ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣೆಗೆ ನೀರಿಗಾಗಿ ಬೀದಿಗಿಳಿದ ನದಿ ತೀರದ ಜನ, ಅಥಣಿ ಬಂದ್ ಯಶಸ್ವಿ

ಬೀದಿಗಿಳಿದ ನದಿ ತೀರದ ಜನತೆ
Last Updated 20 ಮೇ 2019, 11:26 IST
ಅಕ್ಷರ ಗಾತ್ರ

ಅಥಣಿ: ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡುಗಡೆ ಮಾಡಿಸಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳು ಸೋಮವಾರ ಕರೆ ನೀಡಿದ್ದ ಅಥಣಿ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಬಸ್‌ ಸೇರಿದಂತೆ ವಾಹನಗಳ ಸಂಚಾರ ಇರಲಿಲ್ಲ. ಅಂಗಡಿಗಳು ಮುಚ್ಚಿದ್ದವು. ಸಾರ್ವಜನಿಕರು ಬೀದಿಗಳಿದು ಪ್ರತಿಭಟನೆ ನಡೆಸಿ, ಸರ್ಕಾರಕ್ಕೆ ಬಿಸಿ ಮುಟ್ಟಿಸಿದರು.

ಕೃಷ್ಣಾ ನದಿ ಹೋರಾಟ ಸಮಿತಿ ಸದಸ್ಯರು ಬಸ್ ನಿಲ್ದಾಣದ ಮುಂದೆ ನಸುಕಿನ ಜಾವವೇ ಹಳೆಯ ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳು ರಸ್ತೆಗಿಳಿಯದಂತೆ ನೋಡಿಕೊಂಡರು. ವರ್ತಕರು ಅಂಗಡಿಗಳ ಬಾಗಿಲು ತೆಗೆಯದೇ ಹೋರಾಟ ಬೆಂಬಲಿಸಿದರು.

ನಸುಕಿನ ಜಾವ, ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಹೋಗುತ್ತಿದ್ದ ಬಸ್‌ಗಳು ಹಾಗೂ ಹಾಲಿನ ವಾಹನಗಳನ್ನು ತಡೆದರು. ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಅರಬೆತ್ತಲೆಯಾಗಿ ಕುಳಿತು, ರಾಜ್ಯ, ಕೇಂದ್ರ ಹಾಗೂ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ವಿವಿಧ 36 ಸಂಘಟನೆಗಳ ಸದಸ್ಯರು ಹಾಗೂ ಮುಖಂಡರು, ಸಿದ್ದೇಶ್ವರ ಗುಡಿಯಿಂದ ನಗರದ ಮುಖ್ಯ ರಸ್ತೆಗಳ ಮೂಲಕ ಹಳೆ ತಹಶೀಲ್ದಾರ್‌ ಕಚೇರಿವರೆಗೆ ಪಾದಯಾತ್ರೆ ನಡೆಸಿದರು. ಶೆಟ್ಟರಮಠದ ಮರುಳಸಿದ್ಧ ಸ್ವಾಮೀಜಿ ಭಾಗವಹಿಸಿದ್ದರು.

ಸುಡು ಬಿಸಿಲಿನಲ್ಲಿ ರಸ್ತೆ ಮಧ್ಯೆ ಕುಳಿತ ಪ್ರತಿಭಟನಾಕಾರರು, ಅಲ್ಲಿಯೇ ಊಟ ಮಾಡಿದರು.

ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್‌ ಮಾಡಲಾಗಿತ್ತು.

ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಬಸನಗೌಡ ‍ಪಾಟೀಲ ಮಾತನಾಡಿ, ‘ರಾಜ್ಯ ಸರ್ಕಾರದವರು ಮಹಾರಾಷ್ಟ್ರದವರಿಗೆ ಎಷ್ಟು ಬೇಕೋ ಅಷ್ಟು ನೀರು ಕೊಡಬೇಕು. ಹಾಗೆಯೇ ನಮಗೆ ಎಷ್ಟು ಬೇಕೋ ಅಷ್ಟು ಪಡೆದುಕೊಳ್ಳಬೇಕು. ಪ್ರತಿ ವರ್ಷ ಬೇಸಿಗೆ ಸಂದರ್ಭದಲ್ಲಿ ಕಂಡುಬರುವ ೀ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮುಂದಾಗಬೇಕು’ ಎಂದು ಆಗ್ರಹಿಸಿದರು.

ವಕೀಲ ಸುನೀಲ ಸಂಕ ಮಾತನಾಡಿ, ‘ಪ್ರತಿ ವರ್ಷವೂ ಹೋರಾಟ ಮಾಡಿ ನೀರು ‍ಪಡೆದುಕೊಳ್ಳಬೇಕಾದ ಸ್ಥಿತಿ ಇದೆ. ಇದು ಸರ್ಕಾರಕ್ಕೆ ಚೆನ್ನಾಗಿ ಕಾಣುತ್ತದೆಯೇ? ಈ ಬಾರಿ ಹಿಡಕಲ್‌ ಡ್ಯಾಂನಿಂದ ಕೃಷ್ಣಾ ನದಿಗೆ ನೀರು ಬಿಡುವುದಾಗಿ ಸರ್ಕಾರ ಹೇಳಿದೆ. ಮುಂದಿನ ದಿನಗಳಲ್ಲೂ ಹಾಗೆಯೇ ಮಾಡಿಕೊಳ್ಳಿ ಎಂದು ಮಹಾರಾಷ್ಟ್ರದವರು ಹೇಳಿದರೆ ಏನು ಮಾಡುತ್ತೀರಿ?’ ಎಂದು ಕೇಳಿದರು.

‘ನೀವು ರಾಜೀನಾಮೆ ನೀಡಿಯಾದರೂ ಕೃಷ್ಣೆಗೆ ನೀರು ತನ್ನಿ. ನಂತರ ಪಕ್ಷೇತರರಾಗಿ ಸ್ಪರ್ಧಿಸಿದರೂ ಗೆಲ್ಲಿಸಿಕೊಂಡು ಬರುತ್ತೇವೆ’ ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಶಾಸಕ ಮಹೇಶ ಕುಮಠಳ್ಳಿ ಅವರಿಗೆ ಮುಖಂಡರು ತಿಳಿಸಿದರು.

ಅಥಣಿ ಪತ್ರಕರ್ತರ ಸಂಘದ ಅದ್ಯಕ್ಷ ವಿಜಯ ಅಡ್ಡಹಳ್ಳಿ, ಮುಖಂಡರಾದ ದೀಪಕ ಶಿಂಧೆ, ರಮೇಶ ಬಾದವಾಡಗಿ, ರಾಕೇಶ ಮೈಗೂರ, ಜಗನ್ನಾಥ ಬಾಮನೆ, ಮಂಜುನಾಥ ಹೋಳಿಕಟ್ಟಿ, ರವಿ ಕಾಂಬಳೆ, ರಮೇಶ ಸಿಂದಗಿ, ರೈತ ಸಂಘ ತಾಲ್ಲೂಕು ಘಟಕದ ಅಧ್ಯಕ್ಷ ಮಹಾದೇವ ಮಡಿವಾಳ, ಚಿದಾನಂದ ಶೇಗುಣಸಿ, ಪ್ರಕಾಶ ಕಾಂಬಳೆ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT