ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಭೀತಿ: ಮುಂಜಾಗ್ರತೆ ವಹಿಸಲು ಸೂಚನೆ

ಅಧಿಕಾರಿಗಳೊಂದಿಗೆ ಶಾಸಕ ನಿಸರ್ಗ ನಾರಾಯಣಸ್ವಾಮಿ ಸಭೆ
Last Updated 13 ಮಾರ್ಚ್ 2020, 13:57 IST
ಅಕ್ಷರ ಗಾತ್ರ

ದೇವನಹಳ್ಳಿ: ಮಾರಕ ಕೋವಿಡ್-19 ಜಿಲ್ಲೆಯಲ್ಲಿ ಹರಡದಂತೆಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಶಾಸಕ ನಿಸರ್ಗ ನಾರಾಯಣಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳ ತುರ್ತು ಸಭೆ ನಡೆಸಿ ಮಾತನಾಡಿದ ಅವರು, ವಿಶ್ವವನ್ನು ತಲ್ಲಣಗೊಳಿಸಿರುವ ಕೋವಿಡ್–19, ಇಳಿವಯಸ್ಸಿನ ವೃದ್ಧರಿಗೆ ಮತ್ತು ಎಳೆಯ ಮಕ್ಕಳಲ್ಲಿ ಹೆಚ್ಚಾಗಿ ಹರಡಲಿದೆ ಎಂಬ ಮಾಹಿತಿ ಇದೆ, ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸದ್ಯಕ್ಕೆ ಸಮಸ್ಯೆ ಇಲ್ಲ. ವೈದ್ಯರ ತಂಡ ನಿರಂತರವಾಗಿ ತಪಾಸಣೆಯಲ್ಲಿ ತೊಡಗಿಸಿಕೊಂಡಿದೆ ಎಂದು ಹೇಳಿದರು.

ವಿಜಯಪುರ ನಗರದಲ್ಲಿ ರೇಷ್ಮೆ ಗೂಡು ಮಾರಾಟ ಕೇಂದ್ರವಿರುವುದರಿಂದ ಸ್ವಚ್ಛತೆಗೆ ಆದ್ಯತೆ ನೀಡಬೇಕು. ದೇವನಹಳ್ಳಿ ಪುರಸಭೆ ಮತ್ತು ವಿಜಯಪುರದ ಪ್ರತಿಯೊಂದು ವಾರ್ಡ್‌ಗಳಲ್ಲಿ ಹಸಿ ಮತ್ತು ಒಣ ತ್ಯಾಜ್ಯದ ಕಸ ವಿಲೇವಾರಿ ಮಾಡಬೇಕು. ಕುರಿ, ಕೋಳಿ ಮಾಂಸ, ಮೀನು ಮಾರಾಟಗಾರರು ಸ್ವಚ್ಛತೆ ಕಾಯ್ದುಕೊಳ್ಳಬೇಕು ಇಲ್ಲದಿದ್ದರೆ ಮಾರಾಟಕ್ಕೆ ಅವಕಾಶ ನೀಡಬೇಡಿ ಎಂದು ಹೇಳಿದರು.

ಶಾಲಾ ಮಕ್ಕಳು ಮತ್ತು ಪೌರ ಕಾರ್ಮಿಕರು ತಮ್ಮ ಕೈಗಳನ್ನು ನಿತ್ಯ ಸಾಬೂನಿನಿಂದ ಸ್ವಚ್ಛಗೊಳಿಸುವಂತೆ ಸೂಚಿಸಬೇಕು. ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಪಲ್ಸ್ ಪೋಲಿಯೋ ಮಾದರಿಯಲ್ಲಿ ಕರಪತ್ರ ಮುದ್ರಿಸಿ, ಜಾಗೃತಿ ಮೂಡಿಸಬೇಕು. ಸ್ಥಳೀಯ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಜಾಗೃತಿ ಮೂಡಿಸಬೇಕು. ಈ ಮೂಲಕ ರೋಗ ಹರಡುವ ಮೊದಲು ಮುಂಜಾಗ್ರತೆಗೆ ಜನರನ್ನು ಸಿದ್ಧಗೊಳಿಸಬೇಕು ಎಂದು ಹೇಳಿದರು.

ತಾಲ್ಲೂಕು ಕೇಂದ್ರಗಳಲ್ಲಿ ಕೋವಿಡ್– 19ರ ಸೋಂಕು ಲಕ್ಷಣ ಇರುವವರಿಗೆ ಅಗತ್ಯ ಚಿಕಿತ್ಸೆಗೆ ಸಿದ್ಧತೆ ಮಾಡಿಕೊಳ್ಳಬೇಕು. ತಪಾಸಣಾ ಕೇಂದ್ರಗಳಲ್ಲಿ ಎಚ್ಚರಿಕೆ ವಹಿಸಬೇಕು. ಸ್ಥಳಿಯರಿಗೂ ರೋಗ ಹರಡುವ ಸಾಧ್ಯತೆ ಇರುವುದರಿಂದ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕಳುಹಿಸಬೇಕು ಎಂದು ಹೇಳಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಂಜಯ್ ಮಾತನಾಡಿ, ಕೆಮ್ಮು, ನೆಗಡಿ, ಜ್ವರ, ಶ್ವಾಸಕೋಶದ ತೊಂದರೆ ರೋಗದ ಲಕ್ಷಣವಾದರೂ, ವಿದೇಶದಿಂದ ಬರುವ ಪ್ರಯಾಣಿಕರನ್ನು ಪರೀಕ್ಷೆಗೆ ಒಳಪಡಿಸುವುದು ಕಡ್ಡಾಯವಾಗಿದೆ. ಅನುಮಾನಾಸ್ಪದ ರೋಗಿಗಳೆಂದು ಕಂಡು ಬಂದರೆ ಪರೀಕ್ಷೆ ನಡೆಸಿ ರೋಗದ ಖಚಿತ ಮಾಹಿತಿಯನ್ನು ಆಧರಿಸಿ ಚಿಕಿತ್ಸೆ ನೀಡಲಾಗುತ್ತದೆ. ಪ್ರತ್ಯೇಕ ಕೊಠಡಿಯಲ್ಲಿ ರೋಗಿಯ ಮೇಲೆ ನಿಗಾ ವಹಿಸಿ 14 ದಿನ ಚಿಕಿತ್ಸೆ ನೀಡಲಾಗುವುದು ಎಂದು ಹೇಳಿದರು.

ಪ್ರಸ್ತುತ ದೇವನಹಳ್ಳಿ ನಗರದ ಆಕಾಶ್ ವೈದ್ಯಕೀಯ ಕಾಲೇಜಿನಲ್ಲಿ 20 ಹಾಸಿಗೆ, ಲೀನಾ ರಾಮಯ್ಯ ಆಸ್ಪತ್ರೆ ಮತ್ತು ಮಾನಸ ಆಸ್ಪತ್ರೆಯಲ್ಲಿ ತಲಾ ನಾಲ್ಕು ಹಾಸಿಗೆಯನ್ನು ಕಾಯ್ದಿರಿಸಲಾಗಿದೆ, ಸದ್ಯ ಜಿಲ್ಲೆಯಲ್ಲಿ ಈವರೆಗೆ ಯಾವುದೇ ಪ್ರಕರಣ ದಾಖಲು ಆಗಿಲ್ಲ ಎಂದು ಹೇಳಿದರು.

ಪುರಸಭೆ ಮುಖ್ಯಾಧಿಕಾರಿ ಹನುಮಂತೇಗೌಡ, ವಿಜಯಪುರ ಪುರಸಭೆ ಮುಖ್ಯಾಧಿಕಾರಿ ಪ್ರದೀಪ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಟಿ.ಮುರುಡಯ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಾಯಕ ನಿರ್ದೇಶಕಿ ಹೇಮಾವತಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಚನ್ನಬಸಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಅಶ್ವಥನಾರಾಯಣ, ವೈದ್ಯಾಧಿಕಾರಿ ಡಾ.ಶ್ಯಾಮ್ ಸುಂದರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT