ಭಾನುವಾರ, ಅಕ್ಟೋಬರ್ 25, 2020
22 °C
ದೌಡ್‌, ದಾಂಡಿಯಾ ಸರಳವಾಗಿ ಆಯೋಜನೆ

ಬೆಳಗಾವಿ: ‘ನವರಾತ್ರಿ’ ಸಂಭ್ರಮಕ್ಕೆ ಕೋವಿಡ್ ಆತಂಕ

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಜಿಲ್ಲೆಯಲ್ಲಿ ನವರಾತ್ರಿ (ದಸರಾ) ಅಂಗವಾಗಿ ವಿಶೇಷ ಆಚರಣೆಗಳಿವೆ. ಬೆಳಿಗ್ಗೆ ನಡೆಯುವ ‘ದುರ್ಗಾಮಾತಾ ದೌಡ್’ ದೇಶ ಭಕ್ತಿ ಸಾರಿದರೆ, ಸಂಜೆ ಆಯೋಜಿಸಲಾಗುವ ‘ದಾಂಡಿಯಾ’ ಮನರಂಜನೆಯೊಂದಿಗೆ ಇಲ್ಲಿನ ಸಾಂಸ್ಕೃತಿಕ ವೈಭವದ ಪ್ರತೀಕದಂತಿರುತ್ತದೆ. ಇವೆಲ್ಲವೂ ಈ ಬಾರಿ ಕೋವಿಡ್–19 ಕಾರಣದಿಂದಾಗಿ ಸರಳವಾಗಿರಲಿವೆ.

ಸಾಂಸ್ಕೃತಿಕ ವೈಭವದ ವಾತಾವರಣ ನಿರ್ಮಿಸುವ ಈ ಕಾರ್ಯಕ್ರಮಗಳಲ್ಲಿ ಸ್ಥಳೀಯರು ಉತ್ಸಾಹದಿಂದ ಪಾಲ್ಗೊಳ್ಳುವುದು, ಭಾರತಾಂಬೆ, ಛತ್ರಪತಿ ಶಿವಾಜಿ  ಮಹಾರಾಜ ಪರವಾದ ಘೋಷಣೆಗಳು ಮೊಳಗುವುದು ಸಾಮಾನ್ಯವಾಗಿರುತ್ತದೆ. ವರ್ಷದಿಂದ ವರ್ಷಕ್ಕೆ ಇವುಗಳ ವಿಜೃಂಭಣೆ ದುಪ್ಪಟ್ಟಾಗುತ್ತಿತ್ತು. ಬಹುತೇಕ ಮಠಗಳು, ಮಂದಿರಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ‘ದಸರೆ’ಯ ಎಲ್ಲ ಕಾರ್ಯಕ್ರಮಗಳೂ ರಂಗು ಕಳೆದುಕೊಂಡಿವೆ.

ವಿಜಯದಶಮಿವರೆಗೆ: ಶನಿವಾರದಿಂದ ಆರಂಭವಾಗಿರುವ ವಿವಿಧ ಕಾರ್ಯಕ್ರಮಗಳು ವಿಜಯದಶಮಿಯ ದಿನದಂದು ತೆರೆ ಬೀಳಲಿದೆ. ಅಲ್ಲಲ್ಲಿ ಶಕ್ತಿದೇವತೆ ದುರ್ಗಾಮಾತೆಯ ವಿವಿಧ ಅವತಾರಗಳ ಪ್ರತಿಮೆಗಳನ್ನು ಆಕರ್ಷಕವಾಗಿ ಪ್ರತಿಷ್ಠಾಪಿಸಿ ಆರಾಧಿಸುವುದು, ಆ ಸ್ಥಳದಲ್ಲಿ ಸಂಜೆಯಿಂದಲೇ ದಾಂಡಿಯಾ ನೃತ್ಯದ ಮೆರುಗು ತೆರೆದುಕೊಳ್ಳುವುದು, ಬಡಾವಣೆಯ ಮಹಿಳೆಯರು, ಯುವತಿಯರು ಹಾಗೂ ಮಕ್ಕಳು ನರ್ತಿಸಿ ಸಂಭ್ರಮಿಸುವುದು ಮತ್ತು ಶಿಸ್ತುಬದ್ಧ ಕೋಲಾಟ ಗಮನಸೆಳೆಯುತ್ತಿತ್ತು. ಈ ಆಚರಣೆಗಳೆಲ್ಲವನ್ನೂ ಕೋವಿಡ್ ‘ಮಂಕು’ ಕವಿದಿದೆ.

ನಿತ್ಯ ಒಂದೊಂದು ಬಡಾವಣೆಗಳಲ್ಲಿ, ದೊಡ್ಡ ಮಟ್ಟದಲ್ಲಿ ನಡೆಯುತ್ತಿದ್ದ ‘ದುರ್ಗಾ ಮಾತಾ ದೌಡ್‌’ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಲು ಅವಕಾಶ ಇಲ್ಲದಂತಾಗಿದೆ.

ದೌಡ್‌ಗಾಗಿ: ಬಡಾವಣೆಯ ಮುಖಂಡರು, ಹಿರಿಯರು ಬೆಳಿಗ್ಗೆ ‘ದೌಡ್‌’ ಆಯೋಜಿಸುತ್ತಾರೆ. ನಿಗದಿತ ಬಡಾವಣೆಯ ರಸ್ತೆಗಳನ್ನು ಹಿಂದಿನ ದಿನವೇ ಸ್ವಚ್ಛಗೊಳಿಸಿ, ರಂಗೋಲಿ ಬಿಡಿಸಿ, ಹೂವಿನ ದಳಗಳನ್ನು ಚೆಲ್ಲಿ ಸಿಂಗರಿಸುತ್ತಾರೆ. ಶಿವಾಜಿ ಪ್ರತಿಮೆಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. ಮರು ದಿನ ಬೆಳಿಗ್ಗೆ, ಈ ರಸ್ತೆಗಳಲ್ಲಿ ಸ್ಥಳೀಯ  ಯುವಕರು, ಮಕ್ಕಳು ಬಿಳಿ ಬಟ್ಟೆ ತೊಟ್ಟು, ಗಾಂಧಿ ಟೋಪಿ ಹಾಕಿಕೊಂಡು, ಸೊಂಟಕ್ಕೆ ಕೇಸರಿ ಶಾಲು, ತಲೆಗೆ ರುಮಾಲು ಕಟ್ಟಿಕೊಂಡು, ಕೇಸರಿ  ಬಾವುಟಗಳನ್ನು ಹಿಡಿದು ಬರಿಗಾಲಿನಲ್ಲಿ ಶ್ರದ್ಧಾಭಕ್ತಿಯಿಂದ ಓಡುತ್ತಾರೆ. ದೇಶಭಕ್ತಿ ಗೀತೆಗಳನ್ನು ಹಾಡುತ್ತಾರೆ. ಶಿವಾಜಿ ಸಾಹಸಗಾಥೆಗಳನ್ನು ಪರಿಚಯಿಸುತ್ತಾರೆ. ಕೆಲವರು ಕತ್ತಿಗಳನ್ನು ಹಿಡಿದು ಪಾಲ್ಗೊಳ್ಳುತ್ತಾರೆ. ಸ್ಥಳೀಯರು ಪುಷ್ಪ ಮಳೆಗರೆದು ಅವರನ್ನು ಸ್ವಾಗತಿಸುತ್ತಾರೆ.

ಕೃಷ್ಣಾ ನದಿಗೆ: ನವರಾತ್ರಿಯ ಒಂದು ದಿನ, ಸ್ಥಳೀಯ ಮುಖಂಡರು ಮಕ್ಕಳಿಗೆ ಆಟೋಟ ಮತ್ತಿತರ ಸ್ಪರ್ಧೆ ಆಯೋಜಿಸಿ ಬಹುಮಾನ ನೀಡಿ ಪ್ರೋತ್ಸಾಹಿಸುತ್ತಾರೆ. ಇದರಲ್ಲಿ ಕನ್ನಡ– ಮರಾಠಿ ಭಾಷಿಗರೆಲ್ಲರೂ ಪಾಲ್ಗೊಳ್ಳುತ್ತಾರೆ. 1995–96ರಿಂದಲೂ ಇಲ್ಲಿ ‘ದೌಡ್’ ಆಚರಣೆಯಲ್ಲಿದೆ. ಜಿಲ್ಲೆಯ ಬಹುತೇಕ ತಾಲ್ಲೂಕುಗಳಲ್ಲಿ ಈ ಆಚರಣೆ ಇದ್ದು, ಸರಳವಾಗಿ ನಡೆಯಲಿದೆ.

ವಿಜಯದಶಮಿಯಂದು ನಗರದ ವಿವಿಧೆಡೆಯಿಂದ 5 ರಥಗಳು ಪ್ರಮುಖ ರಸ್ತೆಗಳಲ್ಲಿ ಸಂಚರಿಸುತ್ತವೆ. ವಿಶೇಷವಾಗಿ ಕ್ಯಾಂಪ್ ಪ್ರದೇಶದ ತೆಲುಗು ಭಾಷಿಕರು ಹೆಚ್ಚು ಸಂಭ್ರಮದಿಂದ ಮೆರವಣಿಗೆ ನಡೆಸುತ್ತಾರೆ. ಕಾಗವಾಡ, ಅಥಣಿ ಭಾಗದಲ್ಲಿ ಪ್ರತಿಷ್ಠಾಪಿಸುವ ದುರ್ಗಾ ಪ್ರತಿಮೆಗಳನ್ನು ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಿ ಕೃಷ್ಣಾ ನದಿಯಲ್ಲಿ ವಿಸರ್ಜಿಸುವ ಆಚರಣೆ ಇದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು