ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗಮೇಶ್ವರ ಜಾತ್ರೆ | ರಥೋತ್ಸವ ಇಂದು: ವಿದ್ಯುದ್ದೀಪಗಳಿಂದ ಅಲಂಕೃತಗೊಂಡ ದೇವಸ್ಥಾನ

Published 29 ಏಪ್ರಿಲ್ 2024, 5:57 IST
Last Updated 29 ಏಪ್ರಿಲ್ 2024, 5:57 IST
ಅಕ್ಷರ ಗಾತ್ರ

ಕೂಡಲಸಂಗಮ: ದಕ್ಷಿಣದ ಕಾಶಿ ಎಂದೇ ಪ್ರಖ್ಯಾತಿ ಪಡೆದಿರುವ ಇಲ್ಲಿನ ಸಂಗಮೇಶ್ವರ ಜಾತ್ರೆಯು ಏಪ್ರಿಲ್ 29ರಂದು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನಡೆಯಲಿದೆ.

ಶತಮಾನಗಳ ಇತಿಹಾಸ ಇರುವ ಸಂಗಮೇಶ್ವರನ ವೈಭವದ ಜಾತ್ರಾ ಮಹೋತ್ಸವ ಚೈತ್ರ ಬಹುಳ ಪಂಚಮಿಯಂದು ಜರುಗುತ್ತಿದೆ. ಜಾತ್ರೆ ಅಂಗವಾಗಿ ಸಂಗಮೇಶ್ವರನ ದೇವಾಲಯ, ಪ್ರವೇಶ ದ್ವಾರ, ಬಸವೇಶ್ವರ ವೃತ್ತ, ಚಾಲುಕ್ಯ ಮಹಾದ್ವಾರ ಬಣ್ಣ ಬಣ್ಣದ ವಿದ್ಯುದ್ದೀಪಗಳಿಂದ ಅಲಂಕೃತಗೊಂಡಿವೆ.

ಕೂಡಲಸಂಗಮದ ಸಂಗಮನಾಥ ಮೂರ್ತಿ

ಕೂಡಲಸಂಗಮದ ಸಂಗಮನಾಥ ಮೂರ್ತಿ

ಜಾತ್ರೆ ಅಂಗವಾಗಿ ಕ್ಷೇತ್ರದಲ್ಲಿ ಒಂಬತ್ತು ದಿನಗಳವರೆಗೆ ಗ್ರಾಮಸ್ಥರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ನಿತ್ಯ ಬೆಳಿಗ್ಗೆ ಪಲ್ಲಕ್ಕಿ ಉತ್ಸವ, ಪುರವಂತರ ಮೆರವಣಿಗೆ ಜರುಗಲಿದೆ.

ಏ.29ರಂದು ಬೆಳಿಗ್ಗೆ 6 ಗಂಟೆಗೆ ಉತ್ಸವ ಮೂರ್ತಿಯ ರಥೋತ್ಸವ, ಸಂಜೆ 6 ಗಂಟೆಗೆ ಲಕ್ಷಾಂತರ ಭಕ್ತರು, ನಾಡಿನ ಮಠಾಧೀಶರ ಸಮ್ಮುಖದಲ್ಲಿ ಭಕ್ತಿ, ಜಯಘೋಷಗಳ ನಡುವೆ ವೈಭವದ ಸಂಗಮೇಶ್ವರ ರಥೋತ್ಸವ ನಡೆಯಲಿದೆ.

ಬಂಗಾರ ಲೇಪಿತ ಕಳಸ: ಸಂಗಮೇಶ್ವರ ರಥಕ್ಕೆ ಅಳವಡಿಸಲು ಬಂಗಾರ ಲೇಪವುಳ್ಳ ಭವ್ಯವಾದ ಕಳಸವನ್ನು ಬಾಗಲಕೋಟೆಯಿಂದ ಮೆರವಣಿಗೆಯಲ್ಲಿ ಸಂಗಮಕ್ಕೆ ತರಲಾಗುತ್ತದೆ. ಈ ಮಾರ್ಗದಲ್ಲಿರುವ ಹಳ್ಳೂರ, ಬೇವೂರ, ಭಗವತಿ, ಕಿರಸೂರು, ಮಲ್ಲಾಪೂರ ಮುಂತಾದ ಗ್ರಾಮಗಳ ಜನರು ಕಳಸಕ್ಕೆ ಪೂಜೆ ಮಾಡುತ್ತಾರೆ.

ಕೂಡಲಸಂಗಮಕ್ಕೆ ಬರುವ ಕಳಸವವನ್ನು ಮೆರವಣಿಗೆಯ ಮೂಲಕ ತಂದು, ಅಗಸಿಯ ಹತ್ತಿರ ಇರುವ ಹಾಳಕೇರಿಯವರ ಕಳಸದ ಕಟ್ಟೆ ಮೇಲೆ ಇಡಲಾಗುವುದು. ಸಂಜೆ 5 ಗಂಟೆಯವರೆಗೆ ಭಕ್ತರು  ಕಳಸದ ದರ್ಶನ ಪಡೆಯುವರು. ನಂತರ ಸಂಗಮೇಶ್ವರ ದೇವಾಲಯಕ್ಕೆ ಕೊಂಡೊಯ್ದು, ಪೂಜೆ ಮಾಡಿ, ರಥಕ್ಕೆ ಅಳವಡಿಸಲಾಗುತ್ತದೆ. 

ಗ್ರಾಮಸ್ಥರ ಪಾಲ್ಗೊಳ್ಳುವಿಕೆ : ಸಂಗಮನಾಥನ ಜಾತ್ರೆಗೆ ಹಲವಾರು ಗ್ರಾಮಗಳ ಜನರು ವಿವಿಧ ಕಾರ್ಯಗಳಲ್ಲಿ ತೊಡಗುವ ಮೂಲಕ ಜಾತ್ರೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವರು. ಬೆಳಗಲ್ಲ ಗ್ರಾಮದಿಂದ ತೇರಿನ ಹಗ್ಗ, ಗಂಜೀಹಾಳ ಗ್ರಾಮದಿಂದ ಬಾಳೆಕಂಬ, ತಳಿರು ತೋರಣ, ಇದ್ದಲಗಿಯಿಂದ ಹಿಲಾಲು, ತಂಗಡಗಿಯಿಂದ ನೀಲಮ್ಮನ ಪಲ್ಲಕ್ಕಿ, ಗುಳೇದಗುಡ್ಡದಿಂದ ಉತ್ಸವಮೂರ್ತಿಯ ಕಳಸ ಹಾಗೂ ಪಲ್ಲಕ್ಕಿ ತರಲಾಗುತ್ತದೆ.

ವಿವಿಧ ಪೂಜೆಗಳು: ಸಂಗಮನಾಥನಿಗೆ ಐದು ಪೂಜೆಗಳು ನಡೆಯುತ್ತವೆ. ಮುಂಜಾನೆ 5 ಗಂಟೆಗೆ ದೇವರ ಪೂಜೆ, 6 ಗಂಟೆಗೆ ರುದ್ರಾಭಿಷೇಕ ಪೂಜೆ, ಮಧ್ಯಾಹ್ನ 12 ಗಂಟೆಗೆ ಧೂಪಾರತಿ ಪೂಜೆ, ಸಂಜೆ 5 ಗಂಟೆಗೆ ದೇವರ ಪೂಜೆ, ರಾತ್ರಿ 8.30ಕ್ಕೆ ಮಹಾಮಂಗಳಾರತಿ ಪೂಜೆ ನಡೆಯುವುದು.

ಸಂಗಮೇಶ್ವರನ ರಥದ ಬಂಗಾರ ಲೇಪಿತ ಕಳಸ
ಸಂಗಮೇಶ್ವರನ ರಥದ ಬಂಗಾರ ಲೇಪಿತ ಕಳಸ

ಸಂಗಮೇಶ್ವರ ದೇಗುಲದ ಐತಿಹ್ಯ

ಸಂಗಮೇಶ್ವರ ದೇವಾಲಯವು ಕೃಷ್ಣ ಮಲ್ಲಪ್ರಭೆಯ ಸಂಗಮದ ಸ್ಥಾನದಲ್ಲಿದೆ. ಈ ದೇವಾಲಯವನ್ನು 9ನೇ ಶತಮಾನದಲ್ಲಿ ಚಾಲಕ್ಯರ ಶೈಲಿಯಲ್ಲಿ ನಿರ್ಮಿಸಲಾಗಿದೆ ಎಂದು ಶಾಸನದಲ್ಲಿ ಉಲ್ಲೇಖವಿದೆ. ಸಂಗಮೇಶ್ವರ ರಥಕ್ಕೆ ಬಂಗಾರ ಲೇಪವುಳ್ಳ ಭವ್ಯವಾದ ಕಳಸವನ್ನು ಮಾಡಿಸಿಕೊಟ್ಟವರು ಅಮರಾವತಿಯ ದೇಸಾಯಿಯವರು. ಈ ಮೊದಲು ಕಳಸವು ಜಾತ್ರೆಯ ಹಿಂದಿನ ದಿನ ಅಮರಾವತಿಯಿಂದಲೇ ಬರುತ್ತಿತ್ತು ಎಂದು ಹೇಳಲಾಗುತ್ತದೆ. 1997ರಲ್ಲಿ ಸರ್ಕಾರ ಕೂಡಲಸಂಗಮ ಅಭಿವೃದ್ದಿ ಮಂಡಳಿ ಸ್ಥಾಪಿಸುವ ಮೂಲಕ ಈ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ಪ್ರಮುಖ ಪ್ರವಾಸಿ ಹಾಗೂ ಧಾರ್ಮಿಕ ತಾಣವನ್ನಾಗಿ ಮಾಡಿತು.  ರಾಜ್ಯ ಮಾತ್ರವಲ್ಲದೆ ಮಹಾರಾಷ್ಟ್ರ ಗೋವಾ ಕೇರಳ ಆಂಧ್ರಪ್ರದೇಶ ಮೊದಲಾದ ರಾಜ್ಯದಲ್ಲೂ ಅಪಾರ ಭಕ್ತರನ್ನು ಹೊಂದಿರುವ ಹಿರಿಮೆ ಈ ದೇಗುಲದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT