ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾಕೇಜ್‌ ಟೆಂಡರ್‌ ವ್ಯವಸ್ಥೆ ರದ್ದುಪಡಿಸಿ: ಡಿ.ಕೆಂಪಣ್ಣ

Published 14 ಡಿಸೆಂಬರ್ 2023, 13:25 IST
Last Updated 14 ಡಿಸೆಂಬರ್ 2023, 13:25 IST
ಅಕ್ಷರ ಗಾತ್ರ

ಬೆಳಗಾವಿ: ‘ರಾಜ್ಯದಲ್ಲಿ ಪ್ಯಾಕೇಜ್‌ ಟೆಂಡರ್‌ ವ್ಯವಸ್ಥೆ ರದ್ದುಗೊಳಿಸಬೇಕು. ಈ ವ್ಯವಸ್ಥೆಯಿಂದ ಬೇರೆ ರಾಜ್ಯಗಳ ದೊಡ್ಡ ಕಂಪನಿಗಳಿಗೆ ಲಾಭವಾಗುತ್ತಿದೆ. ಸ್ಥಳೀಯ ಗುತ್ತಿಗೆದಾರರಿಗೆ ಕೆಲಸ ಸಿಗುತ್ತಿಲ್ಲ’ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಹೇಳಿದರು.

ತಾಲ್ಲೂಕಿನ ಹಲಗಾದಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಪ್ರತಿ ಕಾಮಗಾರಿ ಒಂದೊಂದು ರೀತಿ ಇರಬೇಕು. ಆದರೆ, ಈಗ ವಿವಿಧ ಕಾಮಗಾರಿಗಳನ್ನು ಒಗ್ಗೂಡಿಸಿ, ಪ್ಯಾಕೇಜ್‌ ರೂಪದಲ್ಲಿ ಟೆಂಡರ್‌ ಕರೆಯಲಾಗುತ್ತಿದೆ. ಈ ವ್ಯವಸ್ಥೆ ಸ್ಥಳೀಯ ಗುತ್ತಿಗೆದಾರರ ಹಿತಾಸಕ್ತಿಗಳಿಗೆ ವಿರುದ್ಧವಾಗಿದ್ದು, ಕೆಲವೇ ಸಚಿವರು, ಅಧಿಕಾರಿಗಳು ಮತ್ತು ಏಜೆಂಟರಿಗೆ ಲಾಭದಾಯಕವಾಗಿದೆ’ ಎಂದರು.

‘ಪ್ಯಾಕೇಜ್ ವ್ಯವಸ್ಥೆಯ ಸಮಸ್ಯೆಗಳನ್ನು ಕೆಲ ಗುತ್ತಿಗೆದಾರರು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಗಮನಕ್ಕೆ ತಂದಿದ್ದು, ಅವರು ಬೆಳಗಾವಿ ಜಿಲ್ಲೆಯಲ್ಲಿ ಪ್ಯಾಕೇಜ್ ವ್ಯವಸ್ಥೆಯಡಿ ಕಾಮಗಾರಿ ಕೈಗೆತ್ತಿಕೊಳ್ಳದಂತೆ ನೋಡಿಕೊಂಡಿದ್ದಾರೆ. ಆದರೆ, ಬೇರೆ ಜಿಲ್ಲೆಗಳಲ್ಲಿ ಪ್ಯಾಕೇಜ್‌ ವ್ಯವಸ್ಥೆಯಡಿ ಕಾಮಗಾರಿ ನಡೆದಿದ್ದು, ಇದು ಸರಿಯಲ್ಲ’ ಎಂದು ಹೇಳಿದರು.

‘₹20 ಸಾವಿರ ಕೋಟಿಗೂ ಅಧಿಕ ಮೊತ್ತದ ಬಿಲ್ ಬಾಕಿ’

‘ಹಿರಿತನ ಆಧರಿಸಿ ಬಾಕಿ ಬಿಲ್‌ ತೆರವುಗೊಳಿಸುವವರೆಗೆ ರಾಜ್ಯದಲ್ಲಿ ಹೊಸ ಕಾಮಗಾರಿ ಆರಂಭಿಸಲು ಆಗುತ್ತಿಲ್ಲ. ಗುತ್ತಿಗೆದಾರರ ₹20 ಸಾವಿರ ಕೋಟಿಗೂ ಅಧಿಕ ಮೊತ್ತದ ಬಿಲ್‌ ಮೂರು ವರ್ಷಗಳಿಂದ ಬಾಕಿ ಉಳಿದಿದೆ. ಈಗ ಲಭ್ಯವಿರುವ ಅನುದಾನದಲ್ಲಿ ಶೇ 80ರಷ್ಟು ಹಣವನ್ನು ಗುತ್ತಿಗೆದಾರರ ಬಾಕಿ ಪಾವತಿಗೆ ಹಾಗೂ ಶೇ 20ರಷ್ಟು ಇತರೆ ಕಾಮಗಾರಿಗಳಿಗೆ ನೀಡಬೇಕು. ಆದರೆ, ಏಜೆಂಟರೊಂದಿಗೆ ಶಾಮೀಲಾದ ಅಧಿಕಾರಿಗಳು ಶೇ 20ರಷ್ಟು ಮಾತ್ರ ಗುತ್ತಿಗೆದಾರರ ಬಾಕಿ ಪಾವತಿಗೆ ನೀಡುತ್ತಿದ್ದಾರೆ’ ಎಂದು ಆರೋಪಿಸಿದರು.

ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಸಂಘ ಮಾಡಿದ್ದ ಶೇ 40ರಷ್ಟು ಕಮಿಷನ್ ಆರೋಪದ ಕುರಿತು ಪ್ರತಿಕ್ರಿಯಿಸಿದ ಕೆಂಪಣ್ಣ, ‘ಈ ಪ್ರಕರಣದ ವಿಚಾರಣೆ ಪ್ರಗತಿಯಲ್ಲಿದ್ದು, ತನಿಖಾಧಿಕಾರಿಗೆ ದಾಖಲೆ ಸಲ್ಲಿಸಿದ್ದೇವೆ. ಡಿಸೆಂಬರ್ 30ರಂದು ವಿಚಾರಣೆಯ ಮುಂದಿನ ದಿನಾಂಕ ನಿಗದಿಪಡಿಸಲಾಗಿದೆ. ಆಗ ಹೆಚ್ಚಿನ ದಾಖಲೆಗಳನ್ನು ಸಲ್ಲಿಸುತ್ತೇವೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ಮಿತಿಮೀರಿತ್ತು. ಹಾಗಾಗಿ ನಾವು ಅವರ ವಿರುದ್ಧ ಚಳವಳಿಯನ್ನು ಕೈಗೊಳ್ಳಬೇಕಾಯಿತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT