ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನು ಕ್ರಮ ಕೈಗೊಳ್ಳಲು ಆಗ್ರಹ

ನಗರ ಪೊಲೀಸ್‌ ಠಾಣೆ ಸಬ್‌ಇನ್‌ಸ್ಪೆಕ್ಟರ್‌ ಸೋಮಶೇಖರ್‌ ವಿರುದ್ದ ತಿರುಗಿಬಿದ್ದ ಮುಖಂಡರು
Last Updated 8 ಜುಲೈ 2020, 8:57 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ನಗರ ಪೊಲೀಸ್‌ ಠಾಣೆ ಸಬ್‌ಇನ್‌ಸ್ಪೆಕ್ಟರ್‌ ಸೋಮಶೇಖರ್ ಅವರು ನಾಗರಿಕರೊಂದಿಗೆ ಅನಾಗರಿಕವಾಗಿ ವರ್ತಿಸುತ್ತಿದ್ದಾರೆ. ಜನರಿಗೆ ಕಿರುಕುಳ ನೀಡುತ್ತಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಲು ಮಂಗಳವಾರ ನಗರದ ಕನ್ನಡ ಜಾಗೃತ ಭವನದಲ್ಲಿ ನಡೆದ ವಿವಿಧ ಸಂಘಟನೆ ಹಾಗೂ ರಾಜಕೀಯ ಪಕ್ಷಗಳ ಮುಖಂಡರ ಸಭೆಯಲ್ಲಿ ನಿರ್ಧರಿಸಲಾಯಿತು.

ನಗರ ಪೊಲೀಸ್‌ ಠಾಣೆಗೆ ಸಬ್‌ಇನ್‌ಸ್ಪೆಕ್ಟರ್‌ ಸೋಮಶೇಖರ್‌ ಅವರು ನಾಗರಿಕರ ಮೇಲೆ ಹಲ್ಲೆ ಮಾಡುತ್ತಿದ್ದಾರೆ. ಬೂಟು ಕಾಲಿನಿಂದ ಒದೆಯುತ್ತಾರೆ. ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಆರ್‌.ಚಂದ್ರತೇಜಸ್ವಿ, ಜೆಡಿಎಸ್‌ ಮುಖಂಡರಾದ ತ.ನ. ಪ್ರಭುದೇವ್, ಆರ್‌.ಕೆಂಪರಾಜು, ಕನ್ನಡ ಪಕ್ಷದ ತಾಲ್ಲೂಕು ಅಧ್ಯಕ್ಷ ಸಂಜೀವ್ ‌ನಾಯ್ಕ್‌, ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಹನುಮೇಗೌಡ, ಡಾ.ರಾಜ್‍ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸು.ನರಸಿಂಹಮೂರ್ತಿ ದೂರಿದರು.

‘ಇತ್ತೀಚೆಗೆ ಕ್ವಾರಂಟೈನ್ ವಿಷಯವಾಗಿ ತಾಲ್ಲೂಕು ಕಚೇರಿ ಮುಂದೆ ವಿವಿಧ ಸಂಘಟನೆಗಳು, ನಾಗರಿಕರು ರಾಜಕೀಯ ಪಕ್ಷಗಳ ಮುಖಂಡರೆಲ್ಲರೂ ಸೇರಿ ತಹಶೀಲ್ದಾರ್‌ ಅವರಿಗೆ ಮನವಿ ಕೊಡಲು ಹೋದ ಸಂದರ್ಭದಲ್ಲಿ ಸಬ್‌ಇನ್‌ಸ್ಪೆಕ್ಟರ್‌ ಇದ್ದಕ್ಕಿದ್ದಂತೆ ಬಂದು ಗಲಾಟೆ ಮಾಡಿದರು. ಕೆಟ್ಟ ಭಾಷೆ ಬಳಸಿ, ಪೊಲೀಸ್ ಸಮವಸ್ತ್ರವನ್ನೇ ಬಿಚ್ಚಿ ಟೋಪಿ ಎಸೆದು, ಜೀಪಿನ ಮೇಲೆ ಹತ್ತಿ ಸಿನಿಮೀಯ ರೀತಿಯಲ್ಲಿ ಮಾತನಾಡಿದರು’ ಎಂಬ ಆರೋಪ ಸಭೆಯಲ್ಲಿ ಕೇಳಿಬಂತು.

‘ಇವರ ವಿರುದ್ಧ ವಿಚಾರಣೆ ಮಾಡಿ ಕಾನೂನು ರೀತಿಯಲ್ಲಿ ಕ್ರಮ ಕೈಗೊಂಡು, ಇವರನ್ನು ವರ್ಗಾವಣೆ ಮಾಡಬೇಕು. ನಗರದ ನಾಗರಿಕರಿಗೆ ಮಾನಸಿಕ ಯಾತನೆ, ಕಿರುಕುಳದಿಂದ ಬಿಡುಗಡೆಗೊಳಿಸಬೇಕು’ ಎಂಬ ಆಗ್ರಹಕ್ಕೆ ಸಭೆಯಲ್ಲಿ ಬೆಂಬಲ ವ್ಯಕ್ತವಾಯಿತು.

ಶಿವರಾಜ್‍ಕುಮಾರ್ ಕನ್ನಡ ಸೇನಾ ಸಮಿತಿ ಅಧ್ಯಕ್ಷ ಜಿ.ಆರ್.ರಮೇಶ್, ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಂಜಪ್ಪ, ಕರ್ನಾಟಕ ರಕ್ಷಣಾ ವೇದಿಕೆ ಹನುಮಂತರೆಡ್ಡಿ, ಕಾರ್ಯನಿರತ ಪತ್ರಕರ್ತ ಸಂಘದ ಎಂ.ದೇವರಾಜ್, ವಿದ್ಯುತ್ ಚಾಲಿತ ನೇಕಾರರ ಕೂಲಿ ಕಾರ್ಮಿಕರ ಸಂಘದ ಅಧ್ಯಕ್ಷ ಅರುಣ್‌ಕುಮಾರ್, ಅಖಿಲ ಭಾರತ ವಕೀಲರ ಸಂಘದ ಎಸ್. ರುದ್ರಾರಾಧ್ಯ, ಸಿಐಟಿಯು ತಾಲ್ಲೂಕು ಅಧ್ಯಕ್ಷ ರೇಣುಕಾರಾಧ್ಯ, ದಲಿತ ಸಂಘರ್ಷ ಸಮಿತಿ ಮುಖಂಡ ರಾಜುಸಣ್ಣಕ್ಕಿ, ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ತಾಲ್ಲೂಕು ಅಧ್ಯಕ್ಷ ಆರಾಧ್ಯ, ಕನ್ನಡ ಜಾಗೃತಿ ವೇದಿಕೆಯ ಎಚ್.ಎಸ್. ವೆಂಕಟೇಶ್, ಕರ್ನಾಟಕ ರಕ್ಷಣ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಬಷೀರ್, ಪು.ಮಹೇಶ್ ಇದ್ದರು.

ರೌಡಿಶೀಟರ್‌ ಕೇಸ್‌ ದಾಖಲಿಸುತ್ತೇನೆ

ಮಗ್ಗದ ಕಾರ್ಮಿಕರು ತಮ್ಮ ಬೇಡಿಕೆಗಳ ಈಡೇರಿಕೆ ಅವರುಗಳ ಮನೆಗಳ ಮುಂದೆಯೇ ಪ್ಲೇಕಾರ್ಡ್ ಹಿಡಿದು ಪ್ರತಿಭಟಿಸುತ್ತಿದ್ದವರನ್ನು ಠಾಣೆಗೆ ಕರೆದೊಯ್ದು ಅಕ್ರಮವಾಗಿಗಂಟೆಗಟ್ಟಲೆ ಬಂದಿಸಿಟ್ಟು ಮಾನಸಿಕ ಹಿಂಸೆ ನೀಡಿದ್ದಾರೆ. ರೌಡಿಶೀಟರ್ ಕೇಸ್ ದಾಖಲಿಸುವುದಾಗಿ ಹೆದರಿಸಿದ್ದಾರೆ. ಇವು ಬೆಳಕಿಗೆ ಬಂದ ಘಟನೆಗಳು. ಬೆಳಕಿಗೆ ಬಾರದವು ಎಷ್ಟಿದ್ದಾವೊ ಎಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಇನ್ಸ್‌ಪೆಕ್ಟರ್‌ ಸ್ಪಷ್ಟನೆ

ಕೊರೊನಾ ವೈರಸ್‌ ಸೋಂಕು ಹರಡುವುದನ್ನು ತಡೆಗಟ್ಟುವಲ್ಲಿ ಸರ್ಕಾರದ ಆದೇಶದ ವ್ಯಾಪ್ತಿಯಲ್ಲಿಯೇ ಕೆಲಸ ಮಾಡಿದ್ದೇನೆ. ಕಂಟೈನ್‌ಮೆಂಟ್‌ ಪ್ರದೇಶಗಳಲ್ಲಿ ಕಡ್ಡಿಗಳನ್ನು ಅಡ್ಡಗಟ್ಟಿ ಜನ ಸಂಚಾರವನ್ನು ನಿರ್ಬಂಧಿಸಿದ್ದೇ ತಪ್ಪು ಎನ್ನುವಂತೆ ಮಾತನಾಡಿದವರ ವಿರುದ್ಧವೂ ಪೊಲೀಸರು ಜೋರು ಮಾಡದೇ ಇದ್ದರೆ ಕೆಲಸ ಮಾಡುವುದಾದರೂ ಹೇಗೆ? ಮಂಗಳವಾರ ಸಂಜೆ ಸಂಘಟನೆ ಮುಖಂಡರ ಸಭೆಯನ್ನು ಕರೆದು ನಾವು ಮಾಡುತ್ತಿರುವ ಕೆಲಸದ ರೀತಿಯ ಬಗ್ಗೆ ವಿವರಣೆ ನೀಡಿದ್ದೇನೆ. ಯಾರೊಂದಿಗೂ ಕಾನೂನು ವ್ಯಾಪ್ತಿ ಮೀರಿ ನಡೆದುಕೊಂಡಿಲ್ಲ.

-ಸೋಮಶೇಖರ್‌, ಸಬ್‌ಇನ್‌ಸ್ಪೆಕ್ಟರ್‌ ನಗರ ಪೊಲೀಸ್‌ ಠಾಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT