ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರೆ ಪರಿಹಾರ | 24ರಂದು ಕಾಂಗ್ರೆಸ್‌ನಿಂದ ಬೃಹತ್‌ ಪ್ರತಿಭಟನೆ: ಸತೀಶ ಜಾರಕಿಹೊಳಿ

Last Updated 20 ಸೆಪ್ಟೆಂಬರ್ 2019, 11:01 IST
ಅಕ್ಷರ ಗಾತ್ರ

ಬೆಳಗಾವಿ: ‘ನೆರೆ ಸಂತ್ರಸ್ತರಿಗೆ ಸಮರ್ಪಕ ಪರಿಹಾರ ನೀಡುವಂತೆ ಸರ್ಕಾರವನ್ನು ಆಗ್ರಹಿಸಿ ಕಾಂಗ್ರೆಸ್‌ ಪಕ್ಷದಿಂದ ಸೆ. 24ರಂದು ನಗರದಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಗುವುದು’ ಎಂದು ಶಾಸಕ ಸತೀಶ ಜಾರಕಿಹೊಳಿ ತಿಳಿಸಿದರು.

‘ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್‌, ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ಪಕ್ಷದ ಎಲ್ಲ ಶಾಸಕರು, ವಿಧಾನಪರಿಷತ್ ಸದಸ್ಯರು, ಸಂಸದರು, ಮುಖಂಡರು ಭಾಗವಹಿಸುವರು. ಸಂತ್ರಸ್ತರು ಸೇರಿದಂತೆ 25ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳಲಿದ್ದಾರೆ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಸಂಗೊಳ್ಳಿರಾಯಣ್ಣ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಲಾಗುವುದು. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬಹಿರಂಗ ಸಭೆ ನಡೆಸಿ, ಸರ್ಕಾರದ ಗಮನಸೆಳೆಯಲಾಗುವುದು’ ಎಂದು ಹೇಳಿದರು.

ಸರ್ಕಾರ ವಿಫಲವಾಗಿದೆ:

‘ನೆರೆ ಪರಿಹಾರದ ವಿಷಯದಲ್ಲಿ ಸರ್ಕಾರ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಎರಡೂ ಕಡೆ ಒಂದೇ ಸರ್ಕಾರ ಇದ್ದರೆ ಹೆಚ್ಚಿನ ಅನುದಾನ ತರಬಹುದು ಎಂದು ಬಿ.ಎಸ್. ಯಡಿಯೂರಪ್ಪ ಹಿಂದೆ ಹೇಳುತ್ತಿದ್ದರು. ಈಗ ಅವರೇ ಮುಖ್ಯಮಂತ್ರಿ ಆಗಿದ್ದಾರೆ. ಕೇಂದ್ರದಲ್ಲೂ ಅವರದೇ ಸರ್ಕಾರವಿದೆ. ಆದರೆ, ಅನುದಾನ ತರಲು ವಿಫಲವಾಗಿದ್ದಾರೆ. ಅವರೇ ಹೇಳುವಂತೆ ₹35ಸಾವಿರ ಕೋಟಿ ನಷ್ಟವಾಗಿದೆ. ಆದರೆ, ₹ 1ಸಾವಿರ ಕೋಟಿಯನ್ನಷ್ಟೇ ಬಿಡುಗಡೆ ಮಾಡಿದ್ದಾರೆ. ಹಾಗಾದರೆ ಎಲ್ಲರಿಗೂ ಪರಿಹಾರ, ಸೂರು ಕಲ್ಪಿಸಲು ಇನ್ನೂ ಎಷ್ಟು ವರ್ಷಗಳು ಬೇಕಾಗುತ್ತವೆ?’ ಎಂದು ಕೇಳಿದರು.

‘ಮಾರ್ಗಸೂಚಿಗಳ ಪ್ರಕಾರ ₹ 10ಸಾವಿರ ತಾತ್ಕಾಲಿಕ ಪರಿಹಾರವನ್ನೂ ಕೊಟ್ಟಿಲ್ಲ. ನಿರಾಶ್ರಿತರಿಗೆ ತ್ವರಿತವಾಗಿ ಮನೆ ಕಟ್ಟಿಕೊಡುವ ನಿಟ್ಟಿನಲ್ಲೂ ಕ್ರಮ ಕೈಗೊಂಡಿಲ್ಲ. ಭರವಸೆಗಳೆಲ್ಲವೂ ವಿಫಲವಾಗಿವೆ’ ಎಂದು ಟೀಕಿಸಿದರು.

ಹೆದರಿದ ಸರ್ಕಾರ:

‘ಕಂದಾಯ ಸಚಿವ ಆರ್. ಅಶೋಕ್ ಬೆಂಗಳೂರು ಬಿಟ್ಟು ಬೇರೆಲ್ಲೂ ಹೋಗಿಲ್ಲ. ಕೇಂದ್ರದಿಂದ ಇಬ್ಬರು ಸಚಿವರು ಬಂದು ಹೋದರೂ, ಸಂತ್ರಸ್ತರಿಗೆ ಪರಿಹಾರ ಸಿಕ್ಕಿಲ್ಲ. ಇದನ್ನು ಖಂಡಿಸಿ ಚಳಿಗಾಲದ ಅಧಿವೇಶನದಲ್ಲೂ ದನಿ ಎತ್ತುತ್ತೇವೆ. ಸಂತ್ರಸ್ತರಿಗೆ ಪರಿಹಾರ ನೀಡದೇ ಇರುವುದರಿಂದ ಹೆದರಿದ ರಾಜ್ಯ ಸರ್ಕಾರ, ಚಳಿಗಾಲದ ಅಧಿವೇಶನವನ್ನು ಸುವರ್ಣ ವಿಧಾನಸೌಧದ ಬದಲಿಗೆ ಬೆಂಗಳೂರಿನಲ್ಲೇ ನಡೆಸುತ್ತಿದೆ’ ಎಂದು ಕುಟುಕಿದರು.

‘ಪ್ರಧಾನಿ ನರೇಂದ್ರ ಮೋದಿ ಮುಖ್ಯಮಂತ್ರಿ ಭೇಟಿಗೆ ಸಮಯವನ್ನೇ ಕೊಡುತ್ತಿಲ್ಲ. ಅವರು ಬೆಳೆಯದಿರಲೆಂದು ಹೀಗೆ ಮಾಡುತ್ತಿರಬಹುದು. ಮನಸ್ಸು ಮಾಡಿದ್ದರೆ ರಾಜ್ಯಕ್ಕೆ ನೆರೆ ಪರಿಹಾರಕ್ಕಾಗಿ ಕನಿಷ್ಠ ₹ 2ಸಾವಿರವನ್ನಾದರೂ ಬಿಡುಗಡೆ ಮಾಡಬೇಕಾಗಿತ್ತು’ ಎಂದು ಪ್ರತಿಕ್ರಿಯಿಸಿದರು.

‘ಗೋಕಾಕದಲ್ಲಿ ಉಪ ಚುನಾವಣೆಗೆ ಸಿದ್ಧತೆ ಮಾಡಿಕೊಂಡಿದ್ದೇವೆ. ಅಲ್ಲಿ ಟಿಕೆಟ್‌ಗಾಗಿ ಒಂದೇ (ಲಖನ್‌ ಜಾರಕಿಹೊಳಿ) ಹೆಸರಿದೆ. ಇನ್ನೂ ಯಾರಾದರೂ ಅರ್ಜಿ ಸಲ್ಲಿಸಿದರೆ ಅದನ್ನೂ ಹೈಕಮಾಂಡ್‌ಗೆ ಕಳುಹಿಸಲಾಗುವುದು. ಆದರೆ, ನಾನು ಹೇಳಿದವರನ್ನು ಆಯ್ಕೆ ಮಾಡುತ್ತಾರೆ’ ಎನ್ನುವ ಮೂಲಕ ಸೋದರನಿಗೆ ಟಿಕೆಟ್‌ ಖಚಿತ ಎಂಬ ಸಂದೇಶ ರವಾನಿಸಿದರು.

ಮುಖಂಡರಾದ ಫಿರೋಜ್‌ ಸೇಠ್‌, ವಿನಯ ನಾವಲಗಟ್ಟಿ, ಪಕ್ಷದ ನಗರ ಘಟಕದ ಅಧ್ಯಕ್ಷ ರಾಜು ಸೇಠ್‌, ಸುನೀಲ್ ಹನುಮಣ್ಣವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT