ಗುರುವಾರ , ಮೇ 13, 2021
16 °C
ಅನುಮತಿಗಾಗಿ ಹಲವು ಷರತ್ತು; ಕುಟುಂಬದವರು ಹೈರಾಣ

PV Web Exclusive | ಮದುವೆ ಮಾಡಿ ನೋಡು!

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಮದುವೆ ಸಮಾರಂಭ ಸಮೀಪಿಸುತ್ತಿದ್ದಂತೆಯೇ ವಧು–ವರರ ಕುಟುಂಬಗಳಲ್ಲಿ ಸಂಭ್ರಮ ತುಂಬಿರುವುದು ಸಾಮಾನ್ಯ. ಬಂಧುಗಳ ಭೇಟಿ, ಸಮಾರಂಭದ ತಯಾರಿಗಾಗಿ ಎರಡೂ ಕುಟುಂಬದವರೂ ಖುಷಿ ಖುಷಿಯಾಗಿ ತೊಡಗಿಕೊಳ್ಳುತ್ತಾರೆ. ಆದರೆ, ಪ್ರಸ್ತುತ ಕೋವಿಡ್ 2ನೇ ಅಲೆಯ ಕಾರಣದಿಂದಾಗಿ ಜಾರಿಗೊಳಿಸಿರುವ ಕಠಿಣ ನಿಯಮಗಳಿಂದಾಗಿ ಮದುವೆ ಮನೆಗಳಲ್ಲಿ ಸಂತಸದ ಬದಲಿಗೆ ಗೊಂದಲ, ಆತಂಕ ಮನೆ ಮಾಡಿದೆ.

ಲಗ್ನಕ್ಕೆ ಪರವಾನಗಿ ಪಡೆಯುವುದಕ್ಕೆ ನಿಯಮಗಳೇ ವಿಘ್ನವಾಗಿ ಪರಿಣಮಿಸಿದೆ. ಪರಿಣಾಮ, ಮದುವೆಗಳನ್ನು ಮಾಡುವುದೋ, ಮುಂದೂಡುವುದೋ ಎನ್ನುವ ಗೊಂದಲದಲ್ಲಿಯೇ ಹಲವು ಕುಟುಂಬಗಳು ಮುಳುಗಿವೆ.

ಕಲ್ಯಾಣ ಮಂಟಪದವರು, ಅಡುಗೆಯವರು, ಪುರೋಹಿತರು, ಬ್ಯಾಂಡ್‌ನವರು, ಫೋಟೊಗ್ರಾಫರ್‌ಗಳು ಮೊದಲಾದವರಿಗೆ ಅಡ್ವಾನ್ಸ್ ಕೊಟ್ಟು ಬಹುತೇಕ ಸಿದ್ಧತೆಗಳನ್ನು ಮಾಡಿಕೊಂಡಿರುವವರು ನಷ್ಟದ ಭೀತಿ ಎದುರಿಸುತ್ತಿದ್ದಾರೆ. ಅದ್ಧೂರಿ ಮದುವೆಗೆ ತಯಾರಿ ನಡೆಸಿದವರು ನಿರ್ಬಂಧಗಳ ನಡುವೆ, ಸರಳವಾಗಿ ನೆರವೇರಿಸುವುದು ಹೇಗೆ ಎಂಬ ಚಿಂತೆಗೆ ಒಳಗಾಗಿದ್ದಾರೆ.

ಆಘಾತ ನೀಡಿದೆ: ಕಲ್ಯಾಣಮಂಟಪ ಅಥವಾ ಸಮುದಾಯ ಭವನಗಳಲ್ಲಿ ಮದುವೆ ಸಮಾರಂಭಕ್ಕಾಗಿ ಕುಟುಂಬದವರು, ಮೂರು ಕಚೇರಿಗಳಿಗೆ ಅಲೆದಾಡಿ ಪರವಾನಗಿ ಪಡೆಯಬೇಕಾಗಿದೆ. ಹೋದ ವರ್ಷ ಕೋವಿಡ್ ಲಾಕ್‌ಡೌನ್‌ನಿಂದಾಗಿ ಮದುವೆ ಮುಂದೂಡಿದ್ದವರು ಈ ಬಾರಿಯಾದರೂ ಸಂಭ್ರಮದಿಂದ ನಡೆಸಬೇಕು ಎಂದು ಕನಸು ಕಂಡಿದ್ದರು. ಅವರ ಕನಸುಗಳನ್ನು ಕೋವಿಡ್ ಅಲೆಯು ಛಿದ್ರಗೊಳಿಸಿ, ಆಘಾತ ನೀಡಿದೆ.

ಅತಿಥಿಗಳಿಗೆ ಮಿತಿ ಹೇರಿರುವುದು ಕೂಡ ವಧು–ವರರ ಕುಟುಂಬದವರಿಗೆ ತಲೆನೋವಾಗಿ ಪರಿಣಮಿಸಿದೆ. ಆಹ್ವಾನಿಸಿದ್ದವರನ್ನು, ಈಗ ‘ಬರಬೇಡಿ’ ಎಂದು ಹೇಳುವಂತಹ ಅನಿವಾರ್ಯ ಪರಿಸ್ಥಿತಿ ಅವರಿಗೆ ಬಂದೊದಗಿದೆ. 50 ಮಂದಿ ಮಾತ್ರ ಸೇರಬೇಕು ಎಂದು ನಿಯಮ ಮಾಡಲಾಗಿದೆ. ಭಾಗವಹಿಸುವ ಎಲ್ಲರೂ ಪಾಸ್ ಹೊಂದಿರಬೇಕು. ಅದನ್ನು ಆಯೋಜಕರು ಒದಗಿಸಬೇಕು. ಆಯೋಜಕರು ಕಡ್ಡಾಯವಾಗಿ ಉಪ ವಿಭಾಗಾಧಿಕಾರಿ ಕಚೇರಿ ಅಥವಾ ತಹಶೀಲ್ದಾರ್‌ ಕಚೇರಿಯಲ್ಲಿ ಅನುಮತಿ ಪಡೆಯಬೇಕು. ಪೊಲೀಸ್ ಠಾಣೆಯಿಂದ ನಿರಾಕ್ಷೇಪಣಾ ಪತ್ರ, ಬಳಿಕ ಆಯಾ ಸ್ಥಳೀಯ ಸಂಸ್ಥೆಯಿಂದ ಅನುಮತಿ ತೆಗೆದುಕೊಳ್ಳಬೇಕು. ಇವೆರಡನ್ನೂ ಉಪ ವಿಭಾಗಾಧಿಕಾರಿ ಕಚೇರಿ ಅಥವಾ ತಹಶೀಲ್ದಾರ್ ಕಚೇರಿಯಲ್ಲಿ ಸಲ್ಲಿಸಿ ಅಂತಿಮ ಅನುಮೋದನೆ ಪಡೆಯಬೇಕಾಗುತ್ತದೆ. ನಿಗದಿತ ಸಂಖ್ಯೆಗಿಂತ ಜಾಸ್ತಿ ಸೇರಿದರೆ ಆಯೋಜಕರು ಪ್ರಕರಣ ಎದುರಿಸಬೇಕಾಗುತ್ತದೆ.

ಪ್ರಕರಣದ ಭೀತಿ: ನಿಯಮಗಳನ್ನು ಉಲ್ಲಂಘಿಸಿದರೆ ಮದುವೆ ಮತ್ತಿತರ ಸಮಾರಂಭಗಳ ಸಂಘಟಕರು ಮಾತ್ರವಲ್ಲದೆ ಅಂತಹ ಕಾರ್ಯಕ್ರಮಗಳಿಗೆ ಅವಕಾಶ ಕಲ್ಪಿಸುವ ಕಲ್ಯಾಣಮಂಟಪಗಳು ಅಥವಾ ಛತ್ರಗಳು, ಸಮುದಾಯ‌ ಭವನಗಳ ಮಾಲೀಕರು, ವ್ಯವಸ್ಥಾಪಕರನ್ನೂ ಹೊಣೆ ಮಾಡಿ ಅವರ ಮೇಲೂ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಸ್ಥಳಾವಕಾಶ ಕಲ್ಪಿಸುವಾಗ ಕಲ್ಯಾಣಮಂಟಪಗಳ ವ್ಯವಸ್ಥಾಪಕರು ಕಡ್ಡಾಯವಾಗಿ ಸಂಘಟಕರಿಂದ ಅನುಮತಿ ಪತ್ರ ಪಡೆಯಬೇಕು. ನಿಗಾ ವಹಿಸಲು ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗುವುದು. ಅವರು ವಿಡಿಯೊಗ್ರಾಫರ್‌ ಜೊತೆ ನಿಗಾ ವಹಿಸುತ್ತಾರೆ ಎಂದು ನಿಯಮದಲ್ಲಿದೆ. ಇವೆಲ್ಲಾ ಕಠಿಣ ನಿಯಮಗಳಿಂದ ‘ಮದುವೆ ಮಾಡಿ ನೋಡುವುದು ಸವಾಲಿನ ಸಂಗತಿಯೇ ಆಗಿದೆ’ ಎನ್ನುವುದು ಕುಟುಂಬದವರ ಅಳಲಾಗಿದೆ.

ಗುರುವಾರದಿಂದಲೇ ಭಾಗಶಃ ಲಾಕ್‌ಡೌನ್‌ ಜಾರಿಗೊಳಿಸಿರುವುದರಿಂದಾಗಿ ಬಟ್ಟೆ, ಚಿನ್ನಾಭರಣ ಮೊದಲಾದ ಸಾಮಗ್ರಿಗಳ ಖರೀದಿಗೂ ತೊಡಕಾಗಿ  ಪರಿಣಮಿಸಿದೆ. ಹೆಚ್ಚಿನ ಮದುವೆಗಳು ವಾರಾಂತ್ಯದಲ್ಲೇ ಇವೆ. ಆಗ, ಕಠಿಣ ಲಾಕ್‌ಡೌನ್‌ ಜಾರಿಯಲ್ಲಿರುತ್ತದೆ ಎನ್ನುವ ಮಾತುಗಳು ಕೂಡ ಆಯೋಜಕರನ್ನು ಕಂಗೆಡಿಸಿದೆ. ಮದುವೆಗೆ ಬರುವವರ ಹೆಸರು, ಮೊಬೈಲ್ ಫೋನ್‌ ನಂಬರ್‌, ವಿಳಾಸವನ್ನೂ ಲಗ್ನಪತ್ರಿಕೆಯೊಂದಿಗೆ ಕುಟುಂಬದವರು ತಾಲ್ಲೂಕು ಆಡಳಿತಕ್ಕೆ ಸಲ್ಲಿಸಬೇಕು ಎನ್ನುವ ಷರತ್ತು ಅವರನ್ನು ಕಂಗಾಲಾಗಿಸಿದೆ.

ಕಠಿಣ ನಿಯಮಗಳ ಕಾರಣದಿಂದಾಗಿ, ಕೆಲವರು ಮದುವೆಯನ್ನೇ ಮುಂದೂಡಿದ್ದಾರೆ.

‘ಏ.26ರಂದು ಮದುವೆ ನಿಶ್ಚಯಿಸಿದ್ದೇವೆ. ಪರವಾನಗಿಗಾಗಿ ಕಚೇರಿ ಅಲೆಯುತ್ತಿದ್ದೇವೆ. ಇದುವರೆಗೂ ಸಿಕ್ಕಿಲ್ಲ. ಪಾಲ್ಗೊಳ್ಳುವ 50 ಮಂದಿಯ ಸಂಪರ್ಕ ಸಂಖ್ಯೆ, ವಿಳಾಸ ಎಲ್ಲವನ್ನೂ ಕೇಳುತ್ತಿದ್ದಾರೆ. ಮದುವೆಗೆ ಕಠಿಣ ನಿಯಮ ವಿಧಿಸಿರುವುದು ಸರಿಯಲ್ಲ. ಅಧಿಕಾರಿಗಳು ಮಾನವೀಯತೆಯಿಂದ ವರ್ತಿಸಬೇಕು’ ಎಂದು ಅನುಮತಿಗಾಗಿ ಬಂದಿದ್ದ ಅರ್ಜುನ ತುಕಾರಾಮ ಮರಗಿ ಕೋರಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು