ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ: ಸೌಲಭ್ಯಗಳಿಗೆ ಕತ್ತರಿ

ಗ್ರಾಮೀಣ ಮೀಸಲಾತಿ, ಉದ್ಯೋಗ ಖಾತರಿ ಎರಡೂ ಇಲ್ಲ
Published 10 ಜೂನ್ 2023, 13:33 IST
Last Updated 10 ಜೂನ್ 2023, 13:33 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ತಾಲ್ಲೂಕಿನ ಕೈಗಾರಿಕಾ ಪ್ರದೇಶದಲ್ಲಿನ ಬಾಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಲೆಗಳ ವಿದ್ಯಾರ್ಥಿಗಳು ಇದುವರೆವಿಗೂ ಉನ್ನತ ವಿದ್ಯಾಭ್ಯಾಸ ಮತ್ತು ಸರ್ಕಾರಿ ಉದ್ಯೋಗ ಪಡೆಯಲು ಗ್ರಾಮೀಣ ಅಭ್ಯರ್ಥಿ ಸೌಲಭ್ಯ ಪಡೆಯುತ್ತಿದ್ದರು. ಆದರೆ ಇತ್ತೀಚಿಗೆ ಬಾಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಉನ್ನತೀಕರಿಸಿದ್ದರಿಂದ ವಿದ್ಯಾರ್ಥಿಗಳಿಗೆ ಗ್ರಾಮೀಣ ಮೀಸಲಾತಿ, ಕೃಷಿಕರು ಉದ್ಯೋಗ ಖಾತರಿ ಸೌಲಭ್ಯದಿಂದ ವಂಚಿತರಾಗಿದ್ದಾರೆ.

ಬಾಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ 13 ಗ್ರಾಮಗಳು 17,176 ಚ.ಕಿ.ಮೀ ವ್ಯಾಪ್ತಿ ಪ್ರದೇಶವನ್ನು ಹೊಂದಿದೆ. ಕೃಷಿ ಮತ್ತು ಕೈಗಾರಿಕಾ ಪ್ರದೇಶ ಎರಡನ್ನೂ ಸಮಾನವಾಗಿ ಹೊಂದಿದೆ. ತಾಲ್ಲೂಕಿನಲ್ಲೇ ಅತಿ ಹೆಚ್ಚಿನ ಅಂದರೆ 45 ಜನ ಗ್ರಾಮ ಪಂಚಾಯಿತಿ ಸದಸ್ಯರನ್ನು ಹೊಂದಿದ್ದ ಪಂಚಾಯಿತಿಯಯೂ ಇದಾಗಿತ್ತು. ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸಿಸುವ ಹೆಚ್ಚಿನ ಕುಟುಂಬಗಳು ಕೃಷಿಕರು ಹಾಗೂ ಕೃಷಿ ಕಾರ್ಮಿಕರರಾಗಿ ದುಡಿಯುತ್ತಿದ್ದಾರೆ. ಹೊರಗಿನಿಂದ ಬಂದಿರುವ ಕುಟುಂಬಗಳು ಕೈಗಾರಿಕಾ ಪ್ರದೇಶದಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಇವರಲ್ಲಿ ಬಹುತೇಕ ಕುಟುಂಬ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಾಗಿವೆ. ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತರಾದ ಕೃಷಿ ಕಾರ್ಮಿಕರು ಮತ್ತು ಕೈಗಾರಿಕೆಗಳ ಕಾರ್ಮಿಕರು ಬಾಡಿಗೆ ಮನೆಗಳಲ್ಲಿ ವಾಸ ಮಾಡುವವರ ಸಂಖ್ಯೆಯೇ ಹೆಚ್ಚು.

ಕೋವಿಡ್ ಸಮಯದಲ್ಲಿ ತಂದೆ ತಾಯಿ, ಕುಟುಂಬದವರನ್ನು ಕಳೆದುಕೊಂಡ ಅನೇಕ ವಿದ್ಯಾರ್ಥಿಗಳು ಇಲ್ಲಿ ಇದ್ದಾರೆ. ಇಂತಹ ಬಡ ಮತ್ತು ಅಸಹಾಯಕ ಕುಟುಂಬಗಳ ಮಕ್ಕಳು ಬಾಶೆಟ್ಟಿಹಳ್ಳಿ ವ್ಯಾಪ್ತಿಯ ಸರ್ಕಾರಿ ಶಾಲಾ, ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈ ಮಕ್ಕಳಿಗೆ ಇದುವರೆವಿಗೂ ಗ್ರಾಮೀಣ ಅಭ್ಯರ್ಥಿ ಮೀಸಲಾತಿ ಸೌಲಭ್ಯ ಸಹಕಾರಿಯಾಗಿತ್ತು. ಅದರೆ ಬಾಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ಪಟ್ಟಣ ಪಂಚಾಯಿತಿ ಆಗಿರುವುದು ವಿದ್ಯಾರ್ಥಿಗಳು ಗ್ರಾಮೀಣ ಅಭ್ಯರ್ಥಿ ಸೌಲಭ್ಯದಿಂದ ವಂಚಿತರಾಗುವಂತೆ ಮಾಡಿದೆ.

ಚುನಾವಣೆ ನಡೆದಿಲ್ಲ: ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಯಾಗಿ ಎರಡು ವರ್ಷಗಳು ಕಳೆದಿದ್ದರೂ ಸಹ ಇನ್ನೂ ಚುನಾವಣೆ ಮಾತ್ರ ನಡೆದಿಲ್ಲ. ವಾರ್ಡ್‌ ವಿಂಗಡಣೆ ವಿರುದ್ಧ ರಾಜ್ಯ ಹೈಕೋರ್ಟ್‌ನಲ್ಲಿ ದಾಖಲಾಗಿರುವ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಕೋವಿಡ್ ಸಂಕಷ್ಟದ ಸಮಯದಲ್ಲಿ ಉಂಟಾದ ಈ ಆಡಳಿತಾತ್ಮಕ ಬದಲಾವಣೆಯ ನೇರ ಪರಿಣಾಮ 2020-21ನೇ ಸಾಲಿನಿಂದ 10ನೇ ತರಗತಿ ಉತ್ತೀರ್ಣರಾಗಿ ಹೊರಬರುತ್ತಿರುವ ಸಾವಿರಾರು ವಿದ್ಯಾರ್ಥಿಗಳಿಗೆ ಬಾಶೆಟ್ಟಿಹಳ್ಳಿ ಪಟ್ಟಣ ವ್ಯಾಪ್ತಿಯಲ್ಲಿರುವ ಶಾಲಾ, ಕಾಲೇಜುಗಳಿಂದ ಗ್ರಾಮೀಣ ಅಭ್ಯರ್ಥಿ ವ್ಯಾಸಂಗ ಪ್ರಮಾಣ ಪತ್ರ ನೀಡುತ್ತಿಲ್ಲ. ಇದರಿಂದಾಗಿ ಬಾಶೆಟ್ಟಿಹಳ್ಳಿ ಪಂಚಾಯಿತಿ ವ್ಯಾಪ್ತಿಯ ವಿದ್ಯಾರ್ಥಿಗಳು ಕಾಲೇಜು ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗ ಬಯಸುವವರಿಗೆ ಗ್ರಾಮೀಣ ಮೀಸಲಾತಿಯಿಂದ ವಂಚಿತರಾಗುವಂತೆ ಮಾಡಿದೆ.

ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿಯೇ ಜವಾಹರ್‌ ನವೋದಯ ವಿದ್ಯಾಲಯವೂ ಸಹ ಇದೆ. ಇಷ್ಟು ವರ್ಷಗಳ ಕಾಲ ಇಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಗ್ರಾಮೀಣ ಅಭ್ಯರ್ಥಿ ಮೀಸಲಾತಿ ಪಡೆಯಲು ಅವಕಾಶ ಇತ್ತು. ಆದರೆ ಈಗ ಈ ಸೌಲಭ್ಯ ದೊರೆಯದಾಗಿದೆ.

ಉದ್ಯೋಗ ಖಾತರಿ ಸೌಲಭ್ಯ ಇಲ್ಲ: ಬಾಶೆಟ್ಟಿಹಳ್ಳಿ ಗ್ರಾಮ ಮಾತ್ರ ಸಂಪೂರ್ಣವಾಗಿ ಕೈಗಾರಿಕೆಯನ್ನು ಹೊಂದಿದೆ. ಆದರೆ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಸುಮಾರು 8 ಗ್ರಾಮಗಳಲ್ಲಿ ಕೃಷಿಯೇ ಪ್ರಮುಖವಾಗಿದೆ. ಈ ಪ್ರದೇಶದಲ್ಲಿ ರಾಗಿ, ಹಣ್ಣು, ತರಕಾರಿ ಹಾಗೂ ಹೂವಿನ ಬೆಳೆಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ.

ಇತ್ತೀಚಿನ ಸುಮಾರು ನಾಲ್ಕು ವರ್ಷಗಳಿಂದ ಈಚೆಗೆ ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆಯಿಂದ ಬಾಳೆ, ತರಕಾರಿ, ಅಡಿಕೆ, ತೆಂಗು, ರೇಷ್ಮೆ ಕಡ್ಡಿ ನಾಟಿ ಸೇರಿದಂತೆ ಯಾವುದೇ ಬೆಳೆಗೆ ಪ್ರೋತ್ಸಾಹವನ್ನು ನಗದು ರೂಪದಲ್ಲಿ ನೀಡದೆ ಉದ್ಯೋಗ ಖಾತರಿ ಯೋಜನೆ ಮೂಲಕ ನೀಡಲಾಗುತ್ತದೆ.

ರೈತರು ತಮ್ಮ ಕುಟುಂಬ ಹಾಗೂ ಗ್ರಾಮದ ಇತರ ಕಾರ್ಮಿಕರು ಉದ್ಯೋಗ ಖಾತರಿ ಯೋಜನೆಯಡಿ ಜಾಬ್‌ ಕಾರ್ಡ್‌ಗಳನ್ನು ಮಾಡಿಸಿಕೊಳ್ಳುವ ಮೂಲಕ ಬಾಳೆ, ಅಡಿಕೆ, ತೆಂಗಿನ ಸಸಿ ನಾಟಿ ಮಾಡಲು ಗುಂಡಿಗಳನ್ನು ತೆಗೆಯಲು, ಕೃಷಿ ಹೊಂಡಗಳನ್ನು ನಿರ್ಮಿಸಿಕೊಳ್ಳುವುದು ಸೇರಿದಂತೆ ಎಲ್ಲಾದಕ್ಕೂ ಆರ್ಥಿಕ ನೆರವು ಪಡೆಯಲು ಅವಕಾಶ ಇದೆ. ಜಾಬ್‌ ಕಾರ್ಡ್‌ಗಳನ್ನು ಮಾಡಿಕೊಡುವ ಅಧಿಕಾರ ಹಾಗೂ ನೇರ ನಗದು ವರ್ಗಾವಣೆ ಮಾಡುವ ಅಧಿಕಾರ ಇರುವುದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಮಾತ್ರ. ಆದರೆ ಬಾಶೆಟ್ಟಿಹಳ್ಳಿ ಈಗ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿರುವುದರಿಂದ ಈ ಭಾಗದ ರೈತರು ಸಹ ಸರ್ಕಾರಿ ಸೌಲಭ್ಯಗಳನ್ನು ಪಡೆಯುವುದರಿಂದ ವಂಚಿತರಾಗುವಂತೆ ಆಗಿದೆ ಎನ್ನುತ್ತಾರೆ ಬಾಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರೆಹಳ್ಳಿ ಗುಡ್ಡದಹಳ್ಳಿ ಗ್ರಾಮದ ರೈತ ಮುನಿಆಂಜಿನಪ್ಪ.

ಗ್ರಾಮೀಣ ಪ್ರದೇಶದಲ್ಲಿ ವ್ಯಾಸಂಗ ಮಾಡಿಯು ಸಹ ನಮಗೆ ನ್ಯಾಯಯುತವಾಗಿ ದೊರೆಯಬೇಕಿರುವ ಮೀಸಲಾತಿ ವಂಚನೆಯಾಗಿರುವ ಬಗ್ಗೆ ಜಿಲ್ಲಾಧಿಕಾರಿಗಳಿಂದ ಮೊದಲುಗೊಂಡು ರಾಜ್ಯದ ಮುಖ್ಯ ಕಾರ್ಯದರ್ಶಿ ಅವರಿಗೂ ಮನವಿ ಸಲ್ಲಿಸಲಾಗಿದೆ. ಆದರೆ ಇದುವರೆಗೂ ಕನಿಷ್ಠ ಉತ್ತರವೂ ಬಂದಿಲ್ಲ.
ಎಂ.ರೋಹಿತ್‌, ಪಿಯು ವಿದ್ಯಾರ್ಥಿ
ಬಾಶೆಟ್ಟಿಹಳ್ಳಿ ಮಾತ್ರ ಪಟ್ಟದ ಸ್ವರೂಪ ಹೊಂದಿದೆ. ಆದರೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಯಾವುದೇ ಗ್ರಾಮಗಳಲ್ಲೂ ಸಹ ಪಟ್ಟಣದ ಯಾವುದೇ ರೀತಿಯ ಸೌಲಭ್ಯಗಳಿಲ್ಲ. ಇಂತಹ ಪ್ರದೇಶದ ಶಾಲೆಗಳಲ್ಲಿ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳಿಗೆ ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರ ನೀಡಲೇಬೇಕು.
ಬಿ.ಆರ್.ಪ್ರೀತಮ್, ಪಿಯು ವಿದ್ಯಾರ್ಥಿ
ರೈತರು ಉದ್ಯೋಗ ಖಾತರಿ ಯೋಜನೆಯಡಿ ಸೌಲಭ್ಯ ಪಡೆಯಲು ಜಾಬ್‌ ಕಾರ್ಡ್‌ ಕಡ್ಡಾಯ. ಬಾಶೆಟ್ಟಿಹಳ್ಳಿ ಪಟ್ಟಣ ವ್ಯಾಪ್ತಿಯ ರೈತರು ಸೌಲಭ್ಯ ಪಡೆಯಲು ಅಡ್ಡಿಯಾಗಿರುವ ವಿಷಯವನ್ನು ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.
ಡಿ.ರಾಜೇಶ್ವರಿ, ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ, ದೊಡ್ಡಬಳ್ಳಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT