ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಂತ್ರೋಪಕರಣಗಳ ಕೊರತೆ: ಪ್ರಯೋಜನವಾಗದ ಸಿಂಗಪುರ ಪ್ರವಾಸ

Last Updated 28 ಜುಲೈ 2020, 3:51 IST
ಅಕ್ಷರ ಗಾತ್ರ

ವಿಜಯಪುರ:ಸ್ವಚ್ಛತೆ, ಅದರ ತಂತ್ರಜ್ಞಾನದ ಹೆಚ್ಚಿನ ಅಧ್ಯಯನಕ್ಕಾಗಿ ಪೌರಕಾರ್ಮಿಕರನ್ನು ರಾಜ್ಯ ಸರ್ಕಾರ ವಿದೇಶ ಪ್ರವಾಸಕ್ಕೆ ಕಳುಹಿಸಿತ್ತಾದರೂ ಅಲ್ಲಿ ಕಲಿತದ್ದು ಇಲ್ಲಿಅನುಷ್ಠಾನವಾಗಲಿಲ್ಲ.

‘ರಾಜ್ಯ ಸರ್ಕಾರ ಕಾರ್ಮಿಕರಿಗೆತಲಾ ₹ 75 ಸಾವಿರವನ್ನು ಪ್ರವಾಸಕ್ಕೆ ಖರ್ಚು ಮಾಡಿತ್ತು. ಕಾರ್ಮಿಕರ ಖರ್ಚಿಗೆ ₹ 5 ಸಾವಿರ ನೀಡಿತ್ತು. ಪ್ರವಾಸ ಮುಗಿದು ಮೂರು ವರ್ಷ ಕಳೆದರೂ ಅಲ್ಲಿ ಕಲಿತ ಅಂಶಗಳು ಇಲ್ಲಿ ಬಳಕೆಯಾಗಿಲ್ಲ’ ಎಂದು ಮುಖಂಡ ಕೋಕಾಕೋಲಾ ಮಂಜುನಾಥ್‌ ಬೇಸರ ವ್ಯಕ್ತಪಡಿಸಿದರು.

ಇಂತಹ ಪ್ರವಾಸಗಳಿಗೆ ಅವಕಾಶ ಮಾಡಿಕೊಡುವುದರಿಂದ ಪೌರಕಾರ್ಮಿಕರಲ್ಲಿ ಹೊಸ ತಿಳಿವಳಿಕೆ ಮತ್ತು ಅರಿವು ಮೂಡಲು ಸಾಧ್ಯವಾಗುತ್ತದೆ. ಇದರಿಂದ ಮಾನವ ಶ್ರಮ ಕಡಿಮೆಯಾಗುತ್ತದೆ. ಸಿಂಗಪುರದಲ್ಲಿ ಜನರಿಗೆ ಸ್ವಚ್ಛತೆ ಬಗ್ಗೆ ಹೆಚ್ಚಿನ ಅರಿವಿದೆ. ಅಲ್ಲಿನ ತಾಂತ್ರಿಕತೆ ಅರಿಯಲಿ ಎನ್ನುವುದು ಸರ್ಕಾರದ ಮೂಲ ಉದ್ದೇಶವಾಗಿತ್ತು.

ಮಾನವ ರಹಿತವಾಗಿ ಯಂತ್ರಗಳಿಂದಲೇ ಮ್ಯಾನ್‌ಹೋಲ್‌ ಸ್ವಚ್ಛಗೊಳಿಸುವುದು, ಪೌರ ಕಾರ್ಮಿಕರು ಮ್ಯಾನ್‌ಹೋಲ್‌ಗಳಲ್ಲಿ ಇಳಿಯದಂತೆ ಜಾಗೃತಿ ಮೂಡಿಸುವುದು, ಘನತ್ಯಾಜ್ಯ ನಿರ್ವಹಣೆ, ಶುಚಿತ್ವ ಹಾಗೂ ನೈರ್ಮಲ್ಯ ಕಾಪಾಡುವುದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ, ರೂಪಿಸಿದ್ದ ಪೌರಕಾರ್ಮಿಕರ ಅಧ್ಯಯನ ಪ್ರವಾಸ ದೇಶದಲ್ಲೇ ಮಾದರಿ ಕಾರ್ಯಕ್ರಮ ಎಂದೆಲ್ಲಾ ಪ್ರಚಾರ ಪಡೆದುಕೊಂಡಿತ್ತು.

‘ಗಾರ್ಬೇಜ್ ‌ಡಂಪಿಂಗ್‌, ಛೇಂಬರ್‌ ಕ್ಲೀನಿಂಗ್‌, ಕಸವಿಂಗಡಣೆ, ಶೌಚಾಲಯಗಳ ಸ್ವಚ್ಛತೆ ಸೇರಿದಂತೆ ಹಲವಾರು ವಿಭಾಗಗಳಲ್ಲಿ ಪೌರಕಾರ್ಮಿಕರು ಸಿಂಗಪುರದಲ್ಲಿ ಅಧ್ಯಯನ ನಡೆಸಿ ವಾಪಸ್ ಬಂದಿದ್ದಾರೆ. ಅಧ್ಯಯನದ ತಿಳಿವಳಿಕೆಗೆ ತಕ್ಕಂತೆ ಇಲ್ಲಿ ಯಂತ್ರೋಪಕರಣಗಳನ್ನು ಸ್ಥಳೀಯಾಡಳಿತ ಒದಗಿಸಿಲ್ಲ’ ಎಂಬುದು ಕಾರ್ಮಿಕರ ಅಳಲು.

ಪೌರಕಾರ್ಮಿಕ ಮುನಿಯಪ್ಪ ಮಾತನಾಡಿ, ‘ಸಿಂಗಾಪುರದಲ್ಲಿ ಬಹುತೇಕ ಎಲ್ಲವನ್ನೂ ಯಂತ್ರಗಳೇ ಮಾಡುತ್ತವೆ. ಅಲ್ಲಿನ ಜನರು, ಆ ದೇಶದ ಕಾನೂನನ್ನು ಚೆನ್ನಾಗಿ ಪಾಲಿಸುತ್ತಾರೆ. ಕಸವನ್ನು ಎಲ್ಲೆಂದರಲ್ಲಿ ಎಸೆಯುವುದಿಲ್ಲ. ಕಂಟೇನರ್‌ಗಳಲ್ಲೇ ಹಾಕುತ್ತಾರೆ. ಕಸವನ್ನು ಅಚ್ಚುಕಟ್ಟಾಗಿ ವಿಲೇವಾರಿ ಮಾಡುತ್ತಾರೆ. ನಮ್ಮಲ್ಲಿ ಜನರು ಸ್ಪಂದಿಸುವುದಿಲ್ಲ. ಪ್ರಾಯೋಗಿಕವಾಗಿ ಗಾಂಧಿಚೌಕದಲ್ಲಿ ಅಂಗಡಿಗಳ ಮುಂದೆ ಕಂಟೈನರ್‌ಗಳನ್ನು ಇಟ್ಟು ಕಸ ಅದರಲ್ಲಿ ಹಾಕುವಂತೆ ತಿಳಿಸಿದ್ದೆವು. ಯಾರೂ ಹಾಕುತ್ತಿಲ್ಲ. ಎಲ್ಲಾ ತೆಗೆದುಕೊಂಡು ಬಂದು ರಸ್ತೆಗಳ ಇಕ್ಕೆಲಗಳಲ್ಲೆ ಸುರಿಯುತ್ತಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ಪೌರಕಾರ್ಮಿಕ ಸೀನಪ್ಪ ಮಾತನಾಡಿ, ‘ಸಿಂಗಾಪುರದಲ್ಲಿ ಒಳಚರಂಡಿಯಲ್ಲಿ ನೀರು ಸರಾಗವಾಗಿ ಹರಿಯುತ್ತವೆ. ಅಲ್ಲಲ್ಲಿ ಜಾಲರಿಗಳನ್ನು ಅಳವಡಿಸಿರುವುದರಿಂದ ಕಸವೆಲ್ಲಾ ಸಿಕ್ಕಿಕೊಳ್ಳುತ್ತದೆ. ನೀರು ಮಾತ್ರ ಮುಂದೆ ಹರಿಯುತ್ತದೆ. ಒಂದೇ ಕಡೆಯಲ್ಲಿ ಕಸ ಶೇಖರಣೆಯಾಗುವುದರಿಂದ ವಿಲೇವಾರಿ ಮಾಡಲಿಕ್ಕೂ ಹೆಚ್ಚು ಮಂದಿ ಬೇಕಾಗಿಲ್ಲ. ಯಂತ್ರಗಳ ಸಹಾಯದಿಂದಲೇ ಆಗಿಂದ್ದಾಗ್ಗೆ ತೆರವುಗೊಳಿಸಬಹುದಾಗಿದೆ. ನಮ್ಮ ಪ್ರವಾಸದ ಸಮಯದಲ್ಲಿ ನಾವು ನೋಡಿದ್ದೆಲ್ಲವನ್ನೂ ನಮಗೆ ಅಗತ್ಯವಾಗಿರುವ ಯಂತ್ರೋಪಕರಣಗಳ ಬಗ್ಗೆ ಸಭೆಯಲ್ಲಿ ಸಚಿವರಿಗೇ ನೇರವಾಗಿ ತಿಳಿಸಿದ್ದೆವು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT