ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷೆ ಉಳಿವಿಗೆ ಪಕ್ಷಗಳ ಸಹಕಾರ ಅಗತ್ಯ :ನಿಖಿಲ್ ಕುಮಾರಸ್ವಾಮಿ

ವೀರಾಂಜನೇಯ ಸ್ವಾಮಿ ಯುವಕ ರೈತ ಸಂಘದಿಂದ ರಾಜ್ಯೋತ್ಸವ
Last Updated 10 ಡಿಸೆಂಬರ್ 2019, 14:19 IST
ಅಕ್ಷರ ಗಾತ್ರ

ದೇವನಹಳ್ಳಿ: ‘ಸ್ಥಳೀಯ ನಾಡು ನುಡಿಯ ಕನ್ನಡ ಭಾಷೆ ಉಳಿವಿಗೆ ಪ್ರಾದೇಶಿಕ ಪಕ್ಷಗಳಿಗೆ ಸಹಕಾರ ನೀಡುವ ಅಗತ್ಯವಿದೆ’ ಎಂದು ಜೆಡಿಎಸ್ ರಾಜ್ಯ ಯುವ ಘಟಕ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

ಇಲ್ಲಿನ ಕಾರಹಳ್ಳಿ ಗ್ರಾಮದಲ್ಲಿ ಶ್ರೀ ವೀರಾಂಜನೇಯ ಸ್ವಾಮಿ ಯುವಕ ರೈತ ಸಂಘದ ವತಿಯಿಂದ ನಡೆದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಭಾಷಾಭಿಮಾನ ಮತ್ತು ಪ್ರಾದೇಶಿಕ ಪಕ್ಷಗಳ ಮಾದರಿಯನ್ನು ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ ರಾಜ್ಯಗಳನ್ನು ನೋಡಿ ನಾವು ಕಲಿಯಬೇಕು. ರಾಷ್ಟ್ರೀಯ ಪಕ್ಷಗಳಿಂದ ಆಗದ ಆನೇಕ ಯೋಜನೆಗಳನ್ನು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ಪ್ರಾದೇಶಿಕ ಪಕ್ಷಗಳು ಗಳಿಸಿಕೊಳ್ಳತ್ತಿವೆ’ ಎಂದರು.

‘ಕಾವೇರಿ ವಿವಾದ, ಸ್ಥಳೀಯರಿಗೆ ಉದ್ಯೋಗ, ಭಾಷೆಗೆ ಶಾಸ್ತ್ರೀಯ ಸ್ಥಾನಮಾನ, ನೀರಾವರಿ ಯೋಜನೆಗಳಂಥ ವಿಚಾರದಲ್ಲಿ ನಾವೆಲ್ಲರೂ ಮೊದಲು ಪ್ರಾದೇಶೀಕ ಪಕ್ಷದ ಮಹತ್ವವನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಹೇಳಿದರು.

ಕನ್ನಡ ರಾಜ್ಯೋತ್ಸವ ಒಂದು ಪಕ್ಷಕ್ಕೆ ಸೀಮಿತವಾಗದೆ ಪಕ್ಷಾತೀತವಾಗಿ ಭಾಗವಹಿಸಿದರೆ ಮಾತ್ರ ಆರ್ಥಪೂರ್ಣವಾಗಲಿದೆ ಎಂದು ಹೇಳಿದರು.

ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ‘ಕನ್ನಡ ನುಡಿಗಳು ಅಮೃತವಾಣಿಯಂತೆ, ಅನ್ಯಭಾಷಿಕರನ್ನು ಸೆಳೆಯುವ ತಾಕತ್ತು ಕನ್ನಡ ಭಾಷೆಗೆ ಮಾತ್ರ ಇದೆ. ಕನ್ನಡ ಭಾಷೆಯಲ್ಲಿ ಕಲಿತ ಸರ್ಕಾರಿ ಶಾಲೆಯ ಆನೇಕರು ವಿವಿಧ ಕ್ಷೇತ್ರಗಳಲ್ಲಿ ಅದರ್ಶ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ನಮ್ಮೂರಿನ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದೆ ಎಂದು ಪ್ರತಿಯೊಬ್ಬರು ಎದೆ ತಟ್ಟಿ ಹೇಳಬೇಕು’ ಎಂದು ಆಶಿಸಿದರು.

‘ನಾವೆಲ್ಲರೂ ನಮ್ಮೂರ ಸರ್ಕಾರಿ ಶಾಲೆಗೆ ನಮ್ಮ ಮಕ್ಕಳನ್ನು ದಾಖಲಿಸಿ ಶಾಲೆಯನ್ನು ಉಳಿಸಿಕೊಳ್ಳಬೇಕು’ ಎಂದು ಹೇಳಿದರು.

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಮುನೇಗೌಡ ಮಾತನಾಡಿ, ರಾಜ್ಯದಲ್ಲಿ ಕನ್ನಡ ಪ್ರಗತಿ ಪರ ಸಂಘನಟೆಗಳಿಗೆ ಕೊರತೆ ಇಲ್ಲ. ಕನ್ನಡದ ನೆಲ ಜಲ ಭಾಷೆ ಉಳಿವಿಗೆ ಕೆಲ ಸಂಘಟನೆಗಳು ಮಾತ್ರ ಸೀಮಿತವಾಗಿವೆ. ಕೇವಲ ರಾಜ್ಯೋತ್ಸವ ಮಾಡಿದರೆ ಭಾಷೆ ಬೆಳವಣಿಗೆ ಸಾಧ್ಯವಿಲ್ಲ ಎಂದು ಹೇಳಿದರು.

ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಶ್ರೀನಿವಾಸ್, ಕಾರ್ಯಾಧ್ಯಕ್ಷ ಆರ್.ಮುನೇಗೌಡ, ಪ್ರಧಾನ ಕಾರ್ಯದರ್ಶಿ ಜಿ.ಎ. ರವೀಂದ್ರ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಕಾರಹಳ್ಳಿ ಶ್ರೀನಿವಾಸ್, ಮಹೇಶ್, ಶೈಲಜಾ ಜಗದೀಶ್, ಬಿ.ಕೆ.ಎನ್ ಗ್ರೂಪ್‌ ಮಾಲೀಕ ಬಿ.ಕೆ.ನಾರಾಯಣಸ್ವಾಮಿ, ಎ.ಪಿ.ಎಂ.ಸಿ ಅಧ್ಯಕ್ಷ ಕೆ.ವಿ.ಮಂಜುನಾಥ್, ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವರಾಜ್, ಸದಸ್ಯ ರಾಜೇಂದ್ರ ,ವಿ.ಎಸ್.ಎಸ್.ಎನ್ ಅಧ್ಯಕ್ಷ ಮಂಜುನಾಥ್, ಮುಖಂಡ ಕೆ.ಎನ್.ಮುನಿರಾಜು ಇದ್ದರು. ರಂಗೋಲಿ ಮತ್ತು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT