ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಡಲಸಂಗಮ | ಶೌಚಗೃಹದಲ್ಲಿ ಅಧಿಕ ಹಣ ವಸೂಲಿ

Published 6 ಜನವರಿ 2024, 4:30 IST
Last Updated 6 ಜನವರಿ 2024, 4:30 IST
ಅಕ್ಷರ ಗಾತ್ರ

ಕೂಡಲಸಂಗಮ: ಸಂಗಮೇಶ್ವರ ದೇವಾಲಯ ಹೊರ ಆವರಣದ ಎರಡು ಶೌಚಗೃಹದಲ್ಲಿ ಗುತ್ತಿಗೆದಾರರು ಮಂಡಳಿ ನಿಗದಿ ಪಡಿಸಿದ ದರಕ್ಕಿಂತ ಅಧಿಕ ಹಣ ಪಡೆಯುತ್ತಿರುವುದರಿಂದ ನಿತ್ಯ ಕ್ಷೇತ್ರದ ದರ್ಶನಕ್ಕೆ ಬಂದ ಭಕ್ತರು ದೇವಾಲಯ ಹೊರ ಆವರಣದ ರಸ್ತೆ ಬದಿಯಲ್ಲಿಯೇ ಮಲಮೂತ್ರ ವಿಸರ್ಜನೆ ಮಾಡುತ್ತಿದ್ದು ದುರ್ವಾಸನೆ ಅಧಿಕಗೊಂಡಿದೆ.

ದೇವಾಲಯ ಹೊರ ಆವರಣದ ಎರಡು ಶೌಚಗೃಹವನ್ನು ಮಂಡಳಿ ಖಾಸಗಿ ವ್ಯಕ್ತಿಗಳಿಗೆ ಒಂದು ವರ್ಷದ ಅವಧಿಗೆ ಗುತ್ತಿಗೆ ನೀಡಿದೆ. ಈ ಶೌಚಗೃಹ ಗುತ್ತಿಗೆದಾರರು ಪ್ರತಿಯೊಬ್ಬರಿಂದ ಮಲಮೂತ್ರ ವಿಸರ್ಜನೆಗೆ ₹5 ರಿಂದ ₹10, ಬಿಸಿನೀರಿನ ಸ್ನಾನಕ್ಕೆ ₹30 ರಿಂದ ₹40 ಪಡೆಯುತ್ತಿದ್ದಾರೆ.

ಮೂತ್ರ ವಿಸರ್ಜನೆ ಉಚಿತ, ಮಲವಿಸರ್ಜನೆಗೆ ₹ 5, ಬಿಸಿನೀರಿನ ಸ್ನಾನಕ್ಕೆ ₹10 ದರವನ್ನು ಕೂಡಲಸಂಗಮ ಅಭಿವೃದ್ಧಿ ಮಂಡಳಿ ನಿಗದಿ ಪಡಿಸಿದೆ. ಆ ದರ ಪಡೆಯದೆ ಅಧಿಕ ಹಣ ಪಡೆಯುತ್ತಿರುವುದರಿಂದ ಬಹುತೇಕ ಜನ ಶೌಚಗೃಹಕ್ಕೆ ಹೊಗದೆ ರಸ್ತೆಯ ಬದಿಯನ್ನೇ ಅವಲಂಬಿಸಿದ್ದಾರೆ ಇದರಿಂದ ಸುತ್ತಮುತ್ತಲಿನ ಪರಿಸರ ಹಾಳಾಗುತ್ತಿದೆ. ರಥದ ಮನೆ ರಸ್ತೆ, ಕೃಷ್ಣಾ ನದಿ ದಡ ಮೂಲಮೂತ್ರ ವಿಸರ್ಜನೆಯಿಂದ ತುಂಬಿಕೊಂಡಿದೆ.

‘ಮೂತ್ರ ವಿಸರ್ಜನೆ ಉಚಿತ’ ಎಂಬ ನಾಮಪಲಕ್ಕೆ ಗುತ್ತಿಗೆದಾರರು ‘ಉಚಿತ’  ಪದಕ್ಕೆ ಕಪ್ಪು ಬಣ್ಣ ಹಚ್ಚಿದ್ದಾರೆ. ಮಲವಿಸರ್ಜನೆ, ಬಿಸಿನೀರಿನ ಸ್ನಾನ ದರದ ನಾಮಫಲಕಕ್ಕೆ ಬಣ್ಣವನ್ನೇ ಬಳಿಯಲಾಗಿದೆ. ಗುತ್ತಿಗೆ ಅವಧಿ ಮುಗಿದು ಮೂರು ತಿಂಗಳಾದರೂ ಮಂಡಳಿ ಅಧಿಕಾರಿಗಳು ಮರು ಟೆಂಡರ್ ಮಾಡದೆ, ಮುಂದುವರೆಸಿರುವುದು ಸಾರ್ವಜನಿಕರ ಸಂದೇಹಕ್ಕೆ ಕಾರಣವಾಗಿದೆ.

‘ಮೂತ್ರ ವಿಸರ್ಜನೆಗೆ ₹10 ಪಡೆದರು. ಉಚಿತ ಇದೇ ಎಂದರೇ ಉಚಿತ ಇಲ್ಲ ₹10 ಕೊಟ್ಟರೆ ಮಾತ್ರ ಒಳಗೆ ಹೋಗಿ ಇಲ್ಲವಾದರೆ ಹೊಗಬೇಡಿ ಎಂದರು. ಅನಿವಾರ್ಯವಾಗಿ ₹10 ಕೊಟ್ಟು ಮೂತ್ರವಿಸರ್ಜನೆಗ ಹೋಗಬೇಕಿದೆ.  ಶಕ್ತಿ ಯೋಜನೆಯಲ್ಲಿ ದೇವಸ್ಥಾನ ನೋಡಲು ಬಂದ ಬಹುತೇಕ ಮಹಿಳೆಯರು ₹10 ಪಾವತಿಸಲು ಆಗದೇ ರಸ್ತೆ ಬದಿಯಲ್ಲಿಯೇ ಮಲಮೂತ್ರ ವಿಜರ್ಸನೆ ಮಾಡುವರು’ ಎಂದು ಸಿಂದಗಿಯ ಪ್ರವಾಸಿ ಕವಿತಾ ಹಡಪದ ಬೇಸರಿಸಿದರು.

‘ಬಿಸಿ ನೀರಿನ ಸ್ನಾನಕ್ಕೆ ₹30 ಪಡೆಯುವರು. ಚಳಿ ಇರುವುದರಿಂದ ಅನಿವಾರ್ಯವಾಗಿ ₹30 ಪಾವತಿಸಿ ಸ್ನಾನ ಮಾಡಿದೆವು. ಮಂಡಳಿಯವರು ಇಲ್ಲಿಯ ಶೋಷಣೆಯ ಕಡೆ ಗಮನ ಹರಿಸಬೇಕು. ದರದ ನಾಮಫಲಕ ಅಳವಡಿಸಿದರೆ ಪ್ರವಾಸಿಗರಿಗೆ ಅನುಕೂಲವಾಗುವುದು’ ಎಂದು ಬಾಲ್ಕಿ ಪ್ರವಾಸಿ ಹನಮಂತ ಪವಾರ ಹೇಳಿದರು..

ಎರಡು ಶೌಚಗೃಹಕ್ಕೆ ಟೆಂಡರ್  

ಮಂಡಳಿ ವ್ಯಾಪ್ತಿಯ 528 ಎಕರೆ ಪ್ರದೇಶದಲ್ಲಿ ಭಕ್ತರ ಅನುಕೂಲಕ್ಕಾಗಿ 7 ಶೌಚಗೃಹಗಳನ್ನು ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಲಾಗಿದೆ. ದೇವಾಲಯ ಹೊರ ಆವರಣದ 2 ಶೌಚಗೃಹವನ್ನು ಮಂಡಳಿ ಟೆಂಡರ್ ಮೂಲಕ ಖಾಸಗಿ ವ್ಯಕ್ತಿಗಳಿಗೆ ಗುತ್ತಿಗೆ ನೀಡಿದೆ. ಉಳಿದ ಐದು ಶೌಚಗೃಹವನ್ನು ಮಂಡಳಿಯೇ ನಿರ್ವಹಿಸುವುದು. ಅತಿಥಿಗೃಹ ಬಳಿ ಶೌಚಗೃಹ ಬಾಗಿಲು ತೆಗೆದಿದ್ದು ಒಳಗೆ ಹೊಗಲು ಆಗುವುದಿಲ್ಲ. ಸಭಾ ಭವನ ಪೂಜಾವನ ಬಸವೇಶ್ವರ ವೃತ್ತ ಸಂಗಮೇಶ್ವರ ಕಲ್ಯಾಣ ಮಂಟಪದ ಶೌಚಗೃಹಗಳಿಗೆ ಬೀಗ ಹಾಕಲಾಗಿದೆ.

ಇಲ್ಲಿ ಬರುವ ಭಕ್ತರು ಪ್ರವಾಸಿಗರಿಗೆ ಮಲವಿಸರ್ಜನೆಗೆ ₹5 ರೂ. ಬಿಸಿ ನೀರಿನ ಸ್ನಾನಕ್ಕೆ ₹10 ರೂ ನಿಗದಿ ಪಡಿಸಲಾಗಿದೆ.
ಬಸಪ್ಪ ಪೂಜಾರಿ, ಆಯುಕ್ತ, ಕೂಡಲಸಂಗಮ ಅಭಿವೃದ್ಧಿ ಮಂಡಳಿ ಕೂಡಲಸಂಗಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT