ಗುರುವಾರ , ನವೆಂಬರ್ 21, 2019
21 °C
ಜಾತಕ ಪಕ್ಷಿಯಂತೆ ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಸಿಗುವುದೇ ಪರಿಹಾರ ?

ಅಂಕಪಟ್ಟಿ ವಿಳಂಬ: ವಿದ್ಯಾರ್ಥಿಗಳ ಅಲೆದಾಟ

Published:
Updated:
Prajavani

ದೇವನಹಳ್ಳಿ: ಪದವಿ ವಿದ್ಯಾರ್ಥಿಗಳ ಅಂತಿಮ ಆರನೇ ಸೆಮಿಸ್ಟರ್ ಪರೀಕ್ಷಾ ಫಲಿತಾಂಶ ಪ್ರಕಟವಾಗಿ ಆರು ತಿಂಗಳು ಕಳೆದರೂ ಅಂಕ ಪಟ್ಟಿಗಾಗಿ ವಿದ್ಯಾರ್ಥಿಗಳು ಅಲೆದಾಡುವಂತಾಗಿದೆ.

ಬೆಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿ ಮೊಟಕುಗೊಳಿಸಿ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ ಮತ್ತು ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಎರಡು ಭಾಗ ಮಾಡಲಾಗಿದೆ. ಆಡಳಿತಾತ್ಮಕವಾಗಿ ಸುಧಾರಣೆ ತರಲು ವಿಶ್ವವಿದ್ಯಾಲಯ ಸಿಂಡಿಕೇಟ್ ಸಭೆಯಲ್ಲಿ ನಿರ್ಣಯ ಕೈಗೊಂಡು ಇಬ್ಭಾಗ ಮಾಡಲಾಗಿದೆ. 

ಈ ನಿಟ್ಟಿನಲ್ಲಿ ಉಪಕುಲಪತಿ ಯಾವುದೇ ಸೂಕ್ತ ಕ್ರಮಕೈಗೊಳ್ಳದೆ ಇರುವುದರಿಂದ ಅಂಕಪಟ್ಟಿ ವಿಳಂಬಕ್ಕೆ ಕಾರಣವಾಗಿದೆ ಎಂಬುದು ವಿದ್ಯಾರ್ಥಿಗಳ ಆರೋಪ. ಬೆಂಗಳೂರು ಕೇಂದ್ರ ಮತ್ತು ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ 700ಕ್ಕೂ ಹೆಚ್ಚು ಪ್ರಥಮದರ್ಜೆ ಕಾಲೇಜುಗಳಿವೆ. ಸಾವಿರಾರು ವಿದ್ಯಾರ್ಥಿಗಳು ಬಿ.ಎ, ಬಿ.ಕಾಂ, ಬಿ.ಎಸ್ಸಿ ವಿಷಯದಲ್ಲಿ ಪರೀಕ್ಷೆ ಬರೆದಿದ್ದಾರೆ. ಶೇ40ರಷ್ಟು ಮಾತ್ರ ಅಂಕಪಟ್ಟಿ ಕಾಲೇಜುಗಳಿಗೆ ಬಂದಿವೆ. ಉಳಿದ ಶೇ60 ವಿದ್ಯಾರ್ಥಿಗಳು ಅಂಕಪಟ್ಟಿಗಾಗಿ ಕಾಲೇಜುಗಳಿಗೆ ಅಲೆಯುತ್ತಿದ್ದು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ ಎಂದು ಹಳೆ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳ ಆರೋಪವಾಗಿದೆ.

ಪದವಿ ಮುಗಿಸಿ ಉನ್ನತ ವ್ಯಾಸಂಗಕ್ಕೆ (ಸ್ನಾತಕೊತ್ತರ ಪದವಿ) ದಾಖಲಾಗಲು ಅಂಕಪಟ್ಟಿ ಮಾನದಂಡ. ಉನ್ನತ ವ್ಯಾಸಂಗಕ್ಕೆ ತೆರಲು ಸಾಧ್ಯವಿಲ್ಲದವರು ಖಾಸಗಿ ಕಂಪನಿ ಇತರ ಖಾಸಗಿ ವಾಣಿಜ್ಯ ವಹಿವಾಟುವಿನಲ್ಲಿ ಉದ್ಯೋಗ ಬಯಸಿ ಆರ್ಜಿ ಸಲ್ಲಿಸಲು ಪರಿಪೂರ್ಣ ಮೂರು ವರ್ಷಗಳ ಆರು ಸೆಮಿಸ್ಟರ್ ಅಂಕಪಟ್ಟಿ ಅನಿವಾರ್ಯ. ಆದರೆ, ವಿಶ್ವ ವಿದ್ಯಾಲಯದ ಆಡಳಿತ್ಮಾಕ ಹಿರಿಯ ಅಧಿಕಾರಿಗಳಿಗೆ ಇದೆಲ್ಲ ಗೊತ್ತಿದ್ದರೂ ಅಂಕಪಟ್ಟಿ ತ್ವರಿತವಾಗಿ ನೀಡದೆ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂಬುದಾಗಿ ವಿದ್ಯಾರ್ಥಿಗಳು ಅಳಲು.

ಯಾವುದೇ ಅಕ್ರಮಕ್ಕೆ ಅವಕಾಶ ನೀಡದಂತೆ ವಿಶ್ವವಿದ್ಯಾಲಯದ ಹಿರಿಯ ಅಧಿಕಾರಿಗಳು ಎರಡು ವರ್ಷಗಳ ಹಿಂದೆ ಯುನಿಟಿಯರ್ ಖಾಸಗಿ ಕಂಪನಿಗೆ ಗುತ್ತಿಗೆ ನೀಡಿ ಪದವಿ ವಿದ್ಯಾರ್ಥಿಗಳ ಸಮಗ್ರ ಮಾಹಿತಿ ಮತ್ತು ವಾರ್ಷಿಕವಾಗಿ ನಡೆಯುವ ಸೆಮಿಸ್ಟರ್‌ಗಳ ಪರೀಕ್ಷಾ ಅಂಕಗಳನ್ನು ಕ್ರೋಡೀಕರಣಗೊಳಿಸಿ ಅಂಕಪಟ್ಟಿ ನೀಡುವ ವ್ಯವಸ್ಥೆ ಮಾಡಿಕೊಂಡಿತ್ತು.

ಪ್ರಸ್ತುತ ಖಾಸಗಿ ಕಂಪನಿ ಗುತ್ತಿಗೆ ಅವಧಿ ಮುಗಿದಿದ್ದು ವಿಶ್ವವಿದ್ಯಾಲಯ ಗುತ್ತಿಗೆ ಕರಾರಿನಂತೆ ಹಣ ಪಾವತಿಸಿಲ್ಲ.  ಇದಕ್ಕಾಗಿ ಖಾಸಗಿ ಕಂಪನಿ ಡಾಟಾಬೆಸ್ ಸಾಪ್ಟ್‌ವೇರ್ ನೀಡಿಲ್ಲ ಎಂದು ವಿಶ್ವಾವಿದ್ಯಾಲಯದ ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

‌ಕಾಲೇಜುಗಳಲ್ಲಿ ವ್ಯಾಸಂಗ ಮಾಡಿ ಅಂಕಪಟ್ಟಿಗಾಗಿ ಸಾವಿರಾರು ವಿದ್ಯಾರ್ಥಿಗಳು ಕಾಯುತ್ತಿದ್ದಾರೆ. ಉನ್ನತ ವ್ಯಾಸಂಗದ ನಿರೀಕ್ಷೆಯಲ್ಲಿರುವ ವಿದ್ಯಾರ್ಥಿಗಳಿಗೆ ಕುಲಪತಿ ತ್ವರಿತವಾಗಿ ಅಂಕಪಟ್ಟಿ ನೀಡಲು ಅವಕಾಶ ಮಾಡಬೇಕು ಎನ್ನುತ್ತಾರೆ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಜಿ.ಸುನೀಲ್. 

ವಿಶ್ವವಿದ್ಯಾಲಯ ಸುಧಾರಣೆಯತ್ತ ಹೆಚ್ಚು ಒತ್ತು ನೀಡಬೇಕು. ಇತರ ವಿಶ್ವವಿದ್ಯಾಲಯಗಳ ಮಾದರಿ ಅನುಸರಿಸಿದರೆ ಒಳ್ಳೆಯದು ಎಂದು ಹೇಳುತ್ತಾರೆ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಮುತ್ತುರಾಜ್.

ಪ್ರತಿಕ್ರಿಯಿಸಿ (+)