ಶುಕ್ರವಾರ, ಅಕ್ಟೋಬರ್ 30, 2020
25 °C
ಜಿಲ್ಲೆಯಲ್ಲಿ 20 ದಿನಗಳಲ್ಲಿ 105 ಗ್ರಾಮಗಳಿಗೆ ವ್ಯಾಪಿಸಿದ ಸಾಂಕ್ರಾಮಿಕ

ಬಾಗಲಕೋಟೆ: ದನಗಳಿಗೆ ಈಗ ಚರ್ಮಗಂಟು ಬೇನೆ

ವೆಂಕಟೇಶ ಜಿ.ಎಚ್ Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ: ಜಿಲ್ಲೆಯಲ್ಲಿ ಜಾನುವಾರುಗಳಿಗೆ ಚರ್ಮ ಗಂಟು ರೋಗ (ಕ್ಯಾಪ್ರಿಫಾಕ್ಸ್) ದಿನೇ ದಿನೇ ಏರಿಕೆಯಾಗುತ್ತಿದೆ. ಇದು ರೈತಾಪಿ ವರ್ಗದಲ್ಲಿ ಆತಂಕಕ್ಕೆ ಕಾರಣವಾಗಿದೆ. ಕಳೆದ 20 ದಿನಗಳಿಂದ ಜಿಲ್ಲೆಯಲ್ಲಿ 105 ಹಳ್ಳಿಗಳಲ್ಲಿ ಈ ರೋಗ ಕಾಣಿಸಿಕೊಂಡಿದೆ. ಅದರಲ್ಲೂ ಹಸು ಹಾಗೂ ಎತ್ತುಗಳಲ್ಲಿ ಮಾತ್ರ ಹೆಚ್ಚಾಗಿ ಕಾಣಿಸಿಕೊಂಡಿದೆ.

ರಾಜ್ಯದಲ್ಲಿ ಮೊದಲು ಹಾಸನ ಜಿಲ್ಲೆ ಚನ್ನರಾಯಪಟ್ಟಣದಲ್ಲಿ ಕಾಣಿಸಿಕೊಂಡಿತ್ತು. ಈಗ ಬಹುತೇಕ ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಿಗೂ ಹರಡಿದೆ ಎಂದು ಪಶುಸಂಗೋಪನಾ ಇಲಾಖೆ ಬಾಗಲಕೋಟೆ ತಾಲ್ಲೂಕು ಸಹಾಯಕ ನಿರ್ದೇಶಕ ಡಾ.ಆರ್.ಎಸ್.ಪದರಾ ಹೇಳುತ್ತಾರೆ.

’ಮಳೆ ಜಾಸ್ತಿ ಇದ್ದ ಕಾರಣ ವೈರಸ್‌ಗೆ ಪೂರಕ ವಾತಾವರಣ ಇದ್ದು, ಬಹುಬೇಗನೇ ಹರಡಿತ್ತು. ಈಗ ಬಿಸಿಲು ಏರುತ್ತಿದ್ದಂತೆಯೇ ಹರಡುವಿಕೆ ತಗ್ಗುತ್ತಿದೆ. ರೈತರು ಒಂದಷ್ಟು ಮುಂಜಾಗರೂಕತೆ ವಹಿಸಬೇಕು‘ ಎಂದು ಡಾ.ಪದರಾ ತಿಳಿಸಿದರು.

ಗಂಭೀರ ಪರಿಣಾಮ

ವೈರಸ್‌ ಜನ್ಯವಾದ ಈ ರೋಗ ಪ್ರಮುಖವಾಗಿ ಕ್ಯುಲಿಕಾಯ್ಡ್ ಹೆಸರಿನ ಸೊಳ್ಳೆಯಿಂದ ಹಾಗೂ ಉಣ್ಣೆ, ನೊಣಗಳಿಂದ ಹರಡುತ್ತದೆ. ಚರ್ಮದ ಮೇಲೆ ದದ್ದರ (ಗಾದರಿ) ರೂಪದಲ್ಲಿ ಗಂಟು ಕಾಣಿಸಿಕೊಂಡು ನಂತರ ಅವು ಒಡೆದು ಗಾಯವಾಗುತ್ತವೆ. ಈ ವೇಳೆ ರಾಸು ಜ್ವರದಿಂದ ಬಳಲುತ್ತದೆ.

ಮುಂಗಾಲು ಭಾಗದಲ್ಲಿ ಬಾವು ಹಾಗೂ ಬಾಯಿಂದ ಜೊಲ್ಲು ಬರುತ್ತದೆ. ರೋಗ ರಾಸುಗಳಿಗೆ ಐದರಿಂದ ಏಳು ದಿನಗಳವರೆಗೆ ಕಾಡುತ್ತದೆ.  ಚರ್ಮಗಂಟು ರೋಗದಿಂದ ಬಳಲುವ ಹಸುವಿನಲ್ಲಿ ಹಾಲಿನ ಇಳುವರಿ ಕಡಿಮೆಯಾಗುತ್ತದೆ. ಉಳುಮೆ ಮಾಡುವ ಎತ್ತು, ಕೆಲಸ ಮಾಡಲು ಸಾಧ್ಯವಾಗದೇ ನಿಶ್ಯಕ್ತಗೊಳ್ಳುತ್ತದೆ. ತಕ್ಷಣ ಜ್ವರ ನಿಯಂತ್ರಿಸದಿದ್ದರೆ ಸಾವು ಸಂಭವಿಸಬಹುದು. ಗಬ್ಬ ಧರಿಸಿದ ಹಸು ಫಲವಂತಿಕೆ ಕಳೆದುಕೊಳ್ಳಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು