ಸೋಮವಾರ, ಆಗಸ್ಟ್ 15, 2022
24 °C
ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನ ಸೆ.10ರಂದು

ಬೆಳಗಾವಿ: 3 ವರ್ಷಗಳಲ್ಲಿ 1,621 ಮಂದಿ ಆತ್ಮಹತ್ಯೆ!

ಎಂ. ಮಹೇಶ Updated:

ಅಕ್ಷರ ಗಾತ್ರ : | |

ಸಾಂದರ್ಭಿಕ ಚಿತ್ರ

ಬೆಳಗಾವಿ: ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ.

2017ರ ಏಪ್ರಿಲ್‌ನಿಂದ ಈ ಸಾಲಿನ ಮಾರ್ಚ್‌ವರೆಗೆ 1,621 ಮಂದಿ ಸಾವಿನ ಮನೆಯ ಕದ ತಟ್ಟಿದ್ದಾರೆ. ಇವರಲ್ಲಿ ಪುರುಷರ ಸಂಖ್ಯೆ ಜಾಸ್ತಿ (895) ಇದ್ದಾರೆ. ಮಹಿಳೆಯರ ಸಂಖ್ಯೆ 726 ಆಗಿದೆ.

ರಾಷ್ಟ್ರೀಯ ಆರೋಗ್ಯ ಅಭಿಯಾನದಲ್ಲಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮೂಲಕ ಸಂಗ್ರಹಿಸಿರುವ ಅಂಕಿ–ಅಂಶದ ಪ್ರಕಾರ, ಎರಡು ವರ್ಷಗಳಲ್ಲಿ ಪ್ರಕರಣಗಳ ಪ್ರಮಾಣ ಹೆಚ್ಚೇ ಇದೆ. ಅಧಿಕೃತವಾಗಿ ವರದಿಯಾದ ಪ್ರಕರಣಗಳಿವು.

2027ನೇ ಸಾಲಿನಲ್ಲಿ 167, 2018–19ರಲ್ಲಿ 681 ಹಾಗೂ 2019–20ನೇ ಸಾಲಿನಲ್ಲಿ 773 ಮಂದಿ ಆತ್ಮಹತ್ಯೆ ಮಾಡಿಕೊಂಡಿರುವುದು ವರದಿಯಾಗಿದೆ. ಇದರಲ್ಲಿ ಯುವಕ, ಯುವತಿಯರು, ರೈತರು, ವಿದ್ಯಾರ್ಥಿಗಳು ಸೇರಿದಂತೆ ಹಲವು ವರ್ಗದವರು ಇದ್ದಾರೆ. ನೇಣು ಹಾಕಿಕೊಂಡು ಅಥವಾ ವಿಷ ಸೇವಿಸಿ ಅಥವಾ ನೀರಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ ಎಂಬ ಮಾಹಿತಿ ದೊರೆತಿದೆ.

ಕೋವಿಡ್–19 ಸೃಷ್ಟಿಸಿದ ತಲ್ಲಣ ಅಥವಾ ಭಯದಿಂದಾಗಿ ನಾಲ್ವರು ಆತ್ಮಹತ್ಯೆಯ ದಾರಿ ತುಳಿದದ್ದು ವರದಿಯಾಗಿದೆ.

ಜಾಗೃತಿ ಮೂಡಿಸಲಾಗುತ್ತಿದೆ: ‘ಆತ್ಮಹತ್ಯೆಯಿಂದ ಯಾವುದೇ ಸಮಸ್ಯೆಗಳೂ ಬಗೆಹರಿಯುವುದಿಲ್ಲ. ಕುಟುಂಬದವರಿಗೆ ತೊಂದರೆ ಹೆಚ್ಚಾಗುತ್ತದೆ. ಇದರ ಬಗ್ಗೆ ಜಿಲ್ಲೆಯಾದ್ಯಂತ ವ್ಯಾಪಕ ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ಜಿಲ್ಲಾ ಮಾನಸಿಕ ಕಾರ್ಯಕ್ರಮ ಅಧಿಕಾರಿ ಡಾ.ಚಾಂದನಿ ದೇವಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮನೋಚೈತನ್ಯ ವೃದ್ಧಿಗಾಗಿ ಎಲ್ಲ ತಾಲ್ಲೂಕು ಆಸ್ಪತ್ರೆಗಳಲ್ಲೂ ನಿಗದಿತ ದಿನಗಳಂದು ‘ಮನೋಚೈತನ್ಯ’ ಕ್ಲಿನಿಕ್‌ಗಳನ್ನು ನಡೆಸುತ್ತಿದ್ದೇವೆ. ಅಗತ್ಯ ಇರುವವರಿಗೆ ಆಪ್ತಸಮಾಲೋಚನೆಯ ನಡೆಸಿ, ಧೈರ್ಯ ತುಂಬುವ ಕಾರ್ಯವನ್ನೂ ಮಾಡುತ್ತಿದ್ದೇವೆ. ನಮ್ಮೊಂದಿಗೆ ಸಮಾಜವೂ ಕೈಜೋಡಿಸಿದರೆ ಆ‌ತ್ಮಹತ್ಯೆ ಪ್ರಕರಣಗಳನ್ನು ತಡೆಗಟ್ಟುವುದಕ್ಕೆ ಸಾಧ್ಯವಾಗುತ್ತದೆ’ ಎನ್ನುತ್ತಾರೆ ಅವರು.

‘ಈ ಬಾರಿ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನವನ್ನು ಗುರುವಾರ (ಸೆ.10) ರಾಮದುರ್ಗದಲ್ಲಿ ಆಯೋಜಿಸಲಾಗಿದೆ. ಆಶಾ ಕಾರ್ಯಕರ್ತೆಯರಿಗೆ ಮಾಹಿತಿ ನೀಡಿ, ಅವರ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಲಾಗುವುದು. ಇದು ನಿರಂತರ ಪ್ರಕ್ರಿಯೆಯಾಗಿದೆ’ ಎಂದು ಹೇಳಿದರು.

ತರಬೇತಿ ಕಾರ್ಯಕ್ರಮ: ‘ಖಿನ್ನತೆಯಿಂದ ಮಾನಸಿಕ ಕಾಯಿಲೆ ಬರುತ್ತದೆ. ದೀರ್ಘ ಕಾಲದಿಂದ ದೈಹಿಕ ಸಮಸ್ಯೆಗಳಿಂದ ಬಳಲುತ್ತಿರುವವರು ಹಾಗೂ ವ್ಯಸನಗಳಿಗೆ ದಾಸರಾದವರು ಆತ್ಮಹತ್ಯೆಯ ಯೋಚನೆ ಮಾಡುತ್ತಾರೆಂದು ಗುರುತಿಸಲಾಗಿದೆ. ಮಾನಸಿಕ ಸಮಸ್ಯೆ ಎಂದರೆ ಕಳಂಕ ಎನ್ನುವ ಮನೋಭಾವ ಹೋಗಬೇಕು. ಸಮಾಜದ ಮನಸ್ಥಿತಿಯೂ ಬದಲಾಗಬೇಕು’ ಎನ್ನುತ್ತಾರೆ ಜಿಲ್ಲಾ ಮಾಸಿಕ ಆರೋಗ್ಯ ಕಾರ್ಯಕ್ರಮದ ವೈದ್ಯ ಸುಮಿತ್‌ ಕುಮಾರ್ ದುರ್ಗೋಜಿ.

‘ವೈದ್ಯಾಧಿಕಾರಿಗಳು, ವೈದ್ಯಕೀಯ ಸಿಬ್ಬಂದಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ, ಶಿಕ್ಷಕರು, ಪೊಲೀಸರು, ಫಾರ್ಮಾಸಿಸ್ಟ್‌ಗಳು, ಗ್ರಾಮ ಪಂಚಾಯಿತಿಗಳ ಚುನಾಯಿತ ಜನಪ್ರತಿನಿಧಿಗಳಿಗೆ ಆಗಾಗ ತರಬೇತಿ ಕಾರ್ಯಕ್ರಮ ನಡೆಸುತ್ತಿದ್ದೇವೆ. ಮಾನಸಿಕ ಆರೋಗ್ಯ ಸುಧಾರಣೆ ಸೇರಿದಂತೆ ಆತ್ಮಹತ್ಯೆ ತಡೆಗಟ್ಟುವ ಕುರಿತು ಕೂಡ ಅವರ ಮೂಲಕ ಜಾಗೃತಿ ಮೂಡಿಸುತ್ತಿದ್ದೇವೆ’ ಎನ್ನುತ್ತಾರೆ ಅವರು.

ಆತ್ಮಹತ್ಯೆ ತಡೆಗೆ ವೈದ್ಯರ ಸಲಹೆಗಳು

* ಸ್ನೇಹಿತರು ಅಥವಾ ಬಂಧುಗಳ ಸಹಾಯ ಪಡೆಯಬೇಕು

* ಸಮಸ್ಯೆಗಳನ್ನು ಆಪ್ತರೊಂದಿಗೆ ಹಂಚಿಕೊಳ್ಳಬೇಕು

* ದುಶ್ಚಟಗಳಿಂದ ಮುಕ್ತಿಗೆ ಅಗತ್ಯ ಚಿಕಿತ್ಸೆ ಪಡೆಯಬೇಕು

* ಮಾನಸಿಕ ಆರೋಗ್ಯ ಸುಧಾರಣೆ

* ಸಮಾಜದ ಮನೋಭಾವ ಬದಲಾಗಬೇಕು

* ಮಾನಸಿಕವಾಗಿ ದೌರ್ಬಲ್ಯರಾದವರಿಗೆ ಧೈರ್ಯ ತುಂಬಬೇಕು

*  ವೈದ್ಯರನ್ನು ಭೇಟಿಯಾಗಬೇಕು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು