ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಧರ ಮನೆಗೆ ಬೆಂಕಿ ಹಚ್ಚಲು ಯತ್ನ; ಭೀತಿಯಿಂದ ಗ್ರಾಮ ತೊರೆದ ಕುಟುಂಬ: ಮೂವರ ಬಂಧನ

Last Updated 11 ಸೆಪ್ಟೆಂಬರ್ 2020, 15:42 IST
ಅಕ್ಷರ ಗಾತ್ರ

ಬೆಳಗಾವಿ: ತಾಲ್ಲೂಕಿನ ಕಣಯೆ ಗ್ರಾಮದಲ್ಲಿ ಇಬ್ಬರು ಯೋಧರಿರುವ (ಸಹೋದರ ಹಾಗೂ ಸಹೋದರಿ) ಕುಟುಂಬದವರ ಮೇಲೆ ಇತ್ತೀಚೆಗೆ ಹಲ್ಲೆ ನಡೆಸಿ, ಮನೆಗೆ ನುಗ್ಗಿ ದಾಂಧಲೆ ಮಾಡಿ ಬೆಂಕಿ ಹಚ್ಚಲು ಯತ್ನಿಸಿದ ಆರೋಪದ ಮೇಲೆ ಮೂವರನ್ನು ಗ್ರಾಮೀಣ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಅದೇ ಗ್ರಾಮದ ಮಹೇಶ ಡುಕ್ರೆ, ನಾಮದೇವ ಡುಕ್ರೆ ಮತ್ತು ಪಿಂಟು ಡುಕ್ರೆ ಬಂಧಿತರು.

ಭರತೇಶ ಅಸ್ಸಾಂನಲ್ಲಿ ಸೇನೆಯಲ್ಲಿದ್ದರೆ, ಅವರ ತಂಗಿ ಕೋಲ್ಕತ್ತಾದಲ್ಲಿ ಬಿಎಸ್‌ಎಫ್‌ ಕಾನ್‌ಸ್ಟೆಬಲ್ ಆಗಿದ್ದಾರೆ.

ಸೈನಿಕ ತಮ್ಮ ಕುಟುಂಬದೊಂದಿಗೆ ಮಾಡಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆದ ಬಳಿಕ ಘಟನೆ ಬೆಳಕಿಗೆ ಬಂದಿದೆ. ‘ಕುಟುಂಬದವರು ಜೀವ ಭಯದಿಂದ ಗ್ರಾಮ ತೊರೆದಿದ್ದಾರೆ. ಮನೆ ಎದುರು ಜಖಂ‌ಗೊಂಡಿರುವ ದ್ವಿಚಕ್ರವಾಹನ ಬಿದ್ದಿದೆ. ಕೊಟ್ಟಿಗೆಯಲ್ಲಿರುವ ಜಾನುವಾರುಗಳನ್ನು ಅಕ್ಕಪಕ್ಕದ ಮನೆಗಳವರು ನೋಡಿಕೊಳ್ಳುತ್ತಿದ್ದಾರೆ’ ಎಂದು ಸ್ಥಳೀಯರು ಮಾಹಿತಿ ನೀಡಿದರು.

ಹಲ್ಲೆ ವಿಷಯ ತಿಳಿದು ಗ್ರಾಮಕ್ಕೆ ಕೆಲವು ದಿನಗಳ ಹಿಂದೆ ಬಂದಿದ್ದ ಭರತೇಶ ವಿಡಿಯೊ ಮಾಡಿದ್ದಾರೆ. ‘ತಂದೆ ಮೇಲೆ ಕಿಣಯೆ ಬಸ್ ನಿಲ್ದಾಣದಲ್ಲಿ ಹಲ್ಲೆ ನಡೆಸಿದ್ದಾರೆ. ಬಿಡಿಸಲು ಬಂದ ತಂಗಿ, ತಾಯಿಯನ್ನೂ ಥಳಿಸಿದ್ದಾರೆ. ಪೊಲೀಸರು ಈ ಬಗ್ಗೆ ದೂರು ತಗೆದುಕೊಂಡಿರಲಿಲ್ಲ. ತಂದೆ, ತಾಯಿ, ತಂಗಿಯನ್ನು ಆಸ್ಪತ್ರೆಗೆ ಕರೆ ತಂದಾಗ ಕಿಡಿಗೇಡಿಗಳು ಮನೆಯ ಮುಂದೆ ನಿಲ್ಲಿಸಿದ್ದ ದ್ವಿಚಕ್ರವಾಹನ ಜಖಂಗೊಳಿಸಿದ್ದಾರೆ. ಮನೆಯೊಳಗಿನ ವಸ್ತುಗಳಿಗೆ ಬೆಂಕಿ ಹಚ್ಚಿದ್ದಾರೆ’ ಎಂದು ಆರೋಪಿಸಿದ್ದಾರೆ. ಬಳಿಕ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ ಎನ್ನಲಾಗಿದೆ.

ಜಖಂಗೊಂಡ ಸ್ಥಿತಿಯಲ್ಲಿ ಬಿದ್ದಿರುವ ದ್ವಿಚಕ್ರವಾಹನ

ಸೈನಿಕನ ಕುಟುಂಬದ ವಿರುದ್ಧವೂ ಪ್ರತಿ ದೂರು ದಾಖಲಾಗಿದೆ.

‘ಪ್ರಕರಣಕ್ಕೆ ಸಂಬಂಧಿಸಿದಂತೆ ಮಹೇಶ್ ಡುಕ್ರೆ ಸೇರಿ ಮೂವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅವರು ಕುಟುಂಬದ ಹಾಗೂ ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಸೆ.1ರಂದು ರಾತ್ರಿ ಭರತೇಶ ಅವರ ಮನಗೆ ನುಗ್ಗಿ ಕೆಲವು ವಸ್ತುಗಳನ್ನು ನಾಶಪಡಿಸಿದ್ದಾರೆ. ಬೆಂಕಿ ಹಚ್ಚುವುದಕ್ಕೆ ಪ್ರಯತ್ನವನ್ನೂ ಪಟ್ಟಿದ್ದಾರೆ’ ಎಂದು ನಗರ ಪೊಲೀಸ್ ಆಯುಕ್ತ ತ್ಯಾಗರಾಜನ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸೈನಿಕನ ಕುಟುಂಬದವರು ಪತಿ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿ ಮಹೇಶ್ ಪತ್ನಿ ಕೂಡ ಪ್ರತಿ ದೂರು ನೀಡಿದ್ದಾರೆ. ಯೋಧನ ಕುಟುಂಬ ಗ್ರಾಮ ತೊರೆದಿರುವ ಬಗ್ಗೆ ನನಗೆ ಮಾಹಿತಿ ಇಲ್ಲ’ ಎಂದು ಹೇಳಿದರು.

ಪ್ರತಿಕ್ರಿಯೆಗೆ ಯೋಧನ ಕುಟುಂಬದವರು ಲಭ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT