ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | ವಾಪಸ್ಸಾದ 14 ಸಾವಿರ ಕಾರ್ಮಿಕರಿಗೆ ನರೇಗಾ ಯೋಜನೆಯಡಿ ಉದ್ಯೋಗ

Last Updated 9 ಜೂನ್ 2020, 19:30 IST
ಅಕ್ಷರ ಗಾತ್ರ

ಬೆಳಗಾವಿ: ಲಾಕ್‌ಡೌನ್‌ದಿಂದಾಗಿ ಗ್ರಾಮಗಳಿಗೆ ವಾಪಸ್ಸಾಗಿರುವ ಜಿಲ್ಲೆಯ ಕಾರ್ಮಿಕರಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಯೋಜನೆ ಆಸರೆಯಾಗಿದೆ. ಸುಮಾರು 14 ಸಾವಿರಕ್ಕಿಂತಲೂ ಹೆಚ್ಚು ಜನರು ಹೊಸದಾಗಿ ಜಾಬ್‌ ಕಾರ್ಡ್‌ ಪಡೆದು, ದುಡಿಮೆ ಮಾಡುತ್ತಿದ್ದಾರೆ. ಉಪಜೀವನ ನಡೆಸುತ್ತಿದ್ದಾರೆ.

ಲಾಕ್‌ಡೌನ್‌ಕ್ಕಿಂತಲೂ ಮುಂಚೆ ಜಿಲ್ಲೆಯಲ್ಲಿ ಸುಮಾರು 6.10 ಲಕ್ಷ ಕಾರ್ಮಿಕರು ಜಾಜ್‌ ಕಾರ್ಡ್‌ ಹೊಂದಿದ್ದರು. ಈಗ ವಲಸೆ ಕಾರ್ಮಿಕರು ವಾಪಸ್ಸಾಗಿದ್ದರಿಂದ ಕಾರ್ಮಿಕರ ಬಲ ಇನ್ನಷ್ಟು ಹೆಚ್ಚಾಗಿದ್ದು, ನರೇಗಾ ಕಾಮಗಾರಿಗಳು ಭರದಿಂದ ಸಾಗಿವೆ.

ಉದ್ಯೋಗವೇ ಆಸರೆ:ಜಿಲ್ಲೆಯ ಸಾವಿರಾರು ಜನರು ನೆರೆಯ ಮಹಾರಾಷ್ಟ್ರ, ಗುಜರಾತ್‌, ಆಂಧ್ರಪ್ರದೇಶಕ್ಕೆ ಉದ್ಯೋಗ ಅರಸಿ ಹೋಗಿದ್ದರು. ಕೋವಿಡ್‌–19 ಸೋಂಕು ಹರಡುವುದನ್ನು ತಡೆಗಟ್ಟಲು ದೇಶದಾದ್ಯಂತ ಮಾರ್ಚ್‌ 22ರಿಂದ ಲಾಕ್‌ಡೌನ್‌ ಹೇರಲಾಗಿತ್ತು. ಎಲ್ಲ ಕೆಲಸ, ಕಾಮಗಾರಿಗಳು ಬಂದ್‌ ಆಗಿದ್ದವು. ಇದರಿಂದಾಗಿ ಜಿಲ್ಲೆಯ ಕಾರ್ಮಿಕರು ವಾಪಸ್‌ ಮರಳಿದರು.

ವಿವಿಧ ಹಂತಗಳಲ್ಲಿ ಲಾಕ್‌ಡೌನ್‌ ತೆರವುಗೊಳಿಸಿದ ಅವಧಿಯಲ್ಲಿ ನರೇಗಾ ಯೋಜನೆಯಡಿ ಕೆಲಸ ಕಾಮಗಾರಿಗಳನ್ನು ಸರ್ಕಾರ ಆರಂಭಿಸಿತ್ತು. ಜಿಲ್ಲೆಗೆ ವಾಪಸ್‌ ಬಂದಿದ್ದ ಕಾರ್ಮಿಕರಿಗೆ ಜಾಬ್‌ ಕಾರ್ಡ್‌ ನೀಡಿ, ಉದ್ಯೋಗಾವಕಾಶ ಕಲ್ಪಿಸಲಾಯಿತು.

ಮಹಿಳೆಯರೇ ಹೆಚ್ಚು: ಹೊಸದಾಗಿ ಜಾಬ್‌ ಕಾರ್ಡ್‌ ಮಾಡಿಸಿಕೊಂಡವರಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ಸುಮಾರು ಶೇ 60ರಷ್ಟು ಮಹಿಳೆಯರೇ ಪಡೆದುಕೊಂಡಿದ್ದಾರೆ.

ಶೇ 15ರಷ್ಟು ಪ್ರಗತಿ:ಜಿಲ್ಲೆಗೆ 1.20 ಕೋಟಿ ಮಾನವ ದಿನಗಳ ಗುರಿ ನೀಡಲಾಗಿತ್ತು. ಏಪ್ರಿಲ್‌ನಿಂದ ಜೂನ್‌ ಮೊದಲ ವಾರದವರೆಗೆ 17.22 ಲಕ್ಷ ಮಾನವ ದಿನಗಳ ಕೆಲಸವಾಗಿದೆ. ಈ ಮೂಲಕ ನಿಗದಿಯಾದ ಗುರಿಯಲ್ಲಿ ಶೇ 15ರಷ್ಟು ಸಾಧನೆ ಮಾಡಲಾಗಿದೆ. ಸದ್ಯಕ್ಕೆ 1.04 ಲಕ್ಷ ಕಾಮಗಾರಿಗಳು ನಡೆದಿದ್ದು, ಜೂನ್‌ ತಿಂಗಳ ಅಂತ್ಯದ ವೇಳೆಗೆ ಶೇ 25ರಷ್ಟು ಕಾಮಗಾರಿಗಳು ಪೂರ್ಣಗೊಳ್ಳಲಿವೆ.

ಕೆರೆ, ನಾಲಾ ಹೂಳೆತ್ತುವುದು, ಕೃಷಿ ಹೊಂಡ ನಿರ್ಮಾಣ, ಬದು ನಿರ್ಮಾಣ, ಇಂಗುಗುಂಡಿಗಳ ನಿರ್ಮಾಣ, ಹಿರಣ್ಯಕೇಶಿ ನದಿಯ ಹೂಳೆತ್ತುವುದು, ಕೊಟ್ಟಿಗೆ ನಿರ್ಮಾಣ, ಸೇರಿದಂತೆ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.

ಭತ್ಯೆ ಹೆಚ್ಚಳ:ನರೇಗಾ ಯೋಜನೆಯಡಿ ದುಡಿಯುವ ಪುರುಷ ಹಾಗೂ ಮಹಿಳೆಯರಿಗೆ ಸಮಾನ ವೇತನ ನೀಡಲಾಗುತ್ತಿದೆ. ಏಪ್ರಿಲ್‌ ನಂತರ ಭತ್ಯೆಯನ್ನು ಹೆಚ್ಚಿಸಲಾಗಿದೆ. ಒಂದು ದಿನಕ್ಕೆ ₹ 275 ನೀಡಲಾಗುತ್ತಿದೆ. ಇದಕ್ಕೂ ಮೊದಲು ₹ 249 ನೀಡಲಾಗುತ್ತಿತ್ತು. ವಾರ್ಷಿಕವಾಗಿ ಕನಿಷ್ಠ 100 ದಿನಗಳ ಉದ್ಯೋಗ ನೀಡಲಾಗುತ್ತದೆ ಎನ್ನುತ್ತಾರೆ ಪಂಚಾಯ್ತಿಯ ಅಧಿಕಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT