ಸೋಮವಾರ, ಆಗಸ್ಟ್ 8, 2022
21 °C
ಅನುಕಂಪ ನಂಬಿರುವ ಬಿಜೆಪಿ; ಆಡಳಿತ ವಿರೋಧಿ ಅಲೆ ನೆಚ್ಚಿಕೊಂಡಿರುವ ‘ಕೈ’

ಬೆಳಗಾವಿ ಉಪಚುನಾವಣೆ: ‘ಅಲೆ’ಗಳ ನಡುವೆ ಗೆಲುವಿನ ದಡ ಸೇರುವವರಾರು?

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಅನುಕಂಪದ ಅಲೆ ಮತ್ತು ತೈಲ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಉಂಟಾಗಿರುವ ಆಡಳಿತ ವಿರೋಧಿ ಅಲೆಯ ಚರ್ಚೆಗಳಿಂದಾಗಿ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣಾ ಕಣ ರಂಗೇರಿದೆ.

ಬಿಜೆಪಿಯಿಂದ ಸತತ 4ನೇ ಬಾರಿಗೆ ಗೆದ್ದು ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಸುರೇಶ ಅಂಗಡಿ ಅವರು ಕೋವಿಡ್–19ನಿಂದಾಗಿ ಮೃತರಾದ್ದರಿಂದ ಏ.17ರಂದು ಉಪ ಚುನಾವಣೆ ನಿಗದಿಯಾಗಿದೆ. ಕಣದಲ್ಲಿ 10 ಮಂದಿ ಅಭ್ಯರ್ಥಿಗಳಿದ್ದರೂ ಪ್ರಬಲ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಹಣಾಹಣಿ ಇದೆ. ಎರಡು ಪಕ್ಷಗಳೂ ಪ್ರತಿಷ್ಠೆಯಾಗಿ ಸ್ವೀಕರಿಸಿರುವುದರಿಂದ ಜಿದ್ದಾಜಿದ್ದಿ ಜೋರಾಗಿದೆ.

ದಿವಂಗತ ಸುರೇಶ ಅಂಗಡಿ ಅವರ ಪತ್ನಿ ಮಂಗಲಾ ಅಂಗಡಿ ಅವರಿಗೆ ಟಿಕೆಟ್ ನೀಡಿರುವ ಬಿಜೆಪಿಯು ಅನುಕಂಪದ ಅಲೆಯೊಂದಿಗೆ ಗೆಲುವಿನ ದಡ ಸೇರಬಹುದೆಂದು ನೆಚ್ಚಿಕೊಂಡಿದೆ. ಯಮಕನಮರಡಿ ಕ್ಷೇತ್ರದ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಸತೀಶ ಜಾರಕಿಹೊಳಿ ಅವರನ್ನು ಅಖಾಡಕ್ಕೆ ಇಳಿಸಿರುವ ಕಾಂಗ್ರೆಸ್‌, ಆಡಳಿತ ವಿರೋಧಿ ಅಲೆಯ ಲಾಭ ಕ್ರೋಢೀಕರಿಸಲು ಶ್ರಮಿಸುತ್ತಿದೆ. ಕ್ಷೇತ್ರ ಉಳಿಸಿಕೊಳ್ಳಲು ಬಿಜೆಪಿ ಮತ್ತು ಕಸಿದುಕೊಳ್ಳಲು ಕಾಂಗ್ರೆಸ್‌ ಕಸರತ್ತು ನಡೆಸಿವೆ.

ಬಲಾಬಲ

ಕ್ಷೇತ್ರದಲ್ಲಿ 8 ವಿಧಾನಸಭಾ ಕ್ಷೇತ್ರಗಳಿವೆ. ಈ ಪೈಕಿ 6ರಲ್ಲಿ ಬಿಜೆಪಿ ಶಾಸಕರಿದ್ದಾರೆ. ಇತರ ಜನಪ್ರತಿನಿಧಿಗಳು ಹಾಗೂ ನಿಗಮ–ಮಂಡಳಿಗಳ ಅಧ್ಯಕ್ಷರಿಗೂ ಬಿಜೆಪಿ ‘ಜವಾಬ್ದಾರಿ’ ಕೊಟ್ಟಿದೆ. ಒಟ್ಟು 18.13 ಲಕ್ಷ ಮತದಾರರಿದ್ದು, ವೀರಶೈವ ಲಿಂಗಾಯತ, ಮರಾಠ, ಕುರುಬರು ಹಾಗೂ ಅಲ್ಪಸಂಖ್ಯಾತರ ಮತಗಳು ನಿರ್ಣಾಯಕ. ಅಂದಾಜು ಆರೂವರೆ ಲಕ್ಷ ವೀರಶೈವ ಲಿಂಗಾಯತ ಮತದಾರರಿದ್ದಾರೆ. ಅವರನ್ನು ಒಲಿಸಿಕೊಳ್ಳಲು ಪಕ್ಷಗಳು ತಂತ್ರ ರೂಪಿಸಿವೆ. ಬಿಜೆಪಿ ಅಭ್ಯರ್ಥಿ ಆ ಸಮುದಾಯದವರು. ಅಂದಾಜು 2.25 ಲಕ್ಷ ಸಂಖ್ಯೆಯಲ್ಲಿರುವ ಮರಾಠರನ್ನು ಒಲಿಸಿಕೊಂಡವರು ಗೆಲುವಿನ ಹಾದಿಯಲ್ಲಿ ಬಹಳಷ್ಟು ಕ್ರಮಿಸಬಹುದು. ಇದಕ್ಕಾಗಿಯೇ, ಎರಡೂ ಪಕ್ಷದವರು ಆಯಾ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಜಾತಿಗಳ ನಾಯಕರು ಮತ್ತು ಜನಪ್ರತಿನಿಧಿಗಳನ್ನು ‘ಮತ ಬೇಟೆ’ಗೆ ನಿಯೋಜಿಸಿವೆ. ವಾಲ್ಮೀಕಿ ಸಮಾಜದ ಸತೀಶ ಲಿಂಗಾಯತ ಮತ್ತು ಮರಾಠ ನಾಯಕರ ನೆರವು ಪಡೆಯುತ್ತಿದ್ದಾರೆ. ಉಭಯ ಪಕ್ಷಗಳ ರಾಜ್ಯ ಉಸ್ತುವಾರಿಗಳು ಮತ್ತು ಘಟನಾನುಘಟಿ ನಾಯಕರು ಅಬ್ಬರದ ಪ್ರಚಾರ ನಡೆಸಿದ್ದಾರೆ.

ಆರಂಭದಲ್ಲಿ ಕಾಂಗ್ರೆಸ್‌ ಭದ್ರಕೋಟೆ

ಕ್ಷೇತ್ರವು ಆರಂಭದಿಂದಲೂ ಕಾಂಗ್ರೆಸ್‌ ಭದ್ರಕೋಟೆ ಆಗಿತ್ತು. ಆ ಪಕ್ಷ ಬಾರಿ 10 ಬಾರಿ ಗೆದ್ದಿದೆ. ಎನ್‌ಸಿಜಿ ಮತ್ತು ಜನತಾದಳ ತಲಾ ಒಂದು ಹಾಗೂ ಬಿಜೆಪಿ 5 ಬಾರಿ ಗೆದ್ದಿದೆ. 2004ರಿಂದ ಸುರೇಶ ಅಂಗಡಿ ವಶಪಡಿಸಿಕೊಂಡಿದ್ದರು. 1998ರಲ್ಲಿ ಬಿಜೆಪಿಯ ಗೆಲುವಿನ ಖಾತೆ ತೆರೆದಿದ್ದವರು ಬಾಬಾಗೌಡ ಪಾಟೀಲ. ಅವರು ಕೇಂದ್ರ ಸಚಿವರೂ ಆಗಿದ್ದರು. ಈಗ ಅವರು, ‘ರೈತ ವಿರೋಧಿ ಧೋರಣೆ ಮತ್ತು ಕರಾಳ ಕೃಷಿ ಕಾನೂನುಗಳನ್ನು ವಿರೋಧಿಸಿ ಬಿಜೆಪಿ ವಿರುದ್ಧ ಮತ ಚಲಾಯಿಸಬೇಕು ಹಾಗೂ ಕಾಂಗ್ರೆಸ್ ಬೆಂಬಲಿಸಬೇಕು’ ಎಂದು ಕೋರುತ್ತಿದ್ದಾರೆ.

ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿರುವ ದುಷ್ಪರಿಣಾಮಗಳನ್ನು ಜನರು ಗಂಭೀರವಾಗಿ ಪರಿಗಣಿಸಿದರೆ ಬಿಜೆಪಿಗೆ ದುಬಾರಿ ಆಗಬಹುದು. ಅನುಕಂಪದ ಅಲೆಗೆ ಸೈ ಎಂದರೆ ಕಾಂಗ್ರೆಸ್‌ಗೆ ಕಷ್ಟವಾಗಬಹುದು.

ಕಾಂಗ್ರೆಸ್‌ ಅಭ್ಯರ್ಥಿಗೆ ಸಹೋದರರೂ ಮತ್ತು ಇಲ್ಲಿನ ಬಿಜೆಪಿ ಶಾಸಕರಾದ ರಮೇಶ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಮತದಾನದ ಮುನ್ನಾ ದಿನ ಬೆಂಬಲಿಗರಿಗೆ ಕೊಡುವ ‘ಸಂದೇಶ’ವೇನು ಎನ್ನುವುದೂ ಫಲಿತಾಂಶ ನಿರ್ಧರಿಸಲಿದೆ. ಮಂಗಲಾ ಈ ಹಿಂದೆ ರಾಜಕೀಯ ಕ್ಷೇತ್ರದಲ್ಲಿ ಕಾಣಿಸಿಕೊಂಡಿರಲಿಲ್ಲ. ಸತೀಶಗೆ ವೈಯಕ್ತಿಕ ವರ್ಚಸ್ಸು ಒಂದಷ್ಟು ನೆರವಿಗೆ ಬರಬಹುದು.

ಕುಟುಂಬಕ್ಕೆ ಮಣೆ ಹಾಕಿದ್ದಕ್ಕೆ ಹಾಗೂ ಕಾರ್ಯಕರ್ತರನ್ನು ಪರಿಗಣಿಸದಿದ್ದಕ್ಕೆ ಬಿಜೆಪಿಯ ಒಂದು ವರ್ಗದಲ್ಲಿ ಅಸಮಾಧಾನ ‘ಗುಪ್ತಗಾಮಿನಿ’ಯಂದೆ. ಎಂಇಎಸ್ ಹಾಗೂ ಶಿವಸೇನಾ ಬೆಂಬಲಿತ ಅಭ್ಯರ್ಥಿ ಶುಭಂ ಶೆಳಕೆ ಮರಾಠಿ ಭಾಷಿಗರ ಪ್ರಾಬಲ್ಯವಿರುವಲ್ಲಿ ಮತ ಯಾಚಿಸುತ್ತಿದ್ದಾರೆ. ಮರಾಠ ಮತಗಳು ವಿಭಜನೆಯಾದರೆ ಕಾಂಗ್ರೆಸ್‌ಗೆ ಲಾಭ ಆಗಬಹುದು. ‘ಹಿಂದುತ್ವ’ದ ಭಾವನೆಯಲ್ಲಿ ಒಂದಾದರೆ ಬಿಜೆಪಿಗೆ ಸಹಕಾರಿ ಆಗಬಹುದು.

ಇಲ್ಲೀಗ ನಡೆಯುತ್ತಿರುವುದು 2ನೇ ಉಪ ಚುನಾವಣೆ. ಗೃಹ ಖಾತೆ ರಾಜ್ಯ ಸಚಿವರಾಗಿದ್ದ ಬಲವಂತರಾವ್ ದಾತಾರ್‌ 1962ರಲ್ಲಿ ಅನಾರೋಗ್ಯದಿಂದ ನಿಧನರಾಗಿದ್ದರು. 1963ರಲ್ಲಿ ನಡೆದಿದ್ದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಚ್‌.ವಿ. ಕೌಜಲಗಿ ಗೆದ್ದಿದ್ದರು.

ಇಲ್ಲಿ ಈವರೆಗೆ ಮಹಿಳೆ ಅಥವಾ ವಾಲ್ಮೀಕಿ ನಾಯಕ ಸಮಾಜದವರು ಗೆದ್ದಿಲ್ಲ. ಹೀಗಾಗಿ, ಯಾರೇ ಗೆದ್ದರೂ ದಾಖಲೆ ನಿರ್ಮಾಣವಾಗಲಿದೆ.

***

ಕಣದಲ್ಲಿರುವ ಇತರರು

ವಿವೇಕಾನಂದ ಬಾಬು ಘಂಟಿ (ಕರ್ನಾಟಕ ರಾಷ್ಟ್ರ ಸಮಿತಿ), ವೆಂಕಟೇಶ್ವರ ಸ್ವಾಮೀಜಿ (ಹಿಂದೂಸ್ತಾನ ಜನತಾ ಪಕ್ಷ), ಸುರೇಶ ಬಸಪ್ಪ ಮರಲಿಂಗಣ್ಣವರ (ಕರ್ನಾಟಕ ಕಾರ್ಮಿಕರ ಪಕ್ಷ) ಶುಭಂ ಶೆಳಕೆ, ಅಪ್ಪಾಸಾಹೇಬ ಕುರಣಿ, ಗೌತಮ ಕಾಂಬಳೆ, ನಾಗಪ್ಪ ಕಳಸನ್ನವರ ಹಾಗೂ ಶ್ರೀಕಾಂತ ಪಡಸಲಗಿ (ಎಲ್ಲರೂ ಪಕ್ಷೇತರರು).

***

ಕ್ಷೇತ್ರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳು

ಬೆಳಗಾವಿ ದಕ್ಷಿಣ, ಬೆಳಗಾವಿ ಉತ್ತರ, ಬೆಳಗಾವಿ ಗ್ರಾಮೀಣ, ಗೋಕಾಕ, ಅರಭಾವಿ, ಸವದತ್ತಿ–ಯಲ್ಲಮ್ಮ, ರಾಮದುರ್ಗ, ಬೈಲಹೊಂಗಲ.

***

ಮತದಾರರ ವಿವರ

ಪುರುಷರು: 9,11,025

ಮಹಿಳೆಯರು: 9,02,455 

ಇತರೆ: 58

ಒಟ್ಟು: 18,13,538

***

2019ರ ಚುನಾವಣೆ ಫಲಿತಾಂಶ

ಗೆಲುವು: ಸುರೇಶ ಅಂಗಡಿ (ಬಿಜೆಪಿ)

ಪಡೆದ ಮತಗಳು: 7,61,991

ಗೆಲುವಿನ ಅಂತರ: 3,91,304

ಸೋತ ‍ಪ್ರತಿಸ್ಪರ್ಧಿ: ಡಾ.ವಿ.ಎಸ್‌. ಸಾಧುನವರ (ಕಾಂಗ್ರೆಸ್‌)

ಪಡೆದ ಮತಗಳು: 3,70,687

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು