20ರಂದು ಕಾಂಗ್ರೆಸ್ ರ್‍ಯಾಲಿ | ಯುವಜನರಿಗೆ ಸಂದೇಶ ನೀಡಲಿರುವ ರಾಹುಲ್ ಗಾಂಧಿ: ಸತೀಶ

ಬೆಳಗಾವಿ: ‘ಕಾಂಗ್ರೆಸ್‌ನಿಂದ ಈಗಾಗಲೇ ರೈತರ ಹಾಗೂ ಮಹಿಳಾ ಸಮಾವೇಶ ಮಾಡಲಾಗಿದೆ. ಈಗ ಯುವಜನರ ಸಮಾವೇಶಕ್ಕೆ ಬೆಳಗಾವಿಯಲ್ಲಿ ಸಿದ್ಧತೆ ಮಾಡಿದ್ದೇವೆ. ನಾಯಕ ರಾಹುಲ್ ಗಾಂಧಿ ಅವರು ರಾಜ್ಯದ ಯುವಜನತೆಗೆ ಚುನಾವಣಾ ಸಂದೇಶ ನೀಡಲಿದ್ದಾರೆ’ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ತಿಳಿಸಿದರು.
ಮಾರ್ಚ್ 20ರಂದು ನಗರದಲ್ಲಿ ಆಯೋಜಿಸಿದ ಕಾಂಗ್ರೆಸ್ ಯುವ ಕ್ರಾಂತಿ ರ್‍ಯಾಲಿಯ ಸಿದ್ಧತೆ ಪಡಿಶೀಲಿಸಿ ಮಾತನಾಡಿದ ಅವರು, ‘ವೇದಿಕೆಯಲ್ಲಿ 2 ಲಕ್ಷ ಕುರ್ಚಿಗಳನ್ನು ಹಾಕಿದ್ದೇವೆ. ರಾಜ್ಯದ ಮೂಲೆಮೂಲೆಯಿಂದ ಅಪಾರ ಸಂಖ್ಯೆಯ ಯುವಜನರು ಬರಲಿದ್ದಾರೆ. ಭವಿಷ್ಯವನ್ನು ಭದ್ರ ಮಾಡಿಕೊಳ್ಳಲು ಏನು ಮಾಡಬೇಕು ಎಂಬ ಸಂದೇಶವನ್ನು ರಾಹುಲ್ ಅವರು ನೀಡಲಿದ್ದಾರೆ’ ಎಂದರು.
‘ರಾಹುಲ್ ಗಾಂಧಿ ಅವರ ರೋಡ್ ಶೋ ಮಾಡಿಸುವ ಉದ್ದೇಶವಿಲ್ಲ. ವೇದಿಕೆ ಕಾರ್ಯಕ್ರಮದ ಬಳಿಕ ಯುವ ಸಮುದಾಯದೊಂದಿಗೆ ಸಂವಾದ ನಡೆಸಬೇಕು ಎಂಬ ಉದ್ದೇಶವಿದೆ. ಆದರೆ, ಹೈ ಕಮಾಂಡ್‌ನಿಂದ ಇದರ ಬಗ್ಗೆ ನಿರ್ಧಾರವಾಗಲಿದೆ’ ಎಂದರು.
‘ಯುವಕರಿಗೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದ ಬಿಜೆಪಿ ಮೋಸ ಮಾಡಿದೆ. ಆದರೆ, ಕಾಂಗ್ರೆಸ್ ಕೊಟ್ಟ ಮಾತಿನಂತೆ ನಡೆಯುವ ಪಕ್ಷ. ಮುಂಬರುವ ಚುನಾವಣೆಯಲ್ಲಿ ಯುವ ಸಮುದಾಯಕ್ಕೆ ಕಾಂಗ್ರೆಸ್ ಉತ್ತಮ ಕೊಡುಗೆ ನೀಡಲಿದ್ದು, ಅದನ್ನು ರಾಹುಲ್ ಗಾಂಧಿ ಅವರು ಘೋಷಣೆ ಮಾಡಲಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಅತಿ ಹೆಚ್ಚು ಸೀಟ್ ಗೆಲ್ಲುವ ನಿರೀಕ್ಷೆ ಇದೆ’ ಎಂದರು.
‘ಯುಗಾದಿ ವೇಳೆ ಕಾಂಗ್ರೆಸ್‌ನ 120 ಅಭ್ಯರ್ಥಿಗಳ ಹೆಸರು ಘೋಷಿಸುವ ಉದ್ದೇಶವಿದೆ. ಈಗಾಗಲೇ 80 ಮಂದಿಗೆ ಟಿಕೆಟ್ ಖಾತ್ರಿ ಮಾಡಿದ್ದೇವೆ. ಉಳಿದ ಕೆಲವು ಕಡೆ ಇನ್ನೂ ಹಗ್ಗ– ಜಗ್ಗಾಟವಿದೆ. ಆರು ಹಾಲಿ ಶಾಸಕರಿಗೆ ಟಿಕೆಟ್ ನೀಡಬಾರದು ಎಂಬ ಬಗ್ಗೆ ಚರ್ಚೆ ನಡೆದಿದೆ. ಆದರೆ, ಅವರು ಬೆಳಗಾವಿ ಜಿಲ್ಲೆಯವರಲ್ಲ’ ಎಂದೂ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸವದತ್ತಿ ಯಲ್ಲಮ್ಮ ಕ್ಷೇತ್ರದಿಂದ ಸ್ಪರ್ಧಿಸಲಿ ಎಂಬುದು ನಮ್ಮ ಅಪೇಕ್ಷೆ ಆಗಿತ್ತು. ಅವರನ್ನು ಕೇಳಿಕೊಂಡಿದ್ದೆ. ಆದರೆ, ಕೋಲಾರದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರಿಂದ ನಮ್ಮ ಯತ್ನ ಕೈ ಬಿಟ್ಟಿದ್ದೇವೆ’ ಎಂದೂ ಹೇಳಿದರು.
‘ಉಮೇಶ ಕತ್ತಿ ಅವರ ಸಹೋದರ ರಮೇಶ ಅವರನ್ನು ಕಾಂಗ್ರೆಸ್‌ಗೆ ಕರೆತಂದು ನಿಪ್ಪಾಣಿ ಕ್ಷೇತ್ರದ ಟಿಕೆಟ್ ನೀಡುವ ಯತ್ನ ನಡೆದಿದೆಯೇ’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಈ ಬಗ್ಗೆ ಮಾಹಿತಿ ಇಲ್ಲ’ ಎಂದರು.
‘ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ರಾಜ್ಯದ ಎಲ್ಲ ಮದರಸಾಗಳನ್ನು ಮುಚ್ಚುವುದಾಗಿ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ. ಆದರೆ, ಅದು ಸಾಧ್ಯವಿಲ್ಲ. ಮದರಸಾಗಳು ಮುಂಚಿನಿಂದಲೂ ಇರುವ ಶಾಲೆಗಳು. ಹೀಗೆ ಬೇಕಾಬಿಟ್ಟಿ ಹೇಳಿಕೆ ನೀಡಬಾರದು’ ಎಂದೂ ಟೀಕಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.