ಚನ್ನಮ್ಮನ ಕಿತ್ತೂರು: ಕಿತ್ತೂರು ನಾಡಿನ ಕಲಿಗಳು ಬ್ರಿಟಿಷ್ ಸಾಮ್ರಾಜ್ಯವನ್ನು ಬಗ್ಗು ಬಡಿದು ಇಲ್ಲಿಗೆ 201 ವರ್ಷಗಳು ಕಳೆದಿವೆ. ಇಂಥ ರುಧಿರ ಚರಿತ್ರೆಯನ್ನು ಪೂರ್ಣವಾಗಿ ತಿಳಿಯಲು ಇದೂವರೆಗೂ ಆಗಿಲ್ಲ. ಸರ್ಕಾರ ಪ್ರತಿ ವರ್ಷ ಉತ್ಸವ ಮಾಡುತ್ತಿದೆ ಹೊರತು; ಒಮ್ಮೆಯೂ ಉತ್ಖನನ ಮಾಡಿಲ್ಲ. ಕ್ರಾಂತಿ ನೆಲದ ಇತಿಹಾಸ ಮಣ್ಣಲ್ಲಿ ಮೌನವಾಗಿ ಮಲಗಿದೆ.

ಕಳೆದ ವರ್ಷ ನಡೆದ 200ನೇ ವಿಜಯೋತ್ಸವ ಸಮಾರೋಪ ಸಮಾರಂಭಕ್ಕೆ ಬಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ‘ಒಂದು ವರ್ಷದವರೆಗೆ ಉತ್ಖನನ ಮಾಡಿಸಿ, ಇತಿಹಾಸಕ್ಕೆ ಹೆಚ್ಚು ಅದ್ಯತೆ ನೀಡಲಾಗುವುದು. ಮುಂದಿನ ಉತ್ಸವಕ್ಕೆ ಹೆಚ್ಚು ಮೆರುಗು ಕೊಡಲಾಗುವುದು’ ಎಂದು ಭರವಸೆ ನೀಡಿದ್ದರು. ಅದರಲ್ಲಿ ಒಂದು ಮಾತನ್ನೂ ನಡೆಸಿ ಕೊಟ್ಟಿಲ್ಲ ಎಂಬ ಕೊರಗು ಇತಿಹಾಸ ಸಂಶೋಧಕರದ್ದು.

ಕೆಲ ವರ್ಷಗಳ ಹಿಂದೆ ಕಿತ್ತೂರ ಕೋಟೆಯ ಒಳಗಡೆ ನಡೆದ ಉತ್ಖನನದಿಂದ ಸಂಸ್ಥಾನ ಕಾಲದ ಹಲವು ಪ್ರಕಾರದ ಕಟ್ಟಡ ಅವಶೇಷಗಳು ಸಿಕ್ಕಿವೆ. ಕಲ್ಲು– ಗಾರೆಯಿಂದ ನಿರ್ಮಿಸಿರುವ ಕಟ್ಟಡ, ಅಧಿಕಾರಿಗಳ ಕೊಠಡಿಗಳು, ದೇವರ ಕೋಣೆ, ಬಟ್ಟೆ ತೊಳೆಯುವ ಮನೆ ಮುಂತಾದವು ಅಲ್ಲಿವೆ. ಇಡೀ ಕೋಟೆಯ ಪರಿಸರವನ್ನು ವ್ಯವಸ್ಥಿತವಾಗಿ ಉತ್ಖನನ ಮಾಡಿದರೆ ಇನ್ನಷ್ಟು ಕುರುಹುಗಳು ಸಿಗುತ್ತವೆ ಎನ್ನುತ್ತಾರೆ ಅವರು.

ಸದ್ಯ ಕಿತ್ತೂರಿನಲ್ಲಿ ಇರುವುದು ಅರಮನೆ ಹಾಗೂ ಅದರ ಸುತ್ತಲಿನ ಗೋಡೆ ಮಾತ್ರ. ಸಂಸ್ಥಾನದ ರಕ್ಷಣೆಗೆ ಬೃಹತ್ ಕೋಟೆಯೂ ಇದ್ದಿರಬಹುದು. ಸೆರೆಮನೆ, ನ್ಯಾಯಾಲಯ ಎಲ್ಲವೂ ಇರಲೇಬೇಕು. ಅವುಗಳನ್ನು ಹುಡುಕಬೇಕಿದೆ. ‘ಸೂರ್ಯ ಮುಳುಗದ ಸಾಮ್ರಾಜ್ಯ’ವನ್ನು ಎದುರು ಹಾಕಿಕೊಳ್ಳಲು ಧೈರ್ಯ– ಶೌರ್ಯ ಮಾತ್ರ ಸಾಲುವುದಿಲ್ಲ. ಯುದ್ಧ ಸಾಮಗ್ರಿಗಳು, ಸೈನ್ಯ, ಸಂಪತ್ತು, ಯುದ್ಧೋತ್ತರ ಪರಿಣಾಮ ತಾಳಿಕೊಳ್ಳುವ ಸಾಮರ್ಥ್ಯ ಬೇಕು. ಚನ್ನಮ್ಮನಿಗೆ ಆ ಸಾಮರ್ಥ್ಯವಿತ್ತು ಎಂದು ತೋರಿಸಿದ್ದಾಳೆ. ಈಗ ನಾವು ತಿಳಿದಿರುವ ಇತಿಹಾಸಕ್ಕಿಂತಲೂ ಬಹುದೊಡ್ಡ ವಿಷಯ ಇನ್ನೂ ಮಣ್ಣಿನಲ್ಲಿ ಅಡಗಿದೆ. ಅದರ ಉತ್ಖನನ ಆಗಬೇಕು’ ಎನ್ನುತ್ತಾರೆ ಸಂಶೋಧಕ ಸಂತೋಷ ಹಾನಗಲ್ಲ.

‘ವಿದ್ವಾಂಸರಾದ ಪ್ರೊ.ಮಲ್ಲಿಕಾರ್ಜುನ ಹಿರೇಮಠ ಹಾಗೂ ಎ.ಬಿ. ವಗ್ಗರ ಈಗಾಗಲೇ ಮುಂಬೈ, ಪುಣೆಯಲ್ಲಿನ ಕೆಲವು ದಾಖಲೆಗಳನ್ನು ಸಂಗ್ರಹಿಸಿದ್ದಾರೆ. ಲಾವಣಿ, ಗೀಗೀ, ದುಂದುಮೆ, ಕೋಲುಪದ, ಹಂತಿಪದ, ಗರತಿಹಾಡುಗಳಲ್ಲಿ ಸಿಕ್ಕ ಸಾಲುಗಳೂ ಇತಿಹಾಸ ಕಟ್ಟಿಕೊಟ್ಟಿವೆ. ಆದರೆ, ಉತ್ಖನನ ಇನ್ನಷ್ಟು ರಹಸ್ಯ ಹೊರಗೆಳೆಯಬಹುದು’ ಎನ್ನುವುದು ಪ್ರೊ.ಸಿ.ಕೆ.ನಾವಲಗಿ ಅವರ ಅಭಿಮತ.

ಹಂಪಿ, ಹಳೆಬೀಡು, ಬೇಲೂರು, ಬಾದಾಮಿ, ಮೈಸೂರು ಸೇರಿ ಐತಿಹಾಸಿಕ ಸ್ಥಳಗಳ ವೈಭವ ಬೆಳಕಿಗೆ ಬಂದಿದ್ದು ಉತ್ಖನನದ ಮೂಲಕ. ಪುರಾತತ್ವ ಇಲಾಖೆ ಇಂಥ ಪ್ರಯತ್ನವನ್ನು ಕಿತ್ತೂರು ವಿಷಯದಲ್ಲಿ ಮಾಡಬೇಕು. ಯುದ್ಧಾವಶೇಷ, ಅರಮನೆಯೊಳಗಿನ ವಸ್ತುಗಳು, ಅಸ್ತ್ರಗಳನ್ನು ನೆಲದಲ್ಲೇ ಹುದುಗಿಸಿಟ್ಟ ಸಾಧ್ಯತೆ ಇದೆ ಎಂದು ವಿದ್ವಾಂಸರು ಹೇಳುತ್ತಾರೆ.

ಕಿತ್ತೂರು ಬೈಲಹೊಂಗಲ ‘ಕ್ಷೇತ್ರಕಾರ್ಯ’ ಅಗತ್ಯ

‘ಕಿತ್ತೂರು ಕೊಳ್ಳೆ ಹೊಡೆದಾಗ ₹16 ಲಕ್ಷ ಹಣ ₹4 ಲಕ್ಷ ಮೌಲ್ಯದ ಆಭರಣ 3000 ಕುದುರೆ 2000 ಒಂಟೆ 100 ಆನೆ 23 ತೋಪು 56 ಬಂದೂಕು ಬಿಲ್ಲು–ಬಾಣ ಕತ್ತಿ ಗುರಾಣಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಈಸ್ಟ್ ಇಂಡಿಯಾ ಕಂಪನಿ ಡೆಕ್ಕನ್ ಕಮಿಷನರ್ ಆಗಿದ್ದ ವಿಲಿಯಂ ಚಾಪ್ಲಿನ್ ದಾಖಲಿಸಿದ್ದಾರೆ. ಆದರೆ ಕಿತ್ತೂರು ಸಂಸ್ಥಾನದಲ್ಲಿ ಎಣಿಕೆಗೆ ಸಿಗದಷ್ಟು ಸಂಪತ್ತು ಇತ್ತು. ಸೋಲಿನ ಬಳಿಕ ರಾಣಿ ಅದನ್ನೆಲ್ಲ ಆನೆ ಒಂಟೆ ಕುದುರೆ ಕತ್ತೆಗಳ ಮೇಲೆ ಹೇರಿ ನಾಡಾಡಿಗಳ ಪಾಲು ಮಾಡಿದಳು. ಯುದ್ಧಾವಧಿಯಲ್ಲಿ ಸಂಪತ್ತನ್ನು ಹುದುಗಿಸಿ ಇಟ್ಟಿರುವ ಸಾಧ್ಯತೆ ಇದೆ. ನಿಖರತೆಗಾಗಿ ಉತ್ಖನನ ನಡೆಯಬೇಕು’ ಎಂಬುದೂ ನಾವಲಗಿ ಅವರ ಅಭಿಮತ. ‘ಈಗಿನ ಕಿತ್ತೂರು ಹಾಗೂ ಬೈಲಹೊಂಗಲ ತಾಲ್ಲೂಕಿನ ಬಹುಪಾಲು ಹಳ್ಳಿಗಳು ಕಿತ್ತೂರು ಸಂಸ್ಥಾನದಲ್ಲಿದ್ದವು. ಎಲ್ಲ ಹಳ್ಳಿಗಳಲ್ಲೂ ಸರ್ಕಾರ ಕ್ಷೇತ್ರಕಾರ್ಯ ನಡೆಸಬೇಕು. ಆಗ ಮಾತ್ರ ಪ್ರಾಣತ್ಯಾಗ ಮಾಡಿದವರಿಗೆ ಬೆಲೆ ಕೊಟ್ಟಂತೆ ಆಗುತ್ತದೆ’ ಎಂಬುದು ಅವರ ಆಗ್ರಹ.

ಚನ್ನಮ್ಮನ ಜತೆಗಿದ್ದ ಬಂಟರಲ್ಲಿ ಕೆಲವರನ್ನು ಮಾತ್ರ ಗುರುತಿಸಲಾಗಿದೆ. ನೂರಾರು ವೀರರು ಮರೆತು ಹೋಗಿದ್ದಾರೆ. ಅವರ ಊರುಗಳು ಮನೆತನಗಳನ್ನು ಪತ್ತೆ ಹಚ್ಚಬೇಕಿದೆ
–ಪ್ರೊ.ಸಿ.ಕೆ.ನಾವಲಗಿ ಜಾನಪದ ವಿದ್ವಾಂಸ

ರಾಣಿ ಚನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ತಾಯಿ– ಮಗ ಇದ್ದಂತೆ. ಅಭಿವೃದ್ಧಿ ವಿಚಾರದಲ್ಲಿ ತಾಯಿ– ಮಗನನ್ನು ಅಗಲಿಸಬಾರದು. ಕಿತ್ತೂರಿಗೂ ಆದ್ಯತೆ ನೀಡಬೇಕು
–ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಪೀಠಾಧಿಪತಿ ರಾಜಗುರು ಸಂಸ್ಥಾನ ಕಲ್ಮಠ

ಕಿತ್ತೂರು ಇತಿಹಾಸದ ಅಲ್ಪಭಾಗ ಮಾತ್ರ ನಮಗೆ ಸಿಕ್ಕಿದೆ. ಉತ್ಖನನ ಮಾಡಿದಷ್ಟೂ ಇತಿಹಾಸ ಸ್ಪಷ್ಟವಾಗುತ್ತದೆ. ಜತೆಗೆ ಅರಮನೆಯ ಪ್ರತಿರೂಪ ನಿರ್ಮಿಸುವುದೂ ಅಗತ್ಯ
–ಸಂತೋಷ ಹಾನಗಲ್ಲ ಸಂಶೋಧಕ