ಗುರುವಾರ , ಮಾರ್ಚ್ 4, 2021
26 °C

ರಾತ್ರಿ ಕರ್ಫ್ಯೂ ಇದ್ದರೂ ಸರ್ಕಾರಿ ಸಾರಿಗೆ ಬಸ್‌ ಸಂಚಾರಕ್ಕೆ ಅಡ್ಡಿ ಇಲ್ಲ: ಸವದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಕೊರೊನಾ 2ನೇ ಅಲೆ ಹರಡುವಿಕೆ ತಡೆಯುವ ಮುಂಜಾಗ್ರತಾ ಕ್ರಮವಾಗಿ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗುತ್ತಿದೆ. ಆದರೆ, ರಾಜ್ಯ ರಸ್ತೆ ಸಾರಿಗೆ ಬಸ್‌ಗಳ ಸಂಚಾರಕ್ಕೆ ಯಾವುದೇ ತೊಂದರೆ ಅಥವಾ ವ್ಯತ್ಯಯ ಆಗುವುದಿಲ್ಲ’ ಎಂದು ಸಾರಿಗೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದರು.

ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಸಾರಿಗೆ ಬಸ್‌ಗಳ ಸಂಚಾರದಲ್ಲಿ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿಯೂ ಹೇಳಿದ್ದಾರೆ. ರಾತ್ರಿ ಹೊರಡುವ ಬಸ್‌ಗಳಲ್ಲಿ ಯಾವುದೇ ವ್ಯತ್ಯಾಸ ಆಗುವುದಿಲ್ಲ. ಸರಕು ಸಾಗಣೆ ವಾಹನಗಳು ಓಡಾಡಲಿವೆ. ಯಥಾಸ್ಥಿತಿ ಮುಂದುವರಿಯಲಿದೆ’ ಎಂದರು.

ರಾತ್ರಿ ಕರ್ಫ್ಯೂಗೆ ಟ್ಯಾಕ್ಸಿ ಮಾಲೀಕರ ಸಂಘ ಹಾಗೂ ಬಾರ್‌ಗಳ ಮಾಲೀಕರು ವಿರೋಧ ವ್ಯಕ್ತಪಡಿಸಿರುವ ಕುರಿತು ಪ್ರತಿಕ್ರಿಯಿಸಿದ ಸಚಿವರು, ‘ಮೊದಲು ಜೀವ ಅಮೂಲ್ಯ. ಲಾಭ–ನಷ್ಟದ ಲೆಕ್ಕ ಹಾಕುವುದು ಸರಿಯಲ್ಲ. ಪ್ರಾಣವೊಂದಿದ್ದರೆ ಏನೆಲ್ಲಾ ಮಾಡಬಹುದು. ಹೀಗಾಗಿ, ಜನರ ಜೀವ ರಕ್ಷಣೆಗೆ ಆದ್ಯತೆ ನೀಡಲಾಗುತ್ತಿದೆ. ಕಾಂಗ್ರೆಸ್‌ನವರು ಮೊದಲಿನಿಂದಲೂ ಎಲ್ಲದಕ್ಕೂ ವಿರೋಧಿಸುವ ಪರಿಪಾಠ ಬೆಳೆಸಿಕೊಂಡು ಬಂದಿದ್ದಾರೆ. ಅದೇ ಧರ್ಮವೆಂದು ಭಾವಿಸಿದ್ದಾರೆ. ಜೀವದ ಜೊತೆಗೆ ಚೆಲ್ಲಾಟ ಆಡುವುದು ಆಗಬಾರದು’ ಎಂದು ಹೇಳಿದರು.

‘ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ಆಗುವುದಿಲ್ಲ ಎಂದು ತಿಳಿದುಕೊಂಡಿದ್ದೇನೆ. ಅಂತೆಯೇ, ಯಾವ ರಾಜ್ಯಕ್ಕೂ ಬಸ್ ಸಂಚಾರ ಸ್ಥಗಿತಗೊಳಿಸುವುದಿಲ್ಲ’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು