್ಕೂ ಹೆಚ್ಚು ಖರ್ಚು ಬರುತ್ತದೆ. ಎರಡು ಎಕರೆಯಲ್ಲಿ ಇಪ್ಪತ್ತೈದು ಸಾವಿರ ಸಸಿಗಳನ್ನು ನಾಟಿ ಮಾಡಿದ್ದೇನೆ. ಮೂರು ವಾರಗಳಲ್ಲಿ ಅಂದಾಜು ಹತ್ತು ಟನ್‌ನಷ್ಟು ಬೆಳೆಯನ್ನು ಪಡೆದುಕೊಂಡಿದ್ದು, ಮುಂದಿನ ಮೂರು ತಿಂಗಳಲ್ಲಿ ಅಂದಾಜು ಐವತ್ತು ಟನ್‌ನಷ್ಟು ಬೆಳೆ ಕೈ ಸೇರುವ ನಿರೀಕ್ಷೆಯಲ್ಲಿರುವೆ’ ಎನ್ನುತ್ತಾರೆ ಪ್ರಕಾಶ ಕೊಳಕಿ.

‘ವಾಣಿಜ್ಯ ಬೆಳೆಗಳನ್ನು ಬೆಳೆಯುವುದರಲ್ಲಿ ಶ್ರಮ ಕಡಿಮೆ ಇರುತ್ತದೆ. ಆದರೆ ತರಕಾರಿ ಬೆಳೆಯಬೇಕಾದರೆ ಬಹಳಷ್ಟು ಶ್ರಮ ವಹಿಸಬೇಕಾಗುತ್ತದೆ. ಆದರೆ ತರಕಾರಿ ಬೆಳೆಯುವುದರಲ್ಲಿಯ ತೃಪ್ತಿಯೇ ಬೇರೆಯಾಗಿರುತ್ತದೆ. ತರಕಾರಿಯನ್ನು ದಿನನಿತ್ಯ ಗಮನಿಸಬೇಕಾಗುತ್ತದೆ. ರೋಗಗಳನ್ನು ಹತೋಟೆಗೆ ತರುವುದೇ ದೊಡ್ಡ ಸವಾಲಾಗಿರುತ್ತದೆ’ ಎನ್ನುವ ಮಾತು ಅವರದ್ದು.

ಬನಹಟ್ಟಿ ಸಮೀಪದ ಯಲ್ಲಟ್ಟಿ ಗ್ರಾಮದ ಯುವ ರೈತ ಪ್ರಕಾಶ ಕೊಳಕಿ ತಮ್ಮ ತೋಟದಲ್ಲಿ  ಬೆಳೆದಿರುವುದು ಕ್ಯಾಪ್ಸಿಕಾಮ್
ಬನಹಟ್ಟಿ ಸಮೀಪದ ಯಲ್ಲಟ್ಟಿ ಗ್ರಾಮದ ಯುವ ರೈತ ಪ್ರಕಾಶ ಕೊಳಕಿ ತಮ್ಮ ತೋಟದಲ್ಲಿ  ಬೆಳೆದಿರುವುದು ಕ್ಯಾಪ್ಸಿಕಾಮ್

‘ತರಕಾರಿ ಬೆಳೆಯುವುದರಿಂದ ನಮಗೆ ದಿನನಿತ್ಯ ಹಣ ಬರುತ್ತದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೊಸ ರೀತಿಯ ಬೆಳೆಗಳನ್ನು ಬೆಳೆಯುವ ಯೋಜನೆಯಿದ್ದು, ಜಗದಾಳ ಗ್ರಾಮದ ಪ್ರವಿರಾಜ ಶ್ರೀನಾಥ ಅಗ್ರಿ ಮಾರಾಟಗಾರರ ಮಾರ್ಗದರ್ಶನದಲ್ಲಿ ಕ್ಯಾಪ್ಸಿಕಾಮ್ ಬೆಳೆಯುತ್ತಿದ್ದು, ಉತ್ತಮವಾದ ಬೆಳೆಯನ್ನು ಪಡೆದುಕೊಳ್ಳುತ್ತಿದ್ದೇನೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT