ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಯಲುಸೀಮೆಯಲ್ಲಿ ಸಾವಯವ ಸೇಬು l ಧರ್ಮಪುರದ ರೈತನ ಯಶಸ್ವಿ ಕಥೆ

ವರ್ಷದಲ್ಲಿ ಗಿಡ ತುಂಬಾ ಹಣ್ಣು ಗೊಂಚಲು
Published 14 ಏಪ್ರಿಲ್ 2024, 4:49 IST
Last Updated 14 ಏಪ್ರಿಲ್ 2024, 4:49 IST
ಅಕ್ಷರ ಗಾತ್ರ

ವಿಜಯಪುರ(ದೇವನಹಳ್ಳಿ): ಸಾಮಾನ್ಯವಾಗಿ ಕಾಶ್ಮೀರದಲ್ಲಿ ಬೆಳೆಯುತ್ತಿದ್ದ ಸೇಬನ್ನು ಈಚಿನ ವರ್ಷಗಳಲ್ಲಿ ಬಯಲು ಸೀಮೆಯ ರೈತರು ಬೆಳೆದು ಯಶಸ್ವಿಯಾಗುತ್ತಿದ್ದಾರೆ.

ಧರ್ಮಪುರದ ಮುಖೇಶ್ ಬಾಬು ಎಂಬ ರೈತರೊಬ್ಬರು ಸಾವಯವ ಕೃಷಿ ಪದ್ಧತಿಯಲ್ಲಿ ಸೇಬು ಗಿಡಗಳನ್ನು ನಾಟಿ ಮಾಡಿ ಒಂದೇ ವರ್ಷದಲ್ಲಿ ಉತ್ತಮ ಫಸಲು ಪಡೆದಿದ್ದಾರೆ. 1,750 ಕೆ.ಜಿ ಸೇಬು ಕಟಾವಿಗೆ ಸಿದ್ಧವಾಗಿದೆ. ಸಾಮಾನ್ಯವಾಗಿ ಸೇಬು ಕಟಾವಿಗೆ ಬರಲು 2–3 ವರ್ಷ ಬೇಕು. ಆದರೆ ಇಲ್ಲಿ ಒಂದೇ ವರ್ಷದಲ್ಲಿ ಕಟಾವಿಗೆ ಬಂದಿದೆ.

ಹಿಮಾಚಲ ಪ್ರದೇಶದ ತಳಿಗಳಾದ ‘ಎಚ್.ಆರ್.ಎಂ.ಎಸ್-99’, ‘ಹನ್ನಾ’ ಮತ್ತು ‘ಡಾರ್ಸೆಟ್ ಗೋಲ್ಡ್’ ಗಿಡಗಳನ್ನು ಹಿಮಾಚಲ ಪ್ರದೇಶದಿಂದ ತರಿಸಿ ಒಂದೂವರೆ ಎಕರೆಯಲ್ಲಿ ನಾಟಿ ಮಾಡಿದ್ದರು. ಇದಕ್ಕಾಗಿ ಅವರು ಒಟ್ಟು ₹3.50 ಲಕ್ಷ ಖರ್ಚು ಮಾಡಿದ್ದರು. 

‘ಕೊಳವೆಬಾವಿ ನೆಚ್ಚಿಕೊಂಡು ಕೃಷಿ ಮಾಡುವವರು ನಾವು. ಈ ಹಿಂದೆ ದ್ರಾಕ್ಷಿ ಬೆಳೆಯುತ್ತಿದ್ದೆ. ನೀರಿನ ಕೊರತೆಯಿಂದ ದ್ರಾಕ್ಷಿ ಕೃಷಿ ತೊಂದರೆ ಆಗುತ್ತಿತು. ದ್ರಾಕ್ಷಿ ಬಿಟ್ಟು ದಾಳಿಂಬೆ ಬೆಳೆಯಲು ಸಿದ್ಧತೆ ಮಾಡಿಕೊಂಡಿದ್ದೆ. ಸ್ನೇಹಿತರು ಸೇಬು ಬೆಳೆಯಲು ಸಲಹೆ ನೀಡಿದರು’ ಎಂದು ಮುಖೇಶ್ ಬಾಬು ಹೇಳಿದರು.

‘ಚಿತ್ರದುರ್ಗದಲ್ಲಿ ಜ್ಯೋತಿಪ್ರಕಾಶ್ ಎಂಬುವರು ಸೇಬು ಕೃಷಿಯಲ್ಲಿ ಯಶಸ್ವಿ ಆಗಿರುವುದನ್ನು ಯೂ–ಟ್ಯೂಬ್‌ನಲ್ಲಿ ನೋಡಿ, ಅವರಿಗೆ ಕರೆ ಮಾಡಿದಾಗ ಹಿಮಾಚಲ ಪ್ರದೇಶದಿಂದ ಸೇಬು ಸಸಿಗಳ ಕಡ್ಡಿ ತರಿಸಿಕೊಟ್ಟರು. ಅದನ್ನು ಪ್ಯಾಕೇಟ್‌ನಲ್ಲಿ ಹಾಕಿ ಚಿಗುರು ಬರುವವರೆಗೂ ನೋಡಿಕೊಂಡೆವು

ಉತ್ತಮ ಇಳುವರಿಯ ಸೇಬು ಬಿಟ್ಟಿರುವುದು.
ಉತ್ತಮ ಇಳುವರಿಯ ಸೇಬು ಬಿಟ್ಟಿರುವುದು.

‘ದಾಳಿಂಬೆ ಗಿಡಗಳಿಗಾಗಿ ತೆಗೆದ ಗುಂಡಿಗಳ ಒಳಗೆ ಕೆಂಪು ಮಣ್ಣು, ಕೊಟ್ಟಿಗೆ ಗೊಬ್ಬರ ಸಮ ಪ್ರಮಾಣದಲ್ಲಿ ಹಾಕಿ ಸಸಿ ನಾಟಿ ಮಾಡಿ  ಹಿಂಡಿ, ಬೇವಿನ ಹಿಂಡಿ ಗೊಬ್ಬರ ಹಾಕಿದೆವು. ನಿತ್ಯ ಒಂದು ತಾಸು ತುಂತುರು ನೀರು ಪೂರೈಸಿದೆವು. ತೋಟಕ್ಕೆ ಎರಡು ಟಿಪ್ಪರ್ ಕೆಂಪು ಮಣ್ಣು, ಆರು ಟ್ರ್ಯಾಕ್ಟರ್ ಲೋಡು ಕೊಟ್ಟಿಗೆ ಗೊಬ್ಬರ ಕೊಟ್ಟಿದ್ದೇವೆ. ಸಸಿಗಳು ನಾಟಿ ಮಾಡಿದ ಒಂಬತ್ತು ತಿಂಗಳಿಗೆ ಪ್ರೊನಿಂಗ್‌ ಮಾಡಿದೆವು

‘ವರ್ಷಕ್ಕೆ ಬೆಳೆ ಬಂದಿದೆ. ಬಿಸಿಲಿನ ತಾಪಕ್ಕೆ ಕಾಯಿ ಉದುರುವುದನ್ನು ಹೊರತು ಪಡಿಸಿದರೆ ಕೀಟಬಾಧೆ ಇದ್ದು, ನಿಯಂತ್ರಣಕ್ಕೆ ಬೇವಿನ ಎಣ್ಣೆ ಸಿಂಪಡಣೆ ಮಾಡಿದ್ದೇವೆ. ಯಾವುದೇ ರಾಸಾಯನಿಕ ಔಷಧಿ ಬಳಸಿಲ್ಲ’ ಎಂದು ವಿವರಿಸಿದರು.

ವಿಜಯಪುರ ಹೋಬಳಿ ಧರ್ಮಪುರ ಗ್ರಾಮದ ರೈತ ಮುಖೇಶ್ ಬಾಬು ಅವರು ಸಾವಯವ ಪದ್ಧತಿಯಲ್ಲಿ ಬೆಳೆದಿರುವ ಸೇಬಿನ ತೋಟ.
ವಿಜಯಪುರ ಹೋಬಳಿ ಧರ್ಮಪುರ ಗ್ರಾಮದ ರೈತ ಮುಖೇಶ್ ಬಾಬು ಅವರು ಸಾವಯವ ಪದ್ಧತಿಯಲ್ಲಿ ಬೆಳೆದಿರುವ ಸೇಬಿನ ತೋಟ.
ಆಶಕ್ತ ರೈತರಿಗೆ ಮಾರ್ಗದರ್ಶನ
‘ಈ ಭಾಗದಲ್ಲಿ ಸೇಬಿನ ಗಿಡ ಬೆಳೆಯುವುದಿಲ್ಲವೆಂದು ಅನೇಕರು ಹೇಳಿದ್ದರು. ಈ ಮಾತುನ್ನು ಸುಳ್ಳಾಗಿಸಬೇಕೆಂದು ಮಾಡಿದ ಪ್ರಯತ್ನಕ್ಕೆ ಫಲ ಕೊಟ್ಟಿದೆ. ಬೇರೆ ರೈತರು ಆಸಕ್ತಿ ತೋರಿದರೆ ಅವರಿಗೂ ಸಸಿ ತರಿಸಿಕೊಟ್ಟು ಮಾರ್ಗದರ್ಶನ ಮಾಡುತ್ತೇನೆ. ಹೆಚ್ಚು ರೈತರು ಬೆಳೆದರೆ ಮಾರುಕಟ್ಟೆ ಸುಲಭವಾಗಿ ಆಗುತ್ತದೆ’ ಎನ್ನುತ್ತಾರೆ ರೈತ ಮುಖೇಶ್ ಬಾಬು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT