ಗುರುವಾರ , ಸೆಪ್ಟೆಂಬರ್ 16, 2021
25 °C

ನಾಡಪ್ರಭು ಕೆಂಪೇಗೌಡರ ವೀರ ಸಮಾಧಿಗೆ ಡಿಸಿಎಂ ಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಗಡಿ: ನಾಡಪ್ರಭು ಕೆಂಪೇಗೌಡರ ವೀರ ಸಮಾಧಿ ಇರುವ ಮಾಗಡಿ ತಾಲೂಕಿನ ಕೆಂಪಾಪುರ ಜನ ಗ್ರಾಮವನ್ನು ಒಂದು ವರ್ಷದೊಳಗೆ ಸಮಗ್ರವಾಗಿ ಅಭಿವೃದ್ಧಿಪಡಿಸಿ ಮುಂದಿನ ವರ್ಷದ ಜಯಂತಿಯನ್ನು ಇಲ್ಲಿಯೇ ಆಚರಿಸಲಾಗುವುದು ಎಂದು ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಹೇಳಿದರು. 

ಕೆಂಪೇಗೌಡರ 512ನೇ ಜಯಂತಿ ನಿಮಿತ್ತ ಕೆಂಪಾಪುರ ಗ್ರಾಮದಲ್ಲಿರುವ ಕೆಂಪೇಗೌಡರ ಸಮಾಧಿಗೆ ಭಾನುವಾರ ಬೆಳಗ್ಗೆ ಪೂಜೆ ಸಲ್ಲಿಸಿ ಮಾಧ್ಯಮಗಳ ಜತೆ ಮಾತನಾಡಿದರು. 

ಸಮಸ್ತ ಕನ್ನಡಿಗರ ಪಾಲಿಗೆ ಕೆಂಪಾಪುರವೂ ಒಂದು ಶ್ರದ್ಧಾಕೇಂದ್ರ. ಹೀಗಾಗಿ ಸಮಾಧಿ ಸ್ಥಳ, ಕೆಂಪಾಪುರ ಕೆರೆಯನ್ನು ಅಭಿವೃದ್ಧಿ ಮಾಡಲಾಗುವುದು. ನಾಡಿನ ಮತ್ತು ದೇಶದ ಸಮಸ್ತ ಜನರು ಇಲ್ಲಿಗೆ ಭೇಟಿ ನೀಡುವಂತೆ ಆಗಬೇಕು. ಕೆಂಪೇಗೌಡರ ಕಾಲದ ವೈಭವವನ್ನು ಮರುಸೃಷ್ಠಿ ಮಾಡಿ  ಇಡೀ ಗ್ರಾಮವನ್ನು ಐತಿಹಾಸಿಕವಾಗಿ ಅಭಿವೃದ್ಧಿಪಡಿಸಲಾಗುವುದು ಎಂದರು.

ಈಗಾಗಲೇ ಯೋಜನೆ ಜಾರಿ ಹಂತದಲ್ಲಿದ್ದು, ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಿದೆ. ಯೋಜನೆಯನ್ನು ಕ್ಷಿಪ್ರವಾಗಿ ಮುಗಿಸಲಾಗುವುದು. ಅದಕ್ಕಾಗಿ ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು. 

ಪ್ರತಿಮೆ ಅನಾವರಣ: ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮುಂದೆ ನಿರ್ಮಾಣ ಆಗುತ್ತಿರುವ ಸೆಂಟ್ರಲ್‌ ಪಾರ್ಕ್‌ನಲ್ಲಿ ಕೆಂಪೇಗೌಡರ 108 ಅಡಿ ಎತ್ತರದ ಲೋಹದ ಪ್ರತಿಮೆಯನ್ನು ಮುಂಬರುವ ಫೆಬ್ರುವರಿ-ಮಾರ್ಚ್‌ನಲ್ಲಿ ಲೋಕಾರ್ಪಣೆ ಮಾಡಲಾಗುವುದು. ಕೋವಿಡ್‌ನಿಂದ ವಿಳಂಬವಾಗಿದ್ದ ಕಾಮಗಾರಿ ಪುನಾ ಭರದಿಂದ ಸಾಗಿದೆ. ನೋಯಿಡಾದಲ್ಲಿ ಪ್ರತಿಮೆ ಸಿದ್ಧವಾಗುತ್ತಿದೆ ಎಂದು ಇದೇ ವೇಳೆ ಡಿಸಿಎಂ ಹೇಳಿದರು. 

ಶಾಸಕ ಮಂಜುನಾಥ್‌, ರಾಮನಗರ ಜಿಲ್ಲಾಧಿಕಾರಿ ರಾಕೇಶ್ ಕುಮಾರ್, ಸಿಇಒ ಇಕ್ರಂ, ಬಿಜೆಪಿ ಮುಖಂಡ ಎಚ್.‌ಎಂ. ಕೃಷ್ಣಮೂರ್ತಿ, ರಾಮನಗರ ಬಿಜೆಪಿ ಜಿಲ್ಲಾ ಅಧ್ಯಕ್ಷ ಹುಲವಾಡಿ ದೇವರಾಜ್‌ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು