ಬುಧವಾರ, ಮೇ 12, 2021
18 °C

ಸೂಲಿಬೆಲೆ: ನಿಯಮ ಮರೆತು ಮಾಂಸ ಖರೀದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸೂಲಿಬೆಲೆ: ಪಟ್ಟಣದಲ್ಲಿ ನಡೆಯುವ ವಾರದ ಸಂತೆಯನ್ನು ಸ್ಥಳೀಯ ಆಡಳಿತ ರದ್ದುಪಡಿಸಿದೆ. ಆದರೆ ವಾರದ ಸಂತೆಯ ದಿನ ಸೇರಿದಂತೆ ಜನರು ಕೊರೊನಾ ರೋಗವನ್ನು ಮರೆತು, ಸಂತೆ ಮೈದಾನದಲ್ಲಿರುವ ತರಕಾರಿ ಮತ್ತು ಮಾಂಸದ ಅಂಗಡಿಗಳ ಬಳಿ ಕೋವಿಡ್-19ರ ನಿಯಮಗಳನ್ನು ಮೀರಿ ಖರೀದಿ ನಡೆಸಿದರು.

ಬೆಳಿಗ್ಗೆ 6 ಗಂಟೆ ಆಗುತ್ತಿದ್ದಂತೆ ಸಂತೆ ಮೈದಾನದಲ್ಲಿರುವ ತರಕಾರಿ ಮತ್ತು ಮಾಂಸದ ಅಂಗಡಿಗಳ ಬಳಿ ಜನ ಜಮಾಯಿಸಿದರು. ವ್ಯಾಪಾರಿಗಳು ಮತ್ತು ಸಾರ್ವಜನಿಕರು ಯಾವುದೇ ರೀತಿಯ ವ್ಯಕ್ತಿಗತ ಅಂತರವಾಗಲಿ, ಸರ್ಕಾರ ರೂಪಿಸಿರುವ ನಿಯಮಗಳನ್ನಾಗಲಿ ಪಾಲಿಸದಿರುವುದು ಕಂಡು ಬಂತು. ಮೀತಿ ಮೀರಿ ಜನ ಸೇರುವುದನ್ನು ಮನಗಂಡ ಕಂದಾಯ, ಪಂಚಾಯಿತಿ ಮತ್ತು ಪೊಲೀಸ್ ಸಿಬ್ಬಂದಿ ಸಂತೆ ಮೈದಾನದಲ್ಲಿನ ಅಂಗಡಿ ಮುಂಗಟ್ಟುಗಳು ಮತ್ತು ಜನರನ್ನು ಚದುರಿಸಿದರು.

ಅಂಗಡಿಗಳ ನಡುವೆ ಅಂತರವಿಲ್ಲ: ಸಾರ್ವಜನಿಕರ ಹಿತದೃಷ್ಟಿಯಿಂದ ಅಂತರವನ್ನು ಕಾಪಾಡಿಕೊಂಡು ತರಕಾರಿ ಅಂಗಡಿಗಳನ್ನು ತೆರದು ಮಾರಾಟ ಮಾಡಲು ಸರ್ಕಾರ ಅನುವು ಮಾಡಿಕೊಟ್ಟಿದೆ. ಅಂಗಡಿಗಳ ನಡುವೆ ಅಂತರವಿಲ್ಲದೆ ಸ್ಥಾಪಿಸಿದ ಕಾರಣ ಜನಸಂದಣಿ ಏರ್ಪಡುತ್ತಿದೆ. ಸೂಲಿಬೆಲೆ ಸಂತೆ ಮೈದಾನ ವಿಶಾಲವಾಗಿದ್ದರೂ ಸಂತೆ ಆವರಣದ ಪ್ರವೇಶದ್ವಾರ ಮತ್ತು ಮುಖ್ಯ ರಸ್ತೆಯ ಬದಿಯಲ್ಲಿ ಅಂಗಡಿಗಳನ್ನು ವ್ಯಾಪರಸ್ಥರು ಸ್ಥಾಪಿಸುವುದರಿಂದ ಜನದಟ್ಟಣೆಯಾಗುತ್ತಿದೆ ಹಾಗೂ ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಲು ಸಮಸ್ಯೆಯಾಗುತ್ತಿದೆ.

ಸಂಬಂಧಪಟ್ಟ ಅಧಿಕಾರಿಗಳು ‘ಲಾಕ್ ಡೌನ್’ ಅವಧಿ ಮುಗಿಯುವವರೆಗೂ ಅಂಗಡಿ ಮುಂಗಟ್ಟುಗಳನ್ನು ಸಂತೆ ಮೈದಾನದ ಒಳಗೆ ಸ್ಥಾಪಿಸಬೇಕು ಹಾಗೂ ಅಂಗಡಿಗಳ ನಡುವೆ ಅಂತರ ಇರುವ ಹಾಗೆ ವ್ಯವಸ್ಥೆ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಈಗಾಗಲೇ ಕಂದಾಯ ಇಲಾಖೆ ಅಧಿಕಾರಿಗಳು ಕೋವಿಡ್-19 ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿದವರ ಮೇಲೆ ದೂರು ದಾಖಲಿಸಿದ್ದಾರೆ. ನಿಯಮ ಮೀರುತ್ತಿರುವ ಮತ್ತಷ್ಟು ವ್ಯಾಪಾರಿಗಳ ಮೇಲೆ ದೂರು ದಾಖಲಿಸಲಾಗುವುದು ಎಂದು ಸೂಲಿಬೆಲೆ ಪಿಡಿಒ ಸುಂದರ್ ತಿಳಿಸಿದರು.

ರಾಜಸ್ವ ನಿರೀಕ್ಷಕ ನ್ಯಾನಮೂರ್ತಿ, ಗ್ರಾಮ ಲೆಕ್ಕಾಧಿಕಾರಿ ರಫೀಖ್, ಗ್ರಾಮ ಪಂಚಾಯಿತಿ ಮತ್ತು ಪೊಲೀಸ್ ಸಿಬ್ಬಂದಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು