ಎಲ್ಲ ’ವುಡ್’ಗಳಲ್ಲೂ ಡ್ರಗ್ಸ್ ನಶೆ ಇದೆ: ಬಿ.ಸಿ. ಪಾಟೀಲ

ಬೆಳಗಾವಿ: ‘ಸ್ಯಾಂಡಲ್‌ವುಡ್, ಟಾಲಿವುಡ್, ಬಾಲಿವುಡ್ ಸೇರಿದಂತೆ ಎಲ್ಲ ವುಡ್‌ಗಳಲ್ಲೂ ಡ್ರಗ್ಸ್ ನಶೆ ಇದೆ’ ಎಂದು ಚಲನಚಿತ್ರ ನಟರೂ ಆಗಿರುವ ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.
ಇಲ್ಲಿನ ಬಿಜೆಪಿ ಕಚೇರಿಗೆ ಸೋಮವಾರ ಭೇಟಿ ನೀಡಿದ ವೇಳೆ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.
‘ಆ ಮಾಫಿಯಾ ಬಗ್ಗೆ ತನಿಖೆ ನಡೆಯುತ್ತಿದೆ. ಕಿಂಗ್‌ಪಿನ್‌ಗಳು, ಗಂಡಸರೋ, ಹೆಂಗಸರೋ, ರಾಜಕಾರಣಿಗಳ ಮಕ್ಕಳೋ ಯಾರಿದ್ದರೂ ಬಿಡುವುದಿಲ್ಲ. ಅವರನ್ನು ಮಟ್ಟ ಹಾಕುವ ಕೆಲಸವಾಗಲಿದೆ’ ಎಂದರು.
‘ಮಾದಕ ವಸ್ತುಗಳನ್ನು ಬಳಸುವವರು ಚಾರಿತ್ರ್ಯದ ಬಗ್ಗೆ ಯೋಚಿಸಬೇಕು’ ಎಂದು ಸಲಹೆ ನೀಡಿದರು.
ಹರಿಪ್ರಸಾದ್ ಹೇಳಿಕೆಗೆ ತಿರುಗೇಟು: ‘ಬಿಜೆಪಿಯ ಕೆಲವು ದೊಡ್ಡ ನಾಯಕರು ಅಫೀಮು ತೆಗೆದುಕೊಳ್ಳದೆ ಹೊರಬರುತ್ತಿರಲಿಲ್ಲ’ ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ‘ಹರಿಪ್ರಸಾದ್ ಹೇಳಿದ್ದೆಲ್ಲ ವೇದ ವಾಕ್ಯ ಅಲ್ಲ. ಅವರೇನು ಬ್ರಹ್ಮ ಅಲ್ಲ. ಬಿಜೆಪಿ ನಾಯಕರು ಅಫೀಮು ಸೇವಿಸುವುದನ್ನು ಅವರು ಯಾವಾಗ ನೋಡಿದ್ದರು? ಆ ಬಗ್ಗೆ ಆಗಲೇ ಹೇಳಬೇಕಿತ್ತಲ್ಲವೇ? ಇಷ್ಟು ದಿನ ಬಾಯಿ ಮುಚ್ಚಿಕೊಂಡಿದ್ದದ್ದು ಏಕೆ? ಸುಮ್ಮನೆ ಆಪಾದನೆ ಮಾಡಿ ಹೋಗುವುದು ತಪ್ಪು’ ಎಂದು ತಿರುಗೇಟು ನೀಡಿದರು.
‘ಆರ್‌ಎಸ್‌ಎಸ್ ರೀತಿ ನಮ್ಮ ಶತ್ರುಗಳನ್ನೂ ತಯಾರಿಸುವುದಿಲ್ಲ’ ಎಂಬ ಹರಿಪ್ರಸಾದ್ ಹೇಳಿಕೆಗೆ, ‘ಹಾಗಾದರೆ ಎಸ್‌ಡಿಪಿಐ ರೀತಿ ಮಾಡುತ್ತಾರಂತಾ?’ ಎಂದು ಕೇಳಿದರು. ‘ಬೆಂಗಳೂರಿನ ಕೆ.ಜೆ. ಹಳ್ಳಿ, ಡಿ.ಜೆ. ಹಳ್ಳಿಯಲ್ಲಿ ಗಲಾಟೆ ಮಾಡಿದವರ‍್ಯಾರು, ಗಲಾಟೆ ಎಲ್ಲಿಂದ ಆಗಿದೆ? ಶತ್ರುಗಳನ್ನು ತಯಾರು ಮಾಡುತ್ತಿರುವವರು ಅವರೇ. ದೇಶದ್ರೋಹಿಗಳು ಅವರಲ್ಲೇ ಜಾಸ್ತಿ ಜನ ಇದ್ದಾರೆ. ಅವರನ್ನು ಬಚಾವ್ ಮಾಡಲು ಎಷ್ಟೋ ಜನರ ಪ್ರಾಣ ಹೋಗಿದೆ. ಆಸ್ತಿ–ಪಾಸ್ತಿ ನಷ್ಟವಾಗಿದೆ. ಕೋಮು ಗಲಭೆಗೆ ಪ್ರಚೋದಿಸುತ್ತಾರೆ’ ಎಂದು ದೂರಿದರು.
ಬಿಜೆಪಿ ಪ್ರಶ್ನಿಸುವ ಯೋಗ್ಯತೆ ಕಾಂಗ್ರೆಸ್‌ಗಿಲ್ಲ: ‘ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಬಗ್ಗೆ ಪ್ರಶ್ನೆ ಮಾಡುವ ಯೋಗ್ಯತೆ ಕಾಂಗ್ರೆಸ್‌ಗೆ ಇಲ್ಲ. ಇನ್ನೂ 50 ವರ್ಷ ಕಾಂಗ್ರೆಸ್ ವಿರೋಧ ಪಕ್ಷದಲ್ಲೇ ಕೂರಬೇಕಾಗುತ್ತೆ ಎಂದು ಆ ಪಕ್ಷದ ನಾಯಕ ಗುಲಾಂ ನಬಿ ಆಜಾದ್ ಅವರೇ ಹೇಳಿದ್ದಾರೆ. ಹೀಗಿರುವಾಗ ಬಿಜೆಪಿ ಸರ್ಕಾರದ ವೈಫಲ್ಯ ಎಲ್ಲಿಂದ ಬಂತು’ ಎಂದು ಪ್ರಶ್ನಿಸಿದರು.
‘ಬಿ.ಎಸ್. ಯಡಿಯೂರಪ್ಪ ಅವರು ಏಕಾಂಗಿಯಾಗಿ ಪ್ರವಾಹ ಪರಿಸ್ಥಿತಿ ನಿಭಾಯಿಸಿದರು. ಬರಗಾಲ ನಿರ್ವಹಿಸಿದರು. ಕೋವಿಡ್–19 ಬಿಕ್ಕಟ್ಟನ್ನೂ ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ. ಈ ವಿಷಯಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲವಾಗಿಲ್ಲ’ ಎಂದು ಸಮರ್ಥಿಸಿಕೊಂಡರು.
ಕುಮಾರಸ್ವಾಮಿ ಸೀಸನಲ್ ರಾಜಕಾರಣಿ: ‘ಡ್ರಗ್ಸ್ ಮಾಫಿಯಾ ಹಣದಿಂದ ನನ್ನ ಸರ್ಕಾರ ಬಿದ್ದಿತು ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಆಗೇಕೆ ಅವರು ಸುಮ್ಮನಿದ್ದರು? ಅವರೇ ಮುಖ್ಯಮಂತ್ರಿ ಆಗಿದ್ದರು; ಕ್ರಮ ಜರುಗಿಸಬೇಕಿತ್ತು. ಅವರನ್ನು ತಡೆದಿದ್ದವರು ಯಾರು?’ ಎಂದು ವ್ಯಂಗ್ಯವಾಡಿದರು.
‘ಅವರೊಬ್ಬ ಸೀಸನಲ್ ರಾಜಕಾರಣಿ. ಸೀಸನ್‌ಗೆ ತಕ್ಕಂತೆ ಹೇಳಿಕೆ ಕೊಡುತ್ತಾರೆ. ಬೇರೆ ಬೇರೆ ಮಾಫಿಯಾ ಬಗ್ಗೆ ಹೇಳುತ್ತಾ ಹೋಗುತ್ತಾರೆ. ದಾಖಲೆ ಇದ್ದರೆ ಕೊಡಲಿ. ವರ್ಷವಾದ ಮೇಲೆ ಹೇಳುತ್ತಿದ್ದಾರೆ’ ಎಂದು ಟೀಕಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.