ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ಜಿಲ್ಲೆ ವಿಭಜನೆ: ಏಕಪಕ್ಷೀಯ ನಿರ್ಧಾರ ಸಲ್ಲದು: ಶಿವರಂಜನ ಬೋಳನ್ನವರ

ಬೈಲಹೊಂಗಲ ಜಿಲ್ಲಾ ಹೋರಾಟ ಸಮಿತಿ ಸದಸ್ಯರ ತುರ್ತು ಸಭೆ, ಸತೀಶ ಜಾರಕಿಹೊಳಿ ಹೇಳಿಕೆಗೆ ಖಂಡನೆ
Published 18 ಆಗಸ್ಟ್ 2023, 5:04 IST
Last Updated 18 ಆಗಸ್ಟ್ 2023, 5:04 IST
ಅಕ್ಷರ ಗಾತ್ರ

ಬೈಲಹೊಂಗಲ: ‘ಯಾವುದೇ ಜಿಲ್ಲೆಯನ್ನು ವಿಭಜನೆ ಮಾಡುವ ವಿಚಾರ ಹೇಳುವ ಮುನ್ನ ಜನರ ಅಭಿಪ್ರಾಯ ಕೇಳಬೇಕು. ಹೋರಾಟಗಾರರ ಆಶಯ ಪರಿಗಣಿಸಬೇಕು. ರಾಜಕಾರಣಿಗಳು ಏಕಪಕ್ಷೀಯವಾಗಿ ನಿರ್ಧಾರ ಪ್ರಕಟಿಸಬಾರದು. ಇದು ಪ್ರಜಾಪ್ರಭುತ್ವಕ್ಕೆ ವಿರುದ್ಧ’ ಎಂದು ಬೈಲಹೊಂಗಲ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಶಿವರಂಜನ ಬೋಳನ್ನವರ ಹೇಳಿದರು.

ಬೆಳಗಾವಿ ಜಿಲ್ಲೆ ವಿಭಜನೆ ಕುರಿತು ಸಚಿವ ಸತೀಶ ಹಾರಕಿಹೊಳಿ ಅವರ ಹೇಳಿಕೆ ಹಿನ್ನೆಲೆಯಲ್ಲಿ, ಪಟ್ಟಣದ ಶಾಖಾ ಮೂರುಸಾವಿರ ಮಠದಲ್ಲಿ ಗುರುವಾರ ನಡೆದ ತುರ್ತುಸಭೆಯಲ್ಲಿ ಅವರು ಮಾತನಾಡಿದರು.

‘ಜಿಲ್ಲೆ ವಿಭಜನೆ ವಿಚಾರದಲ್ಲಿ ರಾಜಕಾರಣಿಗಳು ಬೇಜವಾಬ್ದಾರಿ ಹೇಳಿಕೆ ಕೊಡುವುದನ್ನು ಬಿಡಬೇಕು. ಜನರ ದಾರಿ ತಪ್ಪಿಸುವ ಕೆಲಸ ಮಾಡಬಾರದು. ಅಧಿಕಾರ ಬಂದ ಮೇಲೂ ಚುನಾವಣೆಯ ಕಾಲದಲ್ಲೇ ಮಾತನಾಡಿದಂತೆ ಮಾತಾಡಬಾರದು’ ಎಂದರು.

‘ಜಿಲ್ಲೆಯ ಜನಪ್ರತಿನಿಧಿಗಳ ಜತೆಗೆ ಮಾತನಾಡಿದರೆ ಮುಗಿಯುವುದಿಲ್ಲ; ಹೋರಾಟಗಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಜನರ ಆಶಯ ಮನ್ನಣೆ ಮಾಡಬೇಕು. ಯಾವುದನ್ನೂ ಪರಿಗಣನೆಗೆ ತೆಗೆದುಕೊಳ್ಳದೇ ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳಬಾರದು’ ಎಂದೂ ಅವರು ಕಿಡಿ ಕಾರಿದರು.

‘ಬೆಳಗಾವಿ ಜಿಲ್ಲೆ ಅಖಂಡವಾಗಿಯೇ ಇರಬೇಕು. ಇಲ್ಲವಾದರೆ ಬೈಲಹೊಂಗಲ ಕೇಂದ್ರವಾಗಿ ಇನ್ನೊಂದು ಜಿಲ್ಲೆ ಘೋಷಣೆ ಮಾಡಬೇಕು’ ಎಂದೂ ಶಿವರಂಜನ ಬೋಳನ್ನವರ ಆಗ್ರಹಿಸಿದರು.

‘ಬೈಲಹೊಂಗಲ ಪಟ್ಟಣವು ಐತಿಹಾಸಕ ಮಹತ್ವ ಪಡೆದಿದೆ. ಬ್ರಿಟಿಷ್‌ ಕಾಲದಿಂದಲೂ ಉಪ ವಿಭಾಗದ ಕೇಂದ್ರವಾಗಿದೆ. ಇನ್ನೊಂದು ಜಿಲ್ಲೆ ಮಾಡಲು ಎಲ್ಲ ಆರ್ಹತೆಗಳೂ ಇವೆ. ಇದು ಕೇಂದ್ರ ಸ್ಥಾನವೂ ಆಗಿದೆ. ಈ ಬೇಡಿಕೆಯನ್ನು ರಾ‌ಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಅನಿವಾರ್ಯ’ ಎಂದರು.

ಹೋರಾಟ ಸಮಿತಿ ಇನ್ನೊಬ್ಬ ಮುಖಂಡ ಮಹಾಂತೇಶ ತುರಮರಿ ಮಾತನಾಡಿ, ‘ಜಿಲ್ಲಾ ಹೋರಾಟ ಕೂಗು ಬಹಳ ದಿನಗಳಿಂದ ಇದೆ. ಸರ್ಕಾರ ಈ ಕೂಡಲೇ ಎಚ್ಚೆತ್ತುಕೊಂಡು ಬೈಲಹೊಂಗಲ ಜಿಲ್ಲೆ ಮಾಡದೆ ಹೋದರೆ ಸವದತ್ತಿ, ಬೈಲಹೊಂಗಲ, ರಾಮದುರ್ಗ, ಕಿತ್ತೂರು ತಾಲ್ಲೂಕಿನ ಜನ ಸೇರಿ ಸರ್ಕಾರ ವಿರುದ್ಧ ಉಗ್ರ ಹೋರಾಟ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಮೂರುಸಾವಿರ ಮಠದ ಪೀಠಾಧಿಪತಿ ಪ್ರಭುನೀಲಕಂಠ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮುಖಂಡರಾದ ಮಡಿವಾಳಪ್ಪ ಹೋಟಿ, ಸೋಮನಾಥ ಸೊಪ್ಪಿಮಠ, ಶ್ರೀಶೈಲ ಯಡಳ್ಳಿ, ಮಹಾಂತೇಶ ಮತ್ತಿಕೊಪ್ಪ, ರುದ್ರಪ್ಪ ಹೊಸಮನಿ, ಬಿ.ಬಿ.ಗಣಾಚಾರಿ, ಮುರುಗೇಶ ಗುಂಡ್ಲೂರ, ಬಾಬು ಸುತಗಟ್ಟಿ, ಸುರೇಶ ವಾಲಿ ಅನೇಕರು ಇದ್ದರು.

Highlights - ಬೈಲಹೊಂಗಲದಲ್ಲಿ ಹೋರಾಟಗಾರರ ತುರ್ತುಸಭೆ ಬೆಳಗಾವಿ ಜಿಲ್ಲೆ ವಿಭಜನೆ ಸೂತ್ರಕ್ಕೆ ವಿರೋಧ ಸ್ಪಷ್ಟ ನಿರ್ಧಾರಕ್ಕೆ ಗಡುವು ನೀಡಿದ ಹೋರಾಟಗಾರರು

Quote -

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT