ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಂಡ ವಿಧಿಸಲು ಮಾರ್ಷಲ್‌ಗಳ ನೇಮಕ

Last Updated 20 ಏಪ್ರಿಲ್ 2021, 14:19 IST
ಅಕ್ಷರ ಗಾತ್ರ

ಬೆಳಗಾವಿ: ‘ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಜಿಲ್ಲೆಯ 33 ನಗರ ಸ್ಥಳೀಯ ಸಂಸ್ಥೆಗಳಲ್ಲಿ 121 ಕೋವಿಡ್ ಮಾರ್ಷಲ್ ಪಡೆಗಳನ್ನು ರಚಿಸಲಾಗಿದೆ. ಪಡೆಯಲ್ಲಿರುವವರು, ಮಾರ್ಗಸೂಚಿ ಉಲ್ಲಂಘಿಸುವವರಿಗೆ ದಂಡ ವಿಧಿಸುವುದು ಮೊದಲಾದ ಕ್ರಮಗಳನ್ನು ಜರುಗಿಸಲಿದ್ದಾರೆ’ ಎಂದುಜಿಲ್ಲಾ ನಗರಾಭಿವೃದ್ಧಿ ಯೋಜನಾ ಕೋಶದ ಯೋಜನಾ ನಿರ್ದೇಶಕ ಈಶ್ವರ ಉಳ್ಳಾಗಡ್ಡಿ ತಿಳಿಸಿದ್ದಾರೆ.

‘ಸಾರ್ವಜನಿಕರು ತೆರೆದ ಮಾರುಕಟ್ಟೆಗಳಲ್ಲಿ ಗುಂಪು ಗುಂಪಾಗಿ ಸೇರುವುದನ್ನು ಮಾರ್ಷಲ್‌ಗಳು ತಡೆಗಟ್ಟಲಿದ್ದಾರೆ. ತೆರೆದ ಪ್ರದೇಶಗಳಲ್ಲಿ ಸಂತೆ ನಡೆಸುವ ವರ್ತಕರು ಅವರವರ ಮಳಿಗೆಗಳನ್ನು 3 ಅಡಿ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಲಿದ್ದಾರೆ. ಜನರು ಅಂತರ ಕಾಯ್ದುಕೊಳ್ಳುವುದು ಹಾಗೂ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಇದನ್ನು ಉಲ್ಲಂಘಿಸುವವರನ್ನು ಮಾರ್ಷಲ್‌ಗಳು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಕೋವಿಡ್ ಪರೀಕ್ಷೆಗೆ ಒಳಪಡಿಸುತ್ತಾರೆ’.

‘ಉದ್ದಿಮೆ ನಡೆಸುವ ವರ್ತಕರು ಅಂಗಡಿ ಮುಂಭಾಗ 3 ಅಡಿ ಅಂತರ ಕಾಯ್ದುಕೊಳ್ಳುವ ಸಲುವಾಗಿ ಗುರುತು ಹಾಕಿಸುವ ಹಾಗೂ ಮಾಸ್ಕ್ ಧರಿಸದ ಸಾರ್ವಜನಿಕರಿಗೆ ಯಾವುದೇ ರೀತಿ ವಸ್ತುಗಳನ್ನು ಮಾರದಂತೆ ಮಾರ್ಷಲ್ ಪಡೆಗಳು ನೋಡಿಕೊಳ್ಳಲಿವೆ. ಮಾಸ್ಕ್ ಧರಿಸದಿದ್ದಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ₹ 250, ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ₹ 100 ದಂಡ ವಿಧಿಸಲಿದ್ದಾರೆ. ಮದುವೆ ಹಾಗೂ ಇನ್ನಿತರ ಸಮಾರಂಭಗಳು ನಡೆಯುವ ಕಟ್ಟಡ ಸಾಮರ್ಥ್ಯಕ್ಕೆ ಅನುಗುಣವಾಗಿ ಶೇ. 50ರಷ್ಟು ಮಾತ್ರ ಜನರು ಸೇರಲು ಅವಕಾಶವಿದೆ. ಈ ನಿಯಮವು ಉಲ್ಲಂಘನೆ ಆಗದಂತೆ ನಿಗಾ ವಹಿಸಲಿವೆ’.

‘ಮದುವೆ ಹಾಗೂ ಇನ್ನಿತರ ಕಾರ್ಯಕ್ರಮಗಳಿಗೆ ಸಕ್ಷಮ ಪ್ರಾಧಿಕಾರದಿಂದ ಕಡ್ಡಾಯವಾಗಿ ಅನುಮತಿ ಪಡೆದುಕೊಂಡಿರುವ ಕುರಿತು ಪರಿಶೀಲಿಸಲಿವೆ. ಅನುಮತಿ ಪಡೆಯದ ಕಟ್ಟಡ ಮಾಲೀಕರ ಉದ್ದಿಮೆ ಪರವಾನಗಿ ರದ್ದುಪಡಿಸಲು ಅವಶ್ಯ ಕ್ರಮ ಕೈಗೊಳ್ಳಲಿದ್ದಾರೆ. ಜನ್ಮದಿನ ಹಾಗೂ ಇತರ ಆಚರಣೆಗಳು ನಡೆಯುವ ಸ್ಥಳಗಳಲ್ಲಿ ತೆರೆದ ಪ್ರದೇಶಗಳಲ್ಲಿ 50 ಜನರು ಮೀರದಂತೆ ಹಾಗೂ ಸಭಾಂಗಣಗಳು/ಹಾಲ್‌ಗಳು ಇತ್ಯಾದಿ ಮುಚ್ಚಿದ ಪ್ರದೇಶಗಳಲ್ಲಿ 25 ಜನರು ಮೀರದಂತೆ ಸೇರುವ ಕುರಿತು ನಿಗಾ ವಹಿಸಲಿವೆ’.

‘ನಗರ ಸ್ಥಳೀಯ ಸಂಸ್ಥೆಗಳಲ್ಲಿ ಧಾರ್ಮಿಕ ಆಚರಣೆಗಳು ಅಥವಾ ಸಮಾರಂಭಗಳು ನಡೆಯದಂತೆ ಕ್ರಮ ವಹಿಸಲಿದ್ದಾರೆ. ಕೋವಿಡ್- 19 ದೃಢಪಟ್ಟಲ್ಲಿ, ಮನೆಯಲ್ಲಿ ಪ್ರತ್ಯೇಕ ಕೋಣೆ ಹಾಗೂ ಶೌಚಾಲಯ ಇದ್ದಲ್ಲಿ ಮಾತ್ರ ಅಲ್ಲಿರಬಹುದು. ಇಲ್ಲದಿದ್ದಲ್ಲಿ ಕೋವಿಡ್ ಕೇರ್ ಸೆಂಟರ್‌ಗೆ ದಾಖಲಾಗಬೇಕು. ಈ ನಿಯಮಗಳನ್ನು ಉಲ್ಲಂಘಿಸುವವರಿಗೆ ಕೋವಿಡ್ ಮಾರ್ಷಲ್ ಪಡೆಗಳು ನಿಯಮಾನುಸಾರ ಕ್ರಮ ವಹಿಸಲಿವೆ’ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT