ಬುಧವಾರ, ಮಾರ್ಚ್ 3, 2021
26 °C
ಬೆಳ್ಳಿ ಆಭರಣ ತಯಾರಿಕೆ ಉದ್ಯಮಕ್ಕೂ ತಟ್ಟಿದ ಬಿಸಿ

ಚಿಕ್ಕೋಡಿ: ಕುಶಲಕರ್ಮಿಗಳ ಬದುಕಿಗೆ ಲಾಕ್‌ಡೌನ್‌ ಬರೆ

ಸುಧಾಕರ ತಳವಾರ Updated:

ಅಕ್ಷರ ಗಾತ್ರ : | |

Prajavani

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ರಾಜ್ಯದ ಗಡಿಯಂಚಿನಲ್ಲಿರುವ ಮಾಂಗೂರ ಸೇರಿದಂತೆ ಸುತ್ತಲಿನ ಹಲವು ಹಳ್ಳಿಗಳ ಸಾವಿರಾರು ಕುಟುಂಬಗಳು ಬೆಳ್ಳಿ ಆಭರಣಗಳ ತಯಾರಿಕೆ ವೃತ್ತಿಯನ್ನೇ ನೆಚ್ಚಿಕೊಂಡು ಸಂಸಾರದ ಬಂಡಿ ಸಾಗಿಸುತ್ತಿವೆ. ಆದರೆ, ಲಾಕ್‌ಡೌನ್‌ನಿಂದಾಗಿ ಬೆಳ್ಳಿ ಉದ್ಯಮ ಸ್ತಬ್ಧಗೊಂಡಿದೆ. ಪರಿಣಾಮ ಕುಶಲಕರ್ಮಿಗಳ ಬದುಕು ಅತಂತ್ರವಾಗಿದೆ.

‘ಚಂದೇರಿ ನಗರ’ ಎಂದೇ ಖ್ಯಾತವಾಗಿರುವ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಹುಪರಿ ಪಟ್ಟಣದಿಂದ ಕೂಗಳತೆ ದೂರದಲ್ಲಿರುವ ನಿಪ್ಪಾಣಿ ತಾಲ್ಲೂಕಿನ ಮಾಂಗೂರ ಹಾಗೂ ಕುನ್ನೂರ, ಬಾರವಾಡ, ಕಾರದಗಾ ಮೊದಲಾದ ಗ್ರಾಮಗಳ ಮನೆ ಮನೆಗಳಲ್ಲೂ ಬೆಳ್ಳಿ ಆಭರಣಗಳನ್ನು ತಯಾರಿಸುವ ಕುಶಲಕರ್ಮಿಗಳಿದ್ದಾರೆ.

70ರ ದಶಕದಿಂದೀಚೆಗೆ ಮಾಂಗೂರದಲ್ಲಿ ಬೆಳ್ಳಿ ಉದ್ಯಮ ಬೆಳೆದಿದೆ. ಅಲ್ಲಿ 200 ಬೆಳ್ಳಿ ಆಭರಣ ತಯಾರಿಕೆ ಘಟಕಗಳಿವೆ. ಅವು ಕುಶಲಕರ್ಮಿಗಳಿಗೆ ಜೀವನಾಧಾರವಾಗಿವೆ. ಆದರೆ, ಲಾಕ್‌ಡೌನ್‌ನಿಂದ ಘಟಕಗಳು ಬಂದ್ ಆಗಿರುವುದರಿಂದ ಕುಶಲಕರ್ಮಿಗಳಿಗೆ ಕೆಲಸ ಇಲ್ಲವಾಗಿದೆ. ಇವರು ಕುಟುಂಬ ನಿರ್ವಹಣೆಗೆ ಪರದಾಡುತ್ತಿದ್ದಾರೆ.

ಹುಪರಿಯ ಉದ್ಯಮಿಗಳು ಬೆಳ್ಳಿ ನೀಡಿ ನಿರ್ದಿಷ್ಟ ಆಭರಣಗಳನ್ನು ತಯಾರಿಸಿ ಕೊಡಲು ಆರ್ಡರ್‌ ಕೊಡುತ್ತಾರೆ. ಅದಕ್ಕೆ ಅನುಗುಣವಾಗಿ ಮಾಂಗೂರದ ಬೆಳ್ಳಿ ಆಭರಣ ತಯಾರಿಕೆ ಘಟಕಗಳ ಮಾಲೀಕರು ಕುಶಲಕರ್ಮಿಗಳನ್ನು ಬಳಸಿಕೊಂಡು ಆಭರಣಗಳನ್ನು ತಯಾರಿಸಿ ಉದ್ಯಮಿಗಳಿಗೆ ನೀಡುತ್ತಾರೆ. ಕುಶಲಕರ್ಮಿಗಳಿಗೆ ದಿನಗೂಲಿ ಕೊಡುತ್ತಾರೆ.

ಕುಶಲಕರ್ಮಿ ಒಬ್ಬರು ದಿನಕ್ಕೆ ಬೆಳ್ಳಿ ಆಭರಣಗಳ ಜೋಡಣೆ, ಕುಸುರಿ ಕೆತ್ತನೆಯಿಂದ ₹ 200ರಿಂದ ₹ 300 ಗಳಿಸುತ್ತಾರೆ. ಮನೆಯಲ್ಲಿ ಮಹಿಳೆಯರೂ ಬಿಡುವಿನ ವೇಳೆಯಲ್ಲಿ ಬೆಳ್ಳಿ ಆಭರಣ ತಯಾರಿಸಿ ತಿಂಗಳಿಗೆ ಮೂರ್ನಾಲ್ಕು ಸಾವಿರ ರೂಪಾಯಿ ಸಂಪಾದಿಸುತ್ತಾರೆ. ಇವರಿಗೆ ಲಾಕ್‌ಡೌನ್‌ ಬರೆ ಎಳೆದಿದೆ.

‘ಲಾಕ್‌ಡೌನ್‌ನಿಂದ ಬೆಳ್ಳಿ ಆಭರಣಗಳ ತಯಾರಿಕೆ ವೃತ್ತಿಯನ್ನೇ ನೆಚ್ಚಿಕೊಂಡು ಬದುಕು ನಡೆಸುತ್ತಿರುವ 2ಸಾವಿರ ಕುಟುಂಬಗಳು ಕೆಲಸವಿಲ್ಲದೆ ಕಂಗಾಲಾಗಿವೆ. ನೆರೆಯ ಮಹಾರಾಷ್ಟ್ರದ ಐಎಂಡಿಸಿ ಕೈಗಾರಿಕೆಗಳೂ ಮುಚ್ಚಿರುವುದರಿಂದ ಪರ್ಯಾಯ ಉದ್ಯೋಗವೂ ದೊರಕದೆ ದಿಕ್ಕು ತೋಚದಂತಾಗಿದೆ’ ಎಂದು ಮಾಂಗೂರದ ಸಹಕಾರಿ ಮುಖಂಡ ಪ್ರದೀಪ ಜಾಧವ ಹೇಳುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು