ಭಾನುವಾರ, ಮಾರ್ಚ್ 7, 2021
31 °C
ಲೋಕಸಭಾ ಕ್ಷೇತ್ರ, ಪಾಲಿಕೆ, ಜಿಲ್ಲಾ–ತಾಲ್ಲೂಕು ಪಂಚಾಯ್ತಿಗೆ ಜನತಂತ್ರದ ಹಬ್ಬ

ಬೆಳಗಾವಿಯಲ್ಲಿ ‘ಚುನಾವಣಾ ಪರ್ವ’

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಜಿಲ್ಲೆಯು ಕೆಲವು ತಿಂಗಳುಗಳ ಅಂತರದಲ್ಲಿ ಸಾಲು ಸಾಲು ಚುನಾವಣೆಗಳಿಗೆ ಸಾಕ್ಷಿಯಾಗಲಿದೆ.

ಗ್ರಾಮ ಪಂಚಾಯ್ತಿಗಳ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಮೀಸಲಾತಿ ನಿಗದಿಪಡಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಆ ಸ್ಥಾನಗಳಿಗೆ ಚುನಾವಣಾ ಪ್ರಕ್ರಿಯೆ ಪಂಚಾಯ್ತಿಗಳ ಸದಸ್ಯರ ನಡುವೆ ರಂಗು ತುಂಬಲಿದೆ. ಮುಂದೆ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಬರಲಿದೆ. ಯಾವಾಗ ಬೇಕಾದರೂ ಘೋಷಣೆ ಅಗಬಹುದು ಎನ್ನಲಾಗುತ್ತಿದೆ. ಮಹಾನಗರಪಾಲಿಕೆ ಸಾರ್ವತ್ರಿಕ ಚುನಾವಣೆಯೂ ನಡೆಯಬೇಕಿದೆ. ಬಳಿಕ ಪಂಚಾಯತ್‌ರಾಜ್‌ನ 2ನೇ ಹಾಗೂ 3ನೇ ಹಂತದ ವ್ಯವಸ್ಥೆಯಾದ ತಾಲ್ಲೂಕು ಪಂಚಾಯ್ತಿ ಹಾಗೂ ಜಿಲ್ಲಾ ಪಂಚಾಯ್ತಿಗಳ ಚುನಾವಣೆಯೂ ಹೊಸ್ತಿಲಲ್ಲಿದ್ದು, ಹಳ್ಳಿಗಳಲ್ಲಿ ಜನತಂತ್ರದ ಹಬ್ಬ ಕಳೆಗಟ್ಟಲಿದೆ.

ಪ್ರಚಾರ ಸಮಾವೇಶಗಳು, ಗಣ್ಯರು–ಅತಿಗಣ್ಯರ ಆಗಮನ, ಅಬ್ಬರದ ಪ್ರಚಾರ, ರಾಜಕೀಯ ಪಕ್ಷಗಳ ಮೇಲಾಟ, ಆರೋಪ–ಪ್ರತ್ಯಾರೋಪ, ಜಿದ್ದಾಜಿದ್ದಿಯ ಸೆಣಸಾಟ, ಜನರಿಗೆ ಆಸೆ–ಆಮಿಷಗಳನ್ನು ಒಡ್ಡುವುದು, ಮಾದರಿ ನೀತಿಸಂಹಿತೆ, ಭರವಸೆ, ಹಣಾಹಣಿಗೆ ಜಿಲ್ಲೆಯು ಸಾಕ್ಷಿಯಾಗಲಿದೆ. ಒಂದಾದ ಮೇಲೆ ಒಂದರಂತೆ ಚುನಾವಣಾ ಅಖಾಡಗಳು ಸಜ್ಜಾಗುವ ಸಾಧ್ಯತೆ ಇರುವುದು ಇದಕ್ಕೆ ಕಾರಣ.

ಅಂಗಡಿ ನಿಧನದಿಂದ: ನಾಲ್ಕನೇ ಬಾರಿಗೆ ಗೆದ್ದು ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಸುರೇಶ ಅಂಗಡಿ ಅವರ ನಿಧನದಿಂದ ಬೆಳಗಾವಿ ಲೋಕಸಭಾ ಕ್ಷೇತ್ರ ತೆರವಾಗಿದೆ. ಅವರು  ಕೋವಿಡ್–19 ಕಾರಣದಿಂದಾಗಿ ನವದೆಹಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ 2020ರ ಸೆ. 23ರಂದು ಮೃತಪಟ್ಟಿದ್ದರು. ಈ ಕ್ಷೇತ್ರಕ್ಕೆ ಆರು ತಿಂಗಳ ಒಳಗೆ ಚುನಾವಣಾ ಪ್ರಕ್ರಿಯೆ ನಡೆಯಬೇಕು ಎನ್ನುವುದು ನಿಯಮ. ಈ ನಿಟ್ಟಿನಲ್ಲಿ ನೋಡಿದರೆ ಫೆಬ್ರುವರಿ ಅಂತ್ಯದೊಳಗೆ ಚುನಾವಣೆ ಮುಗಿಯಬೇಕಾಗುತ್ತದೆ. ಹೀಗಾಗಿ, ಚುನಾವಣಾ ಆಯೋಗವು ಕಲವೇ ದಿನಗಳಲ್ಲಿ ಚುನಾವಣಾ ದಿನಾಂಕ ಘೋಷಿಸಬಹುದು ಎನ್ನುವುದು ಪಕ್ಷಗಳ ಲೆಕ್ಕಾಚಾರವಾಗಿದೆ. ಇದರಿಂದಾಗಿಯೇ, ಪ್ರಮುಖ ರಾಜಕೀಯ ಪಕ್ಷಗಳು ಪೂರ್ವಭಾವಿ ಸಿದ್ಧತೆಗಳನ್ನು ನಡೆಸುತ್ತಿವೆ. ಬಿಜೆಪಿ ಒಂದು ಹೆಜ್ಜೆ ಮುಂದೆ ಹೋಗಿದ್ದು, ಈಚೆಗೆ ನಡೆದ ಜನಸೇವಕ ಸಮಾವೇಶ ಸಮಾರೋಪದಲ್ಲಿ ಚುನಾವಣೆಗಳಿಗೆ ರಣಕಹಳೆಯನ್ನು ಮೊಳಗಿಸಿದೆ.

ಪ್ರಸ್ತುತ ಇರುವ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯ್ತಿ ಸದಸ್ಯರ ಅಧಿಕಾರದ ಅವಧಿ ಮೇನಲ್ಲಿ ಮುಕ್ತಾಯವಾಗಲಿದೆ. ಹೀಗಾಗಿ, ಕೆಲವೇ ತಿಂಗಳಲ್ಲಿ ಆ ಚುನಾವಣೆಯೂ ಎದುರಾಗುವ ನಿರೀಕ್ಷೆ ಇದೆ.

ಈವರೆಗೆ ನಡೆದಿರಬೇಕಿತ್ತು: ಬೆಳಗಾವಿ ನಗರಪಾಲಿಕೆ ಅವಧಿ 2019 ಮಾರ್ಚ್‌ 9ರಂದೇ ಕೊನೆಗೊಂಡಿದ್ದರೂ ಇದುವರೆಗೆ ಚುನಾವಣೆ ನಡೆದಿಲ್ಲ. ಎಲ್ಲವೂ ನಿರೀಕ್ಷೆಯಂತೆಯೇ ನಡೆದಿದ್ದರೆ  ಚುನಾವಣೆ ಮುಗಿದು ಬಹಳ ಕಾಲವೇ ಆಗಬೇಕಿತ್ತು. ಆದರೆ, ಮೀಸಲಾತಿ ಪಟ್ಟಿ ಪ್ರಶ್ನಿಸಿ ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದು ಮೊದಲಾದ ಕಾರಣದಿಂದ ಪ್ರಕ್ರಿಯೆ ವಿಳಂಬವಾಗಿದೆ. ಹೀಗಾಗಿ, ಪಾಲಿಕೆಯಲ್ಲಿ ಪ್ರಸ್ತುತ ಜನಪ್ರತಿನಿಧಿಗಳೇ ಇಲ್ಲವಾಗಿದ್ದಾರೆ.

ನಗರಪಾಲಿಕೆಗೆ ಚುನಾವಣೆ ನಡೆಸಲು ಸಮಯಕ್ಕೆ ಸರಿಯಾಗಿ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ (ಎಸ್‌ಇಸಿ) ಹೈಕೋರ್ಟ್ ಈಚೆಗೆ ನಿರ್ದೇಶನ ನೀಡಿದೆ. ವಾರ್ಡ್ ಮರು ವಿಂಗಡಣೆ, ಮೀಸಲು ಅಧಿಸೂಚನೆ, ಮತದಾರರ ಪಟ್ಟಿ ಮತ್ತು ವೇಳಾಪಟ್ಟಿ ಪ್ರಕಟಿಸಿ ನಂತರ 45  ದಿನಗಳಲ್ಲಿ ಚುನಾವಣೆ ನಡೆಸಬೇಕು ಎಂದೂ ಆದೇಶಿಸಿದೆ. ಹೀಗಾಗಿ, ಪಾಲಿಕೆ ಚುನಾವಣೆಯೂ ಶೀಘ್ರವೇ ಎದುರಾಗುವ ನಿರೀಕ್ಷೆ ಇದೆ. 58 ವಾರ್ಡ್‌ಗಳಿರುವ ಈ ನಗರ ಸ್ಥಳೀಯ ಸಂಸ್ಥೆಯಲ್ಲಿ ಇದೇ ಮೊದಲ ಬಾರಿಗೆ ರಾಜಕೀಯ ಪಕ್ಷಗಳು ಚಿಹ್ನೆಯಡಿ ಚುನಾವಣೆ ಎದುರಿಸುವುದಾಗಿ ಘೋಷಿಸಿರುವುರಿಂದ ಕಣ ಹಿಂದೆಂದಿಗಿಂತಲೂ ರಂಗೇರುವ ಸಾಧ್ಯತೆ ಇದೆ.

***

ಮುಂಬರುವ ಚುನಾವಣೆಗಳನ್ನು ನಾವು (ಬಿಜೆಪಿ) ಗಂಭೀರವಾಗಿ ಪರಿಗಣಿಸಿದ್ದೇವೆ. ಪೂರ್ವ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದೇವೆ. ಎಲ್ಲರದಲ್ಲೂ ಜಯಪತಾಕೆ ಹಾರಿಸಲಿದ್ದೇವೆ

- ರಮೇಶ ಜಾಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ

***

ಚುನಾವಣೆಗಳಿಗೆ ನಾವೂ (ಕಾಂಗ್ರೆಸ್) ಸಿದ್ಧವಿದ್ದೇವೆ. ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಶೀಘ್ರವೇ ಅಭ್ಯರ್ಥಿ ಘೋಷಣೆ ಮಾಡಲಿದ್ದೇವೆ

- ಸತೀಶ ಜಾರಕಿಹೊಳಿ, ಕಾರ್ಯಾಧ್ಯಕ್ಷ, ಕೆಪಿಸಿಸಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು