ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಗ್ಗಿದ ಮಳೆ: ಮುಂದುವರಿದ ಕೃಷ್ಣೆಯ ಅಬ್ಬರ

ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಮುಕ್ತ
Last Updated 26 ಜುಲೈ 2021, 17:35 IST
ಅಕ್ಷರ ಗಾತ್ರ

ಬೆಳಗಾವಿ: ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಮಳೆ ಅಬ್ಬರ ಕಡಿಮೆಯಾಗಿದೆ. ಆದರೆ, ನೆರೆಯ ಮಹಾರಾಷ್ಟ್ರದ ಜಲಾಶಯಗಳಿಂದ ಆ ನದಿಗೆ ಬರುತ್ತಿರುವ ನೀರಿನ ಪ್ರಮಾಣ ಸೋಮವಾರವೂ ಏರಿಕೆಯಾಗಿದ್ದು ಚಿಕ್ಕೋಡಿ, ರಾಯಬಾಗ, ಅಥಣಿ ತಾಲ್ಲೂಕುಗಳಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿದೆ. ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ.

ಅಥಣಿ ತಾಲ್ಲೂಕಿನ ಸವದಿ ಗ್ರಾಮದ ವಾಡಾ ಬಸವೇಶ್ವರ ದೇವಸ್ಥಾನದ ಬಳಿ ಮನೆಯ ಸಾಮಗ್ರಿಗಳನ್ನು ಒಯ್ಯುವಾಗ ರಾಮನಗೌಡ ಪಾಟೀಲ (55) ಎನ್ನುವವರು ಕೃಷ್ಣಾ ನದಿ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ.

ಚಿಕ್ಕೋಡಿ ತಾಲ್ಲೂಕಿನ ಮಾಂಜರಿ ಗ್ರಾಮದ ಜೀವನ್ ಆಸ್ಪತ್ರೆಯಲ್ಲಿ ಸಿಲುಕಿದ್ದ ನಸಲಾಪುರ ಗ್ರಾಮದ ರೋಗಿಯನ್ನು ಸ್ಥಳೀಯರು ಸ್ಥಳಾಂತರಿಸಿದರು. ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನಿಂದ 3.40 ಲಕ್ಷ ಮತ್ತು ದೂಧ್‌ಗಂಗಾ ನದಿಯಿಂದ 52,800 ಕ್ಯುಸೆಕ್‌ ಸೇರಿ 3.92 ಲಕ್ಷ ಕ್ಯುಸೆಕ್‌ ನೀರು ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಗೆ ಬಂದು ಸೇರುತ್ತಿದೆ. ಕೃಷ್ಣೆಯ ಜೊತೆಗೆ ಉಪ ನದಿಗಳಾದ ವೇದಗಂಗಾ, ದೂಧ್‌ಗಂಗಾ, ಪಂಚಗಂಗಾ ನದಿಗಳ ಉಕ್ಕಿ ಹರಿಯುತ್ತಿದ್ದು ಜಮೀನುಗಳಿಗೆ ಮತ್ತು ತೀರದಲ್ಲಿರುವ ಮನೆಗಳಿಗೆ ನುಗ್ಗಿದೆ. ನಿಪ್ಪಾಣಿ ಮತ್ತು ಚಿಕ್ಕೋಡಿ ತಾಲ್ಲೂಕಿನಲ್ಲಿ ಹೆಚ್ಚು ಹಾನಿ ಉಂಟಾಗಿದೆ. ‘ಪ್ರವಾಹದಿಂದಾಗಿ ಜುಲೈ 22ರಿಂದ ಬಂದ್ ಮಾಡಲಾಗಿದ್ದ ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಯನ್ನು ವಾಹನಗಳ ಸಂಚಾರಕ್ಕೆ ಸೋಮವಾರ ಮಧ್ಯಾಹ್ನದಿಂದ ಮುಕ್ತಗೊಳಿಸಲಾಗಿದೆ’ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

ಇತ್ತ ಘಟಪ್ರಭಾ, ಹಿರಣ್ಯಕೇಶಿ, ಮಾರ್ಕಂಡೇಯ ಮತ್ತು ಮಲಪ್ರಭಾ ನದಿಗಳ ತೀರದಲ್ಲೂ ಪ್ರವಾಹ ಪರಿಸ್ಥಿತಿ ಮುಂದುವರಿದಿದೆ. ಗೋಕಾಕ, ಮೂಡಲಗಿ, ಹುಕ್ಕೇರಿ, ರಾಮದುರ್ಗ ತಾಲ್ಲೂಕುಗಳಲ್ಲಿ ಹಳ್ಳಿಗಳು ಜಲಾವೃತಗೊಂಡಿವೆ. ಗೋಕಾಕದಿಂದ ಗೋಕಾಕ ಜಲಪಾತದ ಕಡೆಗೆ ಸಂಪರ್ಕ ಕಲ್ಪಿಸುವ ಚಿಕ್ಕೊಳಿ ಸೇತುವೆ ಮಾರ್ಕಂಡೇಯ ನದಿ ಪ್ರವಾಹದಿಂದ ಕೊಚ್ಚಿ ಹೋಗಿದೆ. ನೀರು ಇಳಿದಿದ್ದರೂ ವಾಹನ ಸಂಚಾರಕ್ಕೆ ಅವಕಾಶ ನೀಡಿಲ್ಲ.

ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ಬಂದ್‌: ನವಿಲುತೀರ್ಥ ಜಲಾಶಯದಿಂದ ಮಲಪ್ರಭಾ ಹೊಳೆ, ಕಾಲುವೆಗಳಿಗೆ ಈವರೆಗೆ 18 ಸಾವಿರ ಕ್ಯುಸೆಕ್‌ ನೀರು ಹರಿಸಿದ್ದರಿಂದಾಗ ಗದಗ ಜಿಲ್ಲೆಯ ನರಗುಂದ ತಾಲ್ಲೂಕಿನ ಕೊಣ್ಣೂರ ಬಳಿ ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ಬಂದ್‌ ಆಗಿದೆ. ಇದರಿಂದಾಗಿ ವಿಜಯಪುರ, ಹುಬ್ಬಳ್ಳಿ ಕಡೆ ತೆರಳುವ ಪ್ರಯಾಣಿಕರು ಪರದಾಡಿದರು.

ಪ್ರವಾಹ ಪರಿಸ್ಥಿತಿಯಿಂದಾಗಿ ಕೊಣ್ಣೂರಿನ 100ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ. ಇಲ್ಲಿನ ನಿವಾಸಿಗಳಿಗಾಗಿ ಕೆಇಎಸ್ ಕಾಲೇಜಿನಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ. ಕಾಳಜಿ ಕೇಂದ್ರಕ್ಕೆ ಬರಲು ಒಪ್ಪದ ಜನರ ಮನವೊಲಿಸಿ ಸ್ಥಳಾಂತರಿಸಲಾಯಿತು.

ಬಿಡುವು ನೀಡಿದ ವರುಣ (ಶಿವಮೊಗ್ಗ ವರದಿ): ಎರಡು ದಿನಗಳಿಂದ ಜಿಲ್ಲೆಯಲ್ಲಿ ಮಳೆ ಬಿಡುವು ನೀಡಿದ್ದು, ಸೋಮವಾರ ಬಿಸಿಲು ಇದ್ದು, ಅಲ್ಲಲ್ಲಿ ತುಂತುರು ಮಳೆಯಾಗಿದೆ.

ಹೊಸನಗರ, ಸಾಗರ, ತೀರ್ಥಹಳ್ಳಿಯಲ್ಲಿ ಆಗಾಗ ತುಂತುರು ಮಳೆಯಾಗಿದೆ. ಹೊಸನಗರ ತಾಲ್ಲೂಕು ಸಾವೆಹಕ್ಲು ಜಲಾಶಯ ತುಂಬಿದ್ದು, ಹೊರಹೋಗುವ ನೀರಿನ ಸೊಬಗು ನೋಡಲು ಜನರು ಸಾಗರೋಪಾದಿಯಲ್ಲಿ ಬರುತ್ತಿದ್ದಾರೆ.

ಕೊಡಗಿನಲ್ಲಿ ಬಿರುಸಿನ ಮಳೆ (ಮಡಿಕೇರಿ ವರದಿ): ಕೊಡಗು ಜಿಲ್ಲೆಯಲ್ಲಿ ಭಾನುವಾರ ರಾತ್ರಿ ಧಾರಾಕಾರ ಮಳೆಯಾಗಿದೆ. ಸೋಮವಾರವೂ ಉತ್ತಮ ಮಳೆಯಾಯಿತು.

ದಕ್ಷಿಣ ಕನ್ನಡದಲ್ಲಿ ಉತ್ತಮ ಮಳೆ

ಮಂಗಳೂರು: ಕರಾವಳಿಯಲ್ಲಿ ಮಳೆ ಚುರುಕಾಗಿದ್ದು, ಚಿಕ್ಕಮಗಳೂರಿನಲ್ಲಿ ಮಳೆಯ ಪ್ರಮಾಣ ತಗ್ಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು-ಪಾಣಾಜೆ ರಸ್ತೆಯಲ್ಲಿರುವ ಬೆಟ್ಟಂಪಾಡಿ ಗ್ರಾಮದ ಚೆಲ್ಯಡ್ಕ ಮುಳುಗು ಸೇತುವೆ ಸೋಮವಾರ ಮೂರನೇ ಬಾರಿಗೆ ಮುಳುಗಡೆಯಾಗಿದೆ. ಕುಮಾರಾಧಾರ ಮತ್ತು ನೇತ್ರಾವತಿ ನದಿಗಳ ನೀರಿನ ಮಟ್ಟ ಏರಿಕೆಯಾಗಿದೆ. ಮಂಗಳೂರು ತಾಲ್ಲೂಕಿನ ಮಲ್ಲೂರು ಜಂಕ್ಷನ್ ಬಳಿ ಮನೆಯ ಮೇಲೆ ಗುಡ್ಡ ಕುಸಿದು ಹಾನಿಯಾಗಿದೆ. ಬೀಪಾತುಮ್ಮ ಎಂಬುವವರಿಗೆ ಗಾಯವಾಗಿದೆ.
ಉಡುಪಿ ಜಿಲ್ಲೆಯಲ್ಲಿ ಸೋಮವಾರ ಸಾಧಾರಣ ಮಳೆ ಸುರಿಯಿತು. ಕೃಷಿ ಚಟುವಟಿಕೆಗಳು ಬಿರುಸುಪಡೆದುಕೊಂಡಿವೆ. ಕುಂದಾಪುರ ತಾಲ್ಲೂಕಿನ ಯಡಮೊಗೆಯಲ್ಲಿ ಮಳೆಯಿಂದ ಮನೆಗೆ ಹಾನಿಯಾಗಿದೆ.

ಹಂಪಿ ಸ್ಮಾರಕ ಮುಳುಗಡೆ

ಹೊಸಪೇಟೆ (ವಿಜಯನಗರ): ಇಲ್ಲಿನ ತುಂಗಭದ್ರಾ ಜಲಾಶಯದಿಂದ ನದಿಗೆ ನೀರು ಹರಿಸುತ್ತಿರುವುದರಿಂದ ವಿಶ್ವಪ್ರಸಿದ್ಧ ಹಂಪಿ ಸ್ನಾನಘಟ್ಟ, ಚಕ್ರತೀರ್ಥ, ಪುರಂದರದಾಸರ ಮಂಟಪ, ವಿಜಯನಗರ ಕಾಲದ ಕಾಲು ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ.
ತುಂಗಭದ್ರಾ ಜಲಾಶಯದ ಎಲ್ಲ 33 ಕ್ರಸ್ಟ್‌ಗೇಟ್‌ ತೆಗೆದು 1,40,000 ಕ್ಯುಸೆಕ್‌ ನೀರು ನದಿಗೆ ಹರಿಸಲಾಗುತ್ತಿದೆ.

ಕಂಪ್ಲಿ-ಗಂಗಾವತಿ ಸೇತುವೆ ಜಲಾವೃತ

ಗಂಗಾವತಿ (ಕೊಪ್ಪಳ ಜಿಲ್ಲೆ): ತುಂಗಭದ್ರಾ ಜಲಾಶಯದಿಂದ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ನೀರು ನದಿಗೆ ಹರಿಸಲಾಗುತ್ತಿದ್ದು, ಕಂಪ್ಲಿ–ಗಂಗಾವತಿ ನಡುವೆ ಸಂಪರ್ಕ ಕಲ್ಪಿಸುವ ಸೇತುವೆ ಸೋಮವಾರ ಜಲಾವೃತವಾಗಿದೆ.

ವಿರುಪಾಪುರಗಡ್ಡೆಯಿಂದ ಹಂಪಿಗೆ ತೆರಳುವ ಮಾರ್ಗ, ಆನೆಗುಂದಿ ಕೃಷ್ಣ ದೇವರಾಯ ಸಮಾಧಿ (64 ಸಾಲಿನ ಕಂಬಗಳ ದೇವಸ್ಥಾನ) ನೀರಿನಲ್ಲಿ ಮುಳುಗಿದೆ. ನವಬೃಂದಾನದ ಸಂಪರ್ಕ ಕಡಿತಗೊಂಡಿದೆ.

ಸಾಣಾಪುರ, ಸೇತುವೆ, ಹನುಮನಹಳ್ಳಿ, ದೇವಘಾಟ್, ಲಕ್ಷ್ಮಿಪುರ, ನಾಗನಳ್ಳಿ, ಚಿಕ್ಕಂಜಂಕಲ್ ಭಾಗದ ಭತ್ತ, ಕಬ್ಬು, ಬಾಳೆ ತೋಟಗಳು ಜಲಾವೃತವಾಗಿವೆ‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT