ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ: ವಿಭಾಗ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಸಚಿವ ಕೃಷ್ಣ ಬೈರೇಗೌಡ ತಾಕೀತು

Published 15 ಜೂನ್ 2024, 15:28 IST
Last Updated 15 ಜೂನ್ 2024, 15:28 IST
ಅಕ್ಷರ ಗಾತ್ರ

ಬೆಳಗಾವಿ: ‘ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಯಾವುದೇ ಪ್ರಕರಣವನ್ನು ಶೀಘ್ರ ಇತ್ಯರ್ಥ ಮಾಡಬೇಕು. ಜನರ ಕೆಲಸ– ಕಾರ್ಯಗಳಿಗೆ ಕಾಯುವಂತೆ ಮಾಡಬಾರದು’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಾಕೀತು ಮಾಡಿದರು.

ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಶನಿವಾರ ವಿಭಾಗಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ಸಮರ್ಪಕ ಬೆಳೆ ಸಮೀಕ್ಷೆ, ಆರ್.ಟಿ.ಸಿ.ಗಳನ್ನು ಆಧಾರ್ ಸಂಖ್ಯೆಗೆ ಜೋಡಣೆ ಮಾಡುವುದು, ಸರ್ಕಾರಿ ಜಮೀನು ಅತಿಕ್ರಮಣ ತಡೆಗೆ ನಿಯಮಿತವಾಗಿ ಲ್ಯಾಂಡ್ ಬೀಟ್, ತಹಶೀಲ್ದಾರ್‌– ಉಪ ವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಇರುವ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥ ಮಾಡುವುದು ಸೇರಿದಂತೆ ಕಂದಾಯ ಇಲಾಖೆಯ ಪ್ರತಿಯೊಂದು ಕೆಲಸ– ಕಾರ್ಯಗಳನ್ನು ಚುರುಕುಗೊಳಿಸಬೇಕು’ ಎಂದರು.

‘ನಿಯಮಿತ ಹಾಗೂ ಸಮರ್ಪಕವಾಗಿ ಬೆಳೆ ಸಮೀಕ್ಷೆ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳ ಜತೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಆರ್.ಟಿ.ಸಿ.ಗಳನ್ನು ಆಧಾರ್ ಸಂಖ್ಯೆಗೆ ಜೋಡಣೆ ಮಾಡುವುದನ್ನು ವಿಶೇಷ ಆಂದೋಲನ ರೀತಿಯಲ್ಲಿ ಕೈಗೆತ್ತಿಕೊಳ್ಳಬೇಕು’ ಎಂದರು.

‘ಸರ್ಕಾರಿ ಜಮೀನು, ಕೆರೆಗಳು, ಸ್ವಾಧೀನ ಪಡಿಸಿಕೊಂಡ ಭೂಮಿ, ಸ್ಮಶಾನ‌ ಸೇರಿದಂತೆ ಪ್ರತಿಯೊಂದು ಇಲಾಖೆಗೆ ಸಂಬಂಧಿಸಿದ ಸರ್ಕಾರಿ ಜಮೀನಿನ ಸಂರಕ್ಷಣೆ ಮತ್ತು ಅತಿಕ್ರಮಣ ತಡೆಗಾಗಿ ಲ್ಯಾಂಡ್‌ಬೀಟ್‌ ವ್ಯವಸ್ಥೆ ಜಾರಿಗೆ ತರಲಾಗಿದೆ. ಆದ್ದರಿಂದ ಪ್ರತಿಯೊಂದು ಜಿಲ್ಲೆಯ ವ್ಯಾಪ್ತಿಯಲ್ಲಿನ ಸರ್ಕಾರಿ‌ ಜಮೀನಿನ ಬೀಟ್ ಕಡ್ಡಾಯವಾಗಿ ನಡೆಸುವ ಮೂಲಕ ವರದಿ ಸಲ್ಲಿಸಬೇಕು’ ಎಂದು ತಿಳಿಸಿದರು.

‘ಪ್ರತಿ‌ ನಾಲ್ಕು ತಿಂಗಳಿಗೊಮ್ಮೆ ಬೀಟ್ ಮಾಡುವುದರಿಂದ‌ ಸರ್ಕಾರಿ ಭೂಮಿಯ ಅತಿಕ್ರಮಣಕ್ಕೆ ಕಡಿವಾಣ ಹಾಕಬಹುದು. ಆದ್ದರಿಂದ ನಿಯಮಿತವಾಗಿ ಬೀಟ್ ಮಾಡಬೇಕು. ಜುಲೈ ತಿಂಗಳಿನಲ್ಲಿ ಆಧಾರ್ ಜೋಡಣೆ ಮತ್ತು ಲ್ಯಾಂಡ್‌ಬೀಟ್ ಪ್ರಕ್ರಿಯೆ ಪೂರ್ಣಗೊಳಿಸಬೇಕು’ ಎಂದೂ ತಿಳಿಸಿದರು.

ಗೋಮಾಳ ಹಂಚಿಕೆಗೆ ಅವಕಾಶ: ‘ಗೋಮಾಳ ಭೂಮಿ ಹಂಚಿಕೆಯನ್ನು ಕಾಯ್ದೆ ಅನುಸಾರ ಸರ್ಕಾರ ನಿರ್ಬಂಧಿಸಿದೆ. ಆದರೆ, ಹೆಚ್ಚುವರಿ ಭೂಮಿಯನ್ನು ಗುರುತಿಸಿ ನಿಯಮಾನುಸಾರ ಹಂಚಿಕೆ ಮಾಡಲು ಕಾಯ್ದೆಯಲ್ಲಿ ಅವಕಾಶವಿದೆ. ಈ ಬಗ್ಗೆ ಪರಿಶೀಲನೆ ಮಾಡಿ ಕಾಯ್ದೆ ಅನುಸಾರ ಕ್ರಮ ಕೈಗೊಳ್ಳಬೇಕು’ ಎಂದು ಸಚಿವ ತಿಳಿಸಿದರು.

‘ಮುಖ್ಯಮಂತ್ರಿ ಅವರ ಜನತಾ ದರ್ಶನದಲ್ಲಿ ಸ್ವೀಕರಿಸಲಾದ ಮನವಿ, ಅರ್ಜಿಗಳು ಮತ್ತು‌ ಕುಂದು ಕೊರತೆಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು. ತಹಶೀಲ್ದಾರ, ಉಪ ವಿಭಾಗಾಧಿಕಾರಿಗಳು‌ ಹಾಗೂ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಇರುವ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಬೇಕು. ವಿಶೇಷವಾಗಿ 90 ರಿಂದ 180 ದಿನಗಳರೆಗಿನ ಪ್ರಕರಣಗಳನ್ನು ಆದ್ಯತೆ ಮೇರೆಗೆ ಇತ್ಯರ್ಥಪಡಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಖಟಾರಿಯಾ, ನೋಂದಣಿ ಮತ್ತು ಸಾಮಾಜಿಕ‌ಭದ್ರತೆ ಕಾರ್ಯದರ್ಶಿ ವಿ.ರಶ್ಮಿ ಮಹೇಶ್, ಆಯುಕ್ತ ಪೊಮ್ಮಲ ಸುನೀಲ್ ಕುಮಾರ್, ನೋಂದಣಿ ಮಹಾಪರಿವೀಕ್ಷಕಿ ಬಿ‌.ಆರ್.ಮಮತಾ, ಪ್ರಾದೇಶಿಕ ಆಯುಕ್ತ ಸಂಜಯ ಶೆಟ್ಟೆಣ್ಣವರ ಸಭೆಯಲ್ಲಿದ್ದರು.

ಬೆಳಗಾವಿ ವಿಭಾಗದ ವ್ಯಾಪ್ತಿಯ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಗದಗ, ಹಾವೇರಿ, ಧಾರವಾಡ ಹಾಗೂ ಉತ್ತರ ಕನ್ನಡ ಜಿಲ್ಲೆಯ‌ ಜಿಲ್ಲಾಧಿಕಾರಿಗಳು, ಭೂಮಾಪನ ಇಲಾಖೆಯ ಜಂಟಿ ನಿರ್ದೇಶಕರು, ಉಪ ನಿರ್ದೇಶಕರು, ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT