ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಬಳ್ಳಾಪುರ: ಮೆಚ್ಚುಗೆ ಪಡೆದ ಬಳ್ಳಿ ಆಲೂಗೆಡ್ಡೆ

ಬಯಲು ಸೀಮೆಯ ಮನೆ ತಾರಸಿ ತೋಟಗಳಲ್ಲಿ ಬೆಳೆದ ತರಕಾರಿ
Last Updated 21 ಸೆಪ್ಟೆಂಬರ್ 2020, 1:17 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಮನೆ ಅಂಗಳದ ಕೈ ತೋಟ, ತಾರಸಿ, ಹಿತ್ತಲಿನಿಂದ ಮೊದಲುಗೊಂಡು ರೈತರ ತೋಟಗಳಲ್ಲೂ ಬೆಳೆಯಬಹುದಾದ ಬಳ್ಳಿ ಆಲೂಗೆಡ್ಡೆ (ಬಟಾಟೆ) ತರಕಾರಿ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಗಿರಿಜನರ ಹಲವಾರು ಗೆಡ್ಡೆ ತರಕಾರಿಗಳಲ್ಲಿ ಒಂದಾಗಿದ್ದ ಬಳ್ಳಿ ಆಲೂಗೆಡ್ಡೆ ಈಗ ಬಯಲು ಸೀಮೆ ಜನರ ಮೆಚ್ಚುಗೆಪಡೆದುಕೊಂಡಿದ್ದೆ. ಇನ್ನು ಅಷ್ಟಾಗಿ ಮಾರುಕಟ್ಟೆಯಲ್ಲಿನ ತರಕಾರಿ ಅಂಗಡಿಗಳ ಬುಟ್ಟಿಯಲ್ಲಿ ಕಾಣುತ್ತಿಲ್ಲವಾದರೂ ಗೆಡ್ಡೆ ತರಕಾರಿ ಪ್ರಿಯರ ಅಡುಗೆ ಮನೆಯ ನೆಚ್ಚಿನ ಕಾಯಿಪಲ್ಯ.

ಬಳ್ಳಿ ಆಲೂಗೆಡ್ಡೆಯಿಂದ ಸಾಂಬಾರು, ಚಟ್ನಿ, ಸಾಗು, ಪಲ್ಯ ಸೇರಿದಂತೆ ಹಲವಾರು ತಿಂಡಿಗಳನ್ನು ತಯಾರಿಸಿದರೆ ರುಚಿಯಾಗಿರುತ್ತದೆ ಎನ್ನುವ ಗೃಹಿಣಿ ಶೋಭಾ, ‘ಕಾರ್ಬೋಹೈಡ್ರೇಟ್, ಪ್ರೊಟೀನ್‌ ಮತ್ತು ಕ್ಯಾಲ್ಷಿಯಂ ಸಮೃದ್ಧವಾದ ಬಳ್ಳಿ ಆಲೂಗೆಡ್ಡೆ ಸಕ್ಕರೆ ರೋಗಿಗಳಿಗೆ ಸೂಕ್ತ ಆಹಾರ. ಇತರ ತರಕಾರಿಗಳಂತೆ ನಿತ್ಯದ ಅಡುಗೆಯಲ್ಲಿ ಬಳ್ಳಿ ಆಲೂಗೆಡ್ಡೆಯನ್ನು ಬಳಸುವುದರಿಂದ ಮೊಣಕಾಲು ನೋವು ನಿವಾರಕ’ ಎನ್ನುತ್ತಾರೆ ಆರ್ಯುವೇದ ವೈದ್ಯರು. ಬಳ್ಳಿ ಆಲೂಗೆಡ್ಡೆಯಿಂದ ಕುರುಕುಲ ತಿಂಡಿ, ಸೂಪ್‌, ಕಾಳು ಪಲ್ಯವನ್ನು ಮಾಡಿದರೂ ತುಂಬಾ ರುಚಿಯಾಗಿರುತ್ತದೆ.

ಬೆಳೆಸುವ ವಿಧಾನ: ಮನೆ ಅಂಗಳ, ತಾರಸಿಯಲ್ಲಿ ಬೆಳೆಸುವುದಾದರೂ ಸುಮಾರು 50 ಕೆ.ಜಿ.ಯಷ್ಟು ಮಣ್ಣು ತುಂಬಲು ಸಾಧ್ಯವಾಗುವ ಪ್ಲಾಸ್ಟಿಕ್‌ ಚೀಲ ಅಥವಾ ಪ್ಲಾಸ್ಟಿಕ್‌ ಡ್ರಂನಲ್ಲಿ ಬೇವಿನ ಹಿಂಡಿ, ಹೊಂಗೆ ಹಿಂಡಿ, ಕೊಟ್ಟಿಗೆ ಗೊಬ್ಬರವನ್ನು ಮಣ್ಣಿನಲ್ಲಿ ಮಿಶ್ರಣ ಮಾಡಿ ಇದರಲ್ಲಿ ಒಂದು ಅಥವಾ ಎರಡು ಮೊಳಕೆಯೊಡೆದಿರುವ ಗೆಡ್ಡೆಯನ್ನು ಸುಮಾರು ಐದಾರು ಇಂಚಿನಷ್ಟು ಮಣ್ಣಿನಲ್ಲಿ ನೆಟ್ಟರೆ ಸುಮಾರು 15 ರಿಂದ 20 ದಿನಗಳಲ್ಲಿ ಬಳ್ಳಿ ಬೆಳೆಯಲು ಆರಂಭವಾಗುತ್ತದೆ. ಬಳ್ಳಿ ಹಬ್ಬಲು ಚಪ್ಪರವನ್ನು ಹಾಕಬಹುದು ಅಥವಾ ಬಳ್ಳಿ ಹಬ್ಬಲು ಗೋಡೆ ಮತ್ತಿತರ ಆಸರೆಯ ಸೌಲಭ್ಯ ಇರಬೇಕು. ಬಳ್ಳಿ ಆಲೂಗೆಡ್ಡೆಯ ಬೇರುಗಳು ಹೆಚ್ಚು ಆಳಕ್ಕೆ ಹೋಗುವುದಿಲ್ಲ. ತೋಟದಲ್ಲಿ ಬೆಳೆಯುವಾಗ ಸುಮಾರು ಎರಡು ಅಡಿಗಳಷ್ಟು ಆಳ, ಅಗಲದ ಗುಣಿಯನ್ನು ತೋಡಿ ಗೊಬ್ಬರ, ಹಿಂಡಿಗಳನ್ನು ಹಾಕಿ ಬೆಳೆಸಬಹುದಾಗಿದೆ. ಸಾಮಾನ್ಯವಾಗಿ ಡಿಸೆಂಬರ್‌ ನಂತರ ನಾಟಿ ಮಾಡಿದರೆ ಗೆಡ್ಡೆಗಳು ಚೆನ್ನಾಗಿ ಮೊಳಕೆಯೊಡೆಯುತ್ತವೆ. ಸುಮಾರು ಎರಡೂವರೆ ತಿಂಗಳ ನಂತರ ಬಳ್ಳಿ ಸಮೃದ್ಧವಾಗಿ ಬೆಳೆದು ಕಾಯಿಗಳು ಬಿಡಲು ಆರಂಭವಾಗುತ್ತವೆ. ಬಳ್ಳಿ ಚನ್ನಾಗಿ ಹಬ್ಬಿದ ನಂತರ ಎಲೆಗೆ ಒಂದರಂತೆ ಕಾಯಿಗಳು ಬಿಡುತ್ತವೆ.

ಬಳ್ಳಿ ಆಲೂಗೆಡ್ಡೆ ಸಸಿಯನ್ನು ಮನೆ ಅಂಗಳಲ್ಲಿ ಬೆಳೆಸಿ ಕಾಂಪೌಂಡ್‌ ಗೋಡೆಗೆ ಹಬ್ಬಿಸಿದರೆ ಹಚ್ಚ ಹಸಿರಿನಿಂದ ಕೂಡಿರುವ ದೊಡ್ಡ ಗಾತ್ರದ ಎಲೆಗಳನ್ನು ನೋಡಲು ಸಹ ಕಣ್ಣಿಗೆ ಹಬ್ಬವನ್ನು ಉಂಟು ಮಾಡುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT