ಭಾನುವಾರ, ಏಪ್ರಿಲ್ 5, 2020
19 °C

ಹಸಿರು ಮನೆಯಿಂದ ಬದುಕು: 10 ಗುಂಟೆಯಲ್ಲಿ 25 ಟನ್ ಸೌತೆಕಾಯಿ ಇಳುವರಿ

ಪ್ರಸನ್ನ ಕುಲಕರ್ಣಿ Updated:

ಅಕ್ಷರ ಗಾತ್ರ : | |

prajavani

ಖಾನಾಪುರ: ಪಟ್ಟಣದ ರೈತ ರಾಜೇಶ ಸಾವಳೇಕರ ತಮ್ಮ ಜಮೀನಿನ ಕೇವಲ 10 ಗುಂಟೆ ಕ್ಷೇತ್ರದಲ್ಲಿ ಹಸಿರುಮನೆ ನಿರ್ಮಿಸಿ ಅದರಲ್ಲಿ  ಸೌತೆಕಾಯಿ ಬೆಳೆಯುವ ಮೂಲಕ ಮೂರು ತಿಂಗಳಲ್ಲಿ 25 ಟನ್ ಇಳುವರಿ ಪಡೆದು ₹ 2.5 ಲಕ್ಷ ವರಮಾನ ಗಳಿಸಿದ್ದಾರೆ.

ಕೃಷಿಯನ್ನು ಶ್ರದ್ಧೆ ಹಾಗೂ ಶಿಸ್ತುಬದ್ಧವಾಗಿ ಮಾಡಿದರೆ ಆರ್ಥಿಕ ಸಬಲತೆ ಸಾಧ್ಯ ಎನ್ನುವುದನ್ನು ತೋರಿಸಿದ್ದಾರೆ. ತಾಲ್ಲೂಕಿನ ದೊಡ್ಡ ಹೊಸೂರು ಗ್ರಾಮದ ಬಳಿಯ ರಾಜೇಶ್ ಅವರು 10 ಎಕರೆ ಕೃಷಿ ಭೂಮಿ ಹೊಂದಿದ್ದಾರೆ. ತಮ್ಮ ಜಮೀನಿನಲ್ಲಿ ಬಾಳೆ, ಗೋಡಂಬಿ, ಮಾವು, ಚಿಕ್ಕು, ನಿಂಬೆ, ಪಪ್ಪಾಯಿ, ತೆಂಗು ಮತ್ತಿತರ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ.

ಹತ್ತು ಗುಂಟೆ ಜಮೀನನ್ನು ಹಸಿರುಮನೆಗಾಗಿ ಸಿದ್ಧಪಡಿಸಿ ಅದರಲ್ಲಿ ಬೇರೆಡೆಯಿಂದ ಫಲವತ್ತಾದ ಕೆಂಪು ಮತ್ತು ಕಪ್ಪು ಮಣ್ಣನ್ನು ತಂದು ಹರಡಿಸಿದ್ದಾರೆ. ಹಸಿರುಮನೆಯಲ್ಲಿ ಅವರು ಕಳೆದ ಹಲವು ವರ್ಷಗಳಿಂದ ಆಧುನಿಕ ಮತ್ತು ವೈಜ್ಞಾನಿಕ ವಿಧಾನಗಳನ್ನು ಅನುಸರಿಸಿ ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ಪ್ರಗತಿಪರ ಕೃಷಿಕರೆಂದು ಗುರುತಿಸಿಕೊಂಡಿದ್ದಾರೆ.

ರಾಜೇಶ್ ತಾವು ಬೆಳೆದ ತೋಟಗಾರಿಕೆ ಬೆಳೆಗಳು ಕಟಾವು ಹಂತ ತಲುಪಿದಾಗ ಮಾರುಕಟ್ಟೆಯ ಬೇಡಿಕೆಯನ್ನಾಧರಿಸಿ ಕಟಾವು ಮಾಡಿ ಮಾರುಕಟ್ಟೆಗೆ ಸಾಗಿಸುವ ಮೂಲಕ ತೋಟಗಾರಿಕೆಯಲ್ಲಿ ಯಶಸ್ಸು ಕಂಡಿದ್ದಾರೆ. ಈ ಕ್ಷೇತ್ರದಲ್ಲಿ ಅನುಭವ ಹೊಂದಿರುವವರು, ಪರಿಣತರು ಹಾಗೂ ತಜ್ಞರನ್ನು ಸಂಪರ್ಕಿಸಿ ಅವರ ಮಾರ್ಗದರ್ಶನದಂತೆ ಅಲ್ಪಾವಧಿ ತರಕಾರಿ ಬೆಳೆಗಳನ್ನು ಬೆಳೆದು ಗುಣಮಟ್ಟದ ಫಸಲು ಪಡೆಯುತ್ತಿದ್ದಾರೆ.

ತೋಟಗಾರಿಕೆ ಇಲಾಖೆ ರಾಷ್ಟ್ರೀಯ ತೋಟಗಾರಿಕೆ ಅಭಿಯಾನದಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ರೈತರಿಗೆ ಪ್ರೋತ್ಸಾಹ, ಮಾರ್ಗದರ್ಶನ ಮತ್ತು ಸಹಾಯಧನ ನೀಡುತ್ತದೆ. ಜೊತೆಗೆ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಹಸಿರುಮನೆ ನಿರ್ಮಾಣಕ್ಕೆ ಸಹಾಯಧನವಿದೆ. ನೀರಾವರಿ ಸೌಲಭ್ಯ ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತರು 10 ಗುಂಟೆ ಕ್ಷೇತ್ರದಲ್ಲಿ ಹಸಿರುಮನೆ ನಿರ್ಮಿಸಿದರೆ ಇಲಾಖೆಯಿಂದ ಸಹಾಯಧನ ದೊರೆಯಲಿದೆ. ಅದನ್ನು ಬಳಸಿಕೊಂಡಿದ್ದಾರೆ ರಾಜೇಶ್.

‘ಹಸಿರುಮನೆಯಲ್ಲಿ ಬೆಳೆಸುವ ತರಕಾರಿಗಳು ಮತ್ತು ಹೂವುಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಹಾಗೂ ದರವಿದೆ. ತೋಟಗಾರಿಕೆ ಬೆಳೆಗಳಿಗೆ ಕಡಿಮೆ ಪ್ರಮಾಣದ ನೀರನ್ನು ಬಳಸಲು ಹನಿ ನೀರಾವರಿ ಸೌಲಭ್ಯ ಅಳವಡಿಸಬಹುದಾಗಿದ್ದು, ಇದಕ್ಕೂ ಇಲಾಖೆಯಿಂದ ಸಹಾಯಧನ ದೊರೆಯುತ್ತದೆ’ ಎಂದು ರಾಜೇಶ್ ತಮ್ಮ ಹಸಿರುಮನೆಯ ಸಫಲತೆಯನ್ನು ವಿವರಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು