ಶುಕ್ರವಾರ, ಫೆಬ್ರವರಿ 26, 2021
32 °C
ಮನೆ ಕಟ್ಟಲು ಫಲಾನುಭವಿಗಳ ಹಿಂದೇಟು: ಕುಂಟುತ್ತಾ ಸಾಗಿದೆ ಅಭಿವೃದ್ಧಿ ಕಾರ್ಯ

ಯುನಿಟ್ 2 ನಿವೇಶನ ಹಂಚಿಕೆ : ಸಂತ್ರಸ್ತರ ಸ್ನೇಹಿ ಆಗುವುದೆಂದು?

ಅಭಿಷೇಕ ಪಾಟೀಲ Updated:

ಅಕ್ಷರ ಗಾತ್ರ : | |

Deccan Herald

ಬಾಗಲಕೋಟೆ: ಇಲ್ಲಿನ ನವನಗರ ಯುನಿಟ್‌ 2ರಲ್ಲಿ ನಿವೇಶನ ಹಂಚಿಕೆಯಾಗಿದ್ದರೂ ಅಲ್ಲಿ ಮೂಲ ಸೌಕರ್ಯಗಳ ಕೊರತೆಯಿಂದಾಗಿ ಸಂತ್ರಸ್ತರು ಮನೆ ಕಟ್ಟಲು ಹಿಂದೇಟು ಹಾಕುತ್ತಿದ್ದಾರೆ.

ಬಾಗಲಕೋಟೆ ನಗರದ ಬಹಳಷ್ಟು ಪ್ರದೇಶ ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ  ಮುಳುಗಡೆಯಾದ ಕಾರಣ ಮೊದಲ ಹಂತದಲ್ಲಿ ಯುನಿಟ್ 1ನ್ನು ನಿರ್ಮಾಣ ಮಾಡಿ ಬಹುತೇಕ ಜನವಸತಿಯನ್ನು ಅಲ್ಲಿಗೆ ಸ್ಥಳಾಂತರ ಮಾಡಲಾಗಿತ್ತು. ಉಳಿದವರಿಗಾಗಿ ಯುನಿಟ್ 2 ಅಭಿವೃದ್ಧಿಪಡಿಸಿ ನಿವೇಶನಗಳ ಹಂಚಿಕೆ ಮಾಡಲಾಗಿದೆ. ಈ ಪ್ರಕ್ರಿಯೆ ನಡೆದು ಹಲವು ತಿಂಗಳಾದರೂ ಅಲ್ಲಿ ನಿರೀಕ್ಷೆಯಷ್ಟು ಅಭಿವೃದ್ಧಿ ಕಾರ್ಯ ನಡೆದಿಲ್ಲ. 

’ಯುನಿಟ್ 2ರಲ್ಲಿ ಸರಿಯಾದ ರಸ್ತೆಗಳು, ವಿದ್ಯುತ್ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಮನೆ ಕಟ್ಟುವುದು ಇರಲಿ. ಅಲ್ಲಿ ಸರಾಗವಾಗಿ ಓಡಾಡುವುದೇ ಕಷ್ಟವಾಗಿದೆ. ಬೀದಿ ದೀಪ, ಸೂಕ್ತ ಭದ್ರತಾ ವ್ಯವಸ್ಥೆ ಇಲ್ಲದೇ ಮನೆ ಕಟ್ಟುವ ಸಾಮಗ್ರಿಗಳನ್ನು ಕಾಪಿಟ್ಟುಕೊಳ್ಳುವುದೇ ದುರ್ಲಭವಾಗಿದೆ. ಹಾಗಾಗಿ ಮನೆ ಕಟ್ಟುವ ಯೋಚನೆಯನ್ನು ಪದೇ ಪದೇ ಮುಂದೂಡುತ್ತಿರುವುದಾಗಿ’ ಸಂತ್ರಸ್ತ ವಿರೂಪಾಕ್ಷಪ್ಪ ಕೋಟಿ ಬೇಸರ ವ್ಯಕ್ತಪಡಿಸುತ್ತಾರೆ.

‘ನಮ್ಮ ಮನೆ ಮುಚಖಂಡಿ ಕ್ರಾಸ್‌ನಲ್ಲಿತ್ತು. ಅದನ್ನು ಮುಳುಗಡೆ ಎಂದು ಪರಿಗಣಿಸಿದ ಮೇಲೆ ನವನಗರ ಯುನಿಟ್‌ 2ರ 98ನೇ ಸೆಕ್ಟರ್‌ನಲ್ಲಿ ನಿವೇಶನ ದೊರಕಿದೆ. ಅಲ್ಲಿ ಮನೆ ಕಟ್ಟಬೇಕಿದೆ. ಆದರೆ ಸರಿಯಾದ ರಸ್ತೆ ಸೌಲಭ್ಯವಿಲ್ಲ, ವಿದ್ಯುತ್‌ ಸಂಪರ್ಕ ಸರಿಯಾಗಿಲ್ಲ ಹಾಗೂ ಬಿಟಿಡಿಎ ಸಮರ್ಪಕವಾಗಿ ನೀರು ಪೂರೈಸುತ್ತಿಲ್ಲ’ ಎಂದು ಕೆ.ಪಿ.ಲಕ್ಷ್ಮೀನಾರಾಯಣ ಹೇಳುತ್ತಾರೆ.

‘ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡೂ ತಿಂಗಳು ಕಳೆದರೂ ಇಲ್ಲಿಯವರೆಗೆ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರಕ್ಕೆ ಸದಸ್ಯರ ನೇಮಕವಾಗಿಲ್ಲ. ಸದ್ಯ ಅಧಿಕಾರಿಗಳದ್ದೇ ದರ್ಬಾರ್ ಆಗಿದೆ. ಆದರೆ ಅವರ್ಯಾರೂ ಎರಡನೇ ಯುನಿಟ್‌ ಅಭಿವೃದ್ಧಿಯ ಬಗ್ಗೆ ತಲೆಕೆಡಿಸಿಕೊಂಡಿಲ್ಲ’ ಎನ್ನುವ ಅವರು, ನೂತನ ಶಾಸಕ ವೀರಣ್ಣ ಚರಂತಿಮಠ ಅವರಾದರೂ ಕ್ರಮಕ್ಕೆ ಮುಂದಾಗಲಿ’ ಎಂದು ಲಕ್ಷ್ಮೀನಾರಾಯಣ ಮನವಿ ಮಾಡುತ್ತಾರೆ.

‘ಮನೆ ಮುಳುಗಡೆಯಾಗಿದಕ್ಕೆ ಸರ್ಕಾರದಿಂದ ಖಾಲಿ ನಿವೇಶನದ ಜೊತೆಗೆ ಪರಿಹಾರ ಕೂಡಾ ದೊರೆತಿದೆ, ಆದರೆ ಯುನಿಟ್‌ 2 ರಲ್ಲಿ ಮನೆ ಕಟ್ಟಲು ಪೂರಕ ವಾತಾವರಣ ಇಲ್ಲ. ಇದರಿಂದ ಪರಿಹಾರದ ಮೊತ್ತ ವರ್ಷದಿಂದ ವರ್ಷಕ್ಕೆ ಖಾಲಿಯಾಗುತ್ತಿದೆ. ಸಂಬಂಧಿಸಿದವರಿಂದ ಇದೇ ಧೋರಣೆ ಮುಂದುವರೆದಲ್ಲಿ ಕೈಯಲ್ಲಿನ ಹಣ ಖಾಲಿಯಾಗಲಿದೆ’ ಎಂದು ಸಂತ್ರಸ್ತರು ಆಕ್ರೋಶ ವ್ಯಕ್ತ ಪಡಿಸುತ್ತಾರೆ.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ’ಪ್ರಜಾವಾಣಿ’ ಬಿಟಿಡಿಎ ಮುಖ್ಯ ಎಂಜಿನಿಯರ್‌ ಸೈಯದ್ ಇಷಾಕ್‌ ಅಪ್ಸರ್ ಅವರ ಸಂಪರ್ಕಕ್ಕೆ ಪ್ರಯತ್ನಿಸಿದೂ ಅವರು ಕರೆ ಸ್ವೀಕರಿಸಲಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು