ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಾದ್ಯಂತ ‘ರಾತ್ರಿ ಕರ್ಫ್ಯೂ’ ಜಾರಿ

ಪೊಲೀಸ್ ಸರ್ಪಗಾವಲು, ಅನಗತ್ಯ ಓಡಾಟಕ್ಕೆ ತಡೆ
Last Updated 21 ಏಪ್ರಿಲ್ 2021, 16:30 IST
ಅಕ್ಷರ ಗಾತ್ರ

ಬೆಳಗಾವಿ: ಕೊರೊನಾ ಹರಡುವಿಕೆ ನಿಯಂತ್ರಣಕ್ಕಾಗಿ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ರಾತ್ರಿ 9ರಿಂದ ಬೆಳಿಗ್ಗೆ 6ರವರೆಗೆ ಘೋಷಿಸಲಾಗಿರುವ ಕರ್ಫ್ಯೂ ಬುಧವಾರ ರಾತ್ರಿಯಿಂದ ಜಾರಿಯಾಗಿದೆ.

ರಾತ್ರಿ 9ರಿಂದ ಬೆಳಿಗ್ಗೆ 6ರವರೆಗಿನ ಕರ್ಫ್ಯೂಗೆ ನಗರ ಹಾಗೂ ಜಿಲ್ಲಾ ಪೊಲೀಸರು ಇಡೀ ದಿನ ತಯಾರಿ ನಡೆಸಿದರು. ಅಂಗಡಿಗಳು, ವಾಣಿಜ್ಯ ಮಳಿಗೆಗಳು ಸಂಜೆಯ ಹೊತ್ತಿಗೇ ಬಾಗಿಲು ಮುಚ್ಚಿದವು. ಜಿಲ್ಲೆಯ ಹಲವೆಡೆ ಪೊಲೀಸ್‌ ಭದ್ರತೆಯನ್ನು ಬಿಗಿಗೊಳಿಸಲಾಗಿತ್ತು. ಪ್ರಮುಖ ವೃತ್ತಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿದ ಪೊಲೀಸರು, ರಾತ್ರಿ 9ರ ನಂತರ ಅನಗತ್ಯವಾಗಿ ಓಡಾಡುವವರ ಮೇಲೆ ನಿಗಾ ವಹಿಸಿದ್ದರು. ಆಸ್ಪತ್ರೆ ಸೇರಿದಂತೆ ತುರ್ತು ಕೆಲಸಕ್ಕೆ ಅಥವಾ ಅವಶ್ಯ ಕಾರ್ಯಕ್ಕೆ ತೆರಳುತ್ತಿದ್ದವರಿಗೆ ಮಾತ್ರ ಅವಕಾಶ ಕೊಟ್ಟರು. ಇತರರಿಗೆ ಎಚ್ಚರಿಕೆ ನೀಡಿದರು. ಬಹುತೇಕ ಕಡೆಗಳಲ್ಲಿ ಪೊಲೀಸ್ ಸರ್ಪಗಾವಲಿನೊಂದಿಗೆ ‘ಬ್ಯಾರಿಕೇಡ್‌ಗಳ ಕೋಟೆ’ಯನ್ನೇ ನಿರ್ಮಿಸಲಾಗಿತ್ತು.

ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಡಾ.ಕೆ. ಹರೀಶ್‌ಕುಮಾರ್‌ ಹಾಗೂ ನಗರ ಪೊಲೀಸ್ ಆಯುಕ್ತ ಕೆ.ತ್ಯಾಗರಾಜನ್‌, ‘ಸಾರ್ವಜನಿಕರ ಆರೋಗ್ಯ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಟಿಯಿಂದ ಬುಧವಾರದಿಂದ ಮೇ.4ರವರೆಗೆ ರಾತ್ರಿ 9ರಿಂದ ಬೆಳಿಗ್ಗೆ 6ರವರೆಗೆ ರಾತ್ರಿ ನಿಷೇಧಾಜ್ಞೆ ಹಾಗೂ ವಾರಾಂತ್ಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಪ್ರತಿ ಶುಕ್ರವಾರ ರಾತ್ರಿ 9ರಿಂದ ಸೋಮವಾರ ಬೆಳಿಗ್ಗೆ 6ರವರೆಗೆ ಸಾರ್ವಜನಿಕರು ಅನವಶ್ಯ ಚಟುವಟಿಕೆಗಳನ್ನು ನಡೆಸುವುದನ್ನು ಮತ್ತು ಓಡಾಡುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ’ ಎಂದು ತಿಳಿಸಿದ್ದಾರೆ.

‘ಆದೇಶ ಉಲ್ಲಂಘಿಸುವವರ ವಿರುದ್ಧ ಭಾರತೀಯ ದಂಡ ಸಂಹಿತೆ 188ರ ಪ್ರಕಾರ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾ ದಂಡಾಧಿಕಾರಿ ಹರೀಶ್‌ಕುಮಾರ್ ತಿಳಿಸಿದ್ದಾರೆ.

‘ನಿಷೇಧಾಜ್ಞೆ ಸಮಯದಲ್ಲಿ ಜನರು ಅನವಶ್ಯವಾಗಿ ಓಡಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅವಶ್ಯ ಚಟುವಟಿಕೆಗಳಿಗೆ, ತಾಲ್ಲೂಕುಮಟ್ಟದ ವಿಪತ್ತು ನಿರ್ವಹಣಾ ಸಮಿತಿಯಿಂದ ಪೂರ್ವಾನುಮತಿ ಪಡೆದುಕೊಂಡ ಚಟುವಟಿಕೆಗಳಿಗೆ ಅನ್ವಯಿಸುವುದಿಲ್ಲ. ಆದೇಶ ಜಾರಿಗೊಳಿಸಲು ನಗರದ ಪೊಲೀಸ್ ಆಯುಕ್ತರು, ಎಸ್ಪಿ, ಎಲ್ಲ ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರರು ಹಾಗೂ ಸಂಬಂಧಿಸಿದ ಎಲ್ಲ ಇಲಾಖೆಗಳ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದ್ದಾರೆ. ಇದರಂತೆ, ಪೊಲೀಸ್ ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮ ವಹಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT