ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | ಮುಂಗಾರು ಪೂರ್ವ ಮಳೆ ಕೊರತೆ: ತಪ್ಪದ ಪಡಿಪಾಟಲು

Last Updated 7 ಮೇ 2020, 5:16 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯ ಗಡಿ ಭಾಗದಲ್ಲಿರುವ ಅಥಣಿ ತಾಲ್ಲೂಕನ್ನು ಬರಗಾಲ ಬೆಂಬಿಡಡೆ ಕಾಡುತ್ತಿದೆ. ಇದರಿಂದಾಗಿ ಅಲ್ಲಿನ ಜನರು ವಿಶೇಷವಾಗಿ ಕೃಷಿಕ ವರ್ಗದವರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಮಳೆ ಕೊರತೆಯಿಂದಾಗಿ ಇದು ಸದಾ ಬರಗಾಲದ ಬೀಡು ಎನಿಸಿಕೊಳ್ಳುತ್ತಿದೆ. ಕೃಷ್ಣಾ ನದಿ ಪಕ್ಕದಲ್ಲಿಯೇ ಹರಿಯುತ್ತಿದ್ದರೂ ಪ್ರತಿ ಬೇಸಿಗೆ ಸಂದರ್ಭದಲ್ಲೂ ಹಲವು ಕಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಪ್ರದೇಶವಿದು. ಮಳೆಗಾಲದಲ್ಲೂ ಟ್ಯಾಂಕರ್‌ ನೀರು ಪೂರೈಸುವ ಸ್ಥಿತಿ ಈ ತಾಲ್ಲೂಕಿನ ಹಲವು ಹಳ್ಳಿಗಳದು! ಪೂರ್ವ ಹಾಗೂ ಉತ್ತರ ಭಾಗ ಬರಗಾಲದಿಂದ ಮುಕ್ತಿ ಹೊಂದುತ್ತಲೇ ಇಲ್ಲ. ಎಕರೆಗಟ್ಟಲೆ ಜಮೀನಿದ್ದರೂ ಬೆಳೆ ಬೆಳೆಯಲಾದ ಸ್ಥಿತಿಯಲ್ಲಿ ಹಲವು ರೈತರಿದ್ದಾರೆ.

ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿರುವ ಕಾರಣಕ್ಕೆ ಬರಪೀಡಿತ ಎಂದು ಘೋಷಿಸಲಾಗಿರುವ ರಾಜ್ಯದ 49 ತಾಲ್ಲೂಕುಗಳಿಗೆ ಇನ್ನೂ ಒಂದು ತಿಂಗಳು ಇದೇ ಹಣೆಪಟ್ಟಿ ಮುಂದುವರಿಸಿದೆ. ಇದರಲ್ಲಿ ಅಥಣಿ ಕೂಡ ಒಂದು. ಇಲ್ಲಿ ಮುಂಗಾರು ಪೂರ್ವ ಮಳೆ ನಿರೀಕ್ಷಿಸಿದಷ್ಟು ಆಗಿಲ್ಲ. ಈ ಹಿನ್ನೆಲೆಯಲ್ಲಿ ಇನ್ನೊಂದು ತಿಂಗಳ ಅವಧಿಗೆ ಬರಪೀಡಿತ ಎಂದು ಸರ್ಕಾರ ಘೋಷಿಸಿದೆ. ಸತತ ಐದು ವರ್ಷಗಳಿಂದಲೂ ಇದು ಬರಪೀಡಿತವಾಗಿದೆ. ಸದ್ಯಕ್ಕೆ ಕುಡಿಯುವ ನೀರು ಪೂರೈಕೆ ಹಾಗೂ ಕಾಮಗಾರಿಗೆ ಆದ್ಯತೆ ಕೊಟ್ಟಿರುವುದರಿಂದ ನೀರಿಗೆ ತತ್ವಾರ ಅಷ್ಟೇನೂ ಕಂಡುಬಂದಿಲ್ಲ. ಹಿಪ್ಪರಗಿ ಬ್ಯಾರೇಜ್ ಕೆಳಭಾಗದ ಕೃಷ್ಣಾ ನದಿಗೆ 0.4 ಟಿಎಂಸಿ ನೀರು ಬಿಡುಗಡೆ ಮಾಡಿದ್ದು ಕೊಂಚ ನೆರವಾಗಿದೆ.

ಆತಂಕ ಹೆಚ್ಚಳ:ಈ ನಡುವೆ, ಕೃಷ್ಣಾ ನದಿಯಲ್ಲಿನ ನೀರಿನ ಪ್ರಮಾಣ ಕಡಿಮೆ ಆಗುತ್ತಿರುವುದು ಹಾಗೂ ಮುಂದಿನ ದಿನಗಳಲ್ಲಿ ನೀರಿಗೆ ಪರದಾಟ ಉಂಟಾಗಬಹುದು ಎನ್ನುವ ಸೂಚನೆ ದೊರೆತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ. ಕೃಷ್ಣಾ ನದಿಗೆ ಮಹಾಪೂರ ಬಂದರೂ ನಷ್ಟ; ಅದರಲ್ಲಿ ನೀರು ಕಡಿಮೆಯಾದರೂ ನಷ್ಟ ಅನುಭವಿಸುವುದು ಈ ತಾಲ್ಲೂಕಿನ ಹಲವು ಹಳ್ಳಿಗಳ ಜನರ ಪಾಡಾಗಿದೆ.

ಮಳೆಯಾಶ್ರಿತ ಪ್ರದೇಶದ ಬಹುತೇಕ ಜಲಮೂಲಗಳಾದ ಕೆರೆ–ಕಟ್ಟೆಗಳು ಬತ್ತಿ ಹೋಗಿರುವುದರಿಂದ ಅಂತರ್ಜಲ ಮಟ್ಟ ಕುಸಿದಿದೆ. ಸವಳು–ಜವಳು ಸಮಸ್ಯೆಯಿಂದಾಗಿ ಒಂದಷ್ಟು ಜಮೀನುಗಳು ಕೃಷಿಗೆ ಯೋಗ್ಯವಲ್ಲದ ಸ್ಥಿತಿಗೆ ತಲುಪಿರುವುದು ಕೃಷಿಗೆ ಹಿನ್ನಡೆಯಾಗಿದೆ.

ಕೃಷ್ಣಾ ನದಿಗೆ ನೀರು ಬಿಡುಗಡೆ ಮಾಡುವಂತೆ ಮಹಾರಾಷ್ಟ್ರ ಸರ್ಕಾರವನ್ನು ಗೋಗರೆಯುವುದು ಈ ವರ್ಷವೂ ತಪ್ಪಿಲ್ಲ!

ಇಲ್ಲಿನ ಪ್ರಮುಖ ಬೆಳೆ ಕಬ್ಬು. ಹಲವು ಸಕ್ಕರೆ ಕಾರ್ಖಾನೆಗಳೂ ಇವೆ. ಕೃಷ್ಣಾ ನದಿ ತೀರದ ಗ್ರಾಮಗಳವರು ಬಹುತೇಕ ಕಬ್ಬು ಹಾಕುತ್ತಾರೆ. ತೆಲಸಂಗ, ಐಗಳಿ ಭಾಗದಲ್ಲಿ ದ್ರಾಕ್ಷಿ ಬೆಳೆಯನ್ನೂ ಬೆಳೆಯಲಾಗುತ್ತದೆ. ಅಲ್ಲಲ್ಲಿ ಪ್ರಗತಿಪರ ಕೃಷಿಕರು ತೋಟಗಾರಿಕೆ ಬೆಳೆಗಳ ಮೊರೆ ಹೋಗಿದ್ದಾರೆ. ಕೊಳವೆಬಾವಿ ನೀರನ್ನು ನಂಬಿ ಕೃಷಿ ಮಾಡಿದ್ದ ಕೆಲವು ತೋಟಗಾರಿಕೆ ಬೆಳೆಗಾರರು ಲಾಕ್‌ಡೌನ್‌ನಿಂದಾಗಿ ತಮ್ಮ ಉತ್ಪನ್ನಗಳ ಮಾರಾಟಕ್ಕೆ ಮಾರುಕಟ್ಟೆ ದೊರೆಯದೆ ಕಂಗಾಲಾಗಿದ್ದಾರೆ; ನಷ್ಟ ಅನುಭವಿಸಿದ್ದಾರೆ. ಮುಂಗಾರು ಮಳೆ ಸಕಾಲಕ್ಕೆ ಆರಂಭವಾದರೆ ಅನುಕೂಲ ಎನ್ನುವುದು ಅಲ್ಲಿನ ಜನರ ಆಶಯವಾಗಿದೆ.

ಘಟಕದಿಂದಲೂ ಅನುಕೂಲವಿಲ್ಲ:ಕುಡಿಯುವ ನೀರು ದೊರೆಯಲೆಂದು ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಅಳವಡಿಸಲಾಗಿದೆ. ಆದರೆ, ಇವುಗಳಲ್ಲಿ ಬಹುತೇಕವು ತಾಂತ್ರಿಕ ತೊಂದರೆ, ನೀರಿನ ಕೊರತೆ ಮೊದಲಾದ ಕಾರಣಗಳಿಂದ ಪ್ರಯೋಜನಕ್ಕೆ ಬಾರದಂತಾಗಿದೆ.

‘ಅಥಣಿಯು ಬೆಳಗಾವಿ ಜಿಲ್ಲೆಗೆ ಸೇರಿದ್ದರೂ ಭೌಗೋಳಿಕವಾಗಿ ವಿಜಯಪುರದ ವಾತಾವರಣ ಹೊಂದಿದೆ. ಬಹುತೇಕ ಪ್ರದೇಶಗಳಲ್ಲಿ ಮಳೆ ನೀರು ಬೇಗನೆ ಇಂಗಿ ಹೋಗುತ್ತದೆ. ಹೀಗಾಗಿ, ಅಂತರ್ಜಲ ಮಟ್ಟ ಸಾವಿರ ಅಡಿಗಳವರೆಗೆ ಕುಸಿದಿದೆ. ಗಡಸು ಇರುವುದರಿಂದ ಕುಡಿಯುವುದಕ್ಕೂ ಯೋಗ್ಯವಾಗಿರುವುದಿಲ್ಲ. ಮೂರು ಜಿಲ್ಲಾ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನೀರಿಗೆ ತೊಂದರೆ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ’ ಎನ್ನುತ್ತಾರೆ ಶಾಸಕ ಮಹೇಶ ಕುಮಠಳ್ಳಿ.

‘ತಾಲ್ಲೂಕಿನಲ್ಲಿ ಕುಡಿಯುವ ನೀರು ಪೂರೈಕೆ, ಬರ ಕಾಮಗಾರಿ ಮುಂದುವರಿಸಲು ಸಾಧ್ಯವಾಗಬೇಕು ಎನ್ನುವ ಕಾರಣಕ್ಕೆ ಸರ್ಕಾರದಿಂದ ಬರಪೀಡಿತ ಎಂದು ಘೋಷಿಸಲಾಗಿದೆ. ಸದ್ಯ ಕುಡಿಯುವ ನೀರಿಗೆ ತೊಂದರೆ ಆಗದಂತೆ ನೋಡಿಕೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಮಸ್ಯೆ ಎದುರಾದರೆ ಟ್ಯಾಂಕರ್‌ ಮೊರೆ ಹೋಗಬೇಕಾಗುತ್ತದೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ಶಾಶ್ವತ ಯೋಜನೆ ಮಾಡಲಿ

ಅಥಣಿ ತಾಲ್ಲೂಕಿನ ಒಂದು ಭಾಗ ಮಾತ್ರ ನದಿ ತೀರದಲ್ಲಿದೆ. ಇನ್ನೂಳಿದ ಮೂರರಷ್ಟು ಪ್ರದೇಶವು ಗುಡ್ಡಗಾಡು ಪ್ರದೇಶದಂತಿದೆ. ಇದರಿಂದ ಆ ಭಾಗದಲ್ಲಿ ನೀರು ಸಂಗ್ರಹವಾಗುವುದಿಲ್ಲ. ಇದಕ್ಕಾಗಿ ಬರಪೀಡಿತ ಆಗುತ್ತಿದೆ. ಇದನ್ನು ತಪ್ಪಿಸಲು ಸರ್ಕಾರ ಶಾಶ್ವತವಾದ ಯೋಜನೆ ಜಾರಿಗೊಳಿಸಬೇಕು ಎಂದು ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷಮಹಾದೇವ ಮಡಿವಾಳ ಹೇಳುತ್ತಾರೆ.

ಮುಂದಿನ ದಿನಗಳಿಗೆ ಸಿದ್ಧತೆ

ಅಥಣಿ ಸೇರಿದಂತೆ ಜಿಲ್ಲೆಯ ಯಾವುದೇ ತಾಲ್ಲೂಕುಗಳಲ್ಲೂ ಸದ್ಯಕ್ಕೆ ಕುಡಿಯುವ ನೀರಿಗೆ ತೊಂದರೆ ಇಲ್ಲ. ಟ್ಯಾಂಕರ್‌ ಮೂಲಕ ನೀರು ಪೂರೈಸುವ ಸ್ಥಿತಿ ಇನ್ನೂ ಎದುರಾಗಿಲ್ಲ. ಮುಂದಿನ ದಿನಗಳಿಗೆ ಯೋಜಿಸಲಾಗಿದೆ ಎಂದು ಜಿ.ಪಂ. ಸಿಇಒಡಾ.ಕೆ.ವಿ. ರಾಜೇಂದ್ರ ಪ್ರತಿಕ್ರಿಯಿಸಿದರು.

ಪರಿಹಾರಕ್ಕೆ ಕ್ರಮ

ಬೇಸಿಗೆ ಸಂದರ್ಭದಲ್ಲಿ ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ 4 ಟಿಎಂಸಿ ನೀರು ಬಿಡುಗಡೆ ಮಾಡಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲಾಗಿದೆ. ಅವರಖೋಡ ಬಳಿ ಕೃಷ್ಣಾ ನದಿಗೆ ಬಾಂದಾರ ನಿರ್ಮಿಸಲು ₹ 45 ಕೋಟಿ ಮೊತ್ತದ ಯೋಜನೆ ರೂಪಿಸಿದ್ದೇನೆ. ಇದು ಅನುಷ್ಠಾನವಾದಲ್ಲಿ ಜನರಿಗೆ ಅನುಕೂಲವಾಗಲಿದೆ ಎಂದು ಶಾಸಕಮಹೇಶ ಕುಮಠಳ್ಳಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT